ಭಾರತದಲ್ಲಿ ಅನೇಕ ಧರ್ಮ, ಮತ, ಪಂಥಗಳು, ಸಂಸ್ಕೃತಿ ಸಂಪ್ರದಾಯಗಳಿವೆ. ಅವರವರ ಮನೆಯ ಧರ್ಮ, ಸಂಸ್ಕೃತಿ, ಸಂಪ್ರದಾಯದಂತೆ ಜನರು ನಡೆಯುತ್ತಾರೆ.
ಆ ಸಂಪ್ರದಾಯಗಳಲ್ಲಿ, ಕೆಲವು ಮೌಢ್ಯ ಆಚರಣೆಗಳು ಇವೆ, ಕೆಲವು ಅರಿವಿನ ನಿಜ ಆಚರಣೆಗಳೂ ಇವೆ. ಅರಿವಿನ ಆಚರಣೆಗಳು, ನಮ್ಮ ಮನಸ್ಸಿನಲ್ಲಿ ಪ್ರಜ್ಞಾವಂತಿಕೆಯನ್ನು ತುಂಬುತ್ತವೆ. ಮೌಢ್ಯ ಆಚರಣೆಗಳು ಅಂಧಕಾರದ ಅಜ್ಞಾನವನ್ನು ಹೆಚ್ಚು ಮಾಡುತ್ತವೆ.
ಧರ್ಮ ಯಾವುದೇ ಆಗಿರಲಿ, ಆ ಧರ್ಮದ ಆಚರಣೆಗಳಲ್ಲಿ ಮೌಢ್ಯತೆ ತುಂಬಿಕೊಂಡರೆ ಅರಿವು, ಪ್ರಜ್ಞಾವಂತಿಕೆ ಕಡಿಮೆ ಆಗುತ್ತದೆ.
“ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ,
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ.
ಮಾಡುವ ನೀಡುವ ನಿಜಗುಣವುಳ್ಳಡೆ
ಕೂಡಿಕೊಂಬ ನಮ್ಮ ಕೂಡಲಸಂಗಮದೇವ.”
ಎಂದು ಬಸವಣ್ಣನವರು ಹೇಳುವಂತೆ, ನಾವು ನುಡಿಯುವುದರಲ್ಲಿ, ನಡೆಯುವುದರಲ್ಲಿ, ನೀಡುವುದರಲ್ಲಿ, ಮಾಡುವ ಆಚರಣೆಯ ನಿಜವನ್ನು ತಿಳಿದು ಮಾಡಿದರೆ ದೇವರು ಮೆಚ್ಚುತ್ತಾನೆ, ನಮ್ಮೊಂದಿಗೆ ಇರುತ್ತಾನೆ ಎಂದಿದ್ದಾರೆ. ಆದರೆ, ನಾವಿಂದು, ಏನನ್ನು ಮಾಡಬೇಕು, ಏನನ್ನು ಮಾಡಬಾರದು, ಎಂಬ ವಿವೇಕವನ್ನು ಕಳೆದುಕೊಂಡು, ಅಜ್ಞಾನದ ಮೌಢ್ಯ ಆಚರಣೆಗಳನ್ನು ಹೆಚ್ಚು ಮಾಡುತ್ತಿದ್ದೇವೆ.
ದೇವರು ಮತ್ತು ಹಬ್ಬದ ಹೆಸರಿನಲ್ಲಿ ತಿನ್ನುವ, ಉಣ್ಣುವ, ಆಹಾರ ಪದಾರ್ಥಗಳನ್ನು ಹಾಳು ಮಾಡುತ್ತಿದ್ದೇವೆ. ಉಣ್ಣುವ, ತಿನ್ನುವ ಆಹಾರ ಪದಾರ್ಥಗಳನ್ನು ವ್ಯರ್ಥ ಮಾಡುವುದರಿಂದ ಯಾವ ದೇವರು ಸಹ ಒಲಿಯುವುದಿಲ್ಲ, ಮೆಚ್ಚುವುದಿಲ್ಲ.
