`ಗಟ್ಟಿ ಎಣ್ಣಿ – ವ್ಯಾಪಾರ ಬೋಣಿ

`ಗಟ್ಟಿ ಎಣ್ಣಿ – ವ್ಯಾಪಾರ ಬೋಣಿ

ದಶಕಗಳ ಕೆಳಗೆ ದಾವಣಗೆರೆಯಲ್ಲಿ ಚಳಿಗಾಲವೆಂದರೆ ಈಗಿನಕ್ಕಿಂತ ತುಂಬಾ ಚಳಿ ಇರುತ್ತಿತ್ತು. ಮನೆಯಲ್ಲಿನ ಶುದ್ಧ ಕೊಬ್ಬರಿ ಎಣ್ಣೆ ಕಲ್ಲಿನಂತೆ ಗಟ್ಟಿ ಆಗುತ್ತಿತ್ತು. ಈಗಂತೂ ಶುದ್ಧ ಎಣ್ಣೆಗಳು ಸಿಗುವುದೇ ದುರ್ಲಭ. ಬ್ರಾಂಡೆಡ್ ಎಣ್ಣೆಗಳು ಸಹಾ ಈಗ ಕಲಬೆರಿಕೆ ಎಂಬ ಅನುಮಾನ ಬರುತ್ತಿದೆ. 

ಯಾವುದೇ ಖಾದ್ಯ ತೈಲಗಳಲ್ಲೂ ಪಾಮ್ ಆಯಿಲ್ ಅಥವಾ ಮಿನರಲ್ ಆಯಿಲ್ ಕಲಬೆರಿಕೆ ಸಾಮಾನ್ಯವಾಗಿದೆ. ಬಹಳ ಹಿಂದೆ ದಾವಣಗೆರೆಯಲ್ಲಿ ಎತ್ತು ಕಟ್ಟಿದ ಸಾಂಪ್ರದಾಯಕ ಗಾಣಗಳು ಇದ್ದವು. ಶುದ್ಧವಾದ ಶೇಂಗಾ ಎಣ್ಣೆ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಮುಂತಾಗಿ ಎಲ್ಲವೂ ಲಭ್ಯವಿತ್ತು. ನಾನು ತಿಳಿದ ಹಾಗೆ ದಾವಣಗೆರೆಯಲ್ಲಿ ಅತಿಪೂರ್ವದಲ್ಲಿ ದೊಡ್ಡ ಮಟ್ಟದ ಖಾದ್ಯ ತೈಲ ತಯಾರಿಕೆ `ಆರ್.ಹೆಚ್’ ಅಂದರೆ `ರಾಜನಹಳ್ಳಿ ಹನುಮಂತಪ್ಪ’ ಹಾಗೂ `ಬಿ.ಟಿ’ ಅಂದರೆ `ಬ್ರಹ್ಮಪ್ಪ ತವನತ್ತ’ರಿಂದ ಆರಂಭವಾಯಿತು. 

ರಾಜನಹಳ್ಳಿಯವರ ರವಿ ವೆಜಿಟೇಬಲ್ ವನಸ್ಪತಿ ಆಯಿಲ್ ಮಿಲ್, ಬಿ.ಟಿ.ಯವರ ಆಯಿಲ್ ಮಿಲ್ ಭರ್ಜರಿಯಾಗಿ ನಡೆಯುತ್ತಿತ್ತು. ಹೇಗಿತ್ತೆಂದರೆ ಈಗಿನ ಅಶೋಕ ಚಿತ್ರಮಂದಿರದ ಹಿಂಭಾಗದಲ್ಲಿನ ಅವರ ಕೈಗಾರಿಕಾ ಮಿಲ್ ಆವರಣದ ಒಳಗೆ ರೈಲ್ವೆ ಹಳಿಯನ್ನು ಹಾಕಲಾಗಿತ್ತು. ಗೂಡ್ಸ್ ಟ್ರೈನ್‌ಗಳು ಒಳಗೆ ಹೋಗಿ ಉತ್ಪಾದನೆಯನ್ನು ಲೋಡ್ ಮಾಡಿಕೊಂಡು ಬರುತ್ತಿದ್ದವು. ಬಿ.ಟಿ ಎಂಬುವ ಹೆಸರಿಗೆ ಬಹುದೊಡ್ಡ ಗುಡ್ ವಿಲ್ ಇತ್ತು.

