ದಾವಣಗೆರೆ ಹಳೆ ಊರಿನ ಶಿವರಾತ್ರಿ ಸ್ವಾರಸ್ಯಗಳು…
ಸುಮಾರು 56 ವರ್ಷಗಳ ಹಿಂದೆ ಒಂದು ಶಿವರಾತ್ರಿ ದಿನ `ಚಂದ್ರಕಾಂತಾ ಕಲ್ಲಂಗಡಿ ಹಣ್ಣು ಕೊಡಿಸು ಬಾರಪ್ಪಾ, ಹೆಂಡ್ತಿ ಕೆಂಪಗೆ ಇರಬೇಕು’ ಎಂದು ಮೂಲಿಮನಿ ವಿರೂಪಣ್ಣ ಅಕ್ಕಸಾಲಿ ಚಂದ್ರಕಾಂತನಿಗೆ ಹೇಳಿದರು. ಕೇಳಿ ನನಗೆ ನಗು ಬಂದಿತು, ಆದರೆ ನನ್ನ ಪಕ್ಕದಲ್ಲಿದ್ದ ಗೌಡರ ಪ್ರಕಾಶಗೆ ಅರ್ಥವಾಗಲಿಲ್ಲ, ಏನೆಂದು ನನ್ನನ್ನು ಕೇಳಿದ, ನಾನು ಅವನಿಗೆ ಬಿಡಿಸಿ ಹೇಳಿದೆ, ಅವನೂ ನಕ್ಕ. ಅದೇನೆಂಬುದನ್ನು ಈ ಲೇಖನದ ಕೊನೆಯಲ್ಲಿ ಹೇಳುವೆ, ಅದಕ್ಕೂ ಮೊದಲು ಆ ಕಾಲದ ಶಿವರಾತ್ರಿ ಫಲಾಹಾರದ ಬಗ್ಗೆ ತುಸು ಹೇಳುವೆ.
ಈಗಂತೂ ಶಿವರಾತ್ರಿ ಫಲಾಹಾರ ವೆಂದರೆ ಕಲ್ಲಂಗಡಿ ಹಣ್ಣು ಬೇಕೇ ಬೇಕು ಎಂಬಷ್ಟು ಕಡ್ಡಾಯ ಗೊಳಿಸಿ ಕೊಳ್ಳಲಾಗಿದೆ. ಹಿಂದೆಲ್ಲಾ ಉಪವಾಸ ಇರಲಾರದವರು ಅನ್ನದ ಬದಲು ಅವಲಕ್ಕಿ, ಉಪ್ಪಿಟ್ಟನ್ನೋ, ರೊಟ್ಟಿ ಮುದ್ದೆಯ ಬದಲು ಮಂಡಕ್ಕಿ ಉಸುಳಿಯನ್ನೊ ಮತ್ತೆ ಕೆಲವರು ಹಣ್ಣು ಹಾಲನ್ನೊ ಸೇವಿಸಿದರೆ ಇನ್ನೂ ಕೆಲವರು ತಂಬಾಕು ಪೇಟೆಯ ಹೊಟ್ಟೆ ನಂಜಪ್ಪನ ಅಂಗಡಿಗೆ ಹೋಗಿ `ಬಿಲ್ಲಿ ಫರಾಳ’ ಅರ್ಥಾತ್ `ಫಲಾಹಾರ’ ಅಂದರೆ ಒಂದು ಬಿಲ್ಲೆಗೆ ಒಂದಷ್ಟು ಮಂಡಕ್ಕಿ ಖಾರ ಜೊತೆಗೆ ಸಿಹಿ ಬೂಂದಿ ಸಹಿತಾಗಿ ಅಂಗಡಿಯಲ್ಲಿರುವ ಎಲ್ಲ ತಿನಿಸುಗಳನ್ನೂ ಸ್ವಲ್ಪ ಸ್ವಲ್ಪ ಸೇರಿಸಿ ಕಲಸಿ ಪೊಟ್ಟಣದಲ್ಲಿ ಕೊಡಲಾಗುತ್ತಿತ್ತು, ಅದನ್ನೇ `ಶಿವ ಶಿವ’ ಎಂದು ಅಲ್ಲೇ ಕುಳಿತು ತಿನ್ನುತ್ತಿದ್ದರು.
