ಸೈಕಲ್‌ ಕೊಟ್ರಪ್ಪನವರ ಸಾಂಗತ್ಯಗಳ `ಸುವರ್ಣ ಸಂಭ್ರಮ’

ಸೈಕಲ್‌ ಕೊಟ್ರಪ್ಪನವರ ಸಾಂಗತ್ಯಗಳ `ಸುವರ್ಣ ಸಂಭ್ರಮ’

ಸೈಕಲ್‌ ಕೊಟ್ರಪ್ಪನವರ ಸಾಂಗತ್ಯಗಳ `ಸುವರ್ಣ ಸಂಭ್ರಮ' - Janathavani

ಸೈಕಲ್‌ ಸಂಗಾತಿಗೆ ಐವತ್ತೊಂದು ವರ್ಷ… ಬಾಳಸಂಗಾತಿಯ ಕೈ ಹಿಡಿದು ಐವತ್ತು ವರ್ಷ…
ಈ ಸಾಂಗತ್ಯದ ಸುವರ್ಣ ಸಂಭ್ರಮಕ್ಕಾಗಿ
“ಅವ್ವ ಹಚ್ಚಿದ ದೀಪ” ಕವನ ಸಂಕಲನ ಬಿಡುಗಡೆ

ಕಾಂ. ಹೆಚ್.ಕೆ. ಕೊಟ್ರಪ್ಪ ಅಂದರೆ ಹರಿಹರ ಹಾಗೂ ಕೈಗಾರಿಕಾ ವಲಯದಲ್ಲಿ ಜನಪ್ರಿಯ ಹೆಸರು. ಬರೀ ಕಾರ್ಮಿಕ ವಲಯ ಒಂದೇ ಅಲ್ಲ, ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯದಲ್ಲಿ ಪ್ರೀತಿಪಾತ್ರ ಹೆಸರು… ಇವರಿಗೆ ಅನ್ವರ್ಥವಾಗಿ ಬಂದ ಇನ್ನೊಂದು ಹೆಸರು “ಸೈಕಲ್‌ ಕೊಟ್ರಪ್ಪ”…!

 ಐವತ್ತು ವರ್ಷ ಬಾಳ ಸಂಗಾತಿಯೊಂದಿಗೆ ಅರ್ಥಾತ್‌ ಧರ್ಮಪತ್ನಿಯೊಂದಿಗೆ ಜೀವನವನ್ನು ಸುಂದರ, ಸೌಹಾರ್ದ ಹಾಗೂ ಅವಿನಾಭಾವ ದೊಂದಿಗೆ ಕಳೆದ ಸಾರ್ಥಕಗೊಂಡ ಖುಷಿಗೆ ಸಮರಸ ಸಂಸಾರದ  “ಸುವರ್ಣ ಮಹೋತ್ಸವ” ಆಚರಿಸಿಕೊಳ್ಳುವುದು ಲೋಕಾರೂಢಿ…

ಅಚ್ಚರಿಯ ಸಂಗತಿ ಅಂದರೆ ನಮ್ಮ ಸೈಕಲ್‌ ಕೊಟ್ರಪ್ಪ ಅವರು 1972ರಲ್ಲಿ ತಾವು ಕಾರ್ಮಿಕರಾಗಿ ದುಡಿಯುತ್ತಿದ್ದ ಹರಿಹರದ ಪಾಲಿಫೈಬರ್ಸ್ ಕಂಪನಿಗೆ ಓಡಾಡಲು ಒಂದು ಸೈಕಲ್‌ ಕೊಂಡುಕೊಳ್ಳುತ್ತಾರೆ. ಅದೂ ಕಾರ್ಮಿಕ ಸಂಘಟನೆ ಬೇಡಿಕೆಯಿಂದ ಸಂಬಳದಲ್ಲಿ ತಿಂಗಳಿಗೆ ಹತ್ತು ರೂ. ಮುರಿದುಕೊಂಡು ಸೈಕಲ್‌ ಕೊಳ್ಳಲು ಕಂಪನಿ ಸಾಲ ನೀಡುವ ಸ್ಕೀಮಿನಲ್ಲಿ. ಸೈಕಲ್‌ ಹೆಸರು “ಸ್ಪೀಡ್‌ ಕಿಂಗ್”…

