2023ರಲ್ಲಿ ರಾಹು-ಕೇತು ಗ್ರಹಗಳ ಪರಿವರ್ತನೆ ದ್ವಾದಶರಾಶಿಗಳ ಫಲಾಫಲ

2023ರಲ್ಲಿ ರಾಹು-ಕೇತು  ಗ್ರಹಗಳ ಪರಿವರ್ತನೆ  ದ್ವಾದಶರಾಶಿಗಳ ಫಲಾಫಲ

ದಿನಾಂಕ: 30.10.2023ನೇ ಸೋಮವಾರ ರಾತ್ರಿ 9 ಘಂಟೆ 20 ನಿಮಿಷಕ್ಕೆ ಸಲ್ಲುವ ಮಿಥುನ ಲಗ್ನ, ಕೃತ್ತಿಕಾ ನಕ್ಷತ್ರ, 3ನೇ ಚರಣದಲ್ಲಿ, ವೃಷಭ ರಾಶಿಯಲ್ಲಿ ಚಂದ್ರನ ಸಂಚಾರವಿರುವಾಗ ಇತ್ತ ರಾಹುಗ್ರಹವು ರೇವತೀ ನಕ್ಷತ್ರ 4ನೇ ಪಾದದಲ್ಲಿ ಮೀನ ರಾಶಿಗೆ ಪ್ರವೇಶಿಸಲಿದ್ದು, 2025ನೇ ಮೇ 25ರವರೆಗೆ  569 ದಿನಗಳವರೆಗೆ ಅಂದರೆ ಒಟ್ಟು ಹದಿನೆಂಟು ತಿಂಗಳು, 21 ದಿನಗಳ ಕಾಲ ಇರಲಿದ್ದು,  ಇದೇ ದಿನ, ಇದೇ ಸಮಯದಲ್ಲಿ ಕೇತುವು ತುಲಾ ರಾಶಿಯಲ್ಲಿ ಪ್ರವೇಶಿಸಲಿದ್ದು, ಈ ಸಂದರ್ಭದಲ್ಲಿ ದ್ವಾದಶ ರಾಶಿಗಳ ಫಲಾಫಲಗಳ ಸರ್ವೇಸಾಧಾರಣ ವಿವೇಚನೆಯನ್ನು ಇಲ್ಲಿ ಮಾಡಲಾಗಿದೆ.

ಜೋತಿಷ್ಯ ಶಾಸ್ತ್ರದಲ್ಲಿ ಅನೇಕ ಶಾಸ್ತ್ರಜ್ಞರು ಗ್ರಹಗಳ ಸಂಚಾರ ಹಾಗೂ ಅವುಗಳ ಫಲಾಫಲವನ್ನು ನಿರ್ಣಯಿಸುವಾಗ ಈ ರಾಹು-ಕೇತುಗಳನ್ನು ಛಾಯಾಗ್ರಹಗಳೆಂದು ಪರಿಗಣಿಸುತ್ತಾರೆ. ಅಂದರೆ ಸೂರ್ಯ ಮತ್ತು ಚಂದ್ರರ ನಡುವೆ ಹಾದು ಹೋಗುವ  ವೃತ್ತದ   ಅಕ್ಷಪಥಗಳು ಸೇರುವ ಜಾಗವನ್ನೇ ರಾಹು-ಕೇತುಗಳೆನ್ನುತ್ತಾರೆ. ಇತರೆ ಗ್ರಹಗಳು ಕಣ್ಣಿಗೆ ಕಾಣುವಂತೆ  ರಾಹು-ಕೇತು ಗ್ರಹಗಳು ಕಾಣದೇ ಇರುವುದರಿಂದ ಇವುಗಳನ್ನು ಛಾಯಾಗ್ರಹಗಳೆನ್ನುತ್ತಾರೆ. ಬೇರೆ ಗ್ರಹಗಳಿಗಿರುವಂತೆ ಪ್ರತ್ಯೇಕ ಸ್ಥಾನಾಧಿಪತ್ಯ ಇಲ್ಲದಿದ್ದರೂ, ಮಿಥುನ ರಾಶಿ ರಾಹುವಿಗೆ ಉಚ್ಚ ಸ್ಥಾನವೆಂದೂ, ಕೇತುವಿಗೆ ಧನುರಾಶಿ ಉಚ್ಚ ಸ್ಥಾನವೆಂದು ಹೇಳಿ ಅದರ ಮೇಲೆ  ಜಾತಕಗಳನ್ನು ಪರಿಶೀಲನೆ ಮಾಡುತ್ತಾರೆ. ಇವುಗಳ ಆಧಾರದ ಮೇಲೆ  ವಿಮರ್ಶಿಸಲಾಗಿದೆ.


2023ರಲ್ಲಿ ರಾಹು-ಕೇತು ಗ್ರಹಗಳ ಪರಿವರ್ತನೆ ದ್ವಾದಶರಾಶಿಗಳ ಫಲಾಫಲ - Janathavaniಮೇಷ (ಅಶ್ವಿನಿ, ಭರಣಿ, ಕೃತ್ತಿಕಾ)
(ಚೂ.ಚೇ.ಚೋ.ಲ.ಲಿ.ಉ.ಲೇ.ಲೊ.ಅ.)

