ಲಿಂ. ಸಿದ್ದಗಂಗಾ ಶ್ರೀ ಸ್ಮರಣೆ - ಜ. 21, ದಾಸೋಹ ದಿನ

ಲಿಂ. ಸಿದ್ದಗಂಗಾ ಶ್ರೀ ಸ್ಮರಣೆ - ಜ. 21, ದಾಸೋಹ ದಿನ

ದಾಸೋಹ ಎಂದಾಕ್ಷಣ ನೆನಪಿಗೆ ಬರುವುದು ಹನ್ನೆರಡನೇಯ ಶತಮಾನದದ ವಿಶ್ವಗುರು ಬಸವಣ್ಣನವರು ಮತ್ತು ಅನುಭವ ಮಂಟಪ. ಏಕೆಂದರೆ ದಾಸೋಹದ ಸಂಸ್ಕೃತಿ ಆರಂಭವಾಗಿದ್ದೇ ಬಸವಣ್ಣನವರಿಂದ. ನಾನು ನನಗೆ ಎನ್ನುವುದು ಸೋಹಂ ಭಾವ, ಎಲ್ಲರೊಂದಿಗೆ ನಾನು ಎನ್ನುವುದು ದಾಸೋಹ ಭಾವ. ದಾಸೋಹವು ಸಮ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಾಗಿತ್ತು.

ದಾಸೋಹ ಎಂದಾಕ್ಷಣ ನಮಗೆ ಅನ್ನ ಪ್ರಸಾದವನ್ನು ಬಡಿಸುವುದು ಎಂದಷ್ಟೇ ತಿಳಿದುಕೊಂಡಿದ್ದೇವೆ.

ದಾಸೋಹದಲ್ಲಿ ಮೂರು ಪ್ರಕಾರಗಳಿವೆ. ಅನ್ನ ದಾಸೋಹ, ಅಕ್ಷರ ದಾಸೋಹ, ಜ್ಞಾನ ದಾಸೋಹ ಎಂದು. ಯಾರು ಈ ಮೂರು ದಾಸೋಹಗಳನ್ನು ಮಾಡುತ್ತಾರೋ ಅವರಿಗೆ ತ್ರಿವಿಧದ ದಾಸೋಹಿ ಎನ್ನುತ್ತಾರೆ.

ಕಲ್ಯಾಣದ ಕ್ರಾಂತಿಯ ನಂತರ, ದಾಸೋಹದ ಪರಂಪರೆ ಸ್ವಲ್ಪ ಮಂದಗತಿಯಲ್ಲಿ ಇತ್ತು.

ಹದಿನಾರನೇಯ ಶತಮಾನದಲ್ಲಿ ಎಡೆಯೂರು ಸಿದ್ದಲಿಂಗೇಶ್ವರರಿಂದ ಬಸವ ತತ್ವದ ಶರಣ ಸಂಸ್ಕೃತಿಯ, ದಾಸೋಹ ಪರಂಪರೆಯ ಪುನರುತ್ಥಾನವಾಯಿತು.

