ಭತ್ತಕ್ಕೆ ರೇಟ್‌ ಇಲ್ಲ, ಅಕ್ಕಿಗೆ ಬೇಡಿಕೆ ಇಲ್ಲ, ಖರೀದಿ ಕೇಂದ್ರಕ್ಕೆ ರೈತನಿಲ್ಲ

ರಾಜ್ಯ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ತೆರೆದಿರುವ ಭತ್ತ ಖರೀದಿ ಕೇಂದ್ರಗಳು ರೈತರಿಲ್ಲದೆ ಬಣಗುಡುತ್ತಿವೆ.

ಜಿಲ್ಲೆಯಲ್ಲಿ ಶುಕ್ರವಾರದವರೆಗೆ ಭತ್ತ ಖರೀದಿ ಕೇಂದ್ರದಲ್ಲಿ 91 ಜನ ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದು, ಇದುವರೆಗೆ 571 ಕ್ವಿಂಟಾಲ್‌ ಭತ್ತ ಮಾತ್ರ ಖರೀದಿ ಆಗಿದೆ.

ಹೊನ್ನಾಳಿ ತಾಲ್ಲೂಕಿನಲ್ಲಿ 60, ಹರಿಹರ ತಾಲ್ಲೂಕಿನಲ್ಲಿ 19 ಮತ್ತು ದಾವಣಗೆರೆ ತಾಲ್ಲೂಕಿನಲ್ಲಿ 12 ರೈತರು ನೋಂದಣಿ ಆಗಿದ್ದು ಚನ್ನಗಿರಿ, ಜಗಳೂರು ತಾಲ್ಲೂಕಿನಲ್ಲಿ ಭತ್ತ ಖರೀದಿಗಾಗಿ ಯಾರೂ ನೋಂದಣಿ ಮಾಡಿಸಿಲ್ಲ.

ಆದರೆ ರಾಗಿ ಖರೀದಿ ಉತ್ತಮವಾಗಿದ್ದು, ಇದುವರೆಗೆ ಜಿಲ್ಲೆಯಲ್ಲಿ 19,012 ಕ್ವಿಂಟಾಲ್‌ ರಾಗಿಯನ್ನು 3150 ರೂ. ದರದ ಅನ್ವಯ ಖರೀದಿಸಲಾಗಿದೆ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ‘ಜನತಾವಾಣಿ’ಗೆ ತಿಳಿಸಿದ್ದಾರೆ.

ಸಾಮಾನ್ಯ ಭತ್ತಕ್ಕೆ 1815 ರೂ. ಮತ್ತು ಭತ್ತ ಗ್ರೇಡ್‌-ಎ ಗೆ 1835 ರೂ. ದರ ನಿಗದಿ ಮಾಡಲಾಗಿದೆ. ಮಧ್ಯವರ್ತಿಗಳಿಗೆ ಪ್ರವೇಶ ವಿಲ್ಲದೆ ರೈತರು ನೇರವಾಗಿ ಖರೀದಿ ಕೇಂದ್ರಗಳಿಗೆ ಅಗತ್ಯ ದಾಖಲೆಗಳೊಂದಿಗೆ ಬಂದು ಹೆಸರು ನೋಂದಾಯಿಸಬೇಕು. ಭತ್ತ ಖರೀದಿಗೆ ಮೇ 31 ಕೊನೆಯ ದಿನವಾಗಿರುತ್ತದೆ ಎಂದರು.

ಖರೀದಿ ಕೇಂದ್ರದ ಕಡೆ ಮುಖ ಮಾಡದ ರೈತ: ರೈತರಿಗೆ ಖರೀದಿ ಕೇಂದ್ರದ ನಿಬಂಧನೆಗಳು ಕಠಿಣವಾಗಿರುವುದರಿಂದ ಖರೀದಿ ಕೇಂದ್ರಗಳಲ್ಲಿ ಭತ್ತ ಮಾರಾಟ ಮಾಡಲು ಮನಸ್ಸು ಮಾಡುತ್ತಿಲ್ಲ.

ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆಯುವ ಮೂಲಕ ರೈತರ ಮೂಗಿಗೆ ತುಪ್ಪ ಹಚ್ಚಿದಂತಾಗಿದೆ ಎಂಬ ಆರೋಪ ರೈತರಿಂದಲೇ ಕೇಳಿ ಬಂದಿದೆ.

