ಕೊರೊನಾ ವೈರಸ್‌ನಿಂದ ಕುಗ್ಗಿದ ಉದ್ಯಮಿ

ಲಾಕ್‌ಡೌನ್‌ನಿಂದ ಇಡೀ ಜಗತ್ತಿನ ಆರ್ಥಿಕ ಪರಿಸ್ಥಿತಿ ಕುಸಿದು ಬಿದ್ದಿದೆ. ಇದರಿಂದ ಎಲ್ಲಾ ಉದ್ಯೋಗದ ಉದ್ಯಮಿಗಳು ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಕುಗ್ಗಿ ಬದುಕಿನ ಭರವಸೆಯನ್ನೇ ಕಳೆದುಕೊಂಡಂತಾಗಿದೆ.

ಶರವೇಗದಿಂದ ಓಡುತ್ತಿರುವ ತಂತ್ರಜ್ಞಾನದಲ್ಲಿ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಒಬ್ಬ ಉದ್ಯಮಿ ಎಲ್ಲಾ ರೀತಿಯ ಆಧುನಿಕ ವ್ಯಾವಹಾರಿಕ ಜ್ಞಾನ ಹೊಂದಿದ್ದರೆ ಮಾತ್ರ ಈ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ದಲ್ಲಿ ಯಶಸ್ಸು ಕಾಣಲು ಸಾಧ್ಯ. ಹಿಂದೆ ಒಂದು ಕಾಲ  ಇತ್ತು `ಜೀವ’ ಇದ್ರೆ `ಜೀವನ’ ಅಂತ. ಆದರೆ  ಕೊರೊನಾ ಕಾರಣದಿಂದ ಲಾಕ್‌ಡೌನ್‌ ಕಠಿಣ ಪರಿಸ್ಥಿತಿಯಲ್ಲಿ `ಜೀವ’ ಮತ್ತು `ಜೀವನ’ ಎರಡು ಅಷ್ಟೇ ಮುಖ್ಯ ಎಂದು ಇವತ್ತಿನ ಪರಿಸ್ಥಿತಿ ತೋರಿಸಿಕೊಟ್ಟಿದೆ. ಹಿಂದೆ ಮನೆಯಲ್ಲಿ ಒಬ್ಬರು ದುಡಿದರೆ, ಹತ್ತು ಜನ ಕುಂತು ತಿನ್ನಬಹುದಿತ್ತು. ಆದರೆ ಈಗಿನ ಆಧುನಿಕ ಜೀವನ ಶೈಲಿಯಲ್ಲಿ ಜೀವನದ ಖರ್ಚು, ವೆಚ್ಚಗಳನ್ನು ನಿಭಾಯಿಸಲು ಮನೆ ಮಂದಿಯೆಲ್ಲಾ ದುಡಿದರೂ ಇವತ್ತಿನ ಖರ್ಚು ವೆಚ್ಚ ನೀಗಿಸುವುದು ಕಷ್ಟವಾಗುತ್ತಿದೆ. ಜೀವ, ರಕ್ಷಣೆ, ದುಡಿಮೆ, ಮಧ್ಯ ಜೀವನ ನಡೆಸಲೇಬೇಕಾದ ಪರಿಸ್ಥಿತಿ ಬಂದಿದೆ. ಅದರಲ್ಲೂ ಮಧ್ಯಮ ವರ್ಗದ ಜನರ ಪರಿಸ್ಥಿತಿ ದಿನ ದಿನಕ್ಕೂ ಕಷ್ಟವಾಗುತ್ತಿದೆ. ಜೀವನ ನಡೆಸುವುದೇ ಬಹುದೊಡ್ಡ ಸವಾಲು ಆಗಿದೆ. ಒಬ್ಬ ಉದ್ಯಮಿ ತನ್ನ ಉದ್ಯೋಗ ನಡೆಸಲು ಎಷ್ಟೆಲ್ಲಾ ಹರ ಸಾಹಸ ಮಾಡುತ್ತಾನೆ ಎಂದು ಮೆಲುಕು ಹಾಕಿ ನೋಡೋಣ.