ಈ ರಾಶಿಯರಿಗೆ ರಾಹು ಹನ್ನೆರಡನೇ ಮನೆಯಲ್ಲೂ, ಕೇತುವು ಆರನೇ ಸ್ಥಾನದಲ್ಲಿರುವುದರಿಂದ ಹೇರಳ ಧನ ಲಾಭವಾಗಲಿದ್ದು, ಐಷಾರಾಮಿ ಜೀವನ ನಡೆಸುವಂತೆ ಮನಸ್ಸನ್ನು ಪ್ರೇರೇಪಿಸಲಿದೆ. ಸಮಾಜದಲ್ಲಿ ಕೀರ್ತಿ-ಪ್ರತಿಷ್ಠೆ ಹೆಚ್ಚಾಗಲಿದ್ದು, ವ್ಯಾಪಾರ-ವ್ಯವಹಾರಗಳಲ್ಲಿ ನಿರೀಕ್ಷೆಗೂ ಮಿರಿ ಅಭಿವೃದ್ಧಿ ಕಾಣಲಿದೆ.  ಇಷ್ಟೆಲ್ಲಾ ಇದ್ದರೂ ಅದೇನು ಹಣದ ಮಹಿಮೆಯೋ ಅಥವಾ ಮಾಯೆಯೋ  ಮನಸ್ಸು ದುರ್ವ್ಯಸನಗಳತ್ತ ತಿರುಗಲಿದೆ, ಪರಪುರುಷ/ ಸ್ತ್ರೀಯರಲ್ಲಿ ವಿಶೇಷ ಆಸಕ್ತಿ ಮೂಡಲಿದೆ. ರಾಜಕಾರಣಿಗಳಿಗೆ ಪಕ್ಷದಲ್ಲಿ ಉತ್ತಮ ಸ್ಥಾನ-ಮಾನಗಳು ದೊರೆಯಲಿವೆ. ಯುವಕರು ಪ್ರೀತಿ-ಪ್ರೇಮಗಳ ಪಾಶಗಳಲ್ಲಿ ಅರಿತೋ, ಮರೆತೋ ಬೀಳುವರು. ಹೊಸ ನೌಕರರಿಗೆ ಕೆಲಸ ಮಾಡುವ ಸ್ಥಳದಲ್ಲಿ ಹೆಚ್ಚಿನ ಸಹಕಾರ ಮೇಲಾಧಿಕಾರಿಗಳಿಂದ ಸಿಗಲಿದೆ.

2023ರಲ್ಲಿ ರಾಹು-ಕೇತು ಗ್ರಹಗಳ ಪರಿವರ್ತನೆ ದ್ವಾದಶರಾಶಿಗಳ ಫಲಾಫಲ - Janathavaniವೃಷಭ (ಕೃತ್ತಿಕಾ, 2,3,4, ರೋಹಿಣಿ, ಮೃಗ 1,2)
(ಇ.ಉ.ಎ.ಒ.ವ.ವಿ.ವು.ವೆ.ವೋ)

ಈ ರಾಶಿಯವರಿಗೆ ರಾಹು ಹನ್ನೊಂದನೇ ಮನೆಯಲ್ಲೂ , ಕೇತುವು ಪಂಚಮ ಸ್ಥಾನದಲ್ಲಿ ಸಂಚರಿಸುವುದರಿಂದ ಇಡೀ ಒಂದೂವರೆ ವರ್ಷ ಶುಭ ದಿನಗಳನ್ನೇ ಕಾಣುವರು. ವಿದೇಶಕ್ಕೆ ಸಂಬಂಧಪಟ್ಟ ವ್ಯವಹಾರಕ್ಕಿರುವ ತಾಂತ್ರಿಕ ತೊಂದರೆಗಳು ದೂರವಾಗಲಿವೆ. ಹಣಕಾಸಿನ ಸ್ಥಿತಿಗತಿ ಅತ್ಯುತ್ತಮವಾಗಿದ್ದು, ಅದರ ಚಿಂತೆಬೇಡ. ಸ್ವ-ಸಾಮರ್ಥ್ಯದಿಂದಲೇ ಎಲ್ಲವನ್ನೂ ಸಾಧಿಸಬಲ್ಲರು, ಆತ್ಮೀಯರೊಂದಿಗೆ ಮನಸ್ತಾಪ ಉಂಟಾಗದಂತೆ ಎಚ್ಚರವಹಿಸಿ, ಹಳೇ ಸಾಲಗಳನ್ನು ತೀರಿಸಲು ಉತ್ತಮ ಅವಕಾಶ ಒದಗಿಬರಲಿದೆ. ಗರ್ಭಿಣಿ ಸ್ತ್ರೀಯರಿಗೆ ಗರ್ಭಸ್ರಾವವಾಗುವ ಸಂಭವವಿದ್ದು,  ತುಸು ಎಚ್ಚರದಿಂದಿರುವುದು ಮೇಲು. ಕೆಲವೊಮ್ಮೆ ಸೋದರರೊಂದಿಗೆ ಹೊಂದಿಕೊಂಡು ಹೋಗುವುದನ್ನು ಕಲಿಯಿರಿ, ದುರಭ್ಯಾಸಗಳಿಗೆ ದಾಸರಾಗದಿರುವುದು ಉತ್ತಮ. ವೈವಾಹಿಕ ಜೀವನದಲ್ಲಿ ಗೊಂದಲ ಮೂಡಲಿದೆ. ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿರಿ, ಈಶ್ವರನ ಆರಾಧನೆಯಿಂದ ಕಷ್ಟಗಳ ಪರಿಹಾರ ಕಾಣುವಿರಿ.