ಆಷಾಢ ಮಾಸದ ಶುಕ್ರವಾರದಂದು ಕೆಲವು ಊರಿನಲ್ಲಿ, ಕೆಲವರು ಅಜ್ಜಿ ಹಬ್ಬ ಎಂದು ಮಾಡುತ್ತಾರೆ. ಮನೆಯಲ್ಲಿ ಮುಖ್ಯವಾಗಿ ಹೋಳಿಗೆ, ಕರ್ಚಿಕಾಯಿ, ಅನ್ನ, ಸಾಂಬಾರು, ಪಲ್ಯ ಮಾಡಿ, ಮನೆಯಲ್ಲಿ ಒಂದು ಪೂಜೆ ಮಾಡಿ, ಒಂದು ಎಲೆಯಲ್ಲಿ ಮಾಡಿದ ಅಡುಗೆ ಎಲ್ಲವನ್ನು ಇಟ್ಟುಕೊಂಡು ಹತ್ತಿರದ ದುರ್ಗಮ್ಮ, ಚೌಡಮ್ಮ ಮತ್ತಿತರೆ ಹೆಣ್ಣು ದೇವರ ದೇವಸ್ಥಾನಗಳಿಗೆ ಹೋಗಿ, ಅಲ್ಲಿ ಒಂದು ಪೂಜೆ ಮಾಡಿ, ಎಲೆಯಲ್ಲಿ ಒಯ್ದು ಆಹಾರದ ಎಡೆಯನ್ನು, ದೇವಸ್ಥಾನದ ಮುಂದೆ ಇಟ್ಟು ಬರುತ್ತಾರೆ.ಇದು ಬಹಳ ವರ್ಷಗಳಿಂದ ನಡೆದುಕೊಂಡು ಬಂದ ಆಚರಣೆ ಆಗಿದೆ.
ಟ್ರ್ಯಾಕ್ಟರ್ ನಿಲ್ಲಿಸುವುದಕ್ಕಿಂತ , ಒಂದಿಷ್ಟು ದೊಡ್ಡ ದೊಡ್ಡ ಪಾತ್ರೆಗಳನ್ನು ಇಟ್ಟು, ಬಂದಂತ ಭಕ್ತಾದಿಗಳಿಗೆ, ಎಡೆ ಪ್ರಸಾದದ ಆಹಾರವನ್ನು ಇಟ್ಟಿರುವ ಪಾತ್ರೆಯಲ್ಲಿ ಹೋಳಿಗೆ, ಕರ್ಚಿಕಾಯಿ ಮತ್ತು ಅನ್ನವನ್ನು ಬೇರ್ಪಡಿಸಿ, ಬೇರೆ ಬೇರೆ ಪಾತ್ರೆಯಲ್ಲಿ ಹಾಕಲು ತಿಳಿಸಿ, ಒಂದು ಬೋರ್ಡ್ ಹಾಕಬೇಕು.
ಇತ್ತೀಚಿಗೆ ಈ ಹಬ್ಬವನ್ನು ಒಬ್ಬರನ್ನು ನೋಡಿ ಒಬ್ಬರು ಮಾಡುವುದು ಹೆಚ್ಚಾಗಿದೆ. ಹಬ್ಬ ಮಾಡುವುದು, ಪೂಜೆ ಮಾಡುವುದು, ಅದರಲ್ಲಿ ಶ್ರದ್ದೆ ಇಡುವುದು ಅವರವರ ನಂಬಿಕೆ. ಹಬ್ಬದ ನೆಪದಲ್ಲಿ ಸ್ನೇಹಿತರು, ಸಂಬಂಧಿಕರನ್ನು ಮನೆಗೆ ಕರೆದು, ಆತಿಥ್ಯ ಮಾಡುತ್ತಾರೆ. ಈ ಹಬ್ಬ ಒಂದು ಸ್ನೇಹ ಸಂಬಂಧದ ಕೊಂಡಿಯಂತೆ ಆಗಿದೆ. ಆದರೆ ದೇವಸ್ಥಾನದ ಮುಂದೆ ಇಡುತ್ತಿರುವ ಎಡೆಯ ಆಹಾರ ಬಹಳಷ್ಟು ವ್ಯರ್ಥವಾಗುತ್ತಿದೆ. ನೆಲದ ಮೇಲೆ ಇಟ್ಟಿರುವ ಸ್ವಲ್ಪ ಆಹಾರವನ್ನು ಕೆಲವು ಪ್ರಾಣಿಗಳು ತಿನ್ನಬಹುದು, ಆದರೆ ಗುಡ್ಡದಂತೆ ಬಿದ್ದಿರುವ ಪ್ರಸಾದ ಯಥೇಚ್ಚವಾಗಿ ವ್ಯರ್ಥವಾಗುವುದನ್ನು ನಾವು ಕಾಣುತ್ತಿದ್ದೇವೆ.
