ಮುಂಗಾರು ಬಿತ್ತನೆಗೆ ಮುನ್ನ ಗಮನಿಸಿ

ಮುಂಗಾರು ಬಿತ್ತನೆಗೆ ಮುನ್ನ ಗಮನಿಸಿ

ಈ ವರ್ಷ ತಳ ಹಸಿ ಆಗುವಂತಹ ಮಳೆ ಇದುವರೆಗೆ ನಮ್ಮ ಭಾಗದಲ್ಲಿ ಆಗಿಲ್ಲ. ಆದರೆ, ಇನ್ನು ಮುಂದೆ ಮಳೆಯಾಗಿ ಭೂಮಿ ಹದ ಮಾಡಿ ಸಿದ್ಧವಾದರೆ, ಪುನಃ ಕಳೆಗಳನ್ನು ಕಳೆಯಲು ಕಾಯಬೇಕಿಲ್ಲ.

* ಕಳೆ ನಾಶಕ ಬಳಸುವುದು ಅನಿವಾರ್ಯ ಆಗುವ ಎಲ್ಲ ಸಾಧ್ಯತೆ ಇದೆ. ಕಳೆನಾಶಕ ಬಳಸುವುದರಿಂದ ಕಳೆ ತೆಗೆಯುವ ಆಳಿನ ಖರ್ಚು ಕಡಿಮೆ ಮಾಡಲು, ಕಳೆಗಳ ಸಮರ್ಥ ಹತೋಟಿ ಮಾಡಲು ಸಾಧ್ಯ.

* ಬಿತ್ತನೆ ನಂತರ 15-25 ದಿನಗಳ (ಬೆಳೆ) ಹಂತದಲ್ಲಿ ಕಳೆನಾಶಕ ಬಳಕೆ ಮಾಡಬಹುದು.

* ಪೂರ್ಣ ಪ್ರದೇಶದಲ್ಲಿ ಕಳೆನಾಶಕ ಬಳಸುವುದರಿಂದ ವೆಚ್ಚ ಹೆಚ್ಚುವುದು. ಕೇವಲ ಬೆಳೆ ಸಾಲಿನ ಮೇಲೆ ಮಾತ್ರ ಕಳೆನಾಶಕ ಸಿಂಪಡಣೆ ಮಾಡುವುದು ಸೂಕ್ತ.

* ಬೆಳೆ ಹುಟ್ಟಿದ ತಕ್ಷಣ, ಅಂದರೆ 10-12 ದಿನಗಳ ಹಂತದಲ್ಲಿ ಎಡೆ (ಕಿರು) ಕುಂಟೆಯಿಂದ ತೆಳುವಾಗಿ 1-2 ಸಲ ಎಳೆಸಿದರೆ ಬೆಳೆ ಬೀದಿಗಳಲ್ಲಿ ಕಳೆ ಹತೋಟಿ ಸುಲಭ ಸಾಧ್ಯ.

* ನಂತರ, ಬೆಳೆ ಸಾಲುಗಳ ಮೇಲೆ ಕಳೆನಾಶಕ ಸಿಂಪಡಿಸಬೇಕು.

* ಬಿತ್ತುವ ಮುನ್ನ ಬೀಜಗಳನ್ನು ಹದ ನೋಡಿ ನೆನೆಸಿ ನಂತರ ಆರಿಸಿ, ಕ್ಲೋರ್ ಪೈರಿಫಾಸ್ ಮತ್ತು ಕಾರ್ಬಂಡೈಜಿಂ ಅಥವಾ ಅಜಾಡಿರಕ್ಟಿನ್ (ಬೇವಿನ ಎಣ್ಣೆ) ಮತ್ತು ಟ್ರೈಕೋಡರ್ಮಾಗಳಿಂದ ಬೀಜೋಪಚರಿಸಬೇಕು.

* ಶೇಂಗಾ, ಸೂರ್ಯಕಾಂತಿ, ಹತ್ತಿ, ಹೆಸರು, ಇತ್ಯಾದಿ ಬೆಳೆಗಳ ಸುತ್ತ 4-6 ಸಾಲು ಗೋವಿನಜೋಳ ಬಿತ್ತನೆ ಮಾಡಬೇಕು.

* ಈ ಎಲ್ಲ (ಶೇಂಗಾ, ಸೂರ್ಯಕಾಂತಿ, ಹತ್ತಿ, ಹೆಸರು, ಈರುಳ್ಳಿ, ಇತ್ಯಾದಿ) ಬೀಜಗಳೊಡನೆ ಕೊತ್ತಂಬರಿ ಬೀಜ ಬೆರೆಸಬೇಕು.

* ಸೋಯಾ ಅವರೆ ಬಿತ್ತನೆ ಯನ್ನು 18″ ಅಂತರದ ಸಾಲುಗಳಲ್ಲಿ ಬಿತ್ತಬೇಕು.

* ಹತ್ತಿ ಬಿತ್ತುವವರು ಜೂನ್ ಮೊದಲ ವಾರ 
(ರೋಹಿಣಿ ಮಳೆ)ದೊಳಗೆ (ನೀರು ಹಣಿಸಿಯಾದರೂ) ಬಿತ್ತನೆ ಮಾಡಲೇಬೇಕು. ನಂತರ ಬಿತ್ತನೆ ಮಾಡಿದರೆ ಇಳುವರಿ ತುಂಬಾ ಕಡಿಮೆಯಾಗುವುದು.

* ಇತರೆ ಬೆಳೆಗಳನ್ನೂ ಸಹ ಆದಷ್ಟು ಬೇಗ ಬಿತ್ತನೆ ಮಾಡುವುದು ಸೂಕ್ತ.

* ಟ್ರೈಕೋಡರ್ಮಾ ಬೆರೆಸಿದ ಪುಡಿ ಕೊಟ್ಟಿಗೆ ಗೊಬ್ಬರವನ್ನು ಬೆಳೆಯ ಸಾಲುಗಳ ಮೇಲೆ ಉದುರಿಸಿ ಬಳುಗುಂಟೆ ಹೊಡೆಯುವುದು ಸೂಕ್ತ. ಇದರಿಂದ, ಬೆಳೆಗಳ ರೋಗ ಹತೋಟಿ ಸುಲಭ ಸಾಧ್ಯ.

* ಈ ವರ್ಷ ಜುಲೈ – ಆಗಸ್ಟ್‌ನಲ್ಲಿ ಮಳೆ ಸರಿಯಾಗಿ ಆಗದಿರುವ ಮುನ್ಸೂಚನೆ ಇದ್ದು ರಸಗೊಬ್ಬರ ಬಳಕೆಯಲ್ಲಿ ಹಿಡಿತ ಇರಲಿ.

* ಪೋಷಕಾಂಶಗಳ ಸಿಂಪಡಣೆ ಅನಿವಾರ್ಯ. ಈ ಕಾರ್ಯವನ್ನು ಬೆಳೆ 20-25 ದಿನಗಳ ಹಂತದಲ್ಲಿ ಇರುವಾಗಲೇ ಆರಂಭಿಸಿ ಪ್ರತಿ 12-15 ದಿನಗಳ ಅಂತರದಲ್ಲಿ (ತೇವಾಂಶ ಮಣ್ಣಿನಲ್ಲಿ ಇರಲೇಬೇಕು) ಮಾಡಬೇಕು.

* ಕಳೆನಾಶಕಗಳ ಬಳಕೆ ಬಗ್ಗೆ, ಬಳಕೆಗೆ ಮುನ್ನ ಸಲಹೆಗಳನ್ನು ತಪ್ಪದೇ ಪಡೆಯಬೇಕು.

* ಬದುಗಳಲ್ಲಿ ಪಾರ್ಥೇನಿಯಂ ಮತ್ತಿತರೆ ಅಡ್ಡಗಸ ಇರಬಾರದು.

* ಕರ್ಕಿ, ಜೇಕು ಇರುವ ಭಾಗಗಳಿಂದ ಅವು ಇಲ್ಲದ ಭಾಗಗಳಲ್ಲಿ ಗಳೇ ಹೊಡೆಯಬಾರದು. ಪ್ರತಿ ಸಲ ಗಳೇ ಹೊಡೆದಾಗ ಕರ್ಕಿ, ಜೇಕು ಬೇರು ಆರಿಸಿ ತೆಗೆಯಬೇಕು.

* ಬೇರೆ ಪ್ರದೇಶದಿಂದ ಬರುವ ಮಳೆ ನೀರನ್ನು ಹೊಲದ ತುಂಬ ಹರಿಯಲು ಬಿಡಬಾರದು. ಬದು ಅಥವಾ ಬೇಲಿ ಗುಂಟ ನೇಗಿಲ ಸಾಲು (ಟ್ರ್ಯಾಕ್ಟರ್ ನಿಂದ) ಮಾಡಿ ಬೆಳೆಗೆ ಹಾನಿಯಾಗದಂತೆ ಹೆಚ್ಚಾದ ನೀರನ್ನು ಹೊರಹಾಕಬೇಕು.

* ಬೇಲಿಗಳಿಗುಂಟ ಮೂರು ನಾಲ್ಕು ಸಲ ಒಂದೇ ಸಾಲಿನಲ್ಲಿ ನೇಗಿಲು ಹೊಡೆದು ಬೇಲಿಯ ಚಾಟಿನಿಂದ ಬೆಳೆ ಹಾನಿ ಕಡಿಮೆ ಮಾಡಬಹುದು.

* ಬೆಳೆಗಳ ಕುರಿತು ಪ್ರತಿ ವಾರ (ಮೊದಲೆರಡು ತಿಂಗಳು) ಮಾಹಿತಿಯನ್ನು ಶೇರ್ ಮಾಡಿ ಸಲಹೆ ಪಡೆಯಬೇಕು. ಕಳೆದ ವರ್ಷ ಬಹುತೇಕರು ಮಾಹಿತಿ ಶೇರ್ ಮಾಡದೇ ಬೆಳೆ ಹಾನಿ ಅನುಭವಿಸಿದ ಬಗ್ಗೆ ಬೇಸರವಿದೆ.


ಡಾ ಆರ್ ಜಿ ಗೊಲ್ಲರ್
[email protected]

error: Content is protected !!