ಸಣ್ಣ ಹಳ್ಳಿಯಲ್ಲಿ ಬೀಡಿ ಅಂಗಡಿ, ಚಹಾ ಅಂಗಡಿಯಿಂದ ಹಿಡಿದು ದೊಡ್ಡ ಅಂಗಡಿಗಳಲ್ಲಿ ಕೋಟಿ ಗಟ್ಟಲೆ ವ್ಯಾಪಾರ ಮಾಡುವವರು ಸಹ ವ್ಯಾಪಾರಿಯೇ. ಅವರವರ ಕಷ್ಟ, ತೊಂದರೆಗಳು ಅವರಿಗೆ ಅನುಗುಣವಾಗಿ ಇದ್ದೇ ಇರುತ್ತವೆ.  ಕೊರೊನಾ ಲಾಕ್‌ಡೌನ್‌ನಿಂದ ತತ್ತರಿಸಿದ ಕೆಲವು ಪ್ರಮುಖ ಕ್ಷೇತ್ರಗಳಾದ ಕೃಷಿ, ಕೈಗಾರಿಕೆ, ಕಟ್ಟಡ, ಹೋಟೆಲ್‌, ಲಾಡ್ಜ್‌, ಪ್ರವಾಸೋದ್ಯಮ, ಆಟೋಮೊಬೈಲ್, ಸರಕು ಸಾಗಾಣಿಕೆ ಹಾಗೂ ಸಾರಿಗೆ ವಾಹನ, ಪ್ರವಾಸೋದ್ಯಮ, ವಿಮಾನಯಾನ, ಟಿವಿ ಮತ್ತು ಚಲನಚಿತ್ರದ ಮನೋರಂಜನೆ, ಕ್ರೀಡೆ ಮತ್ತು ಜಿಮ್‌ಗಳು ಹೀಗೆ ಅನೇಕ ಕ್ಷೇತ್ರಗಳಲ್ಲಿ ಅವಲಂಬಿತರು ಗಳಾದ ರೈತರು, ಕಾರ್ಮಿಕರು, ಸಾಮಗ್ರಿ ತಯಾರಕರು, ವಿತರಕರು, ಮಾರಾಟಗಾರರು, ಖರೀದಿದಾರರು, ದಲ್ಲಾಳಿಗಳು, ಏಜೆಂಟರುಗಳು ಹೀಗೆ ನೂರಾರು ಕ್ಷೇತ್ರಗಳ ಉದ್ಯಮಿಗಳು ದೇಶದ ಬೆನ್ನೆಲುಬು ಇದ್ದಂತೆ.

ಇಂತಹ ನೂರಾರು ಕ್ಷೇತ್ರಗಳಲ್ಲಿ ವ್ಯವಹರಿಸುವ ಉದ್ಯಮಿಗಳು ದೇಶಕ್ಕೆ ಆಧಾರಸ್ತಂಭ ಇದ್ದಂತೆ, ದೇಶಕ್ಕೆ ಒಬ್ಬ ಉದ್ಯಮಿ ಕೊಡುವ ಕೊಡುಗೆಯನ್ನು ಯಾವ ಸರ್ಕಾರವೂ ಕೊಡಲಿಕ್ಕೆ ಸಾಧ್ಯವಿಲ್ಲ. ದೇಶದ ಅಭಿವೃದ್ಧಿಗೆ ಬೇಕಾಗುವ ಖರ್ಚಿನ ಬಹುಪಾಲು ಉದ್ಯಮಿಯು ಕಟ್ಟುವ ತೆರಿಗೆ ಮೂಲಕ ಬರುತ್ತದೆ. ಇದರಲ್ಲಿ ಉದ್ಯಮಿಯ ಪಾತ್ರ ಬಹುದೊಡ್ಡದು. ಸರ್ಕಾರದಿಂದ ಆಗದ ಅನೇಕ ಸಮಸ್ಯೆಗಳನ್ನು ಒಬ್ಬ ಉದ್ಯಮಿ ನಿರ್ವಹಿಸುತ್ತಿದ್ದಾನೆ. ಅದರಲ್ಲಿ ಪ್ರಮುಖವಾಗಿ ನಿರುದ್ಯೋಗದ ಸಮಸ್ಯೆ, ಸಮಾಜದ ಕಟ್ಟ ಕಡೆಯ ವರ್ಗದವರಿಂದ ಹಿಡಿದು ಎಲ್ಲಾ ಹಂತದ ವರ್ಗದವರಿಗೂ ಉದ್ಯೋಗ ನಿರ್ಮಿಸಿ ಉದ್ಯೋಗ ಕೊಡುವ ಕೆಲಸವನ್ನು ಒಬ್ಬ ಉದ್ಯಮಿ ಮಾಡುತ್ತಿದ್ದಾನೆ. ಅನಕ್ಷರಸ್ಥರಿಗೆ ಕಸ ಹೊಡೆಯುವ ಕೆಲಸದಿಂದ ಹಿಡಿದು ಕುಶಲ ಕರ್ಮಿಗಳಿಗೆ, ಕಾರ್ಮಿಕ, ಕೂಲಿಗಾರರಿಗೆ ಕೆಲಸ ಕೊಟ್ಟು ಅನೇಕ ಸಂಸಾರಗಳನ್ನು ನಡೆಸುತ್ತಿದ್ದಾನೆ. ವಿದ್ಯಾರ್ಹತೆ ಏನೇ ಇರಲಿ, ಜಾತಿ ಯಾವುದೇ ಇರಲಿ ಅದಕ್ಕೆ ಅನುಗುಣವಾಗಿ ಕೆಲಸ ನೀಡಬಲ್ಲ ಒಬ್ಬ ವ್ಯಾಪಾರಿ ದೇಶದ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಒಂದು ವೇಳೆ ಸಾಫ್ಟ್‌ವೇರ್‌ ಕಂಪನಿಗಳು ಅಥವಾ ಖಾಸಗಿ ಉದ್ಯೋಗಗಳು ಇಲ್ಲದಿದ್ದರೆ ವಿದ್ಯಾವಂತ ಯುವಕರಿಗೆ ಉದ್ಯೋಗವಿಲ್ಲದೆ, ದೇಶದ ನಿರುದ್ಯೋಗದ ಸಮಸ್ಯೆ ಊಹಿಸಲಾರದಷ್ಟು ಪಾತಾಳಕ್ಕೆ ಹೋಗುತ್ತಿತ್ತು.

