ಹರಪನಹಳ್ಳಿ, ಸೆ.3- ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯ ಶಿಕ್ಷಕ ಹಾಗೂ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಬಸವರಾಜ ಸಂಗಪ್ಪನವರ್ಗೆ ಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ಬಹುಮಾನ ನೀಡಿ ಸನ್ಮಾನಿಸಿ, ಗೌರವಿಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಲಾಕ್ಡೌನ್ ಸಮಯದಲ್ಲಿ ಶಿಕ್ಷಕರಿಗೆ `ಸರ್ಕಾರಿ ಶಾಲೆಗಳು ಹಾಗೂ ಶಾಲಾ ಮಕ್ಕಳ ಗುಣಾತ್ಮಕ ಶಿಕ್ಷಣದ ಸಬಲೀಕರಣಕ್ಕಾಗಿ ಶಿಕ್ಷಕರು, ಪಾಲಕರು ಹಾಗೂ ಇಲಾಖೆ ಕೈಗೊಳ್ಳಬಹುದಾದ ಮಾರ್ಗೋಪಾಯಗಳು’ ಎಂಬ ವಿಷಯದ ಬಗ್ಗೆ ರಾಜ್ಯ ಮಟ್ಟದಲ್ಲಿ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಟಾಪ್-10 ಶಿಕ್ಷಕರ ಪೈಕಿ ಹರಪನಹಳ್ಳಿಯ ಬಸವರಾಜ ಸಂಗಪ್ಪನವರ್ ಒಬ್ಬರಾಗಿದ್ದಾರೆ. ಹಾಗಾಗಿ ಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ಬಸವರಾಜ್ ಸಂಗಪ್ಪನವರ್ಗೆ ಬಹುಮಾನ ನೀಡಿ ಗೌರವಿಸಿ, ಸನ್ಮಾನಿಸಿದ್ದಾರೆ.