ಎಡೆಯೂರು ಸಿದ್ದಲಿಂಗೇಶ್ವರರು ಊರಿಂದ ಊರಿಗೆ ಸಂಚಾರ ಮಾಡುವಾಗ, ಕಲ್ಲು ಬಂಡೆಗಳಿಂದ ಕೂಡಿದ ಒಂದು ಸಣ್ಣ ಬೆಟ್ಟದಲ್ಲಿ ; ಒಬ್ಬ ಕುಷ್ಟ ರೋಗಿ ನೀರು ನೀರು ಎಂದು ಪರಿತಪಿಸುತ್ತಿರುತ್ತಾನೆ,  ಸಿದ್ದಲಿಂಗೇಶ್ವರರು ಆತನಿಗೆ ನೀರನ್ನು ಕುಡಿಸಲು ;  ತಮ್ಮ ಹತ್ತಿರ ಇದ್ದ ಕಮಂಡಲ ನೋಡುತ್ತಾರೆ, ಅದರಲ್ಲಿ ನೀರು ಖಾಲಿಯಾಗಿತ್ತು. ಭಕ್ತರ ಬೇಡಿಕೆ ಈಡೇರಿಸು ವುದು ನಮ್ಮ ಕಾಯಕ, ನೀನು ನಿರಾಶನಾಗಬೇಡ ಎಂದು, ತಮ್ಮ ಇಚ್ಛಾ ಶಕ್ತಿ, ಕ್ರಿಯಾ ಶಕ್ತಿ, ಜ್ಞಾನ ಶಕ್ತಿಯ ಸಂಕಲ್ಪ ಸಿದ್ದಿಯಿಂದ ; ಕಲ್ಲಿನ ಬೆಟ್ಟದಲ್ಲಿ ಗಂಗೆ ಭೋರ್ಗರೆದು ಬರುತ್ತಾಳೆ, ಕುಷ್ಟ ರೋಗಿ ಗಂಗೆಯಲ್ಲಿ ಮಿಂದು, ನೀರನ್ನು ಸ್ವೀಕರಿಸಿ ; ಬಾಯಾರಿಕೆಯಿಂದ, ರೋಗದಿಂದ ಮುಕ್ತನಾಗುತ್ತಾನೆ. ಆಗ ಸಿದ್ದಲಿಂಗೇಶ್ವರರು ಇಂದಿನಿಂದ ಈ ಸ್ಥಳವು ಸಿದ್ದಗಂಗಾ ಎಂದು ಪ್ರಸಿದ್ದಿಯಾಗಲಿ, ಇದು ಬಸವ ತತ್ವ ಪ್ರಚಾರದ ಪೀಠವಾಗಲಿ, ದಾಸೋಹಕ್ಕಾಗಿ ಒಮ್ಮೆ ಹಚ್ಚಿದ ಒಲೆ ಆರದೆ ನಿರಂತರವಾಗಿ ಉರಿಯುತ್ತಿರಲಿ, ತ್ರಿವಿಧದ ದಾಸೋಹ ಕಾರ್ಯ ನಿರಂತರ ನಡೆಯುತ್ತಿರಲಿ ಎಂದು ಹರಸಿ ಮುಂದೆ ಎಡೆಯೂರಿಗೆ ಸಾಗುತ್ತಾರೆ.

ಸಿದ್ದಲಿಂಗೇಶ್ವರರ ಆಜ್ಞೆಯಂತೆ ತುಮಕೂರಿನ ಸಿದ್ದಗಂಗಾ ಕ್ಷೇತ್ರವು ಉದ್ದಾನ ಶಿವಯೋಗಿಗಳಿಂದ ದಾಸೋಹ ಪರಂಪರೆ ಸಾಗಿ ಬಂದಿದೆ. ನಾವಿಂದು ನಡೆದಾಡುವ ದೇವರು ಎಂದು ಕರೆಯುವ ಶ್ರೀ ಶಿವಕುಮಾರ ಸ್ವಾಮೀಜಿಯವರು ಮಠಕ್ಕೆ ಉತ್ತರಾಧಿ ಕಾರಿಯದ ನಂತರ, ಜ್ಞಾನ ದಾಸೋಹ, ಅನ್ನ ದಾಸೋ ಹದೊಂದಿಗೆ ; ಮಕ್ಕಳಿಗೆ ಅಕ್ಷರ ದಾಸೋಹವನ್ನೂ ಮಾಡಬೇಕೆಂದು ; ಮಕ್ಕಳಿಗೆ ಓದಲು ಶಾಲಾ ಕಾಲೇಜುಗಳನ್ನು ತೆರೆದು, ಯಾವುದೇ ಜಾತಿ, ಮತ, ಪಂಥ, ಧರ್ಮ ಎನ್ನದೆ ಎಲ್ಲರಿಗೂ ಉಚಿತ ಅಕ್ಷರ, ಅನ್ನ, ಅರಿವಿನ ದಾಸೋಹವನ್ನು ಆರಂಭಿಸಿದರು. ಶ್ರೀಗಳು ಊರೂರು ಸುತ್ತಿ ಜ್ಞಾನ ದಾಸೋಹವನ್ನು ಮಾಡುತ್ತಾ… ಭಕ್ತರು ನೀಡಿದ ಕಾಣಿಕೆಯಿಂದ ;  ಅಕ್ಷರ ದಾಸೋಹವನ್ನು ನಡೆಸುತ್ತಿದ್ದರು. 

ಕಾಯಕವೇ ಕೈಲಾಸ ಎನ್ನುವ ಬಸವಣ್ಣನವರ ಸಿದ್ಧಾಂತವನ್ನು ತತ್ವವನ್ನು ಮೈಗೂಡಿಸಿಕೊಂಡು, ಉಸಿರಾಗಿಸಿಕೊಂಡು ತ್ರಿವಿಧದ ದಾಸೋಹದ ಕಾರ್ಯವನ್ನು ಮಾಡಿದವರು ಸಿದ್ದಗಂಗೆಯ ಶ್ರೀ ಶಿವಕುಮಾರ ಸ್ವಾಮಿಗಳು.

