ಎಂಐಎಸ್‌-ಸಿ ಕಾಯಿಲೆ ಮಕ್ಕಳಿಗೆ ಮಾರಕವೇ ?

ನಿಮ್ಮ ಮನೆಯ ಸದಸ್ಯರು ಅಥವಾ ಮಕ್ಕಳಲ್ಲಿ ಇತ್ತೀಚಿಗೆ ಕೋವಿಡ್‌-19 ಪತ್ತೆಯಾಗಿದ್ದು, ಮಗುವಿನಲ್ಲಿ
ಈ ಕೆಳಗಿನ ಕ್ಷಣಗಳು ಕಂಡುಬಂದರೆ, ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಅತ್ಯವಶ್ಯಕ.

∗ ತೀವ್ರ ಜ್ವರ, ಚರ್ಮದ ಮೇಲೆ ದದ್ದು ಅಥವಾ ಕೆಂಪು ಚುಕ್ಕೆ
∗ ಹೊಟ್ಟೆ ನೋವು, ವಾಂತಿ ಬೇಧಿ
∗ ಕೆಂಪು ಕಣ್ಣು ತುಟಿ, ಕೆಂಪು ನಾಲಿಗೆ
∗ ಸುಸ್ತು ಮತ್ತು ಹೆಚ್ಚು ನಿದ್ದೆ ಮಾಡುವುದು. ಆಯಾಸ, ಹಾಲು 
ಕುಡಿಯದಿರುವುದು, ಕೈ ಮತ್ತು ಕಾಲು ತಣ್ಣಗಿರುವುದು

ಎಂಐಎಸ್‌-ಸಿ ಕಾಯಿಲೆ ಎಂದರೇನು?

ಕೋವಿಡ್‌-19 ಸೋಂಕು ಉಂಟಾದ ಹಲವು ದಿನಗಳು ಅಥವಾ ವಾರಗಳ ನಂತರ, ಮಕ್ಕಳಲ್ಲಿ ಜ್ವರ, ಸುಸ್ತು, ವಾಂತಿ, ಬೇಧಿ, ಇತ್ಯಾದಿ ಲಕ್ಷಣ ಗಳು ಪ್ರಾರಂಭವಾಗುತ್ತವೆ. ದೇಹದ ಹಲವಾರು ಅಂಗಾಂಗಗಳು (ಹೃದಯ, ಶ್ವಾಸಕೋಶ, ಮೆದುಳು, ಯಕೃತ್‌ (ಲಿವರ್‌), ರಕ್ತ, ಕಣ್ಣು ಈ ಕಾಯಿಲೆಯ ದಾಳಿಗೆ ತುತ್ತಾಗುವ ಸಾಂಭವ್ಯವಿರುತ್ತದೆ. ಕೋವಿಡ್‌-19 ಸೋಂಕು ಉಂಟಾ ದಾಗ, ಪ್ರತಿಯೊಬ್ಬರ ದೇಹದಲ್ಲಿ ರೋಗ ನಿರೋಧಕ ಪ್ರತಿಕಾಯಗಳು (ಆಂಟಿ ಬಾಡಿಸ್‌) ಉತ್ಪತ್ತಿಯಾಗುತ್ತವೆ. ಕೆಲವು ಮಕ್ಕಳಲ್ಲಿ ಈ ಕೋವಿಡ್‌ ಪ್ರತಿಕಾಯ ಗಳು ದೇಹದ ಹಲವು ಅಂಗಾಂಗಗಳಲ್ಲಿ ಉರಿಯೂತ (ಇನ್‌ಫ್ಲಮೇಷನ್‌) ಉಂಟು ಮಾಡುತ್ತದೆ. ಬಹುತೇಕ ಮಕ್ಕಳಲ್ಲಿ ಎಂಐಎಸ್‌-ಸಿ ಕಾಯಿಲೆಯ ತೀವ್ರತೆ ಸಾಮಾನ್ಯ ಮಟ್ಟದಲ್ಲಿದ್ದು, ಹಲವು ದಿನಗಳಲ್ಲಿ ಗುಣಮುಖ ಹೊಂದುತ್ತಾರೆ. ಕೆಲವು ಮಕ್ಕಳಲ್ಲಿ ಮಾತ್ರ ತೀವ್ರ ಸ್ವರೂಪದಲ್ಲಿ ಕಾಣಿಸಿಕೊಂಡು, ಜೀವಕ್ಕೆ ಮಾರಕವಾಗುವ ಸಂಭವ ಇರುತ್ತದೆ. ಎಂಐಎಸ್‌-ಸಿ ಕಾಯಿಲೆ ನವಜಾತ ಶಿಶು (ಎಂಐಎಸ್‌-ಎನ್‌) ಮತ್ತು ವಯಸ್ಕರಲ್ಲಿ (ಎಂಐಎಸ್‌-ಎ) ಕಾಣಿಸಬಹುದು.

