ಖಾರ ಮಂಡಕ್ಕಿಯಿಂದ zomato ವರೆಗೆ ನಮ್ಮ ದಾವಣಗೆರೆ

ಮನೆ ಮಂದಿ, ಗೆಳೆಯರು ಕುಳಿತು ತಿಂಡಿ ಅಥವಾ ಊಟ ಮಾಡುವ ಕಾಲ ಹೋಗಿ, ಇದೀಗ ಬೇಕಾದ್ದನ್ನು ಮನೆ ಬಾಗಿಲಿಗೇ ತರಿಸಿಕೊಂಡು ತಿನ್ನುವ ಕಾಲಕ್ಕೆ ಬದಲಾಗುತ್ತಿದೆ. ದಾವಣಗೆರೆ ನಗರವೂ ಸಹ ಈ ಬದಲಾವಣೆಗೆ ಹೊರತಾಗಿಲ್ಲ. ದಾವಣಗೆರೆ ಬೆಳೆದಂತೆ ಹೋಟೆಲ್​ನಲ್ಲಿ ಕುಳಿತು ತಮಗಿಷ್ಟವಾದ ಉಪಹಾರವನ್ನೋ, ಊಟವನ್ನೋ ಉಂಡು ಖುಷಿ ಪಡುವ ಮನಸ್ಥಿತಿಯೂ ಜನರಲ್ಲಿ ಬದಲಾಗುತ್ತಿದೆ.  ಮೊಬೈಲ್ ಮೂಲಕ ಒಂದು ಪೋನ್ ಮಾಡಿದರೆ ಅಥವಾ ಆಪ್​ಗಳ ಮೂಲಕ ಆರ್ಡರ್ ಮಾಡಿದರೆ ಬಯಸಿದ ಆಹಾರ ಬಾಗಿಲಿಗೆ ಬರುತ್ತದೆ. ಮತ್ಯಾಕೆ ಹೋಟೆಲ್​​ಗೆ ಹೋಗುವುದು?  ಕಾಯುತ್ತಾ ಕುಳಿತುಕೊಳ್ಳುವುದು? ಸಮಯವೂ ವ್ಯರ್ಥ ಎನ್ನುವುದು ಕೆಲವರ ವಾದ. ಕಾಲ ಬದಲಾದಂತೆ ಜನರ ಮನಸ್ಥಿತಿಯೂ ಬದಲಾಗುತ್ತದೆ ಬಿಡಿ. ಮನೆಗೆ  ಪಾರ್ಸೆಲ್ ತರಿಸಿಕೊಂಡು ಊಟ ಮಾಡುವುದರಿಂದ ಇತ್ತ ಹೋಟೆಲ್​ನವರಿಗೂ ಸರ್ವ್ ಮಾಡುವ ಕೆಲಸ ತಪ್ಪ ಬಹುದು. ಆದರೆ ಯಾಂತ್ರಿಕ ಯುಗದಲ್ಲಿ ಒಂದಿಷ್ಟು ಇಷ್ಟದ ತಿಂಡಿ, ಚಹಾ, ಮಾತು, ಹರಟೆ ಇವೆಲ್ಲಾ ಮರೆಯಾಗುತ್ತಿರುವುದೂ ಸತ್ಯ.

ಸ್ಟವ್ ಮೇಲೆ ಎಣ್ಣೆಯ ಬಾಣಲೆ, ಹದವಾಗಿ ಕಾಯುತ್ತಿದ್ದ ಎಣ್ಣೆಯಲ್ಲಿ ಮೊದಲೇ ಕಲೆಸಿಕೊಂಡಿದ್ದ ಕಡಲೆ ಹಿಟ್ಟಿನಲ್ಲಿ ಮೆಣಸಿನಕಾಯನ್ನು ಅದ್ದಿ ಒಂದೊಂದಾಗಿ ಬಾಣಲೆಯಲ್ಲಿ ಬಿಡುವ ಮೂಲಕ ತನ್ನ ಬಲಗೈ ಬೆರಳ ಚಾಕಚಕ್ಯತೆ ತೋರಿಸುವ ಭಟ್ಟ.