ಲಿಂ. ಸಿದ್ದಗಂಗಾ ಶ್ರೀ ಸ್ಮರಣೆ - ಜ. 21, ದಾಸೋಹ ದಿನ - Janathavani

`ಕಾಯಕವೇ ಕೈಲಾಸ ಎಂದರು ಬಸವ, ಅದರಂತೆ ನಡೆದರು ನಡೆದಾಡೋ ದೈವ’ ಎನ್ನುವ ಅಭಿದಾನಕ್ಕೆ ಶ್ರೀಗಳು ಪಾತ್ರರಾಗಿದ್ದಾರೆ.

ಸಾವಿರಾರು ವಿದ್ಯಾರ್ಥಿಗಳು ಮಠದ ಆಶ್ರಯದಲ್ಲಿ ಬೆಳೆದು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ.

ಇಂತಹ ಪೂಜ್ಯರು ಎಲ್ಲಾ ಗುರು ಪರಂಪರೆಯವರಿಗೆ ಆಧರ್ಶವಾಗಿದ್ದಾರೆ. ಇಂತಹ ಪೂಜ್ಯರು ಲಿಂಗೈಕ್ಯರಾಗಿ,  ಭೌತಿಕವಾಗಿ ಮರೆಯಾಗಿ ಇಂದಿಗೆ ಆರು ವರ್ಷ ಕಳೆದಿವೆ. 

ಸಮಾಜಕ್ಕಾಗಿ ಯಾರು ಸೇವೆ ಸಲ್ಲಿಸುತ್ತಾರೋ ;  ಅಂತವರನ್ನು ಸಮಾಜ ಗೌರವಿಸುತ್ತದೆ ಪೂಜಿಸುತ್ತದೆ ಎನ್ನುವುದಕ್ಕೆ ಸಿದ್ದಗಂಗೆಯ ಶ್ರೀ ಶಿವಕುಮಾರ ಸ್ವಾಮಿಗಳು ನಿದರ್ಶನವಾಗಿದ್ದಾರೆ. ಶ್ರೀಗಳ ಲಿಂಗೈಕ್ಯ ಸ್ಮರಣೋತ್ಸವ ದಿನವನ್ನು ಸರ್ಕಾರವು ದಾಸೋಹ ದಿನ ಎಂದು ಘೋಷಿಸಿರುವುದು ದಾಸೋಹ ಪರಂಪರೆಯನ್ನು ಎತ್ತಿ ಹಿಡಿದಂತಾಗಿದೆ.

ಇಂದು ಪೂಜ್ಯರ ಸ್ಮರಣೋತ್ಸವವನ್ನು  ದಾಸೋಹ ದಿನವನ್ನಾಗಿ ನಾಡಿನ ಎಲ್ಲಾ ಕಡೆ ಆಚರಿಸುತ್ತಿದ್ದಾರೆ.  ನಮ್ಮ ದಾವಣಗೆರೆಯ ನಗರದಲ್ಲೂ ಸಹ ಅನೇಕ ಸಂಘ ಸಂಸ್ಥೆಗಳು ಶಾಲಾ ಕಾಲೇಜುಗಳು ಆಚರಿಸುತ್ತಿವೆ. ಕೆಲವು ಸಂಘಟನೆಗಳು ಅನ್ನ ದಾಸೋಹ ಮಾಡುವ ಮೂಲಕ ; ಅನ್ನ ದಾಸೋಹಕ್ಕೆ ಅಷ್ಟೇ ಒತ್ತು ಕೊಟ್ಟಿವೆ. ಇನ್ನು ಕೆಲವು ಸಂಘಟನೆಗಳು ತ್ರಿವಿಧದ ದಾಸೋಹದ ಪರಿಕಲ್ಪನೆಯನಿಟ್ಟುಕೊಂಡು, ಪ್ರವಚನಕಾರರಿಂದ ಪೂಜ್ಯರಿಂದ ಜ್ಞಾನ ದಾಸೋಹವನ್ನು, ಸಾಮಾಜಿಕ ಸೇವೆಯನ್ನು, ಅನ್ನ ದಾಸೋಹವನ್ನು ಮಾಡುವ ವಿಶೇಷ ಕಾರ್ಯಕ್ರಮಗಳನ್ನು ಸಂಘಟನೆಗಳು ಮಾಡುತ್ತಿವೆ. ವಿನೋಬ ನಗರದ ಸಿದ್ದಗಂಗಾ ಗೆಳೆಯರ ಬಳಗ, ಆರ್‌ಟಿಓ ಆಫೀಸ್ ಹತ್ತಿರದ  ಶ್ರೀ ಶಿವಕುಮಾರ ಸ್ವಾಮೀಜಿ ಸರ್ಕಲ್ ಗೆಳೆಯರ ಬಳಗ, ಸಿದ್ದಗಂಗಾ ಶಾಲೆ, ಗುಂಡಿ ಸರ್ಕಲ್ ನೀರಿನ ಟ್ಯಾಂಕ್ ಹಿಂಭಾಗದ ಶಿವಕುಮಾರ ಶ್ರೀ ಗೆಳೆಯರ ಬಳಗ, ಕಾಯಿಪೇಟೆ, ನಿಟುವಳ್ಳಿ ಮತ್ತು ಇನ್ನು ಹಲವು ಸಂಘಟನೆಗಳು ವಿಭಿನ್ನವಾಗಿ ಶ್ರೀಗಳ ಸ್ಮರಣೋತ್ಸವ ಕಾರ್ಯಕ್ರಮಗಳನ್ನು ಆಚರಿಸುತ್ತಿವೆ.