ಇತ್ತ ಓಪನ್‌ ಮಾರ್ಕೆಟ್‌ನಲ್ಲಿ ಸೋನಾಮುಸುರಿ ಭತ್ತ ಕ್ವಿಂಟಾಲ್‌ಗೆ ರೂ.1450 ರಿಂದ ರೂ.1500 ಮತ್ತು ಆರ್‌ಎನ್‌ಆರ್‌ ರೂ.1700 ರಿಂದ ರೂ. 1800 ಹಾಗೂ ಶ್ರೀರಾಮ್‌ ಸೋನಾ ರೂ.1900 ರಿಂದ ರೂ.2000 ಇದೆ ಎಂದು ಹೇಳಲಾಗುತ್ತಿದೆ. ಈ ದರ ಸರಾಸರಿಯಲ್ಲಿ ಕ್ವಿಂಟಾಲ್‌ಗೆ ರೂ.300 ಕಡಿಮೆ ಇದೆ. ಒಂದು ಎಕರೆಯಲ್ಲಿ ಭತ್ತ ಬೆಳೆಯಲು ರೈತರು ಕನಿಷ್ಠ ರೂ.25 ಸಾವಿರ ಖರ್ಚು ಮಾಡಿರುತ್ತಾರೆ. ಎಕರೆಗೆ ಸರಾಸರಿ 20 ರಿಂದ 25 ಕ್ವಿಂಟಾಲ್‌ ಇಳುವರಿ ಬಂದರೂ ಖರ್ಚು ತೆಗೆದು ಈಗಿರುವ ದರದಲ್ಲಿ ರೈತನಿಗೆ ರೂ. 5 ಸಾವಿರ ಉಳಿಯುವುದು ಕಷ್ಟವಾಗಿದೆ ಎಂದು ನಿಟ್ಟೂರಿನ ಪ್ರಗತಿಪರ ರೈತ ಕೆ. ಸಂಜೀವಮೂರ್ತಿ ಆತಂಕ ವ್ಯಕ್ತಪಡಿಸಿದರು.

ಅಲ್ಲದೇ, ಇತ್ತೀಚೆಗೆ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ಕಟಾವಿಗೆ ಬಂದಿರುವ ಭತ್ತ ನೆಲ ಕಚ್ಚಿರುವುದು ರೈತರಿಗೆ ಮತ್ತಷ್ಟು ಕಷ್ಟ ತಂದಿದೆ.

ಈ ಮೊದಲು ಒಂದು ಎಕರೆ ಭತ್ತವನ್ನು ಒಂದೇ ಗಂಟೆಯಲ್ಲಿ ಕೊಯ್ಯುತ್ತಿದ್ದ ಮಿಷನ್‌ಗಳು ಈಗ ಭತ್ತ ನೆಲ ಕಚ್ಚಿರುವುದರಿಂದ ಎಕರೆಗೆ 2 ರಿಂದ 3 ಗಂಟೆ ಸಮಯ ತೆಗೆದುಕೊಳ್ಳುತ್ತಿವೆ. ಇದು ರೈತರಿಗೆ ಹೆಚ್ಚುವರಿ ಹೊರೆ ಆಗಲಿದೆ. ಉತ್ತಮ ದರ ಇಲ್ಲದ ಈ ಸಮಯದಲ್ಲೇ ಮಳೆಯಿಂದಾಗಿ ಬೆಳೆಹಾನಿ ಆಗಿರುವುದು ರೈತರಿಗೆ ಸುಧಾರಿಸಿಕೊಳ್ಳದಷ್ಟು ತೊಂದರೆ ಆಗಿದ್ದು, ಜಿಲ್ಲಾಡಳಿತ ಕೂಡಲೇ ರೈತರಿಗೆ ಬೆಳೆ ಹಾನಿ ಪರಿಹಾರ ಒದಿಗಸಬೇಕೆಂಬುದು ಭಾನುವಳ್ಳಿ ಜಿ.ಪಂ. ಕ್ಷೇತ್ರದ ಸದಸ್ಯ ಬಿ.ಎಂ. ವಾಗೀಶ್‌ಸ್ವಾಮಿ ಅವರ ಒತ್ತಾಯವಾಗಿದೆ.

ಭತ್ತದ ತೇವಾಂಶ ಕಡಿಮೆ ಆಗುವಂತೆ ಒಣಗಿಸಿಕೊಂಡು ಖರೀದಿ ಕೇಂದ್ರಗಳಿಗೆ ತರಬೇಕೆಂಬ ನಿಯಮ ರೈತರು ಖರೀದಿ ಕೇಂದ್ರಗಳಿಗೆ ಹೋಗದಂತೆ ಮಾಡಿದೆ. ಬದಲಿಗೆ ಸರ್ಕಾರ ರೈತರಿಗೆ ಯಾವುದೇ ಕಂಡೀಷನ್‌ ಹಾಕದೆ ಭತ್ತ ಖರೀದಿಸಿ, ಆ ಭತ್ತವನ್ನು ಆಧುನೀಕರಣ ಹೊಂದಿರುವ ರೈಸ್‌ ಮಿಲ್‌ಗಳಿಗೆ ನೀಡಿ, ಅಲ್ಲಿ ಭತ್ತವನ್ನು ಸಂಸ್ಕರಣೆ ಮಾಡಿಸಿ, ಅಲ್ಲಿಯೇ ಸ್ಟಾಕ್‌ ಮಾಡಬಹುದು.

