ಸಮೃದ್ಧಿಯ ಸಂಕೇತವಾದ ಶಿವಕುಮಾರ ಕನ್ನಡ ಜನಪದ, ಅದರಲ್ಲೂ ಉತ್ತರ ಕರ್ನಾಟಕದ ರೈತರ ವಿಶಿಷ್ಟ ದೇವತೆ, ಭೂಲೋಕದಲ್ಲಿ ಸುಖವಾಗಿ ಉಂಡುಟ್ಟು ಹೋದ ಗಣಪ ಶಿವನಿಗೆ ಭೂಲೋಕದಲ್ಲಿ ಎಲ್ಲರೂ ಸುಖವಾಗಿದ್ದಾರೆ ಎಂದು ಹೇಳಲು, ಗಣಪತಿ ಬೆನ್ನಲ್ಲೇ ಬಂದ ಜೋಕುಮಾರ ಭೂಲೋಕದಲ್ಲಿ ಏಳು ದಿನವಿದ್ದು, ರೈತರು ಮಳೆ ಇಲ್ಲದೆ, ಬೆಳೆ ಇಲ್ಲದೆ ರೋಧಿಸುತ್ತಿರುವುದನ್ನು ಕಂಡು ನೇರವಾಗಿ ಹೋಗಿ ಶಿವನಿಗೆ ತಿಳಿಸುತ್ತಾನೆ.
ಬೆಟ್ಟ ಗುಡ್ಡಗಳೆಲ್ಲ ಹಸಿರಾಗಿರುವಂತೆ ಶಿವನು ಮಳೆಯನ್ನು ಸುರಿಸುತ್ತಾನೆ. ಅದಕ್ಕಾಗಿ ಮಳೆಯನ್ನು ತಂದುಕೊಟ್ಟ ಜೋಕುಮಾರನನ್ನು ಹಳ್ಳಿಗರು, ಅದರಲ್ಲೂ ಬುಟ್ಟಿಯಲ್ಲಿ ಹೊತ್ತುಕೊಂಡು ತಿರುಗುವ ಹೆಣ್ಣು ಮಕ್ಕಳು ಜೋಕುಮಾರನ ಕುರಿತು ಸೊಗಸಾಗಿ ಹೃದಯ ತುಂಬಿ ಹಾಡಿದ್ದಾರೆ.
ಈ ಜೋಕುಮಾರ ಭಾದ್ರಪದ ಶುದ್ಧ ಅಷ್ಟಮಿಯ ದಿನದಂದು ಹುಟ್ಟಿ ಬರುತ್ತಾನೆ. ಭಾದ್ರಪದ ಮಾಸದಲ್ಲಿ ಮಳೆಯಾಗದೆ ಬೆಳೆಗಳೆಲ್ಲಾ ಒಣಗುವ ಸಂದರ್ಭ.
ಹಳ್ಳಿಗಳಲ್ಲಿ ಮಣ್ಣಿನಿಂದ ಜೋಕುಮಾರನ ರೂಪವನ್ನು ಮಾಡಿ ಬೇವಿನಸೊಪ್ಪನ್ನು ಹೊದಿಸಿ, ಬುಟ್ಟಿಯಲ್ಲಿ ಇಟ್ಟುಕೊಂಡು ಈತನ ಹಾಡನ್ನು ಹಾಡುವ ಸಂಪ್ರದಾಯವಿದೆ.
ಮನೆಯಲ್ಲಿ ತಿಗಣೆ ಮೊದಲಾದ ಕ್ರಿಮಿಗಳ ಹಾವಳಿ ತಪ್ಪಲೆಂದು ಆಕಳು, ಎಮ್ಮೆಗಳಿದ್ದರೆ ಹೈನುಗಾರಿಕೆ ವೃದ್ಧಿಯಾಗಲೆಂದು ಹೆಣ್ಣು ಮಕ್ಕಳು ಮೆಣಸಿನಕಾಯಿ, ಎಣ್ಣೆ, ಬೆಣ್ಣೆ, ಉಪ್ಪು, ನುಚ್ಚು, ಕಾಳುಕಡಿಗಳನ್ನು ಜೋಕುಮಾರನಿಗೆ ನೀಡುವ ವಿಶಿಷ್ಟ ಸಂಪ್ರದಾಯ.
ಪ್ರತಿಯಾಗಿ ಜೋಕುಮಾರನ ಹೊತ್ತು ತಂದ ಹೆಣ್ಣುಮಕ್ಕಳು ಅಂಬಲಿಯ ಪ್ರಸಾದದ ಜೊತೆಗೆ ಬೇವಿನಸೊಪ್ಪನ್ನು ಕಾಳುಕಡಿ ನೀಡಿದ ಮನೆಯವರಿಗೆ ಕೊಡುವರು. ರೈತರು ಜೋಕುಮಾರನ ಬೇವಿನ ಸೊಪ್ಪನ್ನು ತೆಗೆದುಕೊಂಡು ಹೋಗಿ ತಮ್ಮ ಹೊಲಗಳಿಗೆ ಚೆಲ್ಲುವರು.
ಭತ್ತದ ಗದ್ದೆಗಳಿಗೆ ಜೋಕುಮಾರನ ಬೇವಿನಸೊಪ್ಪನ್ನು ಚೆಲ್ಲಿದರೆ ಭತ್ತಕ್ಕೆ ಹುಳ ಮುಟ್ಟುವುದಿಲ್ಲವೆಂಬುದು ರೈತರ ಅಗಾಧ ನಂಬಿಕೆ. ಅಲ್ಲದೆ ರೈತರು ಭತ್ತದ ರಾಶಿ ಮಾಡುವಾಗ ಅದರಿಂದ ಹುಲುಸು ಜಾಸ್ತಿಯಾಗಿ ರಾಶಿ ಹೆಚ್ಚಾಗುತ್ತದೆ ಎಂಬ ಭಾವನೆ ಇದೆ.
ಜೋಕುಮಾರ ಏಳು ದಿನಗಳವರೆಗೆ ಗಣಪತಿಯಂತೆ ಹೊಟ್ಟೆ ತುಂಬಾ ಸುಖವಾದ ಊಟವನ್ನು ಉಣ್ಣುವುದಿಲ್ಲ. ಜೋಕುಮಾರ ಬಂದರೆ ಮಳೆ ಬರುತ್ತದೆ ಎಂದು ನಂಬಿರುವ ರೈತರು, ಇಲ್ಲಿಯ ಸಂಕಷ್ಟಗಳನ್ನು ಶಿವನಿಗೆ ಬೆನ್ನು ಹತ್ತಿದ ಎಂಬುದು ಹಾಡುಗಳಲ್ಲಿ ಉಲ್ಲೇಖವಾಗಿದೆ.
ಇವನ ಪುಂಡಾಟಕ್ಕೆ ಊರು ಬೇಸತ್ತು ತಿಳಿಸಲೆಂದು ಹೇಳಿ ಜೋಕುಮಾರನಿಗೆ ಮೋದಕಗಳ ಬದಲಾಗಿ ಮೆಣಸಿನಕಾಯಿ, ಉಪ್ಪು ಇತ್ಯಾದಿಗಳನ್ನು ಕೊಟ್ಟು ಅವನ ಬುಟ್ಟಿಯಲ್ಲಿ ತಿಗಣಿಗಳನ್ನ ಬಿಟ್ಟು ಕಳಿಸಿದನಂತೆ ಇದರಿಂದ ಜೋಕುಮಾರ ಶಿವನ ಕಣ್ಣು ತೆರೆಸಿದನೆಂಬ ವಾಡಿಕೆ ಇದೆ.
ಜೋಕುಮಾರನ ದಿಟ್ಟದೇವಿಯ ಮಗ ಹುಟ್ಟಿದ ಏಳು ದಿನಗಳಲ್ಲಿ ಊರ ಹಾಳು ಮಾಡಿ ಅಗಸರ ಹುಡುಗಿಯರ ಗುಂಪು ಕೂಡಿ ಕಂಡ ಕಂಡಲ್ಲಿ ಜೋಕುಮಾರನ ಹಿಡಿದು ರಾತ್ರಿಯಲ್ಲ ಅಗಸರ ಕಲ್ಲು ಬಂಡೆಗಳ ಕೆಳಗೆ ಇಟ್ಟಂತೆ ಜೋಕುಮಾರನ ತಲೆಯನ್ನು ಹೊಡೆಯುವಾಗ ಆತನನ್ನು ಉಂಡಿದ್ದು ಅಂಬಲಿಯಾಗಿ ಭೂಮಿಯಲ್ಲಿ ಬೆಳೆ ಬಂದಿತ್ತಂತೆ. ಆರ್ಭಟದೊಂದಿಗೆ ಮಳೆ ಸುರಿದು ಗುಡ್ಡಗಳೇ ಹೈನಾದಂತೆ, ಉಣ್ಣದೇ, ತಿನ್ನದೇ ಹೊಡೆಸಿಕೊಂಡು ಹೋದ ಜೋಕುಮಾರನು ಶಿವನ ಮುಂದೆ ಲೋಕದ ದುಃಖದ ಕಥೆಯನ್ನು ಹೇಳಿದ ಎಂಬುದು ನಂಬಿಕೆ.
ಈ ರೀತಿಯಾದ ಕಥೆಯನ್ನು ಜನಪದರು ಅಂದಿನಿಂದ ಇವತ್ತಿನವರೆಗೆ ನಂಬಿಕೊಂಡು ಬಂದಿರುವುದನ್ನು ಗಮನಿಸಬಹುದಾಗಿದೆ. ಜನಪದದಲ್ಲಿ ಜೋಕುಮಾರನಿಗೆ ಸಂಬಂಧಿಸಿದಂತೆ ಹಲವಾರು ನಂಬಿಕೆಗಳು ಇವೆ. ಸಮೃದ್ಧಿಯ ದೇವತೆ ಭತ್ತದ ಗದ್ದೆಗೆ ಈತನ ಬೇವಿನ ಸೊಪ್ಪು ಚೆಲ್ಲಿದರೆ ಕೀಟಗಳ ಹಾವಳಿ ಇರುವುದಿಲ್ಲವೆಂಬ ನಂಬಿಕೆ ಇದೆ.
ಏಳು ದಿನಗಳವರೆಗೆ ಅಳಲು ಇರುತ್ತದೆ. ಇದಕ್ಕೆ ಜೋಕುಮಾರನ ಅಳಲು ಎಂದು ಜನಪದರು ಕರೆಯುತ್ತಾರೆ. ಇಷ್ಟೆಲ್ಲ ವಿಶಿಷ್ಟತೆ ಹೊಂದಿರುವ ಜೋಕುಮಾರ ನಿಜಕ್ಕೂ ಜನಪದರ ಬದುಕಿನಲ್ಲಿ ಜೀವಂತವಾಗಿದ್ದಾನೆ.
– ಕುಂದೂರು ಮಂಜಪ್ಪ, ಹೊಳೆಸಿರಿಗೆರೆ, ಹರಿಹರ ತಾ.