ದಾವಣಗೆರೆ ಶತಮಾನದ ಪುರುಷ, ಮಹಾದಾನಿ ದಿ.ಮಾಗನೂರು ಬಸಪ್ಪನವರು ಇಹಲೋಕ ತ್ಯಜಿಸಿ ದಿನಾಂಕ 30.10.2024ಕ್ಕೆ 29 ವರ್ಷ. ತನ್ನಿಮಿತ್ತ ಅವರ ಬದುಕಿನ ಕೆಲ ಘಟನೆಗಳ ಮೆಲುಕು ಈ ಕಿರು ಲೇಖನದಲ್ಲಿ.
ರತ್ನ ಗರ್ಭಾ, ವಸುಂಧರಾ ಎಂಬಂತೆ, ಕೋಟಿಗೊಬ್ಬ ಗಣವರ ಭೂಮಿಯಲ್ಲಿ ಇದ್ದಾನೆ ಎಂಬುದಕ್ಕೆ ಉದಾಹರಣೆಯ ಹುಡುಕಾಟದಲ್ಲಿ ನಮಗೆ ದೊರೆತ ಶರಣ ರತ್ನವೇ ಮಾಗನೂರು ಬಸಪ್ಪ ಎಂಬ ಮಹಾಪುರುಷ.
ಅಕ್ಷರರೂಪೀ ಜ್ಞಾನಮಹೇಶ್ವರರನ್ನು, ಈ ನವಸುಮಗಳ ಅಂತರಾಳಕ್ಕೆ, ನೆಲೆ ಕಾಣಿಸುವ ಕಾರಣಿಕ ವ್ಯಕ್ತಿಯಾಗಿ, ಜ್ಞಾನ ದೇಗುಲದ ಪರಿಚಾರಿಕೆಗೈದ ಮಹಾಚೇತನ.
ರಾಣೇಬೆನ್ನೂರು ತಾಲ್ಲೂಕು ಹಿರೇಮಾಗ ನೂರಿನ ಮುಖ್ಯ ಪ್ರಾಣದೇವನ ಮಂದಿರ ಶಾಲೆಯಲ್ಲಿ ಓಂಕಾರ ತಿದ್ದಿ ಇಹ-ಪರಗಳೆರಡಕ್ಕೂ ಆಗಿ ಮಿಗುವಷ್ಟು ಅಕ್ಷರಗಳನ್ನು ಕಲಿತು ಆರು ತರಗತಿಗಳನ್ನು ತಡಾಯ್ದು ಏಳಕ್ಕೆ ಪೂರ್ಣವಿರಾಮ ಹಾಕಿದ ಬಾಲಕ ಈ ಬಸಪ್ಪ. ಹೆಚ್ಚು ಓದನ್ನು ಓದಿದವರಲ್ಲ. ಆದರೂ ಶಾಲೆಯ ಏಕೋಪಾಧ್ಯಾಯ ಮಹದೇವಯ್ಯ ತನ್ನ ಪರಿಧಿಗೆ ಮೀರಿದ ವಿದ್ಯೆಯನ್ನು ಧಾರೆಯೆರೆದರು.
ಜೀವನದಲ್ಲಿ ಸಂಭವಿಸಿದ ಅನೇಕ ಘಟನೆ ಗಳಿಂದ ಘಾಸಿಗೊಂಡಿದ್ದ ಬಸಪ್ಪ, ಪರಿಚಿತರ ಸಲಹೆಯ ನೆರವು ಪಡೆದು ದಾವಣಗೆರೆಯತ್ತ ದಾಪುಗಾಲು ಹಾಕಿ ನಡೆದರು.