ಇತ್ತ ಬಾಣಲೆಗೆ ಬಿದ್ದ ಮಿರ್ಚಿಗಳನ್ನೇ ನೋಡುತ್ತಾ ಕೈಯಲ್ಲಿದ್ದ ಖಾರ-ಮಂಡಕ್ಕಿ ಮೇಯುತ್ತಾ, ಬಿಸಿ ಮಿರ್ಚಿಗಾಗಿ ಕಾಯುತ್ತಾ ಕುಳಿತುಕೊಳ್ಳುವ ಜನತೆ. ಬಿಸಿ ಬಿಸಿ ಮಿರ್ಚಿ ಹೊರ ಬರುತ್ತಲೆ ಇಲ್ಲೆರಡು ಹಾಕು ಎಂದು ಮಿರ್ಚಿ ಹಾಕಿಸಿಕೊಂಡು ಮಂಡಕ್ಕಿ ಜೊತೆ ಸವಿಯುತ್ತಿದ್ದರೆ, ಅಬ್ಬಾ…

ಹೌದು, ದಾವಣಗೆರೆ ಜನತೆಗೂ ಖಾರ-ಮಂಡಕ್ಕಿ-ಮಿರ್ಚಿಗೂ ಭಾರೀ ನಂಟು. ಸೂರ್ಯ ತನ್ನ ಕಾಯಕ ಮುಗಿಸಿ ಬಾನಿನಿಂದ ಕೆಳ ಜಾರುತ್ತಿದ್ದರೆ, ಇತ್ತ ನಗರದ ಜನತೆಯೂ ಸಹ ತಮ್ಮ ಕಾಯಕ ಮುಗಿಸಿ ಬಾಣಲಿಗೆ ಜಾರುತ್ತಿದ್ದ ಮಿರ್ಚಿಗೆ ಮುಗಿ ಬೀಳುತ್ತಿದ್ದರು.

ಖಾರ, ಮಂಡಕ್ಕಿ, ಮಿರ್ಚಿ ತಿನ್ನದ ಹೊರತು ಆ ದಿನ ಪೂರ್ಣವಾಗದು ಎಂಬಷ್ಟರ ಮಟ್ಟಿಗೆ ಸಂಜೆ ತಿಂಡಿಯ ನಂಟು ಕೆಲವರದ್ದಾಗಿತ್ತು.

ಹೆಚ್ಚಾದ ತಿಂಡಿ ಗಾಡಿಗಳು : ದಶಕಗಳ ಹಿಂದೆ ಬೀದಿ ಬದಿಯ ಫುಟ್​ಪಾತ್ ಹೋಟೆಲ್​ಗಳ ಸಂಖ್ಯೆ ಕಡಿಮೆ ಇದ್ದುದರಿಂದ ಹೋಟೆಲ್​ಗಳಲ್ಲಿ ಜನದಟ್ಟಣೆ ಹೆಚ್ಚಾಗಿರುತ್ತಿತ್ತು. ಆದರೆ ಇಂದು ಬೀದಿ ಬದಿಯ ತಿಂಡಿ ಗಾಡಿಗಳ ಸಂಖ್ಯೆ ಹೆಚ್ಚುತ್ತಿದೆ.  ಅವಸರದ ಜೀವನದಲ್ಲಿ ಕಡಿಮೆ ಬೆಲೆಗೆ ಸಿಗುವ ತಿಂಡಿಯನ್ನು ನಿಂತೇ ತಿಂದು, ಕೈ ತೊಳೆದುಕೊಂಡು ಹೋಗುವವರ ಸಂಖ್ಯೆ ಹೆಚ್ಚಾಗಿರುವ ಕಾರಣ, ಹೋಟೆಲ್‌ಗಳ ವ್ಯಾಪಾರ ಕ್ಷೀಣಿಸುತ್ತಿದೆ.