ಸ್ಪೀಡ್‌ ಕಿಂಗ್ ಸೈಕಲ್‌ ಏರಿ ಪ್ರತಿದಿನ ಹರಿಹರದಿಂದ ಪಾಲಿಫೈಬರ್ಸ್‌ ಕಂಪನಿಗೆ ತಮ್ಮ ಕಾಯಕಕ್ಕೆ ತೆರಳುತ್ತಿದ್ದ ಹೆಚ್.ಕೆ. ಕೊಟ್ರಪ್ಪ ಅವರು, ಮುಂದೆ ತಮ್ಮ ಮತ್ತು ಅವರ ಸಂಗಾತಿಗಳೊಂದಿಗೆ ಸೇರಿ ಕಾರ್ಮಿಕ ಸಂಘಟನೆಗೆ ಇಳಿದು “ಕಾಮ್ರೆಡ್‌” ಎಚ್‌.ಕೆ. ಕೊಟ್ರಪ್ಪ ಆಗುತ್ತಾರೆ.

ವೃತ್ತಿ ಸೇವೆ ಹೆಚ್ಚಿದಂತೆ ಕೊಟ್ರಪ್ಪ ಅವರ ಸಂಬಳವೂ ಹೆಚ್ಚಾಗುತ್ತದೆ. ಕಂಪನಿಯವರು ಸ್ಕೂಟರ್‌ ಕೊಳ್ಳಲು ಮುಂಗಡ ನೀಡಲು ಮುಂದಾಗುತ್ತಾರೆ. ಕೊಟ್ರಪ್ಪ ಅವರೊಡನೆ ಸೇವೆ ಸಲ್ಲಿಸುತ್ತಾ ಇದ್ದ ಅನೇಕ ಅವರ ಸಂಗಾತಿಗಳು ಕಾರ್ಖಾನೆಯಿಂದ ಮುಂಗಡ ಪಡೆದು ಸ್ಕೂಟರ್‌ ಕೊಳ್ಳುತ್ತಾರೆ. ಆದರೆ ಕಾಂ. ಕೊಟ್ರಪ್ಪ ಅವರು ತಮ್ಮ ಸ್ಪೀಡ್‌ ಕಿಂಗ್‌ ಸೈಕಲ್‌ನಲ್ಲೇ ಕೆಲಸಕ್ಕೆ ಹೋಗಿಬರುತ್ತಾರೆ.

ಹರಿಹರದಿಂದ ಪಾಲಿಫೈಬರ್ಸ್‌ಗೆ ಐದಾರೂ ಕಿ.ಮೀ. ದೂರ ಇರುವುದರಿಂದ ಕಂಪನಿ ಪ್ರತಿದಿನ ಹತ್ತು ರೂ.ಗಳ ಪ್ರಯಾಣ ಭತ್ಯೆ ನೀಡುತ್ತದೆ. ಇದರಿಂದಾಗಿ ಕೊಟ್ರಪ್ಪ ಅವರು ಪ್ರತಿ ತಿಂಗಳು 260 ರೂ. ಹೆಚ್ಚುವರಿ ಸಂಬಳ ಪಡೆದು “ಸೈಕಲ್‌ ಸವಾರಿ” ಮಾಡಿ ತಮ್ಮ ದೈಹಿಕ ಆರೋಗ್ಯವನ್ನು ಸದೃಢಗೊಳಿಸಿಕೊಳ್ಳುತ್ತಾರೆ. ಇದಕ್ಕೂ ಹೆಚ್ಚಿನ ಅಚ್ಚರಿ ಎಂದರೆ, ಅವರು ವೃತ್ತಿಯಿಂದ ನಿವೃತ್ತಿಗೊಳ್ಳುವವರೆಗೆ ಸ್ಪೀಡ್‌ಕಿಂಗ್ ಸೈಕಲ್‌ನಲ್ಲೇ ಓಡಾಡುತ್ತಾರೆ… ಇಷ್ಟೇ ಅಲ್ಲ ಇಂದಿಗೂ, ಈವತ್ತಿಗೂ ಸವಾರಿ ಮಾಡುವುದು ಅದೇ “ಸ್ಪೀಡ್‌ ಕಿಂಗ್” ಸೈಕಲ್‌ನಲ್ಲೇ….!

