ಬ್ರಹ್ಮಚಾರಿಣಿದೇವಿ-ಒಂದು ಚಿಂತನೆ

ಬ್ರಹ್ಮಚಾರಿಣಿದೇವಿ-ಒಂದು ಚಿಂತನೆ

`ದಧಾನ ಕರಪದ್ಮಾ ಭ್ಯಾಮಕ್ಷ ಮಾಲಾಕ ಮಂಡಲೂ

ದೇವಿ ಪ್ರಸೀದತು ಮಯಿ ಬ್ರಹ್ಮ ಚಾರಿಣ್ಯ ನುತ್ತಮಾ’

ಎಂಬುದು ಬ್ರಹ್ಮಚಾರಿಣಿ ದೇವಿಯ ಶ್ಲೋಕ. ಇದರರ್ಥ ಕೈಯಲ್ಲಿ ಕಮಂಡಲು ಮತ್ತು ಜಪಮಣಿಗಳನ್ನು ಹಿಡಿದಿರುವಂತಹ ಉತ್ತಮವಾದ ದೇವಿ ಬ್ರಹ್ಮಚಾರಿಣಿಯೇ ನನ್ನನ್ನು ಕಾಪಾಡು ಪ್ರಸನ್ನಳಾಗಿ ವರಗಳನ್ನು ನೀಡು.

ಪಾರ್ವತಿ , ಪರಶಿವನನ್ನು ಒಲಿಸಲು, ಐದು ಸಾವಿರ ವರ್ಷ ಘೋರ ತಪಸ್ಸನ್ನು ಆಚರಿಸುತ್ತಾಳೆ. ಈ ತಪಸ್ಸಿಗಾಗಿ ತಾನು ಧರಿಸುವ ಅವತಾರವೇ ಬ್ರಹ್ಮಚಾರಿಣಿಯ ರೂಪ. ಬ್ರಹ್ಮಚಾರಿಣಿ ಎಂದರೆ ಬ್ರಹ್ಮ ಜ್ಞಾನವನ್ನು ಹರಿಸುತ್ತಾ ಸಾಧನೆ ಮಾಡುತ್ತಿರುವ ಉತ್ತಮ ಸಾಧಕಿ. ವೈದಿಕ ಧರ್ಮದಲ್ಲಿ “ಪವಿತ್ರ ಧಾರ್ಮಿಕ ಧರ್ಮವನ್ನು ಅನುಸರಿಸುವ ಹೆಣ್ಣು ” ಎಂಬುದು ಇದರ ಅರ್ಥ.

ಕೇವಲ ಪತ್ರೆಗಳನ್ನು  ಎಂದರೆ ಎಲೆಗಳನ್ನು ಸ್ವೀಕರಿಸಿ ತಪಸ್ಸು ಮಾಡುವ ಈಕೆಗೆ ಸುಪರ್ಣೆ ಎಂದು ಹೆಸರಾದರೆ, ಪತ್ರೆಗಳ ಸ್ವೀಕಾರವನ್ನು ನಿಲ್ಲಿಸಿದಾಗ ಅವಳಿಗೆ ಅಪರ್ಣೆ ಎಂದು ಹೆಸರಾಯಿತು‌.

ಕಾಮನು ಶಿವನಿಗೆ ಬಾಣವನ್ನು ಬಿಟ್ಟಾಗ, ಶಿವನು ಅವನನ್ನು ಭಸ್ಮ ಮಾಡುತ್ತಾನೆ. ಆದರೂ ಪಾರ್ವತಿಯು ಶಿವನನ್ನು ಒಲಿಸುವ ಪ್ರಯತ್ನವನ್ನು ನಿಲ್ಲಿಸುವುದಿಲ್ಲ, ತಪಸ್ಸನ್ನು ಮುಂದುವರೆಸುತ್ತಾಳೆ. ಆಗ ಶಿವನೇ ಮಾರು ವೇಷದಲ್ಲಿ ಬಂದು ತನ್ನ ಬಗ್ಗೆ ಅವಹೇಳನದ ನುಡಿಗಳನ್ನು ಹೇಳಿದಾಗ, ಅದನ್ನು ಕೇಳಲು ನಿರಾಕರಿಸಿ ಪಾರ್ವತಿ ತನ್ನ ತಪಸ್ಸನ್ನು ಮುಂದುವರೆಸುತ್ತಾಳೆ. 