ಒಬ್ಬರಿಗಾದರೆ ಪ್ಲೇಟ್​ ಲೆಕ್ಕದಲ್ಲಿ ಕಾರ ಮಂಡಕ್ಕಿ. ಅದೇ ಮೂರ್ನಾಲ್ಕು ಜನರು ಚಿಕ್ಕದಾದ ಹೋಟೆಲ್​ನಲ್ಲಿ ಕುಳಿತರೆ ಲೀಟರ್ ಮಂಡಕ್ಕಿ, ತೂಕದ ಲೆಕ್ಕದಲ್ಲಿ ಖಾರ, ಒಂದಿಷ್ಟು ಉಳ್ಳಾಗಡ್ಡಿ. ತಲೆಗೆ ಮೂರ್ನಾಲ್ಕು ಮೆಣಸಿನ್ಕಾಯಿ. ಹಾಫ್ ಟೀ ಯೊಂದಿಗೆ ಸಮಾಪ್ತಿ. ಇವಿಷ್ಟರ ಮಧ್ಯೆ ಸ್ಥಳೀಯ ರಾಜಕೀಯ, ಸಿನಿಮಾ, ತಂತಮ್ಮ ಮನೆಗಳ ಒಂದಿಷ್ಟು ರಾಮಾಯಣ.

ಈ ಎಲ್ಲಾ ಖುಷಿ ಆರ್ಡರ್ ಪಾರ್ಸೆಲ್ ತರಿಸಿಕೊಂಡು ತಿನ್ನುವುದರಲ್ಲಿ ಇರದೇ ಇದ್ದರೂ, ಸಮಯದ ಉಳಿತಾಯ ಎಂಬ ನೆಪವೋ, ಹೋಗಲು ಬೇಸರವೋ ಅಥವಾ ತರಿಸಿಕೊಳ್ಳುವಷ್ಟು ಹಣವಿದೆ ಎಂಬ ಭಾವನೆಯೋ ತಿಳಿಯದು.

ಹೆಚ್ಚಾಗುತ್ತಿದೆ ನಾರ್ಥ್ ಇಂಡಿಯನ್ ಪ್ರೀತಿ : ಖಾನಾವಳಿಗಳಿಗೆ ಹೋಗಿ ಬಿಸಿ ಬಿಸಿ ರೊಟ್ಟಿ, ಅಥವಾ ಚಪಾತಿ, ಚಟ್ನಿ, ಪುಡಿ ಚಟ್ನಿ, ಈರುಳ್ಳಿ, ಮೊಸರು, ಅನ್ನ-ಸಾರು ಉಂಡು ಬರುತ್ತಿದ್ದವರು ಇದೀಗ ನಾರ್ಥ್ ಇಂಡಿಯನ್ ಊಟದ ಕಡೆ ವಾಲುತ್ತಿದ್ದಾರೆ.

ಹೌದು, ಇತ್ತೀಚಿನ ದಿನಗಳಲ್ಲಿ ದಾವಣಗೆರೆ ನಗರದಲ್ಲಿ ನಾರ್ಥ್ ಇಂಡಿಯನ್, ಚೈನೀ ಆಹಾರದ ಹೋಟೆಲ್​ಗಳೂ ಹೆಚ್ಚಾಗುತ್ತಿವೆ. ಶನಿವಾರ, ಭಾನುವಾರ ಸೇರಿದಂತೆ ರಜಾ ದಿನಗಳಲ್ಲಿ ಈ ಹೋಟೆಲ್​ಗಳಲ್ಲಿ ಊಟ ಮಾಡಬೇಕಾದರೆ ಕಾದು ಕುಳಿತುಕೊಳ್ಳಬೇಕು.

ಹಲವು ವರ್ಷಗಳಿಂದ ನಗರದಲ್ಲಿ ವಾಸಿಸುವವರಿಂದ ಹಿಡಿದು ಇತ್ತೀಚೆಗೆ ಹಳ್ಳಿ ಬಿಟ್ಟು ಪಟ್ಟಣ ಸೇರಿದ ಕುಟುಂಬಗಳು, ಕಾಲೇಜು ವಿದ್ಯಾರ್ಥಿಗಳು ನಾರ್ಥ್ ಇಂಡಿಯನ್ ಡಿಶ್​ನತ್ತ ವಾಲಿದ್ದಾರೆ.

