ಸರ್ಕಾರದ ಸ್ವಚ್ಛತಾ ಅಭಿಯಾನಗಳೂ, ಕುದುರೆ ಲದ್ದಿಯೂ…

ಸರ್ಕಾರದ ಸ್ವಚ್ಛತಾ ಅಭಿಯಾನಗಳೂ, ಕುದುರೆ ಲದ್ದಿಯೂ…

ಪರಿಸರ ಬದಲಾವಣೆ, ವಾಯು ಮಾಲಿನ್ಯ, ಜಲ ಮಾಲಿನ್ಯ ಮುಂತಾದ ಭೀಕರ ಸಮಸ್ಯೆಗಳು ಮನುಕುಲಕ್ಕೆ ಅಪಾಯ ತರಲಿವೆ ಎಂಬ ವರದಿಗಳಿವೆ. ಈ ದೈತ್ಯ ಸಮಸ್ಯೆಗಳಿಗೆ ಅಭಿಯಾನಗಳಿಂದ ಪರಿಹಾರ ಸಾಧ್ಯವೇ?

ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ವತಿಯಿಂದ ಮೇರಿ ಲೈಫ್, ಮೇರಾ ಸ್ವಚ್ಛ ಶೆಹರ್ ಅಭಿಯಾನವನ್ನು ಕಳೆದ ಮೇ 15ರಿಂದ ಆರಂಭಿ ಸಲಾಗಿದೆ. 21 ದಿನಗಳ ಕಾಲ ಈ ಅಭಿಯಾನ ನಡೆಸುವ ಮೂಲಕ, ಮರು ಬಳಕೆಯಾಗುವ ತ್ಯಾಜ್ಯಗಳನ್ನು ಸಂಗ್ರಹಿಸಲಾಗುತ್ತಿದೆ.

ಈ ಸುದ್ದಿಯನ್ನು ನೋಡಿದಾಗ ನೆನಪಿಗೆ ಬಂದಿದ್ದು, ಶತಮಾನದ ಹಿಂದೆ ನ್ಯೂಯಾರ್ಕ್‌ ರೀತಿಯ ಬೃಹತ್ ನಗರಗಳಲ್ಲಿ ಉಂಟಾಗಿದ್ದ ಬೃಹತ್ ಸಾರಿಗೆ ಮಾಲಿನ್ಯದ ಅನಾಹುತಗಳ ಬಗ್ಗೆ.

ಶತಮಾನದ ಹಿಂದೆ ಈಗಿನಂತೆ ಸ್ಕೂಟರ್, ಕಾರು, ಬಸ್ ಇತ್ಯಾದಿ ಇರಲಿಲ್ಲ. ಜನಸಂಖ್ಯೆಯೂ ಕಡಿಮೆ ಇತ್ತು. ವಾತಾವರಣವೂ ದೂಳು ಮುಕ್ತವಾ ಗಿತ್ತು. ಹೀಗಿರುವಾಗ ಎಂತಹ ಮಾಲಿನ್ಯ ಎಂದಿರಾ? ಹೌದು ಸ್ವಾಮಿ. ಆ ಸಂದರ್ಭದಲ್ಲಿ ರಸ್ತೆ ಸಾರಿಗೆಗೆ ಬಳಸುತ್ತಿದ್ದುದು ಕುದುರೆಗಳು. ಆಗ ಕುದುರೆ ಅಂದ ಮೇಲೆ ಲದ್ದಿ  ಹಾಕದೇ ಇರುತ್ತದೆಯೇ? ಈ ಕುದುರೆ ಲದ್ದಿಯೇ ಇಡೀ ನಗರ ಅಲ್ಲೋಲ ಕಲ್ಲೋಲ ಆಗುವಷ್ಟು ಅನಾಹುತ ಎಬ್ಬಿಸಿತ್ತು.

ಆಗಿನ ಕಾಲದಲ್ಲಿ ಲಂಡನ್ ಹಾಗೂ ನ್ಯೂಯಾರ್ಕ್ ರೀತಿಯ ನಗರಗಳಲ್ಲಿ 20 ಜನರನ್ನು ಎಳೆದೊಯ್ಯಲು ಎರಡು ಕುದುರೆಗಳು ಬೇಕಾಗು ತ್ತಿದ್ದವು. ಹೀಗೆ ಎರಡರಿಂದ ಎಂಟು ಕುದುರೆಗಳನ್ನು ಗಾಡಿ ಗಳನ್ನು ಎಳೆಯಲು ಬಳಸಲಾಗುತ್ತಿತ್ತು. 1870ರ ವೇಳೆಗೆ ನ್ಯೂಯಾರ್ಕ್‌ನಲ್ಲಿ ವರ್ಷಕ್ಕೆ 100 ದಶಲಕ್ಷ ಕುದುರೆ ಗಾಡಿಗಳ ಸವಾರಿ ನಡೆಯುತ್ತಿತ್ತು. ಆ ವೇಳೆಗೆ ನಗರದಲ್ಲಿ ಕನಿಷ್ಠ 1.50 ಲಕ್ಷ ಕುದುರೆಗಳಿದ್ದವು. 