ಆಗ ಈಗಿನಂತೆ ವರ್ಷದ ಬಹುತೇಕ ತಿಂಗಳುಗಳಲ್ಲಿ ಕಲ್ಲಂಗಡಿ ಹಣ್ಣು ಸಿಗುತ್ತಿರಲಿಲ್ಲ. ಶಿವರಾತ್ರಿಯ ಆಸು ಪಾಸಿನಲ್ಲಿ ಬರುತ್ತಿತ್ತಾದರೂ ಈಗಿನಂತೆ ಸುಧಾರಿತ ತಳಿಯ ಹಣ್ಣುಗಳಾಗಿರಲಿಲ್ಲ. ಸಮೀಪದ ಹೊಳೆ, ಹಳ್ಳಗಳ ತಟದಲ್ಲಿ ಬೆಳೆದ ಕಲ್ಲಂಗಡಿಯ ಗಾತ್ರ ದೊಡ್ಡದಾಗಿರುತ್ತಿತ್ತು, ಕಡು ಕಪ್ಪಿನಂತೆ ಕಾಣುವ ದಟ್ಟ ಹಸಿರು ಬಣ್ಣ, ಆಕಾರ ಗುಂಡಾಗಿರದೇ ಒಂದು ರೀತಿ ದೊಡ್ಡ ಬೂದುಗುಂಬಳಕಾಯಿಯ ತರ ಇರುತ್ತಿದ್ದು, ಹೆಚ್ಚಿ ನೋಡಿದರೆ ಒಳಗೆ ಬಿಳಿಯ ಭಾಗ ಅಧಿಕವಾಗಿರುತ್ತಿತ್ತೇ ಹೊರತು, ಕೆಂಪು ಭಾಗ ತುಂಬಾ ಕಡಿಮೆ ಇರುತ್ತಿತ್ತು, ಅಲ್ಲದೆ ಈಗಿನಂತೆ ಕಡುಕೆಂಪು ಸಹ ಇರದೇ ತಿಳಿ ಗುಲಾಬಿ ಬಣ್ಣವು ಆಗಿರುತ್ತಿದ್ದು ಗಟ್ಟಿಯಾದ ಕರಿ ಬೀಜಗಳೆ ಹೆಚ್ಚಾಗಿರುತ್ತಿದ್ದವು. ಕಲ್ಲಂಗಡಿ ಹಾಗೂ ಬನಸ್ಪತ್ರೆ, ಕರಬೂಜಾ ಹಣ್ಣುಗಳನ್ನು ಕಾಯಿ ಪೇಟೆಯ ನಾರಾಯಣ ಬಲ್ಲಾಳ ಡಾಕ್ಟರ್ ಆಸ್ಪತ್ರೆಯ ಮುಂಭಾಗದಿಂದ ಭೋಗಯ್ಯ ಶೆಟ್ಟರ ಅಂಗಡಿ, ರಿಕಬ್ ಚಂದ್ ಮನೆ, ಎಮ್ಮಿ ಯವರ ಬಂಗಾರದ ಅಂಗಡಿ, ಬಾಬುಲಾಲ್ ಮನೆ ಮುಂದಿನ ರಸ್ತೆ ಬದಿಯಲ್ಲಿ, ಇತ್ತ ಕಡೆ ಸಿಟಿ ಆನಂದ ಭವನ ಹೋಟೆಲ್ ಪಕ್ಕದ ನೀರಿನ ತೊಟ್ಟಿಯ ಪಕ್ಕದಿಂದ ಬಾಂಬೆ ಬಜಾರ್, ಯಜಮಾನ್ ಮೋತಿ ದೊಡ್ಡಪ್ಪನವರ ಮನೆಯ ಮುಂಭಾಗದವರೆಗೂ ಮುಖ್ಯವಾಗಿ ಮಾರಲಾಗುತ್ತಿತ್ತು. ಅದೇ ರೀತಿ ತರಕಾರಿ ಮಾರುಕಟ್ಟೆ ಮುಂದಿನ ರಸ್ತೆ ಹಾಗೂ ಬೆಳ್ಳುಳ್ಳಿ ಗಲ್ಲಿಯ ಪೂರ್ವ ಭಾಗ ರಸ್ತೆಯಲ್ಲೂ ಸ್ವಲ್ಪಮಟ್ಟಿಗೆ ಮಾರಲಾಗುತ್ತಿತ್ತು. ಕಲ್ಲಂಗಡಿ ಹಣ್ಣು ಕೊಳ್ಳಬೇಕೆಂದರೆ ಅದರ ಪರೀಕ್ಷೆಯೂ ತಿಳಿದಿರಬೇಕಿತ್ತು. ಅಕ್ಕಸಾಲಿ ಚಂದ್ರಕಾಂತರಿಗೆ ಈ ವಿದ್ಯೆ ಒಲಿದಿತ್ತು, ಹೀಗಾಗಿ ಅನೇಕರು ಶಿವರಾತ್ರಿಗಾಗಿ ಕಲ್ಲಂಗಡಿ ಹಣ್ಣುಕೊಳ್ಳುವಾಗ ಚಂದ್ರಕಾಂತನನ್ನು ಕರೆದುಕೊಂಡು ಹೋಗುತ್ತಿದ್ದರು. ಈಚಿನ ವರ್ಷಗಳಲ್ಲಿ ನಾನು ನೋಡಿದಂತೆ ಶಾಮನೂರು ಶಿವಶಂಕರಪ್ಪನವರ ಕಲ್ಲಪ್ಪ ಅಂಡ್ ಸನ್ಸ್ ಅಂಗಡಿಯಲ್ಲಿ ಕೆಲಸ ಮಾಡುವ ಶಾಂತಪ್ಪಗೆ ಒಳ್ಳೆಯ ಕಲ್ಲಂಗಡಿ ಹಣ್ಣನ್ನು ಆರಿಸುವ ವಿಧಾನ ಗೊತ್ತಿತ್ತು. ಹೀಗಾಗಿಯೇ ಶಾಮನೂರು ಬಸವರಾಜಪ್ಪನವರಾಗಲೀ ಮೆನೇಜರ್ ರುದ್ರಪ್ಪನವರಾಗಲೀ ಎಸ್.ಪಿ. ಸಂಗಪ್ಪನವರಾಗಲೀ ಶಿವರುದ್ರಯ್ಯನವರಾಗಲೀ ಕಲ್ಲಂಗಡಿ ಹಣ್ಣು ಆರಿಸಿ ತರಲು ಶಾಂತಪ್ಪನನ್ನೇ ಕಳಿಸುತ್ತಿದ್ದರು. ಕಲ್ಲಂಗಡಿ ಹಣ್ಣು ಮಾರುವವರ ಕೈಯಲ್ಲಿ ಉದ್ದನಾದ ಒಂದು ಚಾಕು ಇರುತ್ತಿತ್ತು. ಹಣ್ಣಿನ ಒಂದು ಭಾಗಕ್ಕೆ ಚಾಕುವಿನಿಂದ ಮೂರು ಅಥವಾ ನಾಲ್ಕು ಮಗ್ಗಲುಗಳಲ್ಲಿ ಚುಚ್ಚಿ ಒಂದು ತುಂಡನ್ನು ಹೊರತೆಗೆದು ತೋರಿಸುತ್ತಿದ್ದರು. ಇದನ್ನು `ಚಂದ್ರಿಕೆ ಹಾಕುವುದು’ ಎಂದು ಹೇಳಲಾಗುತ್ತಿತ್ತು. ಚಂದ್ರಿಕೆ ತೆಗೆದಾಗ ಹಣ್ಣು ಕೆಂಪಾಗಿದ್ದರೆ ಮಾತ್ರ ಕೊಳ್ಳುತ್ತಿದ್ದರು. ಈ ವಿಷಯದಲ್ಲಿ ಆಗಾಗ ಕೊಳ್ಳುವವರು ಮಾರುವವರ ನಡುವೆ ಜಗಳವೂ ನಡೆಯುತ್ತಿದ್ದು, ಮಾರುವವರಿಗೆ ಹಣ್ಣಿನ ಯಾವ ಭಾಗ ಹೆಚ್ಚು ಕೆಂಪು ಇರುತ್ತದೆ ಎಂಬುದು ಗೊತ್ತಿರುತ್ತಿತ್ತು, ಆ ಭಾಗಕ್ಕೇ ಚಂದ್ರಿಕೆ ಹಾಕಿ ತೋರಿಸುತ್ತಿದ್ದರು. ಹಣ್ಣನ್ನು ಕೈಗೆತ್ತಿಕೊಂಡು ಅದರ ತೂಕ ಹಾಗೂ ಕೈಯಿಂದ ಬಡಿದಾಗ ಬರುವ ಶಬ್ದದಿಂದಲೇ ಅಕ್ಕಸಾಲಿ ಚಂದ್ರಕಾಂತಗೆ ಹಣ್ಣಿನ ಒಳ ಮರ್ಮ ಗೊತ್ತಾಗುವ ಕಲೆ ಸಿದ್ಧಿಸಿತ್ತು. ಅದಕ್ಕೇ ಆತನನ್ನು ಎಲ್ಲರೂ ನಿರೀಕ್ಷಿಸುತ್ತಿದ್ದರು. ಚಂದ್ರಕಾಂತ ಆರಿಸಿದ ಹಣ್ಣು ಚಂದ್ರಿಕೆ ಹಾಕಿ ನೋಡಿದಾಗ ಒಳಭಾಗ ಕೆಂಪು ಇರುತ್ತಿತ್ತು. ‘ಚಂದ್ರಕಾಂತ’ ಹಾಗೂ `ಚಂದ್ರಿಕೆ’ ಗಂಡ, ಹೆಂಡತಿ ಎನ್ನುವ ಹಾಸ್ಯಭಾವದಿಂದ ಮೂಲೆಮನೆ ವಿರುಪಣ್ಣ ಕಲ್ಲಂಗಡಿ ಹಣ್ಣುಕೊಳ್ಳುವಾಗ ಚಂದ್ರಕಾಂತನಿಗೆ `ನಿನ್ ಹೆಂಡ್ತಿ ಕೆಂಪಗಿರಬೇಕಪ್ಪ’ ಅಂದರೆ ಚಂದ್ರಿಕೆ ಕೆಂಪಗಿರಬೇಕು ಎಂದು ಹೇಳಿದ್ದು.
ಹೆಚ್.ಬಿ.ಮಂಜುನಾಥ್
ಹಿರಿಯ ಪತ್ರಕರ್ತ