ಶಾಲಾ ಟಾಪರ್‌ಗಳಿಗೆ ಜೀವನದ ವೈಫಲ್ಯ…?

ಶಾಲಾ ಟಾಪರ್‌ಗಳಿಗೆ ಜೀವನದ ವೈಫಲ್ಯ…?

ಟಾಪರ್‌ಗಳೇ ಆಗಲಿ, ಕೊನೆ ಬೆಂಚ್‌ನವರೇ ಆಗಲಿ ಜೀವನಕ್ಕೆ ಅಗತ್ಯ ಕೌಶಲ್ಯಗಳ ಬಗ್ಗೆ ಗಮನ ಹರಿಸುವುದು ಅನಿವಾರ್ಯವಾಗಿದೆ. ಹೆಚ್ಚು ಅಂಕ ಬಂದಿದ್ದಕ್ಕೆ ಅತಿಯಾದ ಸಂಭ್ರಮ, ಇಲ್ಲವೇ ಕಡಿಮೆ ಅಂಕ ಎಂದು ವಿಷಾದ ಎರಡೂ ಹಾನಿಕರ. ಶಿಕ್ಷಣ ವ್ಯವಸ್ಥೆ ಈ ದಿಸೆಯಲ್ಲಿ ಬದಲಾಗಬೇಕಿದೆ. 

ಪರೀಕ್ಷಾ ಫಲಿತಾಂಶಗಳ ಈ ದಿನಗಳಲ್ಲಿ ಶಾಲೆ – ತಾಲ್ಲೂಕು – ಜಿಲ್ಲಾ – ರಾಜ್ಯದ ಟಾಪರ್‌ಗಳಿಗೆ ಎಲ್ಲೆಡೆ ಅಭಿನಂದನೆಗಳ ಮಹಾಪೂರ. ಟಾಪರ್‌ಗಳೀಗ ಯಶಸ್ಸಿನ ಹಾದಿಯಲ್ಲಿರುವವರು ಎಂದು ಹೊಗಳಲಾಗುತ್ತಿದೆ. ಕಡಿಮೆ ಅಂಕ ಪಡೆದವರಿಗಿದು ದುರ್ಭಿಕ್ಷ ಕಾಲ.

ಆದರೆ, ಶಾಲೆಗಳಲ್ಲಿ ಟಾಪರ್ ಆಗಿರುವವರು ಜೀವನದಲ್ಲೂ ಯಶಸ್ಸು ಕಾಣುವರೇ? ಸಮಾಜಕ್ಕೆ ಕೊಡುಗೆ ನೀಡುವರೇ? ಶಿಕ್ಷಕರ – ಪೋಷಕರ ಮೆಚ್ಚುಗೆ ಪಡೆಯುವ ಗುಡ್ ಬಾಯ್ – ಗುಡ್ ಗರ್ಲ್‌ಗಳು ಮುಂದಿನ ಜೀವನದಲ್ಲಿ ಮುನ್ನಡೆ ಪಡೆಯಲಿ ದ್ದಾರೆಯೇ? ಈ ವಿಷಯದಲ್ಲಿ ಸಾಕಷ್ಟು ಅನುಮಾನಗಳಿವೆ. 

ಅಲ್ಬರ್ಟ್ ಐನ್‌ಸ್ಟೀನ್‌ ಅವರನ್ನು ಶತಮಾನದ ವಿಜ್ಞಾನಿ ಎಂದು ಬಣ್ಣಿಸಲಾಗುತ್ತದೆ. ಅವರು ಶಾಲಾ ದಿನಗಳಲ್ಲೇ ಮೇರು ಪ್ರತಿಭೆಯಾಗಿದ್ದರು. ಆದರೆ, ಅವರು ತಮ್ಮ ಪ್ರತಿಭೆಗಾಗಿ ಮೆಚ್ಚುಗೆ ಗಳಿಸಿದ್ದರೆ? ವಿಜ್ಞಾನಿ ಮಿಚಿಯೋ ಕಾಕು ಅವರು ತಮ್ಮ `ದಿ ಗಾಡ್ ಇಕ್ವೇಷನ್’ ಪುಸ್ತಕದಲ್ಲಿ ಐನ್‌ಸ್ಟೀನ್‌ ತಮ್ಮ ಪ್ರತಿಭೆಯ ಕಾರಣದಿಂದ ಅನುಭವಿಸಿದ ಸಮಸ್ಯೆಗಳ ಕುರಿತು ತಿಳಿಸಿದ್ದಾರೆ.