2023ರಲ್ಲಿ ರಾಹು-ಕೇತು ಗ್ರಹಗಳ ಪರಿವರ್ತನೆ ದ್ವಾದಶರಾಶಿಗಳ ಫಲಾಫಲ - Janathavaniಮಿಥುನ (3,4, ಆರಿದ್ರಾ, ಪುನರ್ವಸು 1,2,3
(ಕ.ಕಿ.ಕು.ಘ, ಔ, ಚ.ಕೆ.ಕೋ.ಹ.)

ಈ ರಾಶಿಯರಿಗೆ ರಾಹು ದಶಮ ಸ್ಥಾನದಲ್ಲೂ, ಕೇತು ಸುಖ ಸ್ಥಾನದಲ್ಲೂ ಇರುವುದರಿಂದ ನೀವು ಮಾಡಲಿರುವ  ಎಲ್ಲಾ ಕೆಲಸ, ಕಾರ್ಯಗಳಲ್ಲೂ  ರಾಹುವಿನ ಪ್ರಭಾವ ಹೆಚ್ಚಾಗಿದ್ದು,  ವಿಪರೀತವಾದ ಚಾಣಾಕ್ಷತನವನ್ನು ಮೈಗೂಡಿಸಿಕೊಳ್ಳುವಿರಿ. ಕೆಲವೊಮ್ಮೆ ಅಡಚಣೆಗಳು ಬಂದರೂ ಅದನ್ನು ಮೀರುವ ಸಾಹಸ ಮಾಡುವಿರಿ. ಗುರಿಯಿಟ್ಟ ಕಾರ್ಯಗಳನ್ನು ಕಡಿಮೆ ಅವಧಿಯಲ್ಲಿ ಮಾಡಿ ಮುಗಿಸಲು ಯತ್ನಿಸುವಿರಿ, ವ್ಯವಹಾರ ನಿಮಿತ್ತ ಕುಟುಂಬದಿಂದ ಕೆಲಕಾಲ ದೂರವಾಸ ಅನಿವಾರ್ಯವಾಗಲಿದೆ. ದೃಷ್ಟಿಗೆ ಸಂಬಂಧಿಸಿದ ಅಥವಾ ಸಂಧಿವಾತ ಬಾಧೆ ಕಾಡಲಿದೆ. ಮಾಡಿದ ಸಾಲವನ್ನು ತೀರಿಸಲು ಹರಸಾಹ ಸಪಡುವಿರಿ. ಮದುವೆ ಮೊದಲಾದ ಮಂಗಳ ಕಾರ್ಯಗಳಲ್ಲಿ ವಿನಾಕಾರಣ ವಿಳಂಬ ಕಂಡು ಬರಲಿದೆ. ದಂಪತಿಗಳಿಗೆ ಸಂತಾನ ಕೆಲಕಾಲ ವಿಳಂಬವಾಗಲಿದೆ. ವೈಯಕ್ತಿಕ ಆರೋಗ್ಯವನ್ನು ಯಾವುದೇ ಕಾರಣಕ್ಕೂ ಅಲಕ್ಷಿಸ ಬೇಡಿ. ದುರ್ಗಾರಾಧನೆಯಿಂದ ಕಷ್ಟಗಳು ಪರಿಹಾರವಾಗಲಿವೆ.

2023ರಲ್ಲಿ ರಾಹು-ಕೇತು ಗ್ರಹಗಳ ಪರಿವರ್ತನೆ ದ್ವಾದಶರಾಶಿಗಳ ಫಲಾಫಲ - Janathavaniಕರ್ಕಾಟಕ (ಪುನ 4, ಪುಷ್ಯ, ಆಶ್ಲೇಷ)
(ಹಿ.ಹು.ಹೆ.ಹೂ.ಡ.ಡಿ.ಡು.ಡೆ.ಡೋ)