ಎಂಐಎಸ್‌-ಸಿ ಕಾಯಿಲೆಯ ಲಕ್ಷಣಗಳು ಏನು?

* ಜ್ವರ (ಕನಿಷ್ಠ 3 ದಿನ) * ಸುಸ್ತು, ವಾಂತಿ ಬೇಧಿ, ಹೊಟ್ಟೆನೋವು * ಕಣ್ಣು ಕೆಂಪಾಗುವುದು * ತಲೆನೋವು, ಮೈಕೈ ನೋವು, ಬಾವು * ಚರ್ಮದ ಮೇಲೆ ದದ್ದು ಅಥವಾ ಕೆಂಪು ಚುಕ್ಕೆ * ರಕ್ತದ ಒತ್ತಡ ಕಡಿಮೆಯಾಗುವುದು, ಆಯಾಸ * ಉಸಿರಾಟದ ತೊಂದರೆ.

ಎಂಐಎಸ್‌-ಸಿ ಕಾಯಿಲೆಯನ್ನು ಪತ್ತೆ ಹಚ್ಚುವುದು ಹೇಗೆ?

(1) ಕೋವಿಡ್‌-19 ಕಾಯಿಲೆಯ ಪ್ರತಿಕಾಯಗಳನ್ನು (ಆಂಟಿಬಾಡಿಸ್‌) ರಕ್ತದಲ್ಲಿ ಕಂಡು ಹಿಡಿಯುವ ಪರೀಕ್ಷೆ.  (2) ಬಹು ಅಂಗಾಂಗಗಳ ಉರಿಯನ್ನು ದಾಖಲಿಸಲು ಬೇಕಾದ (ಇನ್‌ಫ್ಲಮೆಟ್ರಿ ಮೇಕರ್‌), ಸಿಆರ್‌ಪಿ, ಫೆರಟಿನ್‌ ಇತ್ಯಾದಿ. (3) ರಕ್ತದ ಹೆಪ್ಪುಗಟ್ಟುವಿಕೆಯನ್ನು ಪತ್ತೆ ಹಚ್ಚುವ ಪರೀಕ್ಷೆಗಳು. (4) ಹೃದಯ, ಶ್ವಾಸಕೋಶ, ಯಕೃತ್ತು (ಲಿವರ್‌), ಮೂತ್ರಪಿಂಡಕ್ಕೆ ಸಂಬಂಧಿಸಿದ ಪರೀಕ್ಷೆಗಳು.

ಈ ಕಾಯಿಲೆಯನ್ನು ಗುಣಪಡಿಸಲು ಸಾಧ್ಯವೇ?

ಖಂಡಿತಾ ಸಾಧ್ಯ. ಆಸ್ಪತ್ರೆಗೆ ದಾಖಲಾಗುವುದು ಅತಿ ಅವಶ್ಯಕ. ಕೆಲವು ದಿನಗಳ ಕಾಲ ವೈದ್ಯರ ನಿರಂತರ ಗಮನದಲ್ಲಿರಬೇಕು. ಹಲವು ಬಾರಿ ತೀವ್ರ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆಯನ್ನು ನೀಡುವ ಅವಶ್ಯಕತೆ ಇರುತ್ತದೆ. ಸ್ಟಿರಾಯಿಡ್‌ ಇಂಜೆಕ್ಷನ್‌ ಅಥವಾ ಮಾತ್ರೆ (ಐವಿ ಇಮ್ಯುನೋಗ್ಲೋಬುಲಿನ್ಸ್‌) ರಕ್ತ ಹೆಪ್ಪುಗಟ್ಟು ವುದನ್ನು ನಿಯಂತ್ರಿಸುವ ಇಂಜೆಕ್ಷನ್‌ಗಳು, ಇತರೆ ಔಷಧಿಗಳ ಅವಶ್ಯಕತೆ ಇರುತ್ತದೆ.