ಆಗ ಪ್ರಕಂಡಾಸುರ ಎಂಬ ರಾಕ್ಷಸನು ಅನೇಕ ಮಂದಿ ರಾಕ್ಷಸರ ಜೊತೆ ಬಂದು ಪಾರ್ವತಿಯ ಮೇಲೆ ಆಕ್ರಮಣ ಮಾಡುತ್ತಾನೆ, ತಪಸ್ಸು ಮುಗಿಯುವ ಹಂತದಲ್ಲಿರುವ ಪಾರ್ವತಿಯು ತನ್ನನ್ನು ರಕ್ಷಿಸಿಕೊಳ್ಳಲು ಅಸಮರ್ಥಳಾದಾಗ ಲಕ್ಷ್ಮಿ ಮತ್ತು ಸರಸ್ವತಿ ದೇವಿಯರು ಬಂದು ಸಹಾಯ ಮಾಡುತ್ತಾರೆ, ಆದರೆ ರಾಕ್ಷಸರ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ. ಬ್ರಹ್ಮಚಾರಿಣಿ ದೇವಿಯ ಕಮಂಡಲು ಆಗ ಬೀಳುತ್ತದೆ, ಅದರಿಂದ ಬಂದ ನದಿಯ ಪ್ರವಾಹದಲ್ಲಿ ಅನೇಕ ರಾಕ್ಷಸರು ಕೊಚ್ಚಿ ಹೋಗುತ್ತಾರೆ. ಕಡೆಗೆ ದೇವಿಯು ಕಣ್ಣು ತೆಗೆದು ನೋಡಿದಾಗ, ಅದರಿಂದ ಬಂದ ಬೆಂಕಿಯಲ್ಲಿ ರಾಕ್ಷಸರು ಬೂದಿಯಾಗುತ್ತಾರೆ.

ನಂತರ ಬ್ರಹ್ಮಚಾರಿ ವೇಷದಲ್ಲಿ ಶಿವನು ಬಂದು ಆಕೆಯನ್ನು ಅನೇಕ ಒಗಟುಗಳನ್ನು ಕೇಳುತ್ತಾನೆ, ಅವಕ್ಕೆಲ್ಲಾ ಅವಳು ಸರಿಯಾದ ಉತ್ತರವನ್ನು ನೀಡಿದಾಗ, ಅವಳ ಜ್ಞಾನ ಭಕ್ತಿ ಮತ್ತು ಸೌಂದರ್ಯಕ್ಕೆ ಸೋತು, ತನ್ನನ್ನು ವರಿಸಬೇಕಾಗಿ ಕೇಳುತ್ತಾನೆ. ಅವನೇ ಪರಶಿವ ಎಂದು ಅರಿತ ಬ್ರಹ್ಮಚಾರಿಣಿ ದೇವಿ ಒಪ್ಪುತ್ತಾಳೆ.

ತಾಯಿಯು ಈ ರೂಪದಲ್ಲಿ ಬಿಳಿಯ ವಸ್ತ್ರಗಳನ್ನು ಧರಿಸಿರುತ್ತಾಳೆ ಇದು ಶುದ್ಧತೆ ಮತ್ತು ಜ್ಞಾನದ ಸಂಕೇತವಾಗಿದೆ.ಒಂದು ಕೈಯಲ್ಲಿರುವ ಜಪಮಣಿ, ಸಿದ್ದಿ ಪಡೆಯಬೇಕೆಂದಿರುವ ಸಾಧಕನಿಗೆ ಜಪ ಮಾಡುವುದು ಅತ್ಯಂತ ಮುಖ್ಯ ಎಂಬುದನ್ನು ತೋರಿಸುತ್ತದೆ. ಇನ್ನೊಂದು ಕೈಯಲ್ಲಿರುವ ಕಮಂಡಲು, ಅವಳ ತಪಸ್ಸಿಗೆ ಪೂಜೆಗೆ ಅನುಕೂಲವಾಗುತ್ತದೆ.