ತನ್ನಲ್ಲಿ ದುಡಿಯುವ ಕೆಲಸಗಾರರಿಗೆ ಮಹಾಮಾರಿ  ಕೊರೊನಾದಿಂದ ಆದ ಲಾಕ್‌ಡೌನ್ ಸಂಕಷ್ಟದ ಸಮಯದಲ್ಲಿ ಮತ್ತು ಯಾವುದೇ ರೀತಿಯ ವ್ಯವಹಾರದಲ್ಲಿ ಏರುಪೇರುಗಳು ಇದ್ದರೂ ಸಹ ಕೆಲಸಗಾರರಿಗೆ ಸಂಬಳ ಕೊಟ್ಟು ಸಾಕುವುದಲ್ಲದೆ ಮದುವೆ, ಮುಂಜಿ, ಶುಭ ಸಂದರ್ಭ, ಅನಾರೋಗ್ಯ ಸಂದರ್ಭಗಳಲ್ಲಿ ಮುಂಗಡ (ಅಡ್ವಾನ್ಸ್) ಹಣ ಕೊಟ್ಟು ಅವರ ಬದುಕಿಗೆ ದಾರಿ ದೀಪವಾಗಿದ್ದಾನೆ ಮತ್ತು ಯಾವುದೇ ಜಾತಿ, ಧರ್ಮಗಳನ್ನು ಲೆಕ್ಕಿಸದೆ ಸಮಾಜದ ಶುಭ ಕಾರ್ಯಗಳಿಗೆ, ಬರ ಪರಿಹಾರ ಸಮಸ್ಯೆಗಳಿಗೆ ಮತ್ತು ಇಂತಹ  ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಸಿಲುಕಿದ ನಿರಾಶ್ರಿತರಿಗೆ ಧನ ಸಹಾಯ ಮಾಡುತ್ತಾ ಸಮಾಜದಲ್ಲಿ ತನ್ನ ಘನತೆ, ಗೌರವವನ್ನು ಕಾಪಾಡಿಕೊಳ್ಳಲು ಸದಾ ಹೊಡೆದಾಡುತ್ತಿರುತ್ತಾನೆ. ಸಮಯ ಲೆಕ್ಕಿಸದೆ ಬೆಳಗಿನಿಂದ ರಾತ್ರಿಯವರೆಗೂ, ಬಿಸಿಲು, ಮಳೆ, ಗಾಳಿ, ಚಳಿಯಲ್ಲಿ `ಕಾಯಕವೇ ಕೈಲಾಸ’ ಎಂದು ತಿಳಿದು ಗ್ರಾಹಕರಿಗೋಸ್ಕರ ಸೇವೆ ನೀಡಲು ಸ್ಪಂದಿಸುತ್ತಿರುತ್ತಾರೆ. ಒಬ್ಬ ಉದ್ಯಮಿ ತನ್ನ ವ್ಯವಹಾರದ ಬಂಡವಾಳ ಸಾಲ, ಬಡ್ಡಿ, ತೆರಿಗೆ, ಬಾಡಿಗೆ ಕೆಲಸಗಾರರ ಸಂಬಳ, ವ್ಯವಹಾರದಲ್ಲಿ ಬರತಕ್ಕ ಇತರೆ ಖರ್ಚುಗಳನ್ನೆಲ್ಲಾ ತೆಗೆದು ಉಳಿದದ್ದೇ ಲಾಭ. ಮತ್ತೆ ಆ ಲಾಭಕ್ಕೆ ತೆರಿಗೆ ಕಟ್ಟಲೇಬೇಕು. ಕೊನೆಗೆ ಉಳಿದ್ದರಲ್ಲಿ ತನ್ನ ಸ್ವಂತ ಖರ್ಚುಗಳು ಇಷ್ಟೆಲ್ಲಾ ಸಮಸ್ಯೆ ಮತ್ತು ಒತ್ತಡಗಳ ಮಧ್ಯೆ ಬದುಕಬೇಕು, ಒಬ್ಬ ಉದ್ಯಮಿ ಕಂಪ್ಯೂಟರ್ ಜ್ಞಾನ ಮತ್ತು ಆನ್‌ಲೈನ್ ಜ್ಞಾನ ಪಡೆದು ಆಧುನಿಕ ತಂತ್ರಜ್ಞಾನ ಪಡೆದು ಉದ್ಯೋಗದಲ್ಲಿ ಸ್ಪರ್ಧಿಸಬೇಕು. ತನ್ನ ವೈಯಕ್ತಿಕ ಅಭಿವದ್ಧಿಯ ಜೊತೆ ಜೊತೆಗೆ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಾನೆ.

ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಭವಿಷ್ಯದ ಬಗ್ಗೆ ಭರವಸೆ ಇಲ್ಲದೆ ಓಡುತ್ತಿರುವ ಉದ್ಯಮಿಗೆ ಸರ್ಕಾರ ಮತ್ತು ದಿನಕ್ಕೊಂದು ರೀತಿ ಬದಲಾಗುತ್ತಿರುವ ಸರ್ಕಾರದ ಹೊಸ ಹೊಸ ಕಾನೂನುಗಳು ಯಾವ ರೀತಿ ಸಹಕರಿಸಿ ಸ್ಪಂದಿಸುತ್ತವೆ ಮತ್ತು ಯಾವ ರೀತಿ ಬಲ ನೀಡುತ್ತವೆ ಎಂಬುದು ಉತ್ತರ ಸಿಗದ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ.

ಇಂತಹ ಅನಿರೀಕ್ಷಿತ ಕಠಿಣ ಸಂದರ್ಭದಲ್ಲಿ ಉದ್ಯಮಿ ಧೃತಿಗೆಡದೆ ಹೊಸ ಬದುಕನ್ನು ಕಟ್ಟಿಕೊಳ್ಳಲೇಬೇಕು. ಬಂದ ಪರಿಸ್ಥಿತಿಯನ್ನು ಸಕಾರಾತ್ಮಕ ಭಾವನೆಯಿಂದ ಸವಾಲಾಗಿ ಎದುರಿಸಬೇಕು. ಆತ್ಮಸ್ಥೆರ್ಯದಿಂದ, ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ ದಾಟಬೇಕು, ಇದು ಜೀವನ ಕಾಲ ಚಕ್ರದ ಒಂದು ಭಾಗವಷ್ಟೇ. ಈ ಜಗತ್ತು ಒಂದು ಅವಲಂಬಿತರ ಬದುಕಿನ ಸರಪಳಿ, ಓಡುವ ಜಗತ್ತನ್ನು ನಿಲ್ಲಿಸಲು ಸಾಧ್ಯವಿಲ್ಲ.  ಕೊರೊನಾಾದ ಭಯಬಿಟ್ಟು,  ಕೊರೊನಾಾದ ಬಗ್ಗೆ ಎಚ್ಚರಿಕೆ ಇಟ್ಟು, ಭರವಸೆಯಿಂದ ಬದುಕೋಣ.


ಹೆಚ್.ಎ. ಮಂಜುನಾಥಸ್ವಾಮಿ
98448 82366
[email protected]

error: Content is protected !!