ಎಂಐಎಸ್‌-ಸಿ ಕಾಯಿಲೆಯು ಮಕ್ಕಳ ಆರೋಗ್ಯದ ಮೇಲೆ ದೀರ್ಘಕಾಲದ ದುಷ್ಪರಿಣಾಮಗಳನ್ನು ಬೀರುತ್ತದೆಯೇ?

ಸಾಮಾನ್ಯವಾಗಿ ಈ ಕಾಯಿಲೆಗೆ ತುತ್ತಾದ ಎಲ್ಲಾ ಮಕ್ಕಳು ಸಂಪೂರ್ಣವಾಗಿ ಗುಣಮುಖರಾಗುತ್ತಾರೆ. ಕೆಲವರಲ್ಲಿ ಹೃದಯದ ಕೆಲಸದಲ್ಲಿ ನ್ಯೂನತೆಯಾಗುವ ಸಾಧ್ಯತೆ ಇರುತ್ತದೆ. ಇದನ್ನು ತಡೆಗಟ್ಟಲು ಹೃದಯಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು (2ಡಿ ಎಕೋ, ಇಸಿಜಿ) ಕಾಯಿಲೆಯಿಂದ ಗುಣಮುಖರಾದ ಮೇಲೂ ಮಾಡಲು ಸಲಹೆ ನೀಡಲಾಗುತ್ತದೆ.

ಎಂಐಎಸ್‌-ಸಿ ಕಾಯಿಲೆ ಬರದಂತೆ ನಮ್ಮ ಮಕ್ಕಳನ್ನು ಹೇಗೆ ರಕ್ಷಿಸಿಕೊಳ್ಳಬೇಕು?

(1) ಕೋವಿಡ್‌-19 ಲಸಿಕೆ ಲಭ್ಯವಾದ ಕೂಡಲೇ ಎಲ್ಲಾ ಮಕ್ಕಳಿಗೆ ಕೊಡಿಸುವುದು. ಲಸಿಕೆ ಈ ಕಾಯಿಲೆ ತಡೆಗಟ್ಟಲು ರಾಮಬಾಣ. ರಾಷ್ಟ್ರೀಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಸದ್ಯದಲ್ಲಿ 18 ವರ್ಷ ಮೇಲ್ಪಟ್ಟ ವಯಸ್ಕರಿಗೆ ಮಾತ್ರ ಲಸಿಕೆ ಲಭ್ಯವಿದೆ. 18 ವರ್ಷಗಳಿಗಿಂತ ಕಿರಿಯರಿಗೆ ಲಸಿಕೆ ನೀಡುವ ಬಗ್ಗೆ ಪ್ರಯೋಗ ನಡೆಯುತ್ತಿದ್ದು, ಶೀಘ್ರದಲ್ಲಿ ಮಕ್ಕಳಿಗೆ ಲಸಿಕೆ ದೊರೆಯುವ ಸಾಧ್ಯತೆ ಬಲವಾಗಿದೆ. (2) ಮಕ್ಕಳ ಸಂಪರ್ಕದಲ್ಲಿ ಬರುವ ಎಲ್ಲಾ ವಯಸ್ಕ ವ್ಯಕ್ತಿಗಳಿಗೆ ಲಸಿಕೆ ನೀಡುವ ಮೂಲಕ, ಮಕ್ಕಳ ಸುತ್ತ ರಕ್ಷಾಕವಚವನ್ನು ಬಲಪಡಿಸುವುದು. ಇದನ್ನು ಕಾಕೂನ್‌ ವ್ಯಾಕ್ಸಿನೇಷನ್‌ ಎಂದು ಕರೆಯುತ್ತಾರೆ. (3) ಅನಾವಶ್ಯಕವಾಗಿ ಮಕ್ಕಳನ್ನು ಜನಸಾಂದ್ರತೆೆ ಹೆಚ್ಚಿರುವ ಪ್ರದೇಶಗಳಿಗೆ ಕರೆದೊಯ್ಯಬಾರದು. (4) 6 ಅಡಿ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದು, ಅವಶ್ಯಕತೆ ಇದ್ದಾಗ ಸ್ಯಾನಿಟೈಸರ್‌ನಿಂದ ಕೈ ತೊಳೆಯುವುದು – ಈ ಎಚ್ಚರಿಕೆಗಳನ್ನು ಪಾಲಿಸುವುದು ಅತೀ ಅಗತ್ಯ. (5) ಎಂಐಎಸ್‌-ಸಿ ಕಾಯಿಲೆಯ ಯಾವ ಲಕ್ಷಣ ಕಂಡು ಬಂದರೂ ಅಲಕ್ಷ್ಯ ಮಾಡದೇ ತಜ್ಞ ವೈದ್ಯರನ್ನು ಕೂಡಲೇ ಸಂಪರ್ಕಿಸಬೇಕು.