ಎಚ್.ಕೆ. ಕೊಟ್ರಪ್ಪ ಅವರು ಮದುವೆ ಆದದ್ದು 1973ರಲ್ಲಿ ಅಂದರೆ “ಸ್ಪೀಡ್‌ಕಿಂಗ್‌” ಸೈಕಲ್‌ ಕೊಂಡುಕೊಂಡು ಒಂದು ವರ್ಷದ ನಂತರ. ತಮ್ಮ ಶ್ರೀಮತಿಯನ್ನು ಸಾವಿರಾರು ಸಾರಿ “ಸ್ಪೀಡ್‌ಕಿಂಗ್‌” ಸೈಕಲ್‌ ಹಿಂಬದಿಗೆ ಕೂರಿಸಿಕೊಂಡು ತುಂಗಭದ್ರೆಯ ಆಚೆ-ಈಚೆ ಓಡಾಡಿದ್ದಾರೆ. ತಮ್ಮ ಶ್ರೀಮತಿ, ಸ್ಪೀಡ್‌ ಕಿಂಗ್‌ ಸೈಕಲ್‌ ಎರಡೂ ಅವರ ಬದುಕಿನ ಅವಿಭಾಜ್ಯ ಅಂಗವಾಗಿ ಬಂದದ್ದನ್ನು ಕಣ್ಣಾಲೆಯಲ್ಲಿ ಆನಂದದ ಭಾಷ್ಪ ತುಂಬಿಕೊಂಡು ನೆನೆಯುತ್ತಾರೆ.

ಕಳೆದ ವರ್ಷ “ವಿಶ್ವ ಸೈಕಲ್‌ ದಿನಾಚರಣೆ” ಅಂಗವಾಗಿ ತಾವು ಸಾಕಿಕೊಂಡು ಬಂದಿದ್ದ “ಸ್ಪೀಡ್‌ ಕಿಂಗ್‌” ಸೈಕಲ್ಲನ್ನು ಹರಿಹರ ತುಂಬಾ ಮೆರವಣಿಗೆ ಮಾಡಿ, ಸಾಹಿತ್ಯ ಗೋಷ್ಠಿ ನಡೆಸಿದರು. ಈ ವರ್ಷ ತಾವು ದಾಂಪತ್ಯ ಜೀವನಕ್ಕೆ ಕಾಲಿರಿಸಿದ “ಸುವರ್ಣ ಮಹೋತ್ಸವ” ಸೈಕಲ್‌ ಸಂಗಾತಿಗೆ ಐವತ್ತೊಂದು ವರ್ಷ… ಬಾಳಸಂಗಾತಿಯ ಕೈ ಹಿಡಿದು “ಐವತ್ತು”ವರ್ಷ….!

ಕೊಟಗಿ ಹನುಮಂತಪ್ಪ-ಗೋಪಮ್ಮ ದಂಪತಿಗೆ 1947ರಲ್ಲಿ ಜನಿಸಿದ ಎಚ್.ಕೆ. ಕೊಟ್ರಪ್ಪ ಅವರು ಓದಿದ್ದು ಎಸ್ಸೆಸ್ಸೆಲ್ಸಿ… ಬದುಕು ಕಟ್ಟಿಕೊಳ್ಳಲು ಪಾಲಿಫೈಬರ್ಸ್‌ನಲ್ಲಿ ಕಾರ್ಮಿಕರಾಗಿ ಸೇರಿಕೊಂಡರು. 1973ರಲ್ಲಿ ದಾಂಪತ್ಯ ಜೀವನಕ್ಕೆ… 