 ಈ ವರ್ಷ  ಆರ್‌ಟಿಒ ಆಫೀಸ್ ಹತ್ತಿರದ  ಶ್ರೀ ಶಿವಕುಮಾರ ಸ್ವಾಮೀಜಿ ಸರ್ಕಲ್ ಗೆಳೆಯರ ಬಳಗದ ಅಧ್ಯಕ್ಷ ಶಂಕರ್ ಶಿರೇಕರ್ ಮತ್ತು ಅವರ ಗೆಳೆಯರು ಕೂಡಿಕೊಂಡು ಶ್ರೀಗಳ ಪುತ್ತಳಿಯನ್ನು ಕೊಂಡಜ್ಜಿ ರಸ್ತೆಯ ಶ್ರೀ ಶಿವಕುಮಾರ ಸ್ವಾಮೀಜಿ ಸರ್ಕಲ್ ನಲ್ಲಿ ಪ್ರತಿಷ್ಟಾಪನೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷವಾಗಿದೆ. 

ಅನೇಕ ಪೂಜ್ಯರ ಮತ್ತು ಗಣ್ಯ ಮಾನ್ಯರ ಸಮ್ಮುಖದಲ್ಲಿ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಲಿದೆ.

ದಾವಣಗೆರೆ ನಗರದ ಕೆಲವು ಉದ್ಯಾನವನಗಳಿಗೆ, ರಸ್ತೆಗಳಿಗೆ, ಶ್ರೀಗಳ ಹೆಸರನ್ನು ಇಡುವ ಮೂಲಕ ಭಕ್ತರು ಭಕ್ತಿಯನ್ನು ತೋರುತ್ತಿದ್ದಾರೆ. ಇಂತಹ ಪೂಜ್ಯರನ್ನು ನಾವುಗಳು ಸ್ಮರಿಸಿಕೊಳ್ಳುತ್ತಾ, ದಾಸೋಹ ಪರಂಪರೆಯೊಂದಿಗೆ ಸಾಗುತ್ತಾ ; ಬಸವಣ್ಣನವರ ಸಿದ್ದಗಂಗಾ ಶ್ರೀಗಳ ಆಶಯವಾದ ಸಮ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಭಾವನೆಗಳನ್ನು, ತತ್ವಾದರ್ಶಗಳನ್ನು ಬೆಳೆಸಿಕೊಳ್ಳುತ್ತಾ,  ಸಹಬಾಳ್ವೆಯೊಂದಿಗೆ ಸಾಗಿದಾಗ ದಾಸೋಹದ ದಿನದ ಮಹತ್ವ ಹೆಚ್ಚುತ್ತದೆ, ನಮ್ಮ ಜೀವನ ಸಾರ್ಥಕವಾಗುತ್ತದೆ.

– ಶಿವಪ್ರಸಾದ ಕರ್ಜಗಿ, ದಾವಣಗೆರೆ.

error: Content is protected !!