2025ರಲ್ಲಿ ಭಾರತದ ಆಗಸ ಬೆಳಗಲಿರುವ ಇನ್ನಷ್ಟು ವಿಮಾನಗಳು

2025ರಲ್ಲಿ ಭಾರತದ ಆಗಸ ಬೆಳಗಲಿರುವ ಇನ್ನಷ್ಟು ವಿಮಾನಗಳು

ವಿಮಾನಯಾನ ಸಂಸ್ಥೆಗಳ ವಿಲೀನ ಹಾಗೂ ವಿಸ್ತರಣೆಗಳ ಕಾರಣದಿಂದಾಗಿ 2025ರಲ್ಲಿ ಭಾರತದ ವಿಮಾನಯಾನ ವಲಯ ಇನ್ನಷ್ಟು ಬೆಳವಣಿಗೆ ಕಾಣಲಿದೆ. ಆದರೆ ಪೂರೈಕೆ ಜಾಲದ ಸಮಸ್ಯೆಗಳನ್ನು ಎದುರಿಸಬೇಕಾಗಿದೆ.

2025ರಲ್ಲಿ ಭಾರತ ಹೊಸ ವಿಮಾನ ನಿಲ್ದಾಣಗಳನ್ನೂ ಕಾಣಲಿದೆ. ಈ ನಡುವೆಯೇ ಪೈಲೆಟ್‌ಗಳ ಬಳಲುವಿಕೆ ಹಾಗೂ ಇಂಗಾಲ ತ್ಯಾಜ್ಯ ಕಡಿಮೆ ಮಾಡುವ ಸಮಸ್ಯೆಗಳ ಎದುರಿ ಸಲು ಪ್ರಮುಖವಾಗಿ ಗಮನ ಹರಿಸಬೇಕಿದೆ.

2024ರಲ್ಲಿ ಎರಡು ವಿಮಾನಯಾನ ಸಂಸ್ಥೆಗಳು ಅಂತ್ಯಗೊಂಡಿದ್ದವು. ಇನ್ನೊಂದು ವಿಮಾನಯಾನ ಸಂಸ್ಥೆ ಇದೇ ಹಾದಿಯಲ್ಲಿ ಸಾಗಿದೆ. ಈ ನಡುವೆ ಒಂದೇ ದಿನ 5 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣಿಸಿದ ದಾಖಲೆ ಸ್ಥಾಪಿಸಲಾಗಿದೆ. ಇಷ್ಟರ ನಡುವೆಯೂ ವಿಮಾನಯಾನ ದರಗಳು ಏರಿಕೆಯಾಗಿವೆ. 999 ಹುಸಿ ಬಾಂಬ್ ಬೆದರಿಕೆಗಳು ಬಂದಿದ್ದು ವಿಮಾನಯಾನ ಸಂಸ್ಥೆಗಳಿಗೆ ಇನ್ನೊಂದು ತಲೆನೋವಾಗಿತ್ತು. 

ಮಾರ್ಚ್ 2025ರ ವೇಳೆಗೆ ದೇಶೀಯವಾಗಿ ಪ್ರಯಾಣಿಕರ ಸಂಖ್ಯೆ 170 ದಶಲಕ್ಷದವರೆಗೆ ತಲುಪುವ ನಿರೀಕ್ಷೆ ಇದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಗಾತ್ರ ವಿಮಾನದ ಕಡೆ ಹೆಚ್ಚಿನ ಆಸಕ್ತಿ ಕಂಡು ಬರುತ್ತಿದೆ.

ದೂರದ ಪ್ರಯಾಣಕ್ಕೆ ನೇರ ಮಾರ್ಗ ಕಲ್ಪಿಸುವುದು ಹಾಗೂ ಭಾರತವನ್ನು ಜಾಗತಿಕ ವಿಮಾನಯಾನ ತಾಣ ಮಾಡುವುದು ಮಹತ್ವಾಕಾಂಕ್ಷೆಯಾಗಿದೆ.

ಭಾರತದ ವಾಯುಯಾನ ಮಾರುಕಟ್ಟೆ ವಿಶೇಷ ಅವಕಾಶಗಳನ್ನು ಹೊಂದಿದೆ ಎಂದು ಆಕಾಶ ಏರ್ ಮುಖ್ಯಸ್ಥ ವಿನಯ್ ದುಬೆ ಹೇಳಿದ್ದಾರೆ. ಭಾರತೀಯ ವಿಮಾನಯಾನ ಸಂಸ್ಥೆಗಳು ಬೃಹತ್ ಅವಕಾಶ ಹೊಂದಿವೆ ಎಂದು ಐಎಟಿಎ ಮುಖ್ಯಸ್ಥ ವಿಲ್ಲಿ ವಾಲ್ಸ್ ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ವಿಮಾನಯಾನ ಸಂಸ್ಥೆಗಳು ಈಗ 800ಕ್ಕೂ ಹೆಚ್ಚು ವಿಮಾನಗಳನ್ನು ಹೊಂದಿವೆ. ಇವುಗಳಲ್ಲಿ 60 ಬೃಹತ್ ಗಾತ್ರದವು ಹಾಗೂ ಪ್ರಸಕ್ತ 157 ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿವೆ. 