ಕೋವಿಡ್‌-19 ತೃತೀಯ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆಯೇ? ಇದು ಎಲ್ಲರನ್ನೂ ಕಾಡುತ್ತಿರುವ ಕಠಿಣ ಪ್ರಶ್ನೆ. ಮೊದಲನೆಯ ಮತ್ತು ಎರಡನೆಯ ಕೋವಿಡ್‌-19 ಅಲೆಯಲ್ಲಿ ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಮತ್ತು ತೀವ್ರತೆ ಕಡಿಮೆ ಇದೆ.

ಈಗಾಗಲೇ ಮಕ್ಕಳಿಗೆ ನೀಡುವ ಹಲವಾರು ಲಸಿಕೆಗಳು (ಬಿಸಿಜಿ, ಎಂಎಂಆರ್‌, ಹೆಚ್‌ಐಎನ್‌ಐ) ಮತ್ತು ಮಕ್ಕಳನ್ನು ಕಾಡುವ ವೈರಲ್‌ ಜ್ವರಗಳು, ಇತ್ಯಾದಿ ಒಂದು ವಿಧದಲ್ಲಿ ಮಕ್ಕಳಿಗೆ ರಕ್ಷಣಾ ಕವಚವನ್ನು ಕೊಡುತ್ತದೆ. ಮಾಧ್ಯಮಗಳಲ್ಲಿ ಈ ವಿಷಯ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದರೂ, ಇದಕ್ಕೆ ಬಲವಾದ ವೈಜ್ಞಾನಿಕ ಸಾಕ್ಷ್ಯಾಧಾರಗಳು ಇಲ್ಲ. ಆದಾಗ್ಯೂ ಪೋಷಕರು ಹೆಚ್ಚಿನ ಕಾಳಜಿಯನ್ನು ವಹಿಸುವುದು ಅತ್ಯಗತ್ಯ. ಕೋವಿಡ್‌-19 ಕಾಯಿಲೆ ಕುರಿತು ಪೋಷಕರು ತಮ್ಮ ಆತಂಕಗಳನ್ನು ಬಗೆಹರಿಸಿಕೊಳ್ಳಲು ಈ ದೂರವಾಣಿಗೆ 74830 14600 ಸಂಜೆ 6-7 ರವರೆಗೆ ಫೋನ್‌ ಮಾಡಿ ತಜ್ಞ ವೈದ್ಯರ ಸಲಹೆ ಪಡೆಯಬಹುದು.


ಡಾ|| ಮೂಗನಗೌಡ ಪಾಟೀಲ್‌
ಮುಖ್ಯಸ್ಥರು, ಮಕ್ಕಳ ವಿಭಾಗ
ಜೆಜೆಎಂ ಮೆಡಿಕಲ್‌ ಕಾಲೇಜು, ದಾವಣಗೆರೆ.

ಡಾ|| ನಾಗಮಣಿ ಅಗರ್‌ವಾಲ್‌
ಪ್ರಾಧ್ಯಾಪಕರು, ಮಕ್ಕಳ ವಿಭಾಗ,
ಜೆಜೆಎಂ ಮೆಡಿಕಲ್‌ ಕಾಲೇಜು, ದಾವಣಗೆರೆ.

error: Content is protected !!