ನಂತರ ಇದೇ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡಿದರೆ ಸರ್ಕಾರಕ್ಕೆ ಮತ್ತು ರೈತರಿಗೆ ಅನುಕೂಲವಾಗಲಿದೆ ಎಂಬುದು ಬಿ.ಎಂ. ವಾಗೀಶ್‌ಸ್ವಾಮಿ ಅವರ ಸಲಹೆ ಆಗಿದೆ.

ಸರ್ಕಾರ ಈ ಬಗ್ಗೆ ಚಿಂತನೆ ಮಾಡಿ ಕ್ರಮ ಕೈಗೊಂಡರೆ, ರೈತರು ಖರೀದಿ ಕೇಂದ್ರಗಳಲ್ಲಿ ಭತ್ತ ಮಾರಾಟ ಮಾಡಲು ಮುಂದೆ ಬರುತ್ತಾರೆ ಎಂಬುದು ಅವರ ಅಭಿಪ್ರಾಯವಾಗಿದೆ.

ಅಕ್ಕಿಗೆ ಬೇಡಿಕೆ ಇಲ್ಲ : ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸುವವರೇ ಇಲ್ಲದಂತಾಗಿರುವುದು ಭತ್ತದ ದರ ಕುಸಿಯಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ಮದುವೆ, ಸಭೆ – ಸಮಾರಂಭಗಳು ಇಲ್ಲದಿ ರುವುದು ಮತ್ತು ಹೋಟೆಲ್‌, ಹಾಸ್ಟೆಲ್‌ಗಳು ಬಂದ್‌ ಆಗಿರುವುದರಿಂದ ಅಕ್ಕಿ ಖರ್ಚಾಗುತ್ತಿಲ್ಲ.

ಮಾರುಕಟ್ಟೆಯಲ್ಲಿ ಅಕ್ಕಿ ಕೇಳುವವರೇ ಇಲ್ಲದಂತಾಗಿರುವುದು ಸಣ್ಣ ಕೈಗಾರಿಕೆಗಳಿಗೆ ಆತಂಕ ತಂದಿದೆ ಎಂದು ರೈಸ್‌ ಮಿಲ್‌ ಮಾಲೀಕರಾದ ಬಿ.ಎಂ. ವಾಗೀಶ್‌ಸ್ವಾಮಿ, ಬಿ. ಚಿದಾನಂದಪ್ಪ, ಯಕ್ಕನಹಳ್ಳಿ ಬಸವರಾಜಪ್ಪ, ಎಸ್‌.ಕೆ. ಅಲ್ತಾಫ್‌ ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಖರೀದಿ ಕೇಂದ್ರ ತೆರೆದರೆ ಸಾಲದು, ರೈತರು ಖುಷಿಯಿಂದ ಬಂದು ಭತ್ತ ವನ್ನು ಖರೀದಿಗೆ ಕೊಡುವಂತ ವಾತಾವರಣವನ್ನು ನಿರ್ಮಿಸಬೇಕು. ಖರೀದಿ ಕೇಂದ್ರಗಳಲ್ಲಿ ರೈತರಿಗೆ ಹಾಕಿರುವ ಕಂಡೀಷನ್‌ಗಳನ್ನು ತೆಗೆದು ಹಾಕಿ, ಸುಲಭವಾಗಿ ಭತ್ತ ಖರೀದಿಸುವಂತಾಗಬೇಕು. ಖರೀದಿ ಕೇಂದ್ರವನ್ನು ಮೇ 31ರ ನಂತರವೂ ಮುಂದುವರೆಸಬೇಕೆಂಬುದು ಎಪಿಎಂಸಿ ನಿರ್ದೇಶಕ ಜಿ. ಮಂಜುನಾಥ್‌ ಪಟೇಲ್‌ ಮತ್ತು ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್‌. ಹಳ್ಳಿ ಪ್ರಭುಗೌಡ ಅವರ ಒತ್ತಾಯವಾಗಿದೆ.

___________________________________________________________________________________________________________

ಭತ್ತಕ್ಕೆ ರೇಟ್‌ ಇಲ್ಲ, ಅಕ್ಕಿಗೆ ಬೇಡಿಕೆ ಇಲ್ಲ, ಖರೀದಿ ಕೇಂದ್ರಕ್ಕೆ ರೈತನಿಲ್ಲ - Janathavani

 

ಜಿಗಳಿ ಪ್ರಕಾಶ್‌,
9448155228, 9606588622
[email protected]

error: Content is protected !!