ದೇವಸ್ಥಾನದ ಮುಂದೆ ಎಡೆ ಪ್ರಸಾದವನ್ನು ವಿಲೇವಾರಿ ಮಾಡುವುದು ದೇವಸ್ಥಾನದ ಆಡಳಿತ ಮಂಡಳಿಗೆ ಬಹಳ ಕಷ್ಟ ಆಗಿದೆ. ಹಾಗಾಗಿ ದೇವಸ್ಥಾನದ ಆಡಳಿತ ಮಂಡಳಿಯವರು, ಎಡೆ ಪ್ರಸಾದವನ್ನು ಹಾಕಲು ಕೆಲವು ಟ್ರ್ಯಾಕ್ಟರ್ ಗಳನ್ನು ತಂದು ಇಡುತ್ತಿದ್ದಾರೆ. ಈ ಹಬ್ಬ ಕಳೆದ ಶುಕ್ರವಾರ ದಿನಾಂಕ 26 ರಂದು ನಡೆದಿದೆ. ದಾವಣಗೆರೆಯ ಪ್ರತಿಷ್ಠಿತ ದೇವಸ್ಥಾನದ ಮುಂದೆ ನಾಲ್ಕು ಟ್ರ್ಯಾಕ್ಟರ್ ನಲ್ಲಿ ಎಡೆ ಪ್ರಸಾದವನ್ನು ಭಕ್ತರು ಹಾಕಿದ್ದಾರೆ. ಆಡಳಿತ ಮಂಡಳಿಯವರು ಇದನ್ನು ಅವರಿವರು ತಿನ್ನಲು ಕೊಡುತ್ತೇವೆ ಎಂದು ಹಾರಿಕೆ ಉತ್ತರ ಕೊಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತವೆ. ಆದರೆ, ಟ್ರ್ಯಾಕ್ಟರ್ ನಲ್ಲಿ ಕಸದಂತೆ ಹಾಕಿರುವ ಎಡೆ ಪ್ರಸಾದವನ್ನು ಯಾರು ತಾನೇ ತಿನ್ನುತ್ತಾರೆ, ಈ ಪ್ರಸಾದ ಮಣ್ಣು ಪಾಲಾಗುತ್ತದೆ.
ಒಂದು ಸುಭಾಷಿತದಲ್ಲಿ ಅನುಭಾವಿಗಳು ಹೇಳುತ್ತಾರೆ. “ಹಸಿದವರಿಗೆ ಅನ್ನವನ್ನು ಕೊಟ್ಟರೆ, ನೀನು ಯಾವ ದೇವರ ಪೂಜೆಯನ್ನೂ ಮಾಡಬೇಕಾಗಿಲ್ಲ, ಹಸಿದು ಅನ್ನವನ್ನು ಪಡೆದವನ ದೃಷ್ಟಿಯಲ್ಲಿ ನೀವೇ ದೇವರಾಗಿ ಬಿಡುತ್ತೀರಾ” ಎಂದು ಹೇಳುತ್ತಾರೆ. ಹೀಗಿರುವಾಗ ದೇವರ ಹೆಸರಿನಲ್ಲಿ ಭಕ್ತರು ಪ್ರಸಾದವನ್ನು ತಂದಿಟ್ಟು ಹಾಳುಮಾಡುವುದಕ್ಕಿಂತ, ಎಡೆ ಮಾಡಿದ ನಂತರ ಅದನ್ನು ಹಸಿದವನಿಗೆ ಕೊಡುವ ವ್ಯವಸ್ಥೆ ಮಾಡಬೇಕು, ಹಸಿದ ಪ್ರಾಣಿಗಳಿಗೆ ಕೊಡಬೇಕು. ದೇವಸ್ಥಾನದ ಆಡಳಿತ ಮಂಡಳಿಯವರು