ದಾವಣಗೆರೆ ವ್ಯಾಪಾರ ಲಾಭದ ಮೊಟ್ಟೆ ಇಡಲು ಗೂಡು ಕಟ್ಟುತ್ತಿತ್ತು. ಕೊಳ್ಳುವ- ಮಾಡುವ ಮಾತನ್ನು ಬಿಟ್ಟು ಇನ್ನೊಂದು ಮತ್ತೊಂದು ಮಾತಿಗೆ ಮರುಭೂಮಿಯಾಗಿತ್ತು. ಗೋಣಿ ತಾಟಿನ ಕೋಶದೊಳಗೆ ಬಸಪ್ಪ ಸೇರಿದರು. ಆಸೆಯ ಕಂಬಳಿ ಹುಳು ಚಿಟ್ಟೆಯಾಗುವ ಹಂಬಲದಿಂದ ಸಿರಿವಂತರ ಅಂಗಡಿಗಳಲ್ಲಿ ಲೆಕ್ಕ ಬರೆದರು. ಸಂಬಳವಿಲ್ಲದೆ ಎರಡು ಹೊತ್ತಿನ ಊಟಕ್ಕಾಗಿ ದಿನವಿಡೀ ದುಡಿದರು.
ವ್ಯಾಪಾರ ಬದುಕಿನ ಪಾಠಶಾಲೆಗೆ ಗೋಡೆಗಳಿರಲಿಲ್ಲ. ಛಾವಣಿ ತೊಲೆ-ಗಂಬಗಳಿಲ್ಲದೆ ಮುಕ್ತವಾಗಿತ್ತು. ವ್ಯವಹಾರ, ಚತುರತೆ, ಸರಳ ಜೀವನ, ದೈವನಿಷ್ಠೆ ಇವುಗಳನ್ನು ಬಂಡವಾಳ ಮಾಡಿಕೊಂಡು ದುಡಿದರು. ದುಡಿಮೆ ದುಡ್ಡಾಗಿ ಮಾರ್ಪಟ್ಟಿತು. ಸೆಣಬು, ಬೆಲ್ಲ, ಗೋಧಿಗಳ ವ್ಯಾಪಾರದತ್ತ ಮನ ಹರಿಯಿತು. ಅಲ್ಪ ಬಂಡವಾಳದಲ್ಲಿಯೇ ವ್ಯವಹಾರ ಪ್ರಾರಂಭಿಸಿದರು.
ಈಜಿನ ಶಾಸ್ತ್ರವನ್ನು ಮೊದಲು ಕಲಿಯದೇ ಯಾರೂ ಈಜಲು ನೀರಿಗಿಳಿಯುವುದಿಲ್ಲ. ಮೊದಲು ನೀರಿಗಿಳಿದು, ಮುಳುಗಿ ತೇಲಿ ನೀರು ಕುಡಿದು ಈಜು ಕಲಿಯುತ್ತಾರೆ. ಮಾಗನೂರು ಬಸಪ್ಪನವರು ಕುಳಿತು ಎಡವಿದವರಲ್ಲ, ದುಡಿಮೆಯ ಹಾದಿ ಹಿಡಿದು ನಡೆದವರಿಗೆ ಸೋಲು- ಸವಾಲುಗಳು ಸಹಜವಾದರೂ, ಅನಿವಾರ್ಯವಲ್ಲ.
ದಾವಣಗೆರೆ ಶಾಲಾ-ಕಾಲೇಜುಗಳ ಸ್ವರ್ಗ, ವಿದ್ಯಾವಾಚಸ್ಪತಿಯ ತಪೋನಂದನ, ಶಾರದೆಯ ತವರುಮನೆ, ಇತ್ಯಾದಿ ಇತ್ಯಾದಿ ವಿಶೇಷಣಗಳು ಈ ನಗರದ ಜೊತೆಯಾಗಲು ಮಾಗನೂರು ಬಸಪ್ಪನವರ ಸಂಕಲ್ಪಶಕ್ತಿ ಕಾರಣವಾಗಿದೆ.
ಮಾಗನೂರು ಬಸಪ್ಪ ವರ್ತಕ ಸಮುದಾಯಕ್ಕೆ ಚಿಂತಾಮಣಿಯಾಗಿದ್ದರು. ಈ ನಗರದ ವ್ಯಾಪಾರ ಜಗತ್ತಿಗೆ ಆದಾಯ ಸೂರ್ಯ ಎಂದೆಂದಿಗೂ ಮುಳುಗಬಾರದಂತೆ ಸಹಕಾರಿ ಬ್ಯಾಂಕುಗಳನ್ನು ಸ್ಥಾಪಿಸಲು ಮುಂದಾಗಿ ಯಶಸ್ವಿಯಾದರು. ಇವರು ಜೀವನದಲ್ಲಿ ಯಶಸ್ಸು ಕಂಡವರು. ಇದಕ್ಕೆ ಕಾರಣ ಸರಳವಾಗಿ ಬದುಕುವುದೇ ಆಗಿತ್ತು. ಗಾಂಧೀಜಿಯವರ ಕರೆಯನ್ನು ಗೌರವಿಸಿದಷ್ಟೇ ಸಮಪ್ರಮಾಣದಲ್ಲಿ ಖಾದಿ ಉಡುಪು ವಸ್ತ್ರಗಳನ್ನು ಪ್ರೀತಿಸಿದವರು ಸ್ವದೇಶೀ ಚಳವಳಿಯ ಹರಿಕಾರರು.
ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬುದು ಲೋಕ ಸತ್ಯ. ಶ್ರೀಮತಿ ಸರ್ವಮಂಗಳಮ್ಮ. ಮಾಗನೂರು ಬಸಪ್ಪನವರ ಇಚ್ಚಾಶಕ್ತಿಯಾಗಿದ್ದರು. ಪತಿಯ ಔದಾರ್ಯದ ಸ್ವಭಾವಕ್ಕೆ ಹೊಂದಿಕೊಂಡಿದ್ದರು. ಭಾರತ ಸ್ವಾತಂತ್ರ್ಯ ಹೋರಾಟದ ಚಳವಳಿಯಲ್ಲಿ ಯೂ ಪಾಲ್ಗೊಂಡಿದ್ದರು.
ವ್ಯವಹಾರದಲ್ಲಿ ನಷ್ಟವಾದಾಗ, ಲಾಭವಾದಾಗ ಯಾವಾಗಲೂ ಷಡಕ್ಷರ ಮಂತ್ರವನ್ನು (ಓಂ ನಮಃ ಶಿವಾಯ) ಜಪಿಸುತ್ತಿದ್ದರು. ಅದರಿಂದ ಮಾನಸಿಕ ಸಮಸ್ಥಿತಿ ಉಂಟಾಗು ತ್ತಿತ್ತು. ಶಿವಶರಣರ ತಾತ್ವಿಕ ಪರಿಧಿಯೊಳಗೆ ಉಂಡು, ಉಪ ವಾಸ ಬಳಸಿ ಬ್ರಹ್ಮಚಾರಿಯಾಗಿ ಜೀವನವನ್ನು ಗೌರವಿಸಿದರು. ಕನಸು ಮನಸ್ಸಿನಲ್ಲಿಯೂ ಪರಹಿತವನ್ನು ಪಾಷಾಣ ವೆಂದು ಭಾವಿಸದೆ ಪರಹಿತ ಪಂಚಾಮೃತವೆಂದು ಭಕ್ತಿಪೂರ್ವಕ ವಾಗಿಯೇ ಸ್ವೀಕಾರ ಮಾಡುತ್ತಿದ್ದರು. ಅಂಥ ಧ್ಯೇಯೋದ್ಧೇಶ ವಿಲ್ಲದೇ ಇಂಥ ವಿದ್ಯಾಸಂಸ್ಥೆ ಗಳನ್ನು, ಬ್ಯಾಂಕುಗಳನ್ನು ಕಟ್ಟಿ ನಿಲ್ಲಿಸಲು ಸಾಧ್ಯವಾಗು ತ್ತಿರಲಿಲ್ಲ. ಅಲ್ಲವೇ??
ಮಾಗನೂರು ಬಸಪ್ಪನವರು ತುಂಬಾ ಪುಣ್ಯಶಾಲಿಗಳು. ಅವರಂತೆಯೇ ಗುಣ ಸ್ವಭಾವವುಳ್ಳ, ಸಂಘಟನಾ ಚಾತುರ್ಯವುಳ್ಳ, ಪರೋಪಕಾರಿ ಬುದ್ಧಿಯುಳ್ಳ, ಸಮಾಜಕ್ಕೆ ಸೇವೆ ಸಲ್ಲಿಸುವ ಆದರ್ಶವುಳ್ಳ ಪುತ್ರ, ಪುತ್ರಿಯರನ್ನು ಪಡೆದು, ಬೆಳೆಸಿ, ಬುದ್ದಿ ಕಲಿಸಿ ಬೆಳೆಸಿದ್ದಾರೆ.
