ಸಿರಿಧಾನ್ಯ ಉತ್ಪಾದನೆ: ಏಷ್ಯಾದಲ್ಲೇ ಭಾರತ ಮುಂಚೂಣಿ

ಸಿರಿಧಾನ್ಯ ಉತ್ಪಾದನೆ: ಏಷ್ಯಾದಲ್ಲೇ ಭಾರತ ಮುಂಚೂಣಿ

ರೇಡಿಯೋ ಕಿಸಾನ್ ದಿವಸ್ ಹಾಗೂ ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷಾಚರಣೆಯಲ್ಲಿ ದೇವರಾಜ್

ಹಸಿವು ಪ್ರಪಂಚದ ಆಗು ಹೋಗುಗಳನ್ನು ನಿರ್ಧರಿಸುತ್ತದೆ. 21ನೇ ಶತಮಾನದಲ್ಲೂ ಸಹ ಹಸಿವು ತಣಿಸಲು ಪರದಾಡುತ್