ಈ ರಾಶಿಯವರಿಗೆ ನವಮ ಸ್ಥಾನದಲ್ಲಿ ರಾಹು, ಹಾಗೂ ತೃತೀಯ ಸ್ಥಾನದಲ್ಲಿ ಕೇತುವಿನ ಸಂಚಾರವಾಗಲಿದ್ದು, ಅದನ್ನು ಹೀಗೆ ಪರಾಮರ್ಶಿಸಬಹುದು. ಸಮಾಜದಲ್ಲಿ ಉನ್ನತ ಮಟ್ಟದ ಸ್ಥಾನ-ಮಾನಗಳು ಸಿಗಲಿದ್ದು, ಅನೇಕ ರೀತಿಯ ವಾಹನಗಳನ್ನು ಕೊಳ್ಳಲು ಹಪಹಪಿಸುವರು, ಆದರೆ ಈ ವಿಚಾರದಲ್ಲಿ ತುಸು ತಾಳ್ಮೆಯಿಂದ ವರ್ತಿಸುವುದು ಮೇಲು, ಹಣಕಾಸಿನ ಹರಿವು ಸಾಕಷ್ಟು ಹೆಚ್ಚುವುದರಿಂದ ಉಳಿತಾಯದ ಬಗ್ಗೆ ಯೋಚಿಸುವುದು ಉತ್ತಮ, ವ್ಯಾಪಾರ-ವಹಿವಾಟುಗಳು ಉನ್ನತ ಮಟ್ಟದಲ್ಲಿ ಬೆಳೆಯಲಿವೆ, ಗುರು-ಹಿರಿಯರಿಗೆ ನಿಮ್ಮ ಮೇಲೆ ವಿಶ್ವಾಸ ಹೆಚ್ಚಲಿದೆ, ಅನಿರೀಕ್ಷಿತವಾಗಿ ನಿಮ್ಮ ನಡವಳಿಯಲ್ಲಿ ಬದಲಾವಣೆ ಕಂಡು ಬರಲಿದೆ. ಮಾಡುವ ಕೆಲಸ, ಕಾರ್ಯಗಳಲ್ಲಿ ಶ್ರದ್ಧೆ ಹಾಗೂ ಆತ್ಮವಿಶ್ವಾಸದಿಂದ ಮುಂದುವರೆಯುವುದು ಮೇಲು. ಆರೋಗ್ಯದ ವಿಚಾರದಲ್ಲಿ ಅಲಕ್ಷೆಬೇಡ.

2023ರಲ್ಲಿ ರಾಹು-ಕೇತು ಗ್ರಹಗಳ ಪರಿವರ್ತನೆ ದ್ವಾದಶರಾಶಿಗಳ ಫಲಾಫಲ - Janathavaniಸಿಂಹ ( ಮಘ, ಪುಬ್ಬ, ಉತ್ತರ 1)
(ಮ.ಮಿ.ಮು.ಮೋ.ವೆ.ಟ.ಟಿ.ಟು.ಟೆ)

ಈ ರಾಶಿಯರಿಗೆ ರಾಹು ಅಷ್ಟಮದಲ್ಲಿದ್ದು, ವ್ಯಯ ಸ್ಥಾನದಲ್ಲಿ ಕೇತು ಸಂಚಾರ ಮಾಡಲಿದ್ದು, ಅದರ ಫಲಾಫಲವನ್ನು ಹೀಗೆ ವಿಮರ್ಶಿಸಬಹುದು. ಗುರುವಿನ ಮನೆಯಲ್ಲಿ ಸಂಚರಿಸುವುದರಿಂದ ಕವಿ, ಲೇಖಕರಿಗೆ ನ್ಯಾಯಾ ಧೀಶರಿಗೆ ಹಾಗೂ ಧಾರ್ಮಿಕ ವೃತ್ತಿಯಲ್ಲಿರುವವರಿಗೆ ಅತ್ಯುತ್ತಮ ದಿನಗಳು. ಅಪರಿಚಿತ ನದಿ ತಟಾಕಗಳಲ್ಲಿ ಜಲ ಗಂಡಾಂತರ ಉಂಟಾಗಬಹುದು.ಆದ್ದರಿಂದ ಈ ವಿಷಯದಲ್ಲಿ ಎಚ್ಚರದಿಂದಿರುವುದು ಮೇಲು,  ವಿಷ ಜಂತುಗಳಿಂದ ಭಯ, ಅಪಘಾತ ಭಯ , ಸಂಧಿವಾತ ಸಮಸ್ಯೆ ಅತಿಯಾಗಿ ಕಾಡಲಿದೆ. ಸಣ್ಣ ಹಾಗೂ ಅತೀಸಣ್ಣ ವ್ಯಾಪಾರಿಗಳಿಗೆ ಉತ್ತಮ ದಿನಗಳು. ಕೇತುವಿನ ಪ್ರಭಾವದಿಂದಾಗಿ ದೃಷ್ಟಿದೋಷ ಉಂಟಾಗಲಿದೆ. ಸಿನಿಮಾ ಕಲಾವಿದರಿಗೆ, ವಿತರಕರಿಗೆ, ದೈಹಿಕ ಶ್ರಮಜೀವಿಗಳಿಗೆ ಸಂಪಾದನೆ ಹೆಚ್ಚಲಿದೆ. ಅಪರಿಚಿತರಿಂದ ಮೋಸ ಹೋಗುವಿರಿ, ತುಳಸಿ ಗಿಡಗಳನ್ನು ನೆಟ್ಟು ಪೋಷಿಸಿ.

2023ರಲ್ಲಿ ರಾಹು-ಕೇತು ಗ್ರಹಗಳ ಪರಿವರ್ತನೆ ದ್ವಾದಶರಾಶಿಗಳ ಫಲಾಫಲ - Janathavaniಕನ್ಯಾ (ಉತ್ತರಾ 2,3,4, ಹಸ್ತಾ, ಚಿತ್ತಾ 1,2)
(ಟೋ.ಪ.ಪಿ.ಪು.ಷ.ಣ.ಠ.ಪೆ.ಪೋ)