ಟ್ರ್ಯಾಕ್ಟರ್ ನಿಲ್ಲಿಸುವುದಕ್ಕಿಂತ , ಒಂದಿಷ್ಟು ದೊಡ್ಡ ದೊಡ್ಡ ಪಾತ್ರೆಗಳನ್ನು ಇಟ್ಟು, ಬಂದಂತ ಭಕ್ತಾದಿಗಳಿಗೆ ; ಎಡೆ ಪ್ರಸಾದದ ಆಹಾರವನ್ನು ಇಟ್ಟಿರುವ ಪಾತ್ರೆಯಲ್ಲಿ ಹೋಳಿಗೆ ಕರ್ಚಿಕಾಯಿ ಮತ್ತು ಅನ್ನವನ್ನು ಬೇರ್ಪಡಿಸಿ, ಬೇರೆ ಬೇರೆ ಪಾತ್ರೆಯಲ್ಲಿ ಹಾಕಲು ತಿಳಿಸಿ ಎಂದು ಹೇಳಬೇಕು, ಬೋರ್ಡ್ ಹಾಕಬೇಕು.
ಊರಲ್ಲಿರುವ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಮೊದಲೇ ತಿಳಿಸಿರಬೇಕು, ಅವರು ಬಂದು ತೆಗೆದುಕೊಂಡು ಹೋಗುತ್ತಾರೆ. ಮಕ್ಕಳಿಗೆ, ವೃದ್ಧರಿಗೆ, ಅನಾಥರಿಗೆ ಅದನ್ನು ಬಡಿಸುತ್ತಾರೆ. ಈ ಮೂಲಕ ಜನರು ಮಾಡಿ ತಂದ ಎಡೆ ; ನಿಜ ಪ್ರಸಾದವಾಗಿ ಹಸಿದವನ ಹೊಟ್ಟೆಗೆ ಹೋಗಿ ಹೊಟ್ಟೆಯ ಹಸಿವು ನೀಗುತ್ತದೆ, ಹೀಗೆ ಮಾಡುವುದರಿಂದ ದೇವರಿಗೆ ತೃಪ್ತಿಯಾಗುತ್ತದೆ.
ಆದ್ದರಿಂದ ಅಜ್ಜಿ ಹಬ್ಬವನ್ನು ಮಾಡುವ ಭಕ್ತಾದಿಗಳು, ದೇವಸ್ಥಾನದ ಆಡಳಿತ ಮಂಡಳಿಯವರು ಇದನ್ನು ಗಮನದಲ್ಲಿಟ್ಟುಕೊಂಡು, ಈ ಕೆಲಸವನ್ನು ಮುಂದಿನ ಹಬ್ಬದ ದಿನಗಳಲ್ಲಿ ಮಾಡಿದರೆ ; ಅನ್ನಬ್ರಹ್ಮ ಎಂದು ಹೇಳುವ ಮಾತಿಗೆ ಸರಿಯಾದ ರೂಪ ವನ್ನು ಕೊಟ್ಟಂತಾಗುತ್ತದೆ.
ಅಜ್ಜಿಯ ಹಬ್ಬ ಅನ್ನವನ್ನು ಹಾಳುಮಾಡುವ, ಅಜ್ಞಾನದ ಹಬ್ಬವಾಗದೆ, ಹಸಿದವನಿಗೆ ಅನ್ನ ನೀಡುವ ದಾಸೋಹದ ಹಬ್ಬವಾಗಲಿ, ಸಂಬಂಧಿಕರು, ಸ್ನೇಹಿತರ ಮಧ್ಯೆ ಪ್ರೀತಿ, ಬಾಂಧವ್ಯವನ್ನು ಬೆಸೆಯುವ ಹಬ್ಬವಾಗಲಿ.
– ಶಿವಪ್ರಸಾದ ಕರ್ಜಗಿ, ದಾವಣಗೆರೆ.