ಮಾಗನೂರು ಬಸಪ್ಪನವರು ನಿರ್ಗತಿಯನ್ನು ಎಂದಿಗೂ ಶಾಪವೆಂದು ಕೊಂಡವರಲ್ಲ. ಈಜು ಕರಗತವಾಗುವ ತನಕ ಭಯ, ಆತಂಕಗಳಿದ್ದೇ ಇರುತ್ತವೆ ಎಂದು ಭಾವಿಸಿದವರು. ‘ಬಳಸದಿರು ಅದ್ವೈತವನು ಬಾಹ್ಯದಲಿ’ ಎಂಬ ನಿಜಗುಣ ಶಿವಯೋಗಿಗಳ ಆದೇಶ ವಾಕ್ಯದಂತೆ ಲೌಕಿಕವನ್ನು ಪಾರಮಾರ್ಥಕ್ಕೆ ಬೆರೆಸಿದವರಲ್ಲ. ಅವರ ಭಾವಕ್ಕೆ ಪಾರಮಾರ್ಥ ತೀರಾ ವೈಯಕ್ತಿಕ. ಲೌಕಿಕ ಸಾರ್ವತ್ರಿಕವೆಂಬಂತೆ ಬಳಕೆಯಾಗುತ್ತಿತ್ತು. ಪಾರಮಾರ್ಥಕ್ಕೆ ಧ್ಯಾನ, ಮೌನಗಳು ಬಳಕೆಯಾದರೆ ಲೋಕ ವ್ಯವಹಾರಕ್ಕೆ ಸರಳತೆ ಮತ್ತು ಲೆಕ್ಕಾಚಾರ ಎರಡು ಕಣ್ಣುಗಳಾಗಿ ಬಳಕೆಯಾಗುತ್ತಿದ್ದವು.
ಹಿರೇಮಾಗನೂರಿನ ಈ ಗೌಡರ ಮನೆತನ ಪಿತ್ರಾರ್ಜಿತದ ಆಸ್ತಿಯಾದ ತುಂಡುಭೂಮಿಯ ಜೊತೆ ಸಾರಸ್ವತ ಸಂಪತ್ತಾದ ಪುರಾಣ ಗ್ರಂಥಗಳನ್ನು ಹಂಚಿಕೊಂಡ ಅಪರೂಪದ ಮನೆತನ. ಹಿರಿಯರು ಸಂಪಾದಿಸಿದ ಜ್ಞಾನಭಂಡಾರ ಹಂಚಿಕೊಂಡಷ್ಟೂ ಹೆಚ್ಚಾಗುವ ಜ್ಯೋತಿರ್ಗುಣವನ್ನು ಪಡೆದಿರುತ್ತದೆ.
ಅವರ 29ನೆಯ ವಾರ್ಷಿಕ ಪುಣ್ಯಸ್ಮರಣೆಯ ಸವಿನೆನಪಿನ ಸಂದರ್ಭದಲ್ಲಿ ಈ ಕಿರುಲೇಖನ ಎಲ್ಲರಿಗೂ ಸ್ಫೂರ್ತಿಯಾಗಲಿ. ಇಂತಹ ಮಹಾನ್ ಚೇತನ 30.10.1995ನೆಯ ಸೋಮವಾರ ಸಂಜೆ 5.30ಕ್ಕೆ ಈ ಇಹಲೋಕ ತ್ಯಜಿಸಿತು. ಕಷ್ಟದ ದಾರಿಯಲ್ಲಿ ನಡೆದು, ಸಾರ್ಥಕ ಬದುಕು ನಡೆಸಿದ ಸಾಧಕ, ದಾವಣಗೆರೆಯ ಶತಮಾನದ ಪುರುಷ ಮಾಗನೂರು ಬಸಪ್ಪನವರ ಯಶೋಗಾಥೆ ಎಲ್ಲರಿಗೂ ಆದರ್ಶ..
– ಡಾ. ಅನಿತಾ ಹೆಚ್.ದೊಡ್ಡಗೌಡರ್, ಸಹಾಯಕ ಪ್ರಾಧ್ಯಾಪಕರು, ದಾವಣಗೆರೆ. 99021 98655