ಪಾರ್ವತಿಯ ತಪಸ್ಸಿನಿಂದ ಲೋಕ ಕಲ್ಯಾಣವಾಯಿತು, ಪರಮೇಶ್ವರನು ಒಲಿದದ್ದರಿಂದ ತಾರಕಾಸುರನೆಂಬ ದುಷ್ಟ ದೈತ್ಯನ ಸಂಹಾರವಾಯಿತು.

ಬ್ರಹ್ಮಚಾರಿಣಿ ರೂಪ ತಪಸ್ಸಿನ, ಸಾಧನೆಯ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಒಂದೇ ಮನಸ್ಸಿನಿಂದ ಧ್ಯಾನ ಮಾಡುವುದೇ ತಪಸ್ಸು ಎನಿಸುತ್ತದೆ. ಈಗಿನ ಕಾಲದಲ್ಲಿ ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡಬೇಕಾದರೆ, ಮನಸ್ಸನ್ನು ಜ್ಞಾನಾರ್ಜನೆಯ ಕಡೆಗೆ ಕೇಂದ್ರೀಕರಿಸಬೇಕಾಗುತ್ತದೆ. ಸೂರ್ಯನ ಕಿರಣಗಳು ಹರಡಿದಾಗ ಅದರಲ್ಲಿರುವ ಶಾಖ ಏನನ್ನು ಮಾಡುವುದಿಲ್ಲ, ಆದರೆ ಒಂದು ಕನ್ನಡಿಯನ್ನಿಟ್ಟು ಒಂದೇ ಕಡೆಗೆ ಕಿರಣಗಳನ್ನು ಕೇಂದ್ರೀಕರಿಸಿದರೆ ಬೆಂಕಿಯಂತೆ ಸುಡುತ್ತದೆ. ಅದೇ ರೀತಿ ನಮ್ಮ ಅಂತ:ಶಕ್ತಿಯನ್ನು ಒಂದೇ ಕಡೆಗೆ ಕೇಂದ್ರೀಕೃತ ಮಾಡುವುದೇ ತಪಸ್ಸು, ವಿದ್ಯೆಯನ್ನು ಕಲಿಯಲು ಕೇಂದ್ರೀಕೃತವಾಗಿಸಿ ದರೆ, ಅಸಾಧ್ಯವನ್ನು ಸಾಧಿಸಬಹುದಾದಂತಹ ಶಕ್ತಿ ನಮ್ಮ ಮಕ್ಕಳದಾಗುತ್ತದೆ. 

ಈ ನಿಟ್ಟಿನಲ್ಲಿ ಬ್ರಹ್ಮಚಾರಿಣಿ ದೇವಿಯು ಎಲ್ಲರಿಗೂ ಪ್ರೇರಕಳಾಗಿದ್ದಾಳೆ, ಸಾಧನೆ ಮಾಡುವವರಿಗೆ ಶಕ್ತಿಯನ್ನು ತುಂಬುತ್ತಾಳೆ, ಸಾಧಕ ಹೇಗಿರಬೇಕು ಎಂಬುದನ್ನು ತೋರಿಸುತ್ತಾಳೆ. 

ಇಂತಹ ಮಾತೆಯು ದೇಹದ  ಸ್ವಾದಿಷ್ಠಾನ ಚಕ್ರದಲ್ಲಿ ನೆಲೆಯಾಗಿದ್ದಾಳೆ. ಯೋಗ ಸಾಧಕರು ಈ ಚಕ್ರದಲ್ಲಿ ಬ್ರಹ್ಮಚಾರಿಣಿ ದೇವಿಯ ಉಪಾಸನೆಯನ್ನು  ಮಾಡುತ್ತಾರೆ.

ಇಂತಹ ದೇವಿಯ ಕೃಪೆಗೆ ನಾವೂ ಪಾತ್ರರಾಗೋಣ.

– ಡಾ. ರೂಪಶ್ರೀ ಶಶಿಕಾಂತ್, ದಾವಣಗೆರೆ.

error: Content is protected !!