ಅಲ್ಲಿ ಕೊಡುವ ಮೆನು ಕಾರ್ಡ್​ನಲ್ಲಿರುವ ವಿವಿಧ ​ಭಕ್ಷ್ಯಗಳ ಪೈಕಿ ತಮಗಿಷ್ಟವಾದದ್ದನ್ನು ಹೇಳಿ, ಅದು ಬರುವ ಮುನ್ನ ಸ್ಟಾಟರ್ ಎಂದು ಗೋಬಿ, ಪಾಪಡ್, ಸೂಪ್ ಹೀಗೆ ಒಂದಿಷ್ಟು ಸೇವಿಸಿ, ಊಟದ ನಂತರ ಫಿಂಗರ್ ಬೌಲ್​ನಲ್ಲಿ ಬೆರಳಾಡಿಸಿ, ಕೈ ಒರೆಸಿಕೊಂಡು, ಮೇಲೊಂದಿಷ್ಟು ಐಸ್ ಕ್ರಿಮ್ ಅಥವಾ ಜ್ಯೂಸ್ ಸೇವಿಸುವುದು ಹೊಸತನವೋ ಅಥವಾ ಪ್ರತಿಷ್ಠೆಯೋ ತಿಳಿಯದು.

ಊಟದ ಕೊನೆಗೆ ಕೊಡುವ ಫಿಂಗರ್​ಬೌಲ್​ನಲ್ಲಿರುವ ನೀರನ್ನು ನಿಂಬೇ ಹಣ್ಣಿನ ಜ್ಯೂಸ್ ಎಂದು ಹೇಳಿ ಕಿಚಾಯಿಸುತ್ತಾ, ಹೊಸಬರಿಗೆ ಹೊಸ ಊಟ ಪರಿಚಯಿಸುವ ಪರಿಪಾಠ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ  ರೊಟ್ಟಿ-ಚಪಾತಿಯ ಖಾನಾವಳಿಗಳು ಮಂಕಾಗುತ್ತಲೇ ಇವೆ.

ಹೀಗಿತ್ತು 2 ದಶಕಗಳ ಹಿಂದೆ

ಸಿನಿಮಾ ನೋಡಿ ಓಪನ್ ದೋಸೆ ತಿಂದು ಊರಿನ ಬಸ್ ಹತ್ತಿದಾಗಲೇ ಹಳ್ಳಿ ಹೈದನಿಗೆ ಸಮಾಧಾನ !

ಸುಮಾರು ಎರಡು ದಶಕಗಳ ಹಿಂದೆ ದಾವಣಗೆರೆ ಗಡಿಯಾರ ಕಂಬದ ಬಳಿ ಸವಿತಾ ಹೋಟೆಲ್, ಮಸಾಲೆ ದೋಸೆ. ಬೆಣ್ಣೆ ದೋಸೆಗೆ ಫೇಮಸ್ ಆಗಿತ್ತು. ಚೌಕಿಪೇಟೆಯಲ್ಲಿ ಮಂಜುನಾಥ ಹೋಟೆಲ್ ಮಸಾಲೆ ದೋಸೆಗೆ ಫೇಮಸ್ ಆಗಿತ್ತು. ಹೊರ ಊರಿನಿಂದ ವ್ಯಾಪಾರಕ್ಕೆ ಬರುವವರು ದೋಸೆ ತಿನ್ನದೆ ಹಿಂತಿರುಗುತ್ತಿರಲಿಲ್ಲ.