ಕೊಟ್ರಪ್ಪನವರಿಗೆ ಚಿಕ್ಕಂದಿನಿಂದಲೂ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳ ಗೀಳಿತ್ತು. ಹೀಗಾಗಿ ತಮ್ಮ ಕಾರ್ಮಿಕ ವೃತ್ತಿಯ ಜೊತೆ ಜೊತೆಗೆ ಹಂಪಿ ಕನ್ನಡ ವಿ.ವಿ. ಮೂಲಕ ಅಂಚೆ ತೆರಪಿನ ಶಿಕ್ಷಣದಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ ಪಡೆಯುತ್ತಾರೆ. ಆಗ ಅವರ ವಯಸ್ಸು ಅರವತ್ಮೂರು…

ಅವರು ಕವಿತೆ ರಚಿಸುವುದು, ಕಥೆ ಹೆಣೆಯುವುದು, ಲೇಖನ ಗೀಜುವುದು ಮಾಡುತ್ತಾ ಬಂದು, ನಂತರದಲ್ಲಿ ಬರಹ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಾರೆ. ಅವರ ಕವಿತೆಗಳು, ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಗಳಾದ ಜನತಾವಾಣಿ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಿಜಯಕರ್ನಾಟಕ, ಮುಂತಾದವುಗಳಲ್ಲಿ ಹಾಗೂ ಸುಧಾ, ಕರ್ಮವೀರ, ತುಷಾರ, ಕೆಂಬಾವುಟ,  ಹೊಸತು ಮುಂತಾದ ನಿಯತ ಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಅವರ ಎರಡು ಕವನ ಸಂಕಲನ ಪ್ರಕಟವಾಗಿವೆ. 

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಸಂಬಂಧ ಹೊಂದಿರುವ ಕೊಟ್ರಪ್ಪನವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲೂ ತೊಡಗಿಸಿಕೊಂಡಿದ್ದಾರೆ. ತಮ್ಮ ವೃತ್ತಿ ಜೀವನದ ಕಾರ್ಮಿಕ  ಹೋರಾಟ ದಲ್ಲಿ ಸುಮಾರು ಇನ್ನೂರು ಬಡಜನತೆಗೆ ನಿವೇಶನ ಕೊಡಿಸಿದ ಬಗ್ಗೆ ತೃಪ್ತಿ ವ್ಯಕ್ತಪಡಿಸುತ್ತಾರೆ…

ತಮ್ಮ ಇಷ್ಟೆಲ್ಲಾ ಹೋರಾಟ, ಯಶಸ್ಸುಗಳಿಗೆ ಕಾರಣ ತನ್ನ ತಂದೆ-ತಾಯಿಗಳು ಎಂದು ಸ್ಮರಿಸುವ ಕೊಟ್ರಪ್ಪ ಅವರು “ತಮ್ಮ ಸಾಂಸಾರಿಕ ಸಾಂಗತ್ಯದ ಸುವರ್ಣ ಸಂಭ್ರಮ”ಕ್ಕಾಗಿ ಮತ್ತೊಂದು ಕವನ ಸಂಕಲ ಹೊರತರುತ್ತಿದ್ದಾರೆ. ಶೀರ್ಷಿಕೆ “ಅವ್ವ ಹಚ್ಚಿದ ದೀಪ”… ಇದೇ ಮೇ  21 ರಂದು ಬೆಳಿಗ್ಗೆ 10 ಗಂಟೆಗೆ ಹರಿಹರದ ಕಾಳಿದಾಸ ವಿದ್ಯಾಸಂಸ್ಥೆ ಆವರಣದಲ್ಲಿ ಬಿಡುಗಡೆಯಾಗಲಿದೆ….


ಬಾ.ಮ. ಬಸವರಾಜಯ್ಯ
ಲೇಖಕರು, ಹಿರಿಯ ಪತ್ರಕರ್ತರು

error: Content is protected !!