ಈ ರಾಶಿಯವರಿಗೆ ರಾಹು ಸಪ್ತಮದಲ್ಲೂ ಹಾಗೂ ಜನ್ಮಸ್ಥ ಕೇತು ಇರುವುದರಿಂದ ಈ ರೀತಿಯಾಗಿ ಪರಾಮರ್ಶಿಸಬಹುದು ಇದು ಉತ್ತಮ ಪರಿವರ್ತನೆಯಾಗಿದ್ದು, ವಿವಾಹಾದಿ ಕಾರ್ಯಗಳಿಗಿದ್ದ ಆತಂಕಗಳು ದೂರವಾಗಲಿವೆ. ನೀವು ನಿಮ್ಮ ಎದುರಿನ ವ್ಯಕ್ತಿಯ ಮೇಲೆ ಪ್ರಭಾವನ್ನು ಬೀರಬಲ್ಲಿರಿ. ಆರಂಭದಲ್ಲಿ ಆತಂಕಗಳು ಎದುರಾದರೂ ಸುಖ-ಸೌಖ್ಯ ಉಂಟಾಗಲಿದೆ. ಯಾವುದೇ ಕಾರಣಕ್ಕೂ ಮಾನಸಿಕ ಒತ್ತಡಗಳಿಗೆ ಒಳಗಾಗದಿರುವುದು ಉತ್ತಮ.  
ಹಣಕಾಸಿನ ವಿಚಾರದಲ್ಲಿ ಎಚ್ಚರ ವಹಿಸದೇ ಹೋದಲ್ಲಿ ಅದು ಬೇರೆಯರ ಪಾಲಾಗಬಹುದು. ಅಮೂಲ್ಯ ವಸ್ತುಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಿ, ವಿಚ್ಛೇದಿತರಿಗೆ ಮರು ವಿವಾಹಕ್ಕೆ ಉತ್ತಮ ಸಂಬಂಧಗಳು ಬರಲಿವೆ. ಇರುವ ಜಾಣ್ಮೆಯನ್ನು ಉಪಯೋಗಿಸಿಕೊಳ್ಳುವುದನ್ನು ಕಲಿಯಿರಿ. ಆರೋಗ್ಯವನ್ನು ಅಲಕ್ಷಿಸಬೇಡಿ, ದೃಷ್ಟಿ ಸಂಬಂಧಿ ಸಮಸ್ಯೆಗಳನ್ನು ಅಲಕ್ಷಿಸಬೇಡಿ. ಸಂಬಂಧಿಗಳೊಂದಿಗೆ ಮನಸ್ತಾಪ ಬೇಡ. ಬದುಕಿನಲ್ಲಿ ನಿರ್ಲಕ್ಷೆಬೇಡ.

2023ರಲ್ಲಿ ರಾಹು-ಕೇತು ಗ್ರಹಗಳ ಪರಿವರ್ತನೆ ದ್ವಾದಶರಾಶಿಗಳ ಫಲಾಫಲ - Janathavaniತುಲಾ (ಚಿತ್ತಾ 3,4, ಸ್ವಾತಿ, ವಿಶಾಖ 1,2,3)
(ರ.ರಿ.ರು.ರೆ.ರೊ.ತ.ತಿ.ತು.ತೆ.)

ಈ ರಾಶಿಯರಿಗೆ ರಾಹು ಷಷ್ಠ ಸ್ಥಾನದಲ್ಲೂ  ಹಾಗೂ ಕೇತು ಮೋಕ್ಷ ಸ್ಥಾನದಲ್ಲಿರುವುದರಿಂದ ಇದನ್ನು ಹೀಗೆ ವಿಮರ್ಶಿಸಬಹುದು.  ಬಹಳಷ್ಟು ಕಾಲದಿಂದ ನಿಮ್ಮನ್ನು ಹೈರಾಣಾಗಿಸಿದ್ದ ಅನಾರೋಗ್ಯ ಸಮಸ್ಯೆಯು ಬೇಗನೇ ಬಗೆಹರಿಯಲಿದೆ. ಉತ್ತಮ ಅರೋಗ್ಯ ಪ್ರಾಪ್ತಿಯಾಗಲಿದೆ. ತಾಯಿ ತವರು ಮನೆಯಿಂದ ನೆರವು ದೊರೆಯಲಿದೆ. ಅನೇಕ ಶುಭ ಫಲಗಳು ದೊರೆಯಲಿವೆ. ವ್ಯಾಪಾರ, ವ್ಯವಹಾರಗಳಲ್ಲಿ ಪಾಲುದಾರರಾಗುವುದರಿಂದ ಧನಲಾಭವಾಗಲಿದೆ. ನಿರೀಕ್ಷೆಗೂ ಮೀರಿದ ಅಭಿವೃದ್ಧಿಯಾಗಲಿದೆ. ವ್ಯಯ ಸ್ಥಾನದಲ್ಲಿರುವ ಕೇತುವಿನಿಂದಾಗಿ ಅನೇಕ ಧಾರ್ಮಿಕ ಕಾರ್ಯಗಳು ನಿಮ್ಮಿಂದ ನಡೆಯಲಿವೆ. ಪದವೀಧರರಿಗೆ ಕೃಷಿ ಕಾರ್ಯಗಳಲ್ಲಿ ವಿಶೇಷ ಆಸಕ್ತಿ ಮೂಡಲಿದೆ. ತೀರ್ಥ ಯಾತ್ರೆ ಮಾಡುವ ಯೋಗ ಬರಲಿದ್ದು,  ಅದನ್ನು ವ್ಯರ್ಥ ಮಾಡದೇ ಸದುಪಯೋಗಪಡಿಸಿಕೊಳ್ಳಿ.