ಅಶೋಕ ಟಾಕೀಸ್ ಎದುರು ಇದ್ದ ಸಿಂಧೆ ಹೋಟೆಲ್ ಓಪನ್ ದೋಸೆಯನ್ನು ಹಿರಿಯರು ಮರೆತಿರಲಿಕ್ಕಿಲ್ಲ. ಸಿನಿಮಾ ನೋಡಿ ಓಪನ್ ದೋಸೆ ತಿಂದು ಊರಿನ ಬಸ್ ಹತ್ತಿದಾಗಲೇ ಹಳ್ಳಿ ಹೈದನಿಗೂ ಸಮಾಧಾನ. ಸಿಂಧೆ ಹೋಟೆಲ್​ನಲ್ಲಿ ದೊಡ್ಡ ಬಾಣಲೆಯಲ್ಲಿರುತ್ತಿದ್ದ  ಬಾದಾಮಿ ಹಾಲನ್ನು ಜನತೆ ಕ್ಯೂ ನಿಂತು ಕುಡಿಯುತ್ತಿದ್ದರು.  ಸೆಕೆಂಡ್ ಶೋ ಫಿಲಂ ಮುಗಿಯುವವರೆಗೂ ಹೋಟೆಲ್ ಚಿತ್ರಾಭಿಮಾನಿಗಳಿಗೆ ತನ್ನ  ಸೇವೆ ನೀಡುತ್ತಿದ್ದ ದಿನಗಳವು.

ಇನ್ನು ಪಕ್ಕದಲ್ಲೇ ಇದ್ದ ಸಾಮ್ರಾಟ್ ಹೋಟೆಲ್​ಗೆ ಹಳ್ಳಿ ಜನರ ಆರಾಧ್ಯ ದೈವವಾಗಿತ್ತು.  ನವ ದಂಪತಿಗಳು ಮೋತಿ ಟಾಕೀಸ್​ನಲ್ಲಿ ಫಿಲಂ ನೋಡಿ ಮೋತಿ ಹೋಟೆಲ್​ನ ಸ್ಪೆಷಲ್ ರೂಂನಲ್ಲಿ ಕುಳಿತು ಮಸಾಲೆ ದೋಸೆ ತಿನ್ನುವುದೇ ಒಂದು ಪ್ರತಿಷ್ಠೆಯಾಗಿತ್ತು.

ಎಸ್.ಕೆ.ಪಿ. ರಸ್ತೆಯಲ್ಲಿ ಈಗಲೂ ಇರುವ ತಿಪ್ಪರಾಯ ಹೋಟೆಲ್ ಹಾಗೂ ರಾಘವೇಂದ್ರ ಶಾವಿಗೆ ಹೋಟೆಲ್ ಹಳೆ ಭಾಗದ ಜನರಿಗೆ ಮನೆ ಮಾತು. ಇಲ್ಲಿನ ಕೆಲವು ಹೋಟೆಲ್​ಗಳಲ್ಲಿ ಜನರು ಗುಂಪುಕಟ್ಟಿಕೊಂಡು ಲೀಟರ್​ಗಟ್ಟಲೆ ಮಂಡಕ್ಕಿ ಹಾಕಿಸಿಕೊಂಡು ತೂಕದ ಲೆಕ್ಕದಲ್ಲಿ ಕಾರ ಬೆರೆಸಿಕೊಂಡು ಮೆಣಸಿನ್ಕಾಯಿ ಜೊತೆ ಸವಿದರೇನೇ ಖುಷಿ, ಸಮಾಧಾನ.

ಕಾಳಿಕಾ ದೇವಿ ರಸ್ತೆ ಬಳಿಯ ಹೊಟ್ಟೆ ನಂಜಪ್ಪನ ಅಂಗಡಿ ಕೇಳದವರೇ ಇಲ್ಲ. ಖಾರ-ಮಂಡಕ್ಕಿಗೆ ಫೇಮಸ್. ಖಾರ ವಿದೇಶಕ್ಕೂ ಹೋಗುತ್ತಿದೆ. ಇಲ್ಲಿನ ಮೈಸೂರು ಪಾಕ್, ಬೋಂದಿ, ಹತ್ತಿಕಾಯಿ ಈಗಲೂ ಹಲವರ ಬಾಯಲ್ಲಿ ನೀರು ತರಿಸುತ್ತವೆ.


 

ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ
9964930983
[email protected]

error: Content is protected !!