ಸಮಗ್ರ ಕಲಿಕೆಗಾಗಿ ಶಿಕ್ಷಣ ವಲಯ ಸಾಗಬೇಕಾದ ದಾರಿ ಇನ್ನೂ ಬಹಳ ಇದೆ.
ಶೈಕ್ಷಣಿಕ ವಲಯದವರು ಈ ದಿಸೆಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ದರೆ,
ಹತ್ತಾರು ವರ್ಷಗಳ ಹಿಂದಿನ ಕಾಲಕ್ಕೆ ಮಕ್ಕಳನ್ನು ದೂಡಿದಂತಾಗುತ್ತದೆ
ನಮ್ಮ ದೇಶದಲ್ಲಿ ವಿದ್ಯಾರ್ಥಿಗಳ ಅಂಕಗಳ ಮೂಲಕ ಪ್ರತಿಭೆಯನ್ನು ಅಳೆಯುತ್ತೇವೆ. ಶೇ. 90%ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವ ವಿದ್ಯಾರ್ಥಿಯನ್ನು `ಅದ್ಭುತ’ ಎಂದು ಪರಿಗಣಿಸುವುದು ಹಾಗೂ ಕಡಿಮೆ ಅಂಕ ಗಳಿಸುವವರನ್ನು ಭವಿಷ್ಯವಿಲ್ಲದ ದುರ್ಬಲ ಎಂದು ಪರಿಗಣಿಸುವುದು ಸಾಮಾನ್ಯವಾಗಿದೆ.
ಬ್ರಿಟಿಷರ ಕಾಲದ ಪಠ್ಯಕ್ರಮವನ್ನು ಬದಲಿಸದೇ ಇನ್ನೂ ಉಳಿಸಿಕೊಂಡಿರುವುದೇ ಸಮಸ್ಯೆಗೆ ಕಾರಣ. ಶಿಕ್ಷಣದ ಮೂಲಕ ಸರ್ವತೋಮುಖ ಬೆಳವಣಿಗೆ ಕಾಣುವುದಕ್ಕಿಂತ, ಅಂಕ ಗಳಿಸುವುದಕ್ಕೇ ಒತ್ತು ನೀಡಲಾಗುತ್ತಿದೆ. ಪುಸ್ತಕದ ಜ್ಞಾನವನ್ನು ತಲೆಮಾರುಗಳು ಮತ್ತು ತಲೆಮಾರು ಗಳ ವಿದ್ಯಾರ್ಥಿಗಳಿಗೆ ರವಾನಿಸಲಾಗುತ್ತದೆ. ಈಗಿರುವ 90% ಶಿಕ್ಷಣವು ಸೈದ್ಧಾಂತಿಕವಾಗಿದೆ. ವಿದ್ಯಾರ್ಥಿಗಳ ಕಡೆಯಿಂದ ಪ್ರಾಯೋಗಿಕ ಕಲಿಕೆ ಮತ್ತು ಸಂಶೋಧನೆಗೆ ಅವಕಾಶವೇ ಕಡಿಮೆ.
ಸೃಜನಾತ್ಮಕ ಕಲಿಕೆ ಮತ್ತು ಚಿಂತನೆಗೆ ಯಾವುದೇ ಸ್ಥಳವಿಲ್ಲ ಮತ್ತು ವಿದ್ಯಾರ್ಥಿಗಳು ಯಾವಾಗಲೂ ನಿರ್ದಿಷ್ಟ ಪಠ್ಯಕ್ರಮಕ್ಕೆ ಬದ್ಧರಾಗಿರುತ್ತಾರೆ. ಶಾಲಾ ಕೋಣೆಯಿಂದ ಹೊರಗೆ ಹೋಗಲು ಮತ್ತು ಅವರ ಅನಿಸಿಕೆಗಳ ಬಗ್ಗೆ ಪ್ರೋತ್ಸಾಹಿಸುವುದಿಲ್ಲ.
ನಮ್ಮ ಬೋಧನಾ ವಿಧಾನವು ಹೆಚ್ಚು ಏಕತಾನತೆಯಿಂದ ಕೂಡಿದೆ ಮತ್ತು ಅದರಲ್ಲಿ ಚಲನಶೀಲತೆ ಮತ್ತು ಚುರುಕುತನದ ಕೊರತೆಯಿದೆ. ವಿದ್ಯಾರ್ಥಿಗಳು ಬಹುಪಾಲು ಸಮಯ ಶಾಲಾ ಕೋಣೆಗಳಲ್ಲಿ ಪಾಠ ಕೇಳುವುದಕ್ಕೆ ಸೀಮಿತ. ಈ ರೀತಿಯ ಕಲಿಕೆ ಎಷ್ಟರ ಮಟ್ಟಿಗೆ ಉಪಯುಕ್ತ ಎಂಬುದೂ ಪ್ರಶ್ನಾರ್ಹ.