2023ರಲ್ಲಿ ರಾಹು-ಕೇತು ಗ್ರಹಗಳ ಪರಿವರ್ತನೆ ದ್ವಾದಶರಾಶಿಗಳ ಫಲಾಫಲ - Janathavaniವೃಶ್ಚಿಕ (ವಿಶಾಖ 4, ಅನೂ, ಜೇಷ್ಠ)
(ತೊ.ನ.ನಿ.ನು.ನೆ.ನೋ.ಯ.ಯಿ.ಯು.)

ಈ ರಾಶಿಯವರಿಗೆ ರಾಹು ಐದನೇ ಮನೆಯಲ್ಲೂ,  ಕೇತು ಹನ್ನೊಂದನೇ ಮನೆಯಲ್ಲಿ ಸಂಚಾರವಿರುವುದರಿಂದ ವೃಥಾ ಚಿಂತೆ, ಕೆಲಸ ಕಾರ್ಯಗಳಲ್ಲಿ ವಿಳಂಬವಾಗಲಿದೆ. ನೆಗಡಿ, ಹೊಟ್ಟೆಯಲ್ಲಿ ಅಜೀರ್ಣ ಮೊದಲಾದ ಅನಾರೋಗ್ಯ ಸಮಸ್ಯೆ ಕಾಡಲಿವೆ, ಸಂತಾನಾಪೇಕ್ಷಿಗಳಿಗೆ ಸಂತಾನಕ್ಕೆ ಇರುವ ಪ್ರತಿಬಂಧಕಗಳು ದೂರವಾಗಲಿವೆ. ಕೆಟ್ಟವರ ಹಾಗೂ ಒಳ್ಳೆಯವರ ಅರಿವಾಗಲಿದೆ. ಅಡ್ಡ ಮಾರ್ಗದಲ್ಲಿ ಸಂಪಾದನೆಗೆ ಯತ್ನಿಸುವುದರಿಂದ ತೊಂದರೆಗಳು ಹೆಚ್ಚಾಗಲಿವೆ. ಕೇತುವಿನ ಪ್ರಭಾವದಿಂದಾಗಿ ಪದವೀಧರ ನಿರುದ್ಯೋಗಿಗಳಿಗೆ ಉತ್ತಮ ನೌಕರಿ ದೊರೆಯಲಿದೆ. ರಾಜಕಾರಣಿಗಳು ಕೆಳಮಟ್ಟದಲ್ಲಿರುವ ಕಾರ್ಯಕರ್ತರನ್ನು ಮೇಲೆ ತರಲು ಯತ್ನಿಸುವರು, ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳುವ ಕಲೆ ಮೈಗೂಡಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಬರಲಿದೆ.

2023ರಲ್ಲಿ ರಾಹು-ಕೇತು ಗ್ರಹಗಳ ಪರಿವರ್ತನೆ ದ್ವಾದಶರಾಶಿಗಳ ಫಲಾಫಲ - Janathavaniಧನಸ್ಸು (ಮೂಲ, ಪೂರ್ವಾಷಾಢ, ಉತ್ತರಾಷಾಢ)
(ಯೆ.ಯೋ. ಬ.ಬಿ.ಬು.ಧ.ಫ.ಡ.ಬೆ.)

ಈ ರಾಶಿಯವರಿಗೆ ರಾಹು ಚತುರ್ಥ ಸ್ಥಾನದಲ್ಲಿದ್ದು, ಉತ್ತಮ ಫಲದೊಂದಿಗೆ, ಅಧಿಕ ವೃದ್ಧಿಯೊಂದಿಗೆ ದುರಾಸೆಯುಂಟಾಗಲಿದೆ. ಆಸ್ತಿ ಖರೀದಿ ವಿಚಾರದಲ್ಲಿ ಭಾರೀ ಮೊತ್ತದ ಮೋಸ ಹೋಗುವ ಸಂಭವವಿದೆ. ನಿಮ್ಮ ಎದುರಾಳಿ ನಿಮಗಿಂತಲೂ ಬುದ್ಧಿವಂತನಾಗಿರುತ್ತಾನೆ ಎಂಬುದರ ಅರಿವಿರಲಿ. ಅನಿರಿಕ್ಷಿತವಾಗಿ ಸಾಲಕ್ಕೆ ಒಳಗಾಗುವ ಪ್ರಸಂಗ ಬರಬಹುದು, ತುಂಬಾ ಆಸೆಯಿಂದ ಕೊಂಡ ವಾಹನವನ್ನು ಮರು ಮಾರಾಟ ಮಾಡಬೇಕಾಗಬಹುದು, ಹತ್ತನೇ ಸ್ಥಾನದಲ್ಲಿರುವ ಕೇತುವು ಅನೇಕ ಕಾಯಿಲೆ-ಕಸಾಲೆಗಳನ್ನುಂಟು ಮಾಡಬಹುದು, ಯಾವುದೇ ವೈದ್ಯಕೀಯ ಉಪಚಾರಕ್ಕೂ ಅದು ಬಗ್ಗದೇ ಹೋಗಬಹುದು, ಖಾಸಗಿ ಕಂಪನಿ ನೌಕರರು ತಮ್ಮ ಪದೋನ್ನತಿಗಾಗಿ ಹೆಚ್ಚಿನ ತಾಳ್ಮೆಯಿಂದ ವರ್ತಿಸುವುದು ಮೇಲು, ಗುರು, ಗಣೇಶನನ್ನು ಆರಾಧಿಸಿ.

