ಮುಸ್ಲಿಮರ ಪ್ರಾತಿನಿಧ್ಯ ಕುಸಿತ, ಶ್ರೀಮಂತರ ಆಯ್ಕೆ ಹೆಚ್ಚಳ-ಲೋಕಸಭೆಯಲ್ಲಿ ಪ್ರಾತಿನಿಧ್ಯದ ಕೊರತೆ ಬಗ್ಗೆ ಪಕ್ಷಗಳು ಮಾತನಾಡುತ್ತಿಲ್ಲವೇಕೆ..?

ಮುಸ್ಲಿಮರ ಪ್ರಾತಿನಿಧ್ಯ ಕುಸಿತ, ಶ್ರೀಮಂತರ ಆಯ್ಕೆ ಹೆಚ್ಚಳ-ಲೋಕಸಭೆಯಲ್ಲಿ ಪ್ರಾತಿನಿಧ್ಯದ ಕೊರತೆ ಬಗ್ಗೆ ಪಕ್ಷಗಳು ಮಾತನಾಡುತ್ತಿಲ್ಲವೇಕೆ..?

ಕ್ಷೇತ್ರ ಪುನರ್‌ವಿಂಗಡಣೆ ನಡೆದರೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಬಹುದು ಎಂದು ಕಳವಳಗೊಂಡ 14 ಪಕ್ಷಗಳು ಇತ್ತೀಚೆಗೆ ಚೆನ್ನೈನಲ್ಲಿ ಡಿಎಂಕೆ ನೇತೃತ್ವದಲ್ಲಿ ಸಭೆಯೊಂದನ್ನು ನಡೆಸಿದ್ದವು. ಮುಂದೊಂದು ಕಾಲದಲ್ಲಿ ಪ್ರಾತಿನಿಧ್ಯದಲ್ಲಿ ಕಡಿತವಾಗಬಹುದು ಎಂಬ ಊಹಾಪೋಹದಿಂದಾಗಿ ಪಕ್ಷಗಳು ಈ ಎಚ್ಚರಿಕೆಯ ಹೆಜ್ಜೆ ಇಟ್ಟಿರುವುದು ತಪ್ಪೇನೂ ಅಲ್ಲ. 

ಆದರೆ ಇತ್ತೀಚಿನ ವರ್ಷಗಳಲ್ಲಿ ಮುಸ್ಲಿ ಮರು ಲೋಕಸಭೆಯಲ್ಲಿ ಪ್ರಾತಿನಿಧ್ಯ ಕಳೆದು ಕೊಳ್ಳುತ್ತಿರುವ ಬಗ್ಗೆ ಈ ಡಿಎಂಕೆ ಚಿಂತಿಸಿಲ್ಲ; ಚಿಂತಿಸುವ ಸೂಚನೆಗಳೂ ದೊರೆತಿಲ್ಲ. 2024ರ ಲೋಕಸಭಾ ಚುನಾವಣೆ ಯಲ್ಲಿ ಕೇವಲ 24 ಮುಸ್ಲಿಮರು ಮಾತ್ರ ಆಯ್ಕೆ ಯಾಗಿದ್ದರು. ಇವರ ಪ್ರಾತಿನಿಧ್ಯ ಆರು ದಶಕ ಗಳಲ್ಲೇ ಅತ್ಯಂತ ಕಡಿಮೆ ಹಂತಕ್ಕೆ ತಲುಪಿದೆ.

ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಶೇಕಡಾ 14.4 ರಷ್ಟಿದೆ ಎಂದು ಅಂದಾಜಿ ಸಲಾಗಿದೆ. ಈ ಪ್ರಕಾರ ಲೋಕಸಭೆಯಲ್ಲಿ ಕನಿಷ್ಠ 78 ಸ್ಥಾನಗಳಾದರೂ ಸಿಗಬೇಕಿತ್ತು. ಆದರೆ ಲೋಕಸಭೆಯ ಒಟ್ಟು 543 ಸ್ಥಾನ ಗಳಿಗೆ ಹೋಲಿಸಿದರೆ ಮುಸ್ಲಿಮರಿಗೆ ಕೇವಲ ಶೇಕಡಾ 4.1 ರಷ್ಟು ಸ್ಥಾನಗಳು ಮಾತ್ರ ದೊರೆತಿವೆ. ದೇಶದಲ್ಲಿ ಬಿಜೆಪಿ ಪ್ರಬಲವಾಗುತ್ತಾ ಬಂದಂತೆ ಸಂಸತ್ತಿನಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕಡಿಮೆ ಯಾಗುತ್ತಿದೆ ಎಂದು ಅಂಕಿ-ಅಂಶಗಳು ತಿಳಿಸುತ್ತವೆ. 