ಕಳೆದ ನವೆಂಬರ್ 12ರಲ್ಲಿ ಏರ್ ಇಂಡಿಯಾ ಹಾಗೂ ವಿಸ್ತಾರ ವಿಮಾನಯಾನ ಸಂಸ್ಥೆಗಳ ವಿಲೀನ ಪೂರ್ಣಗೊಂಡಿತ್ತು. ಈ ವಿಮಾನಯಾನ ಸಂಸ್ಥೆಯು ದಿನಕ್ಕೆ 1.2 ಲಕ್ಷ ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ ಹಾಗೂ 90ಕ್ಕೂ ಹೆಚ್ಚು ತಾಣಗಳನ್ನು ಸಂಪರ್ಕಿಸುತ್ತದೆ. ಇದಕ್ಕೂ ಮುಂಚೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಹಾಗೂ ಎಐಎಸ್ ಕನೆಕ್ಟ್ ವಿಮಾನಯಾನ ಸಂಸ್ಥೆಗಳು ವಿಲೀನಗೊಂಡಿದ್ದವು. ಇದರಿಂದಾಗಿ ಟಾಟಾ ಸಮೂಹವು ಪೂರ್ಣ ಸೇವೆಯ ಹಾಗೂ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಹೊಂದಿದಂತಾಗಿದೆ. ಭಾರತೀಯತೆ ಹೊಂದಿರುವ ವಿಶ್ವದರ್ಜೆಯ ವಿಮಾನಯಾನ ಸಂಸ್ಥೆಯಾಗಿ ಬೆಳೆಯಲು ಟಾಟಾ ಸಮೂಹ ಉದ್ದೇಶಿಸಿದೆ. 

ವಿಲೀನದ ಜೊತೆಗೆ 100 ಏರ್‌ಬಸ್ ವಿಮಾನಗಳನ್ನು ಖರೀದಿಸುವುದಾಗಿ ಏರ್ ಇಂಡಿಯಾ ಡಿಸೆಂಬರ್ 09ರಂದು ಪ್ರಕಟಿಸಿದೆ. ಇದರಲ್ಲಿ 10 ದೊಡ್ಡ ಗಾತ್ರದ ಎ 350 ವಿಮಾನಗಳು ಸೇರಿವೆ. ಕಳೆದ ವರ್ಷ ಏರ್‌ಬಸ್ ಹಾಗೂ ಬೋಯಿಂಗ್ ಕಂಪನಿಗಳಿಂದ 470 ವಿಮಾನಗಳನ್ನು ಖರೀದಿಸಲು ಕಂಪನಿ ನಿರ್ಧರಿಸಿತ್ತು.

ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ತನ್ನ ಕೆಲ ಆಯ್ದ ಮಾರ್ಗಗಳಲ್ಲಿ ಬಿಸಿನೆಸ್ ಕ್ಲಾಸ್ ಆರಂಭಿಸಿದೆ. ಸಂಸ್ಥೆಯ ಅಂತರರಾಷ್ಟ್ರೀಯ ವಿಮಾನಯಾನ ಮಾರ್ಗಗಳಲ್ಲಿಯೂ ಸಹ ವಿಸ್ತಾರಗೊಳ್ಳುತ್ತಿದೆ. ಕಳೆದ ಮೇ ತಿಂಗಳಲ್ಲಿ ಕಂಪನಿಯು 30 ಬೃಹತ್ ವಿಮಾನಗಳ ಖರೀದಿಗೆ ಆದೇಶ ಹೊರಡಿಸಿತ್ತು. ವಿಮಾನಯಾನ ಸಂಸ್ಥೆಯು ಸುಮಾರು ಸಾವಿರ ವಿಮಾನಗಳ ಖರೀದಿ ಗುರಿ ಹೊಂದಿದೆ.

ಇಷ್ಟಾದರೂ ಪೂರೈಕೆ ಜಾಲದ ಸಮಸ್ಯೆಗಳು ವಿಮಾನಯಾನ ಸಂಸ್ಥೆಗಳಿಗೆ ಹೊಸ ವಿಮಾನಗಳನ್ನು ಪೂರೈಸಲು ತೊಡಕಾಗಿದೆ. ಬೋಯಿಂಗ್ ಕಂಪನಿಯು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರ ಜೊತೆಗೆ ಇಂಜಿನ್ ಸಮಸ್ಯೆಗಳು ಸಹ ವಿಮಾನಯಾನ ಸಂಸ್ಥೆಗಳಿಗೆ ತಲೆ ನೋವಾಗಿದೆ.


ಎಸ್.ಎ. ಶ್ರೀನಿವಾಸ್

error: Content is protected !!