2023ರಲ್ಲಿ ರಾಹು-ಕೇತು ಗ್ರಹಗಳ ಪರಿವರ್ತನೆ ದ್ವಾದಶರಾಶಿಗಳ ಫಲಾಫಲ - Janathavaniಮಕರ (ಉತ್ತರಾಷಾಢ 2,3,4, ಶ್ರವಣ, ಧನಿಷ್ಠಾ 1,2)
(ಜೊ.ಜ.ಜಿ.ಜೆ.ಶಿ.ಶು.ಶೇ.ಶೋ.ಗ.ಗಿ)

ಈ ರಾಶಿಯವರಿಗೆ ರಾಹು ತೃತೀಯ ಸ್ಥಾನದಲ್ಲಿದ್ದು, ಕೇತುವು ದಶಮ ಸ್ಥಾನದಲ್ಲಿರುವರಿಂದ  ಅವರು ಅಂದುಕೊಂಡ ಕೆಲಸವೆಲ್ಲವೂ ತಕ್ಷಣದಲ್ಲೇ ಆಗಲಿದ್ದು, ಎಲ್ಲಾ ರೀತಿಯಿಂದ ಎಲ್ಲರ ನೆರವು ದೊರೆಯಲಿದೆ, ಹಣಕಾಸಿನ ಹರಿವು ನಿರೀಕ್ಷಿತ ಮಟ್ಟಕ್ಕಿಂತ ಉತ್ತಮವಾಗಿದ್ದು, ಅರ್ಧಕ್ಕೆ ನಿಂತಿದ್ದ ವ್ಯಾಪಾರ-ವ್ಯವಹಾರಗಳು ಮತ್ತೆ ಆರಂಭವಾಗಲಿದ್ದು ಹೆಚ್ಚಿನ ಲಾಭ ತರಲಿವೆ, ಬಹುಕಾಲದಿಂದ ಸಂತಾನಾಪೇಕ್ಷಿಗಳಾದವರಿಗೆ ಸಂತಾನಭಾಗ್ಯ ದೊರೆಯಲಿದೆ. ಅಪರಿಚಿತ ಮಹಿಳೆ/ಪುರುಷರೊಂದಿಗೆ ಸಂಬಂಧ ಬೆಳೆಯಲಿದ್ದು, ಚಾರಿತ್ರ್ಯಕ್ಕೆ ಧಕ್ಕೆ ತರಬಹುದು, ದಶಮ ಸ್ಥಾನದಲ್ಲಿರುವ ಕೇತುವು ಬಂಧುಗಳೊಂದಿಗೆ ಇರುವ ವೈಷಮ್ಯವನ್ನು ದೂರ ಮಾಡುವನು, ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಬರಲಿದೆ. ಕೆಲಸ, ಕಾರ್ಯಗಳಲ್ಲಿ ಎಚ್ಚರದಿಂದಿರುವುದು ಉತ್ತಮ. ವಿಶೇಷವಾಗಿ ದುರ್ಗೆ ಹಾಗೂ ಗಣಪತಿಯನ್ನು ಆರಾಧಿಸಿ.

2023ರಲ್ಲಿ ರಾಹು-ಕೇತು ಗ್ರಹಗಳ ಪರಿವರ್ತನೆ ದ್ವಾದಶರಾಶಿಗಳ ಫಲಾಫಲ - Janathavaniಕುಂಭ (ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರ 1,2,3)
(ಗು.ಗೆ.ಗೊ.ಸ.ಸಿ.ಸು.ಸೆ.ಸೋ.ದ)

ಕೇತುವಿನಿಂದಾಗಿ ಧನ ಸ್ಥಾನದಲ್ಲಿ ಸಂಚಾರ ಮಾಡುವುದರಿಂದ ಹಣಕಾಸಿನ ವಿಚಾರದಲ್ಲಿ ಮಾಡಿದ ಹೂಡಿಕೆ ಮೇಲೆ ಹೆಚ್ಚಿನ ಪ್ರಭಾವ ಬೀರಲಿದ್ದಾನೆ. ಕೆಲವೊಮ್ಮೆ ಇದೇ ವಿಷಯವಾಗಿ  ಮಿತ್ರರೊಂದಿಗೆ ಮನಸ್ತಾಪವು ಉಂಟಾಗಬಹುದು. ಅಷ್ಟಮ ಕೇತುವು ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು. ಹಳೇ ಕಾಯಿಲೆಗಳು ಮತ್ತೆ ಮರುಕಳಿಸಲಿವೆ. ಮದುವೆ ವಿಚಾರದಲ್ಲಿ ಮನಸ್ತಾಪವುಂಟಾಗಲಿದೆ, ಮನೆಯಲ್ಲಿ ಹಿರಿಯರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಯಾವುದೇ ಕಾರಣಕ್ಕೂ ಮನಸ್ತಾಪ ಮಾಡಿಕೊಳ್ಳಬೇಡಿ, ಮನೆಯಲ್ಲಿ ನಡೆಯಬೇಕಾಗಿರುವ ಮಂಗಳ ಕಾರ್ಯಗಳಿಗೆ ಅನೇಕ ಅಡ್ಡಿ-ಆತಂಕಗಳು ಎದುರಾಗಬಹುದು.ವಿದ್ಯಾರ್ಥಿಗಳಿಗೆ ಭರವಸೆಕೊಟ್ಟವರಿಂದ ನಿರಾಶೆಯುಂಟಾಗಲಿದೆ.  ರಹಸ್ಯ ಪ್ರೀತಿ-ಪ್ರೇಮದ ವಿಷಯ ಬಯಲಾಗಿ ಅವಮಾನವಾಗಲಿದೆ. ಈಶ್ವರ, ದುರ್ಗೆ ಹಾಗೂ ವಿಷ್ಣು ಸಹಸ್ರ ನಾಮವನ್ನು ಪಠಿಸುವುದು ಮೇಲು. ಗಣಪತಿಯನ್ನು ಗರಿಕೆಯಿಂದ ವಿಶೇಷವಾಗಿ ಆರಾಧಿಸಿ.

