ಹಳೆಯ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ

ಹಳೆಯ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ

ವಕೀಲರ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ನ್ಯಾಯಾಧೀಶರಿಗೆ ಸ್ವಾಗತ ಸಮಾರಂಭದಲ್ಲಿ ನ್ಯಾಯಮೂರ್ತಿ ರಾಜೇಶ್ವರಿ ಎನ್. ಹೆಗಡೆ

ದಾವಣಗೆರೆ, ಮೇ 23- ನ್ಯಾಯಾಲಯಗಳಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ ನೀಡಬೇಕಿದೆ. ಇದಕ್ಕೆ ವಕೀಲರ ಸಹಕಾರ ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಕರೆ ನೀಡಿದರು.

ನಗರದ ಜಿಲ್ಲಾ ವಕೀಲರ ಸಂಘದ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ವಕೀಲರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ನೂತನವಾಗಿ ವರ್ಗಾವಣೆಯಾಗಿ ಬಂದಿರುವ ನ್ಯಾಯಾಧೀಶರಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ನ್ಯಾಯಾಲಯದ ಕಾರ್ಯ ಕಲಾಪಗಳು ನಡೆಯಲು ವಕೀಲರ ಸಹಕಾರ ಅಗತ್ಯ. ಜಿಲ್ಲಾ ವಕೀಲರ ಸಂಘದಿಂದ ಹೊಸ ಹೊಸ ಕಾರ್ಯಕ್ರಮ ಹಮ್ಮಿಕೊಳ್ಳ ಬೇಕಿದೆ. ಅಲ್ಲದೇ ಹೊಸ ವಕೀಲರು ಹೆಚ್ಚು ಅಧ್ಯಯನ ಮಾಡಲಿ ಎಂದು ಸಲಹೆ ನೀಡಿದರು.

2ನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾಗಿ ವರ್ಗಾವಣೆಯಾಗಿ ಬಂದಿರುವ ಕೆ.ಹೆಚ್. ರೇಷ್ಮ ಮಾತನಾಡಿ, ವಕೀಲರು ಯಾವುದೇ ಪ್ರಕರಣಗಳಲ್ಲಿ ವಿಳಂಬ ಮಾಡದೆ ತಕ್ಷಣವೇ ಸಂಬಂಧ ಪಟ್ಟಂತೆ ಮಾಹಿತಿ ಪಡೆದು ಅವುಗಳ ವಿಲೇವಾರಿಗೆ ಮುಂದಾಗಬೇಕು. ಕಕ್ಷಿದಾ ರರಿಗೆ ತ್ವರಿತವಾಗಿ ನ್ಯಾಯದಾನ ಮಾಡಲು ಸಹಕರಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸದಸ್ಯ ಕಾರ್ಯದರ್ಶಿಯಾಗಿ ವರ್ಗಾವಣೆ ಯಾಗಿ ಬಂದಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ್ ಮಾತನಾಡಿ, ನ್ಯಾಯ ದಾನ ಮಾಡುವ ಜೊತೆಗೆ ಕಕ್ಷಿದಾ ರರು ಹಾಗೂ ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸುವ ಕೆಲಸವನ್ನೂ ಮಾಡ ಬೇಕಿದೆ. ಈ ದಿಸೆಯಲ್ಲಿ ಪ್ರಾಧಿಕಾರದಿಂದ ಸಹಕಾರ ನೀಡುವುದಾಗಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್ ಕುಮಾರ್ ಮಾತನಾಡಿ, ಒಕ್ಕೂಟ ವ್ಯವಸ್ಥೆಯಲ್ಲಿ ನ್ಯಾಯಾಂಗ ತನ್ನ ಶ್ರೇಷ್ಠತೆಯನ್ನು ಕಾಯ್ದುಕೊಂಡು ಬಂದಿದೆ. ಕಾರ್ಯಾಂಗ ಮತ್ತು ಶಾಸಕಾಂಗಗಳು ದಾರಿ ತಪ್ಪಿದ ಸಂದರ್ಭದಲ್ಲಿ ಅವುಗಳನ್ನು ಸರಿದಾರಿಗೆ ತರುವಲ್ಲಿ ನ್ಯಾಯಾಂಗವು ಯಶಸ್ವಿಯಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದೆ ಎಂದರು.

ನ್ಯಾಯಾಧೀಶರು ಮತ್ತು ವಕೀಲರು ಒಂದೇ ರಥದ ಚಕ್ರಗಳಾಗಿದ್ದು, ಪರಸ್ಪರ ಗೌರವ, ಸಹಕಾರದಿಂದ ಇದ್ದರೆ ನ್ಯಾಯಾಂಗದ ಉನ್ನತಿ ಸಾಧ್ಯ. ವಕೀಲರ ಸಂಘದ ನೂತನ ಸಮಿತಿಯು ವಕೀಲರ ಹಕ್ಕುಗಳಿಗೆ ಚ್ಯುತಿ ಬಾರದಂತೆ ಘನತೆ ಕಾಪಾಡಿಕೊಂಡು ಹೋಗಲಿದೆ ಎಂದು ಹೇಳಿದರು.

ವೇದಿಕೆಯಲ್ಲಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯಾನಂದ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರವೀಣ್‍ಕುಮಾರ್, ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶ ಎನ್.ಶ್ರೀಪಾದ್, ಕೌಟುಂಬಿಕ ನ್ಯಾಯಾಲ ಯದ ನ್ಯಾಯಾಧೀಶ ದಶರಥ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಶಿವಪ್ಪ ಸಲಗರೆ, ಹಿರಿಯ ಸಿವಿಲ್ ನ್ಯಾಯಾಧೀಶ ರಾದ ನಿವೇದಿತಾ ಉಪಸ್ಥಿತರಿದ್ದರು. 

ಕಾರ್ಯಕ್ರಮದ ನಿರ್ವಹಣೆಯನ್ನು ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಸ್.ಬಸವರಾಜ್, ಉಪಾಧ್ಯಕ್ಷರಾದ ಜಿ.ಕೆ.ಬಸವರಾಜ್ ಗೋಪನಾಳು, ಸಹಕಾರ್ಯದರ್ಶಿ ಎ.ಎಸ್.ಮಂಜುನಾಥ್, ನಿಕಟಪೂರ್ವ ಕಾರ್ಯದರ್ಶಿ ಎಲ್.ಹೆಚ್.ಪ್ರದೀಪ್, ನಿಕಟಪೂರ್ವ ಸಹ ಕಾರ್ಯದರ್ಶಿ ಜಿ.ಕೆ.ಬಸವರಾಜ್ ವಹಿಸಿದ್ದರು.