ಜನಸಂಖ್ಯಾ ವಿಚಾರದಲ್ಲಿ ಭಾರತ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಮುಸ್ಲಿಮರನ್ನು ಹೊಂದಿದೆ. ಹೀಗಿರುವಾಗ ದೇಶದಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕಡಿಮೆಯಾಗುತ್ತಿರುವ ಬಗ್ಗೆ, ಅದರಲ್ಲೂ ಅಲ್ಪಸಂ ಖ್ಯಾತರ ಹಿತ ರಕ್ಷಿಸುತ್ತೇವೆ ಎಂದು ಹೇಳಿಕೊಳ್ಳುವ ಪಕ್ಷಗಳು, ಈ ವಿಷಯವನ್ನು ಗಂಭೀರವಾಗಿ ಚರ್ಚಿಸಬೇಕಿತ್ತು. ಆದರೆ ಕ್ಷೇತ್ರ ಪುನರ್‌ವಿಂಗ ಡಣೆಯ ಚರ್ಚೆಯ ವೇಳೆ ಈ ಬಗ್ಗೆ ಒಬ್ಬರೂ ಒಂದು ಮಾತೂ ಆಡಿದ ವರದಿಗಳು ಬಂದಿಲ್ಲ.

ಧರ್ಮವನ್ನು ಒತ್ತಟ್ಟಿಗೆ ಇರಿಸಿ ನೋಡಿದರೂ ಸಹ ಲೋಕಸಭೆಯಲ್ಲಿ ಸಮರ್ಪಕ ಪ್ರಾತಿನಿಧ್ಯ ದೊರೆಯುವ ಬಗ್ಗೆ ಪ್ರಶ್ನೆಗಳಿವೆ. ಉದಾಹರಣೆಗೆ, ಬಿಎಸ್‌ಪಿ 2014ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು ಮತಗಳಲ್ಲಿ ಶೇಕಡಾ 4.14 ರಷ್ಟು ಮತಗಳನ್ನು ಪಡೆದಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್‌ ನಂತರ ಬಿಎಸ್‌ಪಿ ಹೆಚ್ಚು ಮತಗಳನ್ನು ಗಳಿಸಿತ್ತು. ಆದರೆ ಲೋಕಸಭೆ ಯಲ್ಲಿ ಬಿಎಸ್‌ಪಿ ಒಂದು ಸ್ಥಾನವನ್ನೂ ಪಡೆಯಲು ಸಾಧ್ಯವಾಗಲಿಲ್ಲ. 

ಬಿಎಸ್‌ಪಿ ಪ್ರಮುಖವಾಗಿ ದಲಿತರ ಬೆಂಬಲ ಪಡೆದಿದೆ. ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಈ ಪಕ್ಷಕ್ಕೆ ಮತ ಚಲಾಯಿಸಿದ್ದರು. ಆದರೆ ದಲಿತರಿಗೆ ಬಿಎಸ್‌ಪಿ ಮೂಲಕ ಲೋಕ ಸಭೆಯಲ್ಲಿ ಪ್ರಾತಿನಿಧ್ಯ ಪಡೆಯಲು ಸಾಧ್ಯವಾಗ ಲಿಲ್ಲ. ಮತಗಳ ಆಧಾರದ ಮೇಲೆ ನೋಡಿದರೆ, ಶೇಕಡಾ 4.14 ರಷ್ಟು ಮತ ಪಡೆದ ಬಿಎಸ್‌ಪಿಗೆ ಕನಿಷ್ಠ 22 ಸೀಟುಗಳಾದರೂ ಸಿಗಬೇಕಿತ್ತು.