ಪ್ರತಿ ಕುದುರೆಯೂ ದಿನಕ್ಕೆ 22 ಪೌಂಡ್‌ ಲದ್ದಿ ಹಾಕುತ್ತಿತ್ತು. ಒಟ್ಟಾರೆ ಪ್ರತಿದಿನ ಲಕ್ಷಗಟ್ಟಲೆ ಕೆಜಿಗಳ ಲದ್ದಿ ಉತ್ಪತ್ತಿಯಾಗುತ್ತಿತ್ತು. ವರ್ಷಕ್ಕೆ 1 ಲಕ್ಷ ಟನ್ ಕುದುರೆ ಲದ್ದಿ ವಿಲೇವಾರಿ ಮಾಡಬೇಕಿತ್ತು. ಅಂದ ಹಾಗೆ, ಇದರಲ್ಲಿ 10 ದಶಲಕ್ಷ ಗ್ಯಾಲನ್‌ಗಳ ಕುದುರೆ ಗಂಜಲದ ಲೆಕ್ಕ ಸೇರಿಲ್ಲ.

ಸರ್ಕಾರದ ಸ್ವಚ್ಛತಾ ಅಭಿಯಾನಗಳೂ, ಕುದುರೆ ಲದ್ದಿಯೂ... - Janathavani

ಈ ಲದ್ದಿಗಳನ್ನು ಹೊತ್ತು ಹಾಕಲು ಮತ್ತೆ ಕುದುರೆಗಳೇ ಬೇಕಿದ್ದವು. ಆ ಕುದುರೆಗಳು ಮತ್ತೆ ಲದ್ದಿ ಹಾಕುತ್ತಿದ್ದವು! ಕುದುರೆ ಲದ್ದಿ, ಸತ್ತ ಕುದುರೆಗಳ ಕಾರಣಗಳಿಂದ ಇಡೀ ನಗರ ನೊಣಮಯವಾಗ ತೊಡಗಿತು. ರೋಗಗಳು ವೇಗವಾಗಿ ಹರಡಿ ಆರೋಗ್ಯ ಸಮಸ್ಯೆ ಉಂಟಾಯಿತು.

ಇದರ ಜೊತೆಗೆ ಪ್ರತಿ ಕುದುರೆಗೂ ವರ್ಷಕ್ಕೆ ಮೂರು ಟನ್‌ಗಳ ಆಹಾರ ಅಗತ್ಯವಾಗುತ್ತಿತ್ತು. ಇದಕ್ಕಾಗಿ ಲಕ್ಷಾಂತರ ಎಕರೆಯಲ್ಲಿ ಮೇವು ಬೆಳೆಯಬೇಕಿತ್ತು.  ಒಟ್ಟಾರೆ ಸಾಗಣೆಯ ಸಮಸ್ಯೆ ಆಗಿನ ಆಡಳಿತಗಾರರಿಗೆ ಇನ್ನಿಲ್ಲದಂತೆ ಕಾಡಿತು.

ಈ ಸಮಸ್ಯೆಗೆ ಪರಿಹಾರ ಹೇಗೆ ದೊರೆಯಿತು? ಆಡಳಿತಗಾರರು ಏನೆಲ್ಲಾ ತಲೆ ಚಚ್ಚಿಕೊಂಡರೂ ಪರಿಹಾರ ಸಿಗಲಿಲ್ಲ. ಆದರೆ, ಈ ಸಮಸ್ಯೆ ವಿಜ್ಞಾನ – ತಂತ್ರಜ್ಞಾನದಿಂದ ಪರಿಹಾರವಾಯಿತು. 1900ರ ವೇಳೆಗೆ ಎಲೆಕ್ಟ್ರಿಕ್ ಕಾರುಗಳು ಹಾಗೂ ಡೀಸೆಲ್ ವಾಹನಗಳ ಆವಿಷ್ಕಾರವಾಯಿತು. ನಂತರದಲ್ಲಿ ವೈಯಕ್ತಿಕ ಬಳಕೆಗೆ ಕಾರುಗಳು ಬಂದವು. ಅಲ್ಲಿಗೆ ಕುದುರೆಗಳನ್ನು ಸಾರಿಗೆಗೆ ಬಳಸುವುದು ನಿಂತಿತು. ಲದ್ದಿ ಹಾಗೂ ಮೇವಿನ ಸಮಸ್ಯೆಯಿಂದ ನಗರಗಳಿಗೆ ಸಂಪೂರ್ಣ ಮುಕ್ತಿ ದೊರೆಯಿತು.

ಈ ಪುರಾಣ ಏಕೆ ಹೇಳಬೇಕಾಯಿತು ಎಂದರೆ, ಆ ಕಾಲದಲ್ಲಿ ಲದ್ದಿ ಸಮಸ್ಯೆ ಬಗೆಹರಿಸಿದ ತಂತ್ರಜ್ಞಾನವೇ ಈಗ ನಗರಗಳಲ್ಲಿ ವಾಯು ಮಾಲಿನ್ಯಕ್ಕೆ ಕಾರಣವಾಗಿದೆ. ವಿಶ್ವದ ಟಾಪ್ ಟೆನ್ ವಾಯು ಮಲಿನ ನಗರಗಳಲ್ಲಿ ಭಾರತದ ರಾಜಧಾನಿ ದೆಹಲಿ ಸೇರಿ ಹಲವು ನಗರಗಳಿವೆ. ವರ್ಷಕ್ಕೆ ವಾಯು ಮಾಲಿನ್ಯದಿಂದ ಭಾರದಲ್ಲಿ 23 ಲಕ್ಷ ಜನ ಅಕಾಲಿಕ ಸಾವನ್ನಪ್ಪುತ್ತಿದ್ದಾರೆ ಎಂದು ಲ್ಯಾನ್ಸೆಟ್‌ ಸಂಸ್ಥೆಯ ವರದಿ ತಿಳಿಸಿದೆ.

ಈ ಸಮಸ್ಯೆ ವರ್ಷದಿಂದ ವರ್ಷಕ್ಕೆ ತೀವ್ರವಾಗು ತ್ತಿದೆಯೇ ಹೊರತು ಬಗೆಹರಿಯುವ ಲಕ್ಷಣಗಳಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯ ಬೇಕಾದ ಕೇಂದ್ರ ನಗರ ವ್ಯವಹಾರಗಳ ಸಚಿವಾಲಯ, ನಿಮ್ಮ ಮನೆಗಳಲ್ಲಿ ಘನ ತ್ಯಾಜ್ಯ ಇದ್ದರೆ ಸಂಗ್ರಹಿಸಿ ಕೊಡಿ ಎಂದು ರಾಗ ಹಾಡುತ್ತಾ ಪ್ರಚಾರ ಪಡೆಯುತ್ತಿದೆ. 

ಘನತ್ಯಾಜ್ಯ ವಿಲೇವಾರಿ ಆಗಬೇಕಾದ್ದೆ. ಆದರೆ, ಇದು ಒಂದು ಅಭಿಯಾನದಿಂದ ಆಗುವ ಕೆಲಸವಲ್ಲ. ಇದಕ್ಕೆ ಸರ್ಕಾರದ ಹಂತದಲ್ಲಿ ಬೃಹತ್ ಯೋಜನೆಗಳು ಜಾರಿಗೆ ಬರಬೇಕಿದೆ.  ಪರಿಸರ ಬದಲಾವಣೆ, ವಾಯು ಮಾಲಿನ್ಯ, ಜಲ ಮಾಲಿನ್ಯ ಮುಂತಾದ ಭೀಕರ ಸಮಸ್ಯೆಗಳು ಮನುಕುಲಕ್ಕೆ ಅಪಾಯ ತರಲಿವೆ ಎಂಬ ವರದಿಗಳಿವೆ. ಈ ದೈತ್ಯ ಸಮಸ್ಯೆಗಳಿಗೆ ಅಭಿಯಾನಗಳಿಂದ ಪರಿಹಾರ ಸಾಧ್ಯವೇ? ಸರ್ಕಾರಗಳು ಇನ್ನಾದರೂ ನಿಜವಾದ ಸ್ವಚ್ಛ ಭಾರತದ ಬಗ್ಗೆ ಗಂಭೀರವಾಗಬೇಕಿದೆ.


ಜಿ.ಎನ್. ಕಾಮತ್, ದಾವಣಗೆರೆ

error: Content is protected !!