2023ರಲ್ಲಿ ರಾಹು-ಕೇತು ಗ್ರಹಗಳ ಪರಿವರ್ತನೆ ದ್ವಾದಶರಾಶಿಗಳ ಫಲಾಫಲ - Janathavaniಮೀನ (ಪೂರ್ವಾಭಾದ್ರ 4, ಉತ್ತರಾಭಾದ್ರ, ರೇವತಿ)
(ದಿ.ದು.ಖ.ಝ.ಥ.ದೆ.ದೋ.ಖ.ಚ.ಚಿ.) 

ಜನ್ಮಸ್ಥ ರಾಹುವು ನಿಮ್ಮ ಕೆಲಸ ಕಾರ್ಯಗಳಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಅನಿರೀಕ್ಷಿತ ಬದಲಾವಣೆಯುಂಟಾಗಲಿದೆ. ಹಣ ಸಂಪಾದನೆಗೋಸ್ಕರ ದೂರ ಪ್ರಯಾಣ ಮಾಡಬೇಕಾಗಬಹುದು. ಸಮಾಜದಲ್ಲಿ ನಿಮ್ಮ ಘನತೆ,ಗೌರವ ಹೆಚ್ಚಲಿದೆ. ಮತ್ತೊಬ್ಬರಿಗೆ ಕೊಟ್ಟ ಹಣ ನಿಮ್ಮ ಸಮಯಕ್ಕೆ ಬಾರದೇ ಹೋಗಬಹುದು. ಸಪ್ತಮ ಸ್ಥಾನದಲ್ಲಿರುವ ಕೇತುವಿನಿಂದಾಗಿ ಮದುವೆ ಮೊದಲಾದ ಶುಭ ಕಾರ್ಯಗಳು ವಿನಾಕಾರಣ ಮುಂದೆ ಹೋಗಬಹುದು. ಕೆಲವೊಮ್ಮೆ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದ್ದು,  ಸಣ್ಣಪುಟ್ಟ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಬಹುದು, ಬಂಧುಗಳ ಬೆಂಬಲ ಸಿಗುವುದು ಅನುಮಾನ, ವ್ಯಾಪಾರ, ವ್ಯವಹಾರಗಳಲ್ಲಿ ಅಡ್ಡಿ-ಆತಂಕಗಳು ಎದುರಾಗಲಿವೆ. ಅದನ್ನು ಜಾಣ್ಮೆಯಿಂದ ನಿಭಾಯಿಸುವುದನ್ನು ಕಲಿಯಿರಿ. ಬೇರೆಯರ ವಿಚಾರದಲ್ಲಿ ಪ್ರವೇಶ ಮಾಡಿದಲ್ಲಿ ತಲೆದಂಡ ತೆರಬೇಕಾದೀತು. ಮತ್ತೊಬ್ಬರಿಂದ ಮಾನಹಾನಿಯಾಗಲಿದೆ. ಚಂಡಿ ಪಾರಾಯಣ ಹಾಗೂ ವಿಷ್ಣು ಸಹಸ್ರನಾಮ ಪಠಿಸಿರಿ ಶುಭವಾಗುತ್ತದೆ.


ಮೇಲ್ಕಂಡ ಫಲಾಫಲ ವಿಚಾರಗಳು ಸರ್ವೇ ಸಾಮಾನ್ಯವಾಗಿದ್ದು, ಅವರವರ ಜಾತಕ ಹಾಗೂ ದಶಾಭುಕ್ತಿಗೆ ಅನುಗುಣವಾಗಿ ವ್ಯತ್ಯಾಸವಾಗುವ ಸಂಭವವಿದೆ.
ಆದ್ದರಿಂದ ಹೆಚ್ಚಿನ ಮಾಹಿತಿಗಾಗಿ ನಿಮ್ಮ ವಿಶ್ವಸ್ಥ ಜೋತಿಷ್ಕರಲ್ಲಿ ವಿಚಾರಿಸಿ ತಿಳಿದುಕೊಳ್ಳಿ.


ಜಯತೀರ್ಥಾಚಾರ್ ವಡೇರ್
ದಾವಣಗೆರೆ. 94486 66678
[email protected]

error: Content is protected !!