ಭಾರತೀಯ ಶಿಕ್ಷಣ ಕ್ಷೇತ್ರದಲ್ಲಿ ವಾರ್ಷಿಕ ಪರೀಕ್ಷೆಯ ಫಲಿತಾಂಶಗಳು ಮತ್ತು ಬೋರ್ಡ್ ಪರೀಕ್ಷೆಗಳು ಅತ್ಯಂತ ಮಹತ್ವವನ್ನು ಹೊಂದಿವೆ. ಹೆಚ್ಚು ಅಂಕ ಗಳಿಸದ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗುತ್ತಾರೆ ಹಾಗೂ ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ.
ಕ್ರೀಡೆ, ಕಲೆ ಮತ್ತು ಕರಕುಶಲ, ಪಠ್ಯೇತರ ಚಟುವಟಿಕೆಗಳ ಮೂಲಕ ಮಾಡುವ ಸಾಧನೆಯನ್ನು ಸಮಾಜ, ಪೋಷಕರು ಮತ್ತು ಸಂಸ್ಥೆಗಳು ಹೆಚ್ಚು ಪರಿಗಣಿಸುವುದಿಲ್ಲ. ಶಿಕ್ಷಕರು ತಮ್ಮ ಸ್ವಂತ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಆಟ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಕತ್ತರಿ ಹಾಕುವುದು ಸಾಮಾನ್ಯ. ಇದರಿಂದಾಗಿ ಕಲಿಕೆಯ ಮೂಲ ಉದ್ದೇಶವೇ ಮರೆಯಾಗುತ್ತಿದೆ.
ಕಲಿಕೆಯು ಸೃಜನಾತ್ಮಕ ಪ್ರಕ್ರಿಯೆಯಾಗಿದೆ. ಒಬ್ಬ ವ್ಯಕ್ತಿಯು ಸೃಜನಾತ್ಮಕ ಮತ್ತು ಪ್ರಾಯೋಗಿಕ ತೀರ್ಮಾನಗಳ ಮಿಶ್ರಣದೊಂದಿಗೆ ಮಾಹಿತಿಯನ್ನು ಯೋಚಿಸಲು, ಪ್ರತಿಕ್ರಿಯಿಸಲು, ಕಾರ್ಯನಿರ್ವಹಿಸಲು ಅವಕಾಶ ನೀಡಬೇಕಿದೆ.
ಗಣಿತ ಹಾಗೂ ವಿಜ್ಞಾನದ ವಿಷಯಗಳೇ ಶ್ರೇಷ್ಠ ಎಂಬುದು ಮತ್ತೊಂದು ತಪ್ಪು ಕಲ್ಪನೆ. ವಾಸ್ತವವಾಗಿ, ಸಾಮಾನ್ಯ ಗಣಿತ ಮತ್ತು ವಿಜ್ಞಾನದ ಜೊತೆಗೆ ಸೃಜನಶೀಲ ವಿಷಯಗಳನ್ನು ಕಲಿಸಬೇಕಿದೆ. ಇದು ವಿದ್ಯಾರ್ಥಿಗಳು ನಂತರದಲ್ಲಿ ಪ್ರಪಂಚ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ.
ನಾವು ಇಂದಿಗೂ ಕಪ್ಪು ಹಲಗೆ ಮತ್ತು ಸೀಮೆಸುಣ್ಣವನ್ನು ಬೋಧನೆಯ ಪ್ರಮುಖ ವಿಧಾನವಾಗಿ ಬಳಸುತ್ತೇವೆ. ಇ-ಲರ್ನಿಂಗ್ ಮೋಡ್‍ಗೆ ಬದಲಾಗುವ ಅಲೆ ಇದ್ದರೂ, ಅದು ಬಹಳ ಅಳವಡಿಕೆ ಕಡಿಮೆ ಇದೆ.
ಸಮಗ್ರ ಕಲಿಕೆಗಾಗಿ ಶಿಕ್ಷಣ ವಲಯ ಸಾಗಬೇಕಾದ ದಾರಿ ಇನ್ನೂ ಬಹಳ ಇದೆ. ಶೈಕ್ಷಣಿಕ ವಲಯದವರು ಈ ದಿಸೆಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ದರೆ, ಹತ್ತಾರು ವರ್ಷಗಳ ಹಿಂದಿನ ಕಾಲಕ್ಕೆ ಮಕ್ಕಳನ್ನು ದೂಡಿದಂತಾಗುತ್ತದೆ.
ಡಾ. ಗಣೇಶ್ ಪೂಜಾರಯ್ಯ
ಮಾನಸಿಕ ಸಮಾಲೋಚಕರು, ಜೆ.ಐ.ಟಿ.
ಸಹಾಯ ಪ್ರಾಧ್ಯಾಪಕರು, ದಾವಣಗೆರೆ.
[email protected]