ದಾವಣಗೆರೆ ಅಷ್ಟೇ ಅಲ್ಲದೇ ಚಳ್ಳಕೆರೆ, ಹಿರಿಯೂರು, ಮಧುಗಿರಿ, ಹಾವೇರಿ, ಸುರಪುರ, ಶಹಾಪುರ, ಯಾದಗಿರಿ ಮುಂತಾಗಿ ಬಹುಕಡೆಗಳಿಂದಲೂ ದೊಡ್ಡ ಪ್ರಮಾಣದಲ್ಲಿ ಇವರೆಲ್ಲಾ ಶೇಂಗಾ ಬೀಜ ಖರೀದಿಸುತ್ತಿದ್ದರು. ನಂತರದಲ್ಲಿ ಕಿರುವಾಡಿಯವರು  ಪಿ.ಬಿ ರಸ್ತೆಯ ಆರ್.ಹೆಚ್ ನವರ ಈಗಿನ ಶ್ರೀ ಲಾಡ್ಜ್ ಹಿಂಭಾಗ ರಾಜನಹಳ್ಳಿ ಅವರ ಜಾಗದಲ್ಲಿ ಶೇಂಗಾ ಎಣ್ಣೆ ಕೈಗಾರಿಕೆ ಮಾಡಿದರು. ನಂತರ ಇದು ಈಗಿನ ಕಿರುವಾಡಿ ಲೇಔಟ್‌ಗೆ ಸ್ಥಳಾಂತರವಾಯಿತು. ವನಸ್ಪತಿಗಳು ದಾವಣಗೆರೆಯಿಂದ ಪುಣೆ, ಮುಂಬೈ ಮುದ್ದಾಗಿ ದೇಶಾದ್ಯಂತ ಹೋಗುತ್ತಿತ್ತು. ಕಪೂರ್‌ನವರು ಎಣ್ಣೆ ಮಿಲ್ ಮಾಡಿದರು. ಎಸ್.ಕೊಟ್ಟೂರು ಬಸಪ್ಪನವರು ಸಹ ಎಣ್ಣೆ ಮೇಲ್ ಮಾಡಿದರು. ಕೆಲ ದಶಕಗಳ ಹಿಂದೆ ಕ್ಷೀರಸಾಗರದ ಹನುಮಂತಪ್ಪನವರು, ಶುದ್ಧ ಶೇಂಗಾ ಎಣ್ಣೆ ಮಾಡಿ ಕೊಡುತ್ತಿದ್ದರು. ಹಂಜಗಿ ಮಠದ ಮಹಾ ರುದ್ರಯ್ಯನವರೂ ಅವರೊಂದಿಗೆ ಇದ್ದರು. ಇನ್ನೂ ಅನೇಕ ದೊಡ್ಡ ಹಾಗೂ ಚಿಕ್ಕ ಎಣ್ಣೆ ಗಿರಣಿಗಳು ದಾವಣಗೆರೆಯಲ್ಲಿದ್ದವು. ಸಿ ಮತ್ತು ಡಿ ಚರಡಿ ಶೇಂಗಾ ಬೀಜಗಳನ್ನು ಚೆನ್ನಾಗಿ ಬಿಸಿಲಿಗೆ ಹಾಕಿ ಎಣ್ಣೆ ತೆಗೆಯುತ್ತಿದ್ದುದರಿಂದ ಕಾಯಲು ಇಟ್ಟರೆ ಎಣ್ಣೆ ಬುರುಗು ಬಂದು ಉಕ್ಕುತ್ತಿರಲಿಲ್ಲ, ಕರಿದ ತಿಂಡಿಗಳು ಘಮಘಮಿಸುತ್ತಿದ್ದವು, ಆರೋಗ್ಯವೂ ಕೆಡುತ್ತಿರಲಿಲ್ಲ. ಈಗಿನ ವರ್ಷಗಳಲ್ಲಿ ಅಥಣಿಯವರು ಅಕ್ಕಿ ತೌಡಿನ ಶುದ್ಧ ಎಣ್ಣೆ ಕೈಗಾರಿಕೆಯನ್ನು ನಡೆಸಿದ್ದರು.        

error: Content is protected !!