ಮತ ಗಳಿಕೆಯ ಆಧಾರದಲ್ಲಿ ನೋಡಿದರೆ ಕಾಂಗ್ರೆಸ್ ಪಕ್ಷಕ್ಕೂ ಸಾಕಷ್ಟು ಹಿನ್ನಡೆಯಾಗಿದೆ. 2019ರಲ್ಲಿ ಕಾಂಗ್ರೆಸ್ ಶೇಕಡಾ 19.49 ರಷ್ಟು ಮತ ಗಳಿಸಿತ್ತು. ಈ ಲೆಕ್ಕದಲ್ಲಿ ಪಕ್ಷಕ್ಕೆ 100ಕ್ಕೂ ಹೆಚ್ಚು ಸ್ಥಾನಗಳು ಸಿಗಬೇಕಿತ್ತು. ಆದರೆ ಪಕ್ಷವು 52 ಸ್ಥಾನ ಮಾತ್ರ ಗಳಿಸಿತು. ಇಷ್ಟು ಮತ ಪಡೆದ ಪಕ್ಷಕ್ಕೆ ವಿರೋಧ ಪಕ್ಷದ ನಾಯಕ ಸ್ಥಾನವೂ ಸಿಗಲಿಲ್ಲ. 2014ರಲ್ಲೂ ಸಹ ಕಾಂಗ್ರೆಸ್ ಬಹುತೇಕ ಇದೇ ಪ್ರಮಾಣದ ಮತ ಪಡೆದು 44 ಸ್ಥಾನ ಮಾತ್ರ ಗಳಿಸಿತ್ತು. ಆಗಲೂ ಪಕ್ಷಕ್ಕೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಗಲಿಲ್ಲ. ಇಷ್ಟೊಂದು ಮತಗಳನ್ನು ಪಡೆದ ಪಕ್ಷಕ್ಕೆ ವಿರೋಧ ಪಕ್ಷದ ನಾಯಕ ಸ್ಥಾನವೂ ಸಿಗದಿರುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅವಮಾನವೇ ಸರಿ.

ಇತ್ತೀಚಿನ ವರ್ಷಗಳಲ್ಲಿ ಹಣ ಬಲವುಳ್ಳವರೇ ಜನಪ್ರತಿನಿಧಿಗಳಾಗಿ ಆಯ್ಕೆಯಾಗುವುದು ಹೆಚ್ಚಾಗುತ್ತಿದೆ. 2024ರ ಚುನಾವಣೆಯಲ್ಲಿ 543 ಲೋಕಸಭಾ ಸ್ಥಾನಗಳ ಪೈಕಿ 504 ಸ್ಥಾನಗಳಲ್ಲಿ ಗೆದ್ದವರು ಕೋಟ್ಯಾಧೀಶರೇ ಆಗಿದ್ದರು. ಶೇಕಡಾ 93 ರಷ್ಟು ಸ್ಥಾನಗಳು ಕೋಟ್ಯಾಧೀಶರಿಗೆ ದೊರೆತಿದ್ದವು.

ಇವೆಲ್ಲವೂ ದೇಶದ ಪ್ರಜಾಪ್ರಭುತ್ವದಲ್ಲಿ ಹಲವಾರು ಸಮಸ್ಯೆಗಳನ್ನು ಬಿಂಬಿಸುತ್ತವೆ. ಇದರ ಬಗ್ಗೆ ದೇಶದಲ್ಲಿ ಗಂಭೀರ ಚರ್ಚೆ ನಡೆಯದಿರುವುದು ವಿಷಾದಕರವಾಗಿದೆ. ಕ್ಷೇತ್ರ ಪುನರ್‌ವಿಂಗಡಣೆ ಕೇವಲ ರಾಜ್ಯವಾರು ಪ್ರಾತಿನಿಧ್ಯದ ಕುರಿತು ಮಾತ್ರ ಚಿಂತಿಸಿದರೆ ಸಾಲದು. ದಮನಿತ ಹಾಗೂ ತುಳಿತಕ್ಕೊಳಗಾದ ಸಮುದಾ ಯಗಳಿಗೆ ಸಮರ್ಪಕ ಪ್ರಾತಿನಿಧ್ಯ ಕಲ್ಪಿಸುವಂತೆ ವ್ಯವಸ್ಥೆ ರೂಪಗೊಂಡರೆ ಮಾತ್ರ ಪ್ರಜಾಪ್ರಭುತ್ವಕ್ಕೆ ಹೆಚ್ಚಿನ ಅರ್ಥ ಬರಲಿದೆ.


ಬಿ.ಜಿ. ಪ್ರವೀಣ್ ಕುಮಾರ್
ದಾವಣಗೆರೆ.

error: Content is protected !!