ಇಪಿಎಸ್‌-95 ನೌಕರರಿಂದ ಹೆಚ್ಚುವರಿ ಪಿಂಚಣಿಗಾಗಿ ರಸ್ತೆ ತಡೆ ಚಳುವಳಿ

ದಾವಣಗೆರೆ, ಮಾ.15 – ಹೆಚ್ಚುವರಿ ಪಿಂಚಣಿ ಹಾಗೂ ಇತರೆ ಸೌಲಭ್ಯ ಒದಗಿಸುವಂತೆ ನಿವೃತ್ತ ಪಿಂಚಣಿ ನೌಕರರು ರಾಷ್ಟ್ರೀಯ ಸಂಘರ್ಷ ಸಮಿತಿ ಇಪಿಎಸ್-95 ಸಂಘಟನೆಯ ನೇತೃತ್ವದಲ್ಲಿ ಬುಧವಾರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.

ಈ ವೇಳೆ ಇಪಿಎಸ್ ರಾಷ್ಟ್ರೀಯ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೆ.ಎಂ. ಮರುಳಸಿದ್ಧಯ್ಯ ಮಾತ ನಾಡಿ, ಮೂವತ್ತು ವರ್ಷಗಳಿಂದ ಕೆಲಸ ಮಾಡಿದ ಇಪಿಎಸ್-95 ನಿವೃತ್ತ ನೌಕರರಿಗೆ ಹೆಚ್ಚುವರಿ ಪಿಂಚಣಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ಮಾಡಿ, ನಾಲ್ಕು ತಿ೦ಗಳು ಗಡುವು ನೀಡಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. 30 ರಿಂದ 35 ವರ್ಷ ಗಳ ಕಾಲ ಸೇವೆ ಸಲ್ಲಿಸಿದ ನೌಕರರಿಗೆ ಮಾಸಿಕ 2600 ರೂ. ಪಿಂಚಣಿ ನೀಡುತ್ತಿರುವುದನ್ನು ಖಂಡಿಸಿದರು.

ರಾಷ್ಟ್ರೀಯ ಸಂಘರ್ಷ ಸಮಿತಿ ಬೇಡಿಕೆ ಈಡೇರಿಸಲು ರಾಷ್ಟ್ರದಾದ್ಯಂತ ಹೋರಾಟಕ್ಕೆ ಕರೆ ನೀಡಿದ್ದು, ಬೇಡಿಕೆಯನ್ನು ಸರ್ಕಾರ ಮನಗಂಡು ಮಾಸಿಕ ಕನಿಷ್ಠ 7500 ರೂ. ಪಿಂಚಣಿ ಹಾಗೂ ತುಟ್ಟಿ ಭತ್ಯೆ, ಆರೋಗ್ಯ ಸೇವೆ ಹಾಗೂ ವಿಮೆ, ಬಿಪಿಎಲ್ ಕಾರ್ಡ್, ಆಯುಷ್ಮಾನ್ ಕಾರ್ಡ್ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಭದ್ರಾ ಸಕ್ಕರೆ ಕಾರ್ಖಾನೆ ನಿವೃತ್ತ ನೌಕರ ಮಂಜುನಾಥ್ ಮಾತನಾಡಿ, ಯಾವುದೇ ಕುಟುಂಬದಲ್ಲಿ ಗಂಡ ಹಾಗೂ ಹೆಂಡತಿ ನೆಮ್ಮದಿಯಾಗಿ ಜೀವನ ಸಾಗಿಸಲು ಮಾಸಿಕ ಕನಿಷ್ಠ 10 ಸಾವಿರ ರೂ. ಆದಾಯವಿರಬೇಕು. ಆದರೆ, ಇಪಿಎಸ್ ನೌಕರರಿಗೆ ನೀಡುತ್ತಿರುವ ಪಿಂಚಣಿ ಯಾವುದಕ್ಕೂ ಸಾಲುವುದಿಲ್ಲ. ನನಗೆ 1100 ರೂ.ಪಿಂಚಣಿ ಬರುತಿದ್ದು ಇದರಿಂದ ಜೀವನ ನಡೆಸುವುದು ಸಾದ್ಯವೇ? ಎಂದು ಪ್ರಶ್ನಿಸಿದ ಅವರು, ಸರ್ಕಾರ ಪಿಂಚಣಿ ಹೆಚ್ಚಿಸುವ ಜೊತೆಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರ ಮಲ್ಲಿಕಾರ್ಜುನ್ ತಂಗಡಗಿ, ಎನ್. ಬಸವರಾಜ್‌ ಸೇರಿದಂತೆ ಮತ್ತಿತರರಿದ್ದರು.