ಐನ್‌ಸ್ಟೀನ್‌ ಅವರ ಮುಕ್ತ ಚಿಂತನೆ ಅವರ ಉಪನ್ಯಾಸಕರ ದ್ವೇಷಕ್ಕೆ ಕಾರಣವಾಯಿತು. ಉಪನ್ಯಾಸಕರು ಹೇಳುವ ಬಹುತೇಕವನ್ನು ಕಲಿತಿದ್ದ ಐನ್‌ಸ್ಟೀನ್‌, ಕಾಲೇಜಿಗೆ ಚಕ್ಕರ್ ಹಾಕುತ್ತಿದ್ದರು. ಶಿಕ್ಷಣದ ನಂತರ ಐನ್‌ಸ್ಟೀನ್‌ಗೆ ಉಪನ್ಯಾಸಕರು ಉತ್ತಮ ಶಿಫಾರಸ್ಸು ಪತ್ರ ಕೊಡಲಿಲ್ಲ. ಹೀಗಾಗಿ ಅವರು ಸ್ವಲ್ಪ ಕಾಲ ನಿರುದ್ಯೋಗಿ ಆಗಬೇಕಾಯಿತು. ಐನ್‌ಸ್ಟೀನ್‌ ಅಂತಹ ದೈತ್ಯ ಪ್ರತಿಭೆ ಕೊನೆಗೆ ಪೇಟೆಂಟ್ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡಬೇಕಾಯಿತು.

ಅದು ಹಿಂದಿನ ಶತಮಾನ. ಈ ಶತಮಾನದಲ್ಲಿ ಪರಿಸ್ಥಿತಿ ಬದಲಾಗಿದೆಯೇ? ಈಗಲೂ ಶಾಲಾ ವ್ಯವಸ್ಥೆಯಲ್ಲಿ ಮಾರ್ಕ್ಸ್‌ – ವಾದವೇ ವಿಜೃಂಭಿಸುತ್ತಿದೆ. ಹೆಚ್ಚು ಅಂಕ ಗಳಿಸಿದವರೇ ಮೇಧಾವಿಗಳು ಎಂದು ಬಿಂಬಿಸಲಾಗುತ್ತಿದೆ. ಅಂಕಗಳಿಗೇ ಹೆಚ್ಚು ಒತ್ತುವ ಕೊಡುವ ಶಿಕ್ಷಣ ಹಲವು ಸಮಸ್ಯೆಗಳನ್ನು ತರುತ್ತಿದೆ. ಅತಿ ಹೆಚ್ಚು ಅಂಕ ಪಡೆಯುವ ಟಾಪರ್‌ಗಳು ಈ ಸಮಸ್ಯೆ ಎದುರಿಸುವವರಲ್ಲಿ ಮುಂಚೂಣಿಯಲ್ಲಿರುತ್ತಾರೆ!

ಸದಾ ಪಠ್ಯದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಪ್ರಾಯೋ ಗಿಕ ಶಿಕ್ಷಣ ಕಡಿಮೆಯಾಗುತ್ತದೆ. ಚಿಂತನಾ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ಅಂಕ ಗಳಿಕೆಗಾಗಿ ಶಾಲಾ ವ್ಯವಸ್ಥೆಯ ಗುಲಾಮರಂತೆ ವರ್ತಿಸಬೇಕಾಗುತ್ತದೆ. ಅಂಕಗಳಿಗಾಗಿ ಅತಿಯಾಗಿ ಓದುವುದರಿಂದ ಬೇರೆ ವಿಷಯಗಳ ಜ್ಞಾನ ಹಾಗೂ ಕೌಶಲ್ಯ ಕಲಿಯಲು ಸಮಯ ಸಿಗುವುದಿಲ್ಲ. ಜೀವನದಲ್ಲಿ ಯಶಸ್ಸು ಗಳಿಸಲು ಸಂವಹನ, ಹಣಕಾಸು, ಸಾಮಾನ್ಯ ಜ್ಞಾನ, ಆತ್ಮವಿಶ್ವಾಸ, ಸೃಜನಶೀಲತೆ ಅತ್ಯಗತ್ಯ. ಎಷ್ಟೋ ಟಾಪರ್‌ಗಳು ಈ ಕೌಶಲ್ಯಗಳಿಂದ ವಂಚಿತರಾಗಿ ಬಿಡುತ್ತಾರೆ.

ಅಲ್ಲದೇ, ಟಾಪರ್‌ಗಳಲ್ಲಿ ಸೋಲಿನ ಭೀತಿ ಹೆಚ್ಚಾಗಿರುವುದು ಕಂಡು ಬರುತ್ತದೆ. ಟಾಪರ್‌ಗಳಿಗೆ ಒಂದಿಷ್ಟು ಅಂಕ ಕಡಿಮೆಯಾದರೂ ಗಾಬರಿಯಾಗುತ್ತದೆ. ಟಾಪರ್‌ಗಳಿಂದ ಶಾಲೆ – ಶಿಕ್ಷಕರು ಹಾಗೂ ಪೋಷಕರ ನಿರೀಕ್ಷೆಯೂ ಹೆಚ್ಚಾಗಿರುತ್ತದೆ. ಈ ನಿರೀಕ್ಷೆಯೇ ಅವರನ್ನು ಕುಗ್ಗುವಂತೆ ಮಾಡುತ್ತದೆ.

