ದಾವಣಗೆರೆ,ಮಾ.15- ನಗರದ ಹೊರ ವಲಯದ ತೋಳಹುಣಸೆ ಯಲ್ಲಿರುವ ಬಾಪೂಜಿ ಎಸ್.ಪಿ.ಎಸ್.ಎಸ್.ಪಿ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ಇಲ್ಲಿನ ಎಸ್. ಎಸ್. ಗಣೇಶ್ ಸಭಾಂಗಣದಲ್ಲಿ, ಭಾರತದ ಖ್ಯಾತ ಸಿರಿಧಾನ್ಯ ವಿಜ್ಞಾನಿ, ಪದ್ಮಶ್ರೀ ಪುರಷ್ಕೃತ ಡಾ.ಖಾದರ ವಲಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಖಾದರ್ ವಲಿ, ಸಿರಿಧಾನ್ಯಗಳ ಬಳಕೆಯ ಮಹತ್ವವನ್ನು ಸವಿಸ್ತಾರವಾಗಿ ವಿವರಿಸಿದರು. ರಾಗಿ, ಜೋಳ, ನವಣಿ, ಸಾವಿ ಮುಂತಾದ ಸಿರಿಧಾನ್ಯಗಳಲ್ಲಿರುವ ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್ ಮುಂತಾದ ಪೋಷಕಾಂಶಗಳನ್ನು ತಿಳಿಸಿ, ಇವುಗಳನ್ನು ಬಳಕೆ ಮಾಡಿ ವೈದ್ಯರಿಂದ ದೂರ ಇರಿ ಎಂಬ ಕಿವಿಮಾತನ್ನು ಹೇಳಿದರು.
ಪಿಜ್ಜಾ, ಬರ್ಗರ್ ಮುಂತಾದ ಜಂಕ್ ಫುಡ್‌ಗಳು ದೈಹಿಕ ಮತ್ತು ಮಾನಸಿಕ ಅಸಮತೋಲನಕ್ಕೆ ಕಾರಣವಾಗುತ್ತವೆ. ಬಾಯಿ ರುಚಿಗೆ ಸೇವಿಸಬಾರದ್ದೆಲ್ಲವನ್ನು ತಿಂದು ನಾನಾ ನಮೂನೆಯ ಕಾಯಿಲೆಗೆ ತುತ್ತಾಗಬೇಕಾಗುತ್ತದೆ. ಹಾಲಿಗಿಂತಲೂ ಸಿರಿಧಾನ್ಯಗಳಲ್ಲಿರುವ ಹಾಲು ಹೆಚ್ಚು ಸೂಕ್ತ. ಸಿರಿಧಾನ್ಯಗಳ ಆಹಾರವೇ ನಮ್ಮ ಆರೋಗ್ಯ ಎಂದು ವಿವರಿಸಿದರು. ಆದಷ್ಟು ಸಾತ್ವಿಕ ಆಹಾರವನ್ನು ರೂಢಿಸಿ ಕೊಳ್ಳಿ, ಪ್ರಾತಃ ಕಾಲದಲ್ಲಿ ಪ್ರಾಣಾ ಯಾಮ ಮುಂತಾದ ಯೋಗಾಸನ ಗಳನ್ನು ಮಾಡಿ, ರೋಗಗಳಿಂದ ಮುಕ್ತಿ ಪಡೆಯಿರಿ ಎಂದು ಹೇಳಿದರು.
ಕಾಲೇಜಿನ ಮುಖ್ಯಸ್ಥ ಮಂಜುನಾಥ ರಂಗರಾಜು ಅವರು ಡಾ. ಖಾದರ್ ವಲಿ ಅವರನ್ನು ಸನ್ಮಾನಿಸಿ, ಅವರ ವ್ಯಕ್ತಿತ್ವ ಮತ್ತು ಸಾಮಾಜಿಕ ಸೇವೆಯ ಕಳಕಳಿಯ ಬಗ್ಗೆ ತಿಳಿಸಿದರು.
ಶಾಲೆಯ ಶಿಕ್ಷಕಿ ಯುವರಾಣಿ ನಿರೂಪಿಸಿದರು.