ಕನ್ನಡಿಗರೇ ಏಳಿ ! ಎದ್ದೇಳಿ ! ಜಾಗೃತರಾಗೋಣ

ಕನ್ನಡಿಗರೇ ಏಳಿ ! ಎದ್ದೇಳಿ ! ಜಾಗೃತರಾಗೋಣ

ಸಾವಿರಾರು ವರ್ಷಗಳ ಇತಿಹಾಸದಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ, ರಾಜಕೀಯ ದಬ್ಬಾಳಿಕೆ ಯನ್ನು ಸಮರ್ಥವಾಗಿ ಎದುರಿಸಿ, ಬೆಳೆದು ಬಂದ ಕನ್ನಡ ಭಾಷೆಗೆ, ಕನ್ನಡ ಬದುಕಿಗೆ ಆತಂಕ, ಆಘಾತಗಳು, ಮೈಯುಂಡ ಬಾಳು, ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳಿಂದ ಮೊದಲ್ಗೊಂಡು ಹಿತಮಿತ ಮೃದು ವಚನ, ನುಡಿ ಟಠಡಢಣ, ಮಾತು ಜ್ಯೋತಿರ್ಲಿಂಗ, ಹಲಗೆ ಬಳಪವ ಪಿಡಿಯದೊಂದಗ್ಗಳಿಕೆಯಲ್ಲಿ ಒಲಿದಂತೆ ಹಾಡಿದ ಹಲವು ಕಾಲದ ಹಲವು ನಿಟ್ಟಿನ ನುಡಿ ಸಾಧಕರ ಮಾರ್ಗದೇಸಿಗಳ ಸಮಾಹಿತದಲ್ಲಿ ತಮಗೆದುರಾದ ಆತಂಕ, ಆಘಾತಗಳನ್ನು ಅರಗಿಸಿಕೊಂಡು ಕನ್ನಡದ ದೀಪ ಬೆಳಗಿದೆ, ಇದರರ್ಥ ಆಯಾ ಕಾಲದ ಕನ್ನಡ ಸಮುದಾಯ ತನ್ನ ಕಾಲದ ಸವಾಲುಗಳಿಗೆ ತಕ್ಕ ವಿವೇಕ ತೋರಿ ಸೃಜನಶೀಲವಾಗಿದೆ, ಆದರೆ ಇಂದಿನ ಆತಂಕ ಹಿಂದೆಂದಿನ ಆಕ್ರಮಣಗಳಿಗಿಂತ ಭಯಾನಕವಾದುದು, ಈ ಭಯಾನಕತೆಯನ್ನು ಎದುರಿಸುವ ಹಾಗೂ ಆರೋಗ್ಯಕರವಾಗಿ ಅದನ್ನು ಅರಗಿಸಿಕೊಂಡು ಬೆಳೆಯುವ ಸತ್ಯಶಕ್ತಿ ಭಾಷೆಗಿದ್ದರೂ, ಭಾಷಿಕ ಸಮುದಾಯದ ಇಚ್ಛಾಶಕ್ತಿಯ ಕೊರತೆ ಎದ್ದುಕಾಣುವ ಸಂಗತಿ.

ಈ ಇಚ್ಛಾಶಕ್ತಿ ಹೊರಗಿನಿಂದ ಆಮದು ಮಾಡಿಕೊಳ್ಳುವ ಸರಕಲ್ಲ; ಬದುಕನ್ನು ರೂಪಿಸುವ ಪ್ರಭುತ್ವ ಹಾಗೂ ಪ್ರಭುತ್ವವನ್ನು ಆಯ್ಕೆ ಮಾಡಿಕೊಳ್ಳುವ ಜನ ಸಮುದಾಯಗಳಿಗೆ ಅರಿವೇ ಗುರುವಾಗಿ ಮೂಡಬೇಕಾದ ಪ್ರಜ್ಞಾ ವಿಶೇಷ. 

ವಿಜ್ಞಾನದ ಹೊಸ ಹೊಸ ಆವಿಷ್ಕಾರಗಳಿಗೆ ಪ್ರತಿ ಸ್ಪಂದಿಸುತ್ತಾ, ಬೆಳೆಯುವ ಭಾಷೆಯ ಸೃಜನಶೀಲತೆ ಪ್ರಕಾಶಿಸುತ್ತದೆ, ವೈಜ್ಞಾನಿಕ ವಿಚಾರ ಸೃಜನಶೀಲ ಭಾವದಲ್ಲಿ ಅಭಿವ್ಯಕ್ತಗೊಂಡಾಗ, ಅದಕ್ಕೊಂದು ಮಾನವೀಯತೆಯ ಪ್ರಭೆ ಪ್ರಾಪ್ತವಾಗುತ್ತದೆ, ಹೊಸ ಕಾಲದ ಸಂವೇದನೆಗಳಿಗೆ, ವೈಜ್ಞಾನಿಕ ವಿಚಾರಗಳಿಗೆ, ತಾತ್ವಿಕ ತರ್ಕ-ದೀಪ್ತಿಗಳಿಗೆ ತೆರೆದುಕೊಳ್ಳುವ ನಮ್ಮ ಗುಣ ಜೀವಂತ ಭಾಷೆಯೊಂದರ ದೊಡ್ಡ ಶಕ್ತಿ, ಕಾಲದ ಅಗತ್ಯಗಳಿಗೆ ಸ್ಪಂದಿಸಬಲ್ಲ, ನಮ್ಮ ಗುಣ ಕನ್ನಡ ಭಾಷೆಯ ದೊಡ್ಡ ಶಕ್ತಿ, ಜಾಗತಿಕ ಮಟ್ಟದಲ್ಲಿ ವಿಸ್ತಾರಗೊಳ್ಳುತ್ತಿರುವ ಎಲ್ಲಾ ಜ್ಞಾನ ಶಾಖೆಗಳ ಪಾರಿವಾಸಿಕ ಶಬ್ದ ಸಂಪತ್ತನ್ನು ಸ್ವೀಕರಿಸುತ್ತಾ ತನ್ಮುಖೇನ ವಿಷಯ ಜ್ಞಾನವನ್ನು ಅರಗಿಸಿಕೊಂಡು ಕನ್ನಡ ಭಾಷೆ ಬೆಳೆಯಬೇಕಿದೆ, ಕನ್ನಡ ಜ್ಞಾನ ಚೇತನಗಳ ಇಚ್ಛಾಶಕ್ತಿ ಈ ದಿಶೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಬೇಕಾದ ಅಗತ್ಯವಿದೆ, 

ಅಲ್ಲಮಪ್ರಭುವಿನ ವಚನ ಹೀಗಿದೆ –

ಹಿಂದಣ ಅನಂತವನು ಮುಂದಣ ಅನಂತವನು

ಒಂದು ದಿನ ಒಳಕೊಂಡಿತ್ತು ನೋಡಾ

ಒಂದು ದಿನವನೊಳಕೊಂಡು

ಮಾತಾಡುವ ಮಹಾಂತನ

ಕಂಡ ಬಲ್ಲವರಾರಯ್ಯ

ಆದ್ಯರು

ವೇದ್ಯರು ಆನಂತರ ಹಿರಿಯರು ಕಾಲದಂತುವನರಿಯದೆ

ಅಂತೆ ಹೋದರು ಕಾಣಾ ಗುಹೇಶ್ವರ !

ಜಗತ್ತಿನ ಜ್ಞಾನಕ್ಕೆ ಹಿಂದಣ ಪರಂಪರೆಯ ಅಪಾರತೆ ಇದೆ, ಮುಂದಣ ಭವಿಷ್ಯದ ಅನಂತತೆ ಇದೆ, ವರ್ತಮಾನದಲ್ಲಿ ಈ ಎರಡು ಸಂಲಗ್ನಗೊಂಡ ಭಾವದಲ್ಲಿ ಸೃಜನಶೀಲವಾದಾಗ ಅದು ಅಳಿಯದ ಮಾತಾಗುತ್ತದೆ. ಆ ಮಾತು ಜ್ಯೋತಿರ್ಲಿಂಗ ರೂಪಿಯಾಗುತ್ತದೆ. 

ಕರ್ನಾಟಕ ಏಕೀಕರಣಗೊಂಡು 69 ವರ್ಷಗಳು ತುಂಬುತ್ತಿವೆ, ನಾಡು ಸಂಭ್ರಮವನ್ನು ಆಚರಿಸುತ್ತಿದೆ, ಈ 69 ವರ್ಷಗಳಲ್ಲಿ ಕನ್ನಡ ನಾಡು ಸಾಧಿಸಿರುವ ಪ್ರಗತಿ, ಎದುರಿಸಿರುವ ಸವಾಲು, ಅನುಭವಿಸಿರುವ ಸಂಕಷ್ಟಗಳ ಬಗೆಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ, ವ್ಯಕ್ತಿಯ ಸಂದರ್ಭದಲ್ಲಿ ಆತ್ಮಾವಲೋಕನ ಹೇಗೆ ವ್ಯಕ್ತಿತ್ವದ ಬೆಳವಣಿಗೆಗೆ ಪ್ರೇರಕವೋ ಹಾಗೆಯೇ ನಾಡಿನ ಸಂದರ್ಭ ದಲ್ಲಿಯೂ ಆತ್ಮಾವಲೋಕನ ವೆಂಬುದು ಹಿಂದಣ ಹೆಜ್ಜೆಯ ನರಿತು ಮುಂದಣ ಹೆಜ್ಜೆಯನಿಡುವ ವಿವೇಕದ ಕ್ರಮ. 

ಕನ್ನಡಿಗರೇ ಏಳಿ ! ಎದ್ದೇಳಿ ! ಬೌದ್ಧಿಕರೆಂದು ಕರೆದುಕೊಳ್ಳುವ ಜನರೂ, ರಾಜಕಾರಣಿಗಳೂ ವಿಶ್ವಭಾತೃತ್ವ, ಭಾರತದ ಅಖಂಡತೆ, ಭಾಷಾಂಧತೆ ಇತ್ಯಾದಿ ಮಾತುಗಳಿಂದ ನಮ್ಮನ್ನು ವಂಚಿಸಲು ಯತ್ನಿಸುತ್ತಿರುವವರ ಬಗ್ಗೆ ಜಾಗೃತ ರಾಗೋಣ,
ಕನ್ನಡಿಗರು ಎಂದು ಭಾಷಾಂಧರಲ್ಲ,
ದೇಶದ್ರೋಹಿಗಳಲ್ಲ, ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡೋಣ. ತನ್ನತನವನ್ನು ಉಳಿಸಿಕೊಳ್ಳದ ಪ್ರಾಂತ್ಯಕ್ಕೆ ಉಳಿಗಾಲವಿಲ್ಲ. 

ಅನ್ಯಭಾಷೀಯ ಸೋದರರನ್ನು ಗೌರವಿಸೋಣ, ಆದರೆ ಅನ್ಯಭಾಷೀಯ ಸೋದರರು
ಕರ್ನಾಟಕಕ್ಕೆ ಬಂದು ಕರ್ನಾಟಕವನ್ನು ತಮ್ಮ ವಸಾಹತುವಾಗುವಂತೆ ಮಾಡುತ್ತಿ ದ್ದಾರೆ, ಇದನ್ನು ತಡೆಯಲಿದ್ದರೆ ನಮಗೆ ಉಳಿಗಾಲವಿಲ್ಲ, ಧೀರರಾದ ಅಸ್ಸಾಂ ಯುವಕರು ಹೋರಾಡಿ ತಮ್ಮ ಪ್ರಾಂತ್ಯವನ್ನು ವಿನಾಶದಿಂದ ತಪ್ಪಿಸಿದರು, ಅಂತಹ ಹೋರಾಟಕ್ಕೆ ಕನ್ನಡಿಗರಾದ ನಾವು ಸಿದ್ದರಾಗಬೇಕಿದೆ. 

ಗಡಿಯಲ್ಲಿ ಮರಾಠಿಗರು, ತಮಿಳರು, ಮಲಯಾಳಿಗಳು ಕನ್ನಡವನ್ನು ಲೆಕ್ಕಿಸುತ್ತಿಲ್ಲ, ಭವಿಷ್ಯದ ಬೆಂಗಳೂರು ಗಾಬರಿಯನ್ನು ಹುಟ್ಟಿಸುತ್ತದೆ, ಕರ್ನಾಟಕದಲ್ಲಿ ಕನ್ನಡ ಮಕ್ಕಳು ನಿರುದ್ಯೋಗಿಗಳಾಗಿ ಅಲೆಯುತ್ತಿದ್ದಾರೆ, ಕೇಂದ್ರದಲ್ಲಿ ಕನ್ನಡಿಗರ ಧ್ವನಿ ದುರ್ಬಲದ ಮಾತಿರಲಿ ಅದು ಇಲ್ಲವೇ ಇಲ್ಲ, ಇಂತಹ ಸಂದರ್ಭದಲ್ಲಿ ಕನ್ನಡ ಜನ ಒಗ್ಗಟ್ಟಿನಿಂದ ನಿಂತು ತಮ್ಮೆಲ್ಲ ಶಕ್ತಿಯನ್ನು ಬಳಸಿ ತಮ್ಮ ಆತ್ಮ ರಕ್ಷಣೆ ಮಾಡಿಕೊಳ್ಳಬೇಕಾಗಿದೆ. 

1956 ರಲ್ಲಿ ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಯಾಗಿ 19 ಜಿಲ್ಲೆಗಳ ಮೈಸೂರು ರಾಜ್ಯ ಉದಯವಾಯಿತು, ಅದು ಮುಂದೆ ಕನ್ನಡಿಗರ ಹೋರಾಟದಿಂದ 1973 ರಲ್ಲಿ ಕರ್ನಾಟಕವಾಯಿತು, ಆ ಹೋರಾಟ ಇನ್ನೂ ಕುಗ್ಗದಂತೆ ಮಾಡೋಣ. ಕರ್ನಾಟಕದಲ್ಲಿ ಕನ್ನಡವೂ ರಾಜರಾಜೇಶ್ವರಿಯಾಗಿ ಮೆರೆದು, ಭಾರತೀಯ ಸಂಸ್ಕೃತಿಯ ವಜ್ರಮುಕಟ ದಂತೆ ಬೆಳಗಲಿ, ಅದಕ್ಕಾಗಿ ಶ್ರಮಿಸೋಣ, ಭವಿಷ್ಯ ದತ್ತ ಕಣ್ಣು ನೆಟ್ಟು ನಮ್ಮ ಹಿಂದಿನ ಸಂಸ್ಕೃತಿಯಿಂದ ಸ್ಫೂರ್ತಿಯನ್ನು ಪಡೆದು ಮುನ್ನಡೆಯೋಣ. 

– ಜೆಂಬಿಗಿ ಮೃತ್ಯುಂಜಯ, ಕನ್ನಡ ಉಪನ್ಯಾಸಕರು, ದಾವಣಗೆರೆ.

error: Content is protected !!