ಶಾಲಾ ಪರೀಕ್ಷೆಗಳು ಸೀಮಿತ ಸಾಮರ್ಥ್ಯ ಮಾತ್ರ ಪರಿಗಣಿಸುತ್ತವೆ. ಪಠ್ಯಪುಸ್ತಕಗಳಲ್ಲಿ ಬರುವ ಪ್ರಶ್ನೆಗಳನ್ನೇ ಪರೀಕ್ಷೆಯಲ್ಲಿ ಕೇಳಲಾಗುತ್ತದೆ. ಆದರೆ, ಜೀವನವೇ ಬೇರೆ. ಅಲ್ಲಿ ಪಠ್ಯಪುಸ್ತಕವೂ ಇರದು, ಪ್ರಶ್ನೆಗಳೂ ಔಟ್ ಆಫ್ ಸಿಲೆಬಸ್ ಆಗಿರುತ್ತವೆ. ಜೀವನದ ಪರೀಕ್ಷೆ ಎದುರಿಸಲು ಅಂಕಗಳು ಹೆಚ್ಚೇನೂ ಪ್ರಯೋಜನಕ್ಕೆ ಬಾರದು.

ಕೆಲವು ಶಿಕ್ಷಣ ಪರಿಣಿತರ ಪ್ರಕಾರ ಇತರೆ ವರ್ಗದವರಿಗೆ ಹೋಲಿಸಿದರೆ ಟಾಪರ್‌ಗಳಲ್ಲೇ ಜೀವನದಲ್ಲಿ ಹೆಚ್ಚು ವೈಫಲ್ಯ ಕಾಣುತ್ತಾರೆ! ಹಾಗೆಂದ ಮಾತ್ರಕ್ಕೆ ಕೊನೆ ಬೆಂಚ್‌ನವರೆಲ್ಲ ಯಶಸ್ಸು ಕಾಣುತ್ತಾರೆ ಎಂದೇನೂ ಅಲ್ಲ. ಕೆಲವರು ಮೈಕ್ರೋ ಸಾಫ್ಟ್‌ ಸ್ಥಾಪಕ ಬಿಲ್‌ ಗೇಟ್ಸ್‌ ಹಾಗೂ ಆಪಲ್ ಕಂಪನಿಯ ಸ್ಥಾಪಕ ಸ್ಟೀವ್‌ ಜಾಬ್ಸ್ ಕಾಲೇಜು ಶಿಕ್ಷಣದಿಂದ ಅರ್ಧಕ್ಕೇ ಹೊರ ಬಂದು ಯಶಸ್ವಿಯಾದ ಉದಾಹರಣೆ ನೀಡುತ್ತಾರೆ.

ಆದರೆ, ಗೇಟ್ಸ್ ಕಾಲೇಜು ಬಿಟ್ಟಿದ್ದಕ್ಕೆ ಕಾರಣವೆಂದರೆ ಅವರು ಆ ಕಾಲದಲ್ಲಿ ಸಾಫ್ಟ್‌ವೇರ್‌ ಬಗ್ಗೆ ಕಾಲೇಜಿನ ಉಪನ್ಯಾಸಕರಿಗಿಂತ ಹೆಚ್ಚಿನ ತಿಳುವಳಿಕೆ ಹೊಂದಿದ್ದರು. ಅವರು ಕಾಲೇಜಿನಲ್ಲಿ ಕಲಿಯುವುದೇನೂ ಉಳಿದಿರಲಿಲ್ಲ. ಜಾಬ್ಸ್‌ ಸಹ ಕಾಲೇಜು ಕಲಿಕೆಗಿಂತ ಹೆಚ್ಚಿನದನ್ನು ಸ್ವಂತಿಕೆಯಿಂದ ಕಲಿತಿದ್ದರು. ಎಲ್ಲಾ ಹಿಂದಿನ ಬೆಂಚ್‌ನವರಿಗೆ ಇಷ್ಟೊಂದು ಜ್ಞಾನ ಇರದು.

ಹೀಗಾಗಿ ಟಾಪರ್‌ಗಳೇ ಆಗಲಿ, ಕೊನೆ ಬೆಂಚ್‌ನವರೇ ಆಗಲಿ ಜೀವನಕ್ಕೆ ಅಗತ್ಯ ಕೌಶಲ್ಯಗಳ ಬಗ್ಗೆ ಗಮನ ಹರಿಸುವುದು ಅನಿವಾರ್ಯವಾಗಿದೆ. ಹೆಚ್ಚು ಅಂಕ ಬಂದಿದ್ದಕ್ಕೆ ಅತಿಯಾದ ಸಂಭ್ರಮ ಇಲ್ಲವೇ ಕಡಿಮೆ ಅಂಕ ಎಂದು ಅತಿಯಾದ ವಿಷಾದ ಎರಡೂ ಹಾನಿಕರ. ಶಿಕ್ಷಣ ವ್ಯವಸ್ಥೆ ಈ ದಿಸೆಯಲ್ಲಿ ಬದಲಾಗಬೇಕಿದೆ. ಅದು ಬದಲಾಗುವವರೆಗೆ ವಿದ್ಯಾರ್ಥಿಗಳು ಹಾಗೂ ಪೋಷಕರೂ ಎಚ್ಚರಿಕೆಯಿಂದ ತಾವೇ ಬದಲಾಗಬೇಕಿರುವುದು ಅನಿವಾರ್ಯ.


 ಎಸ್.ಎ. ಶ್ರೀನಿವಾಸ್‌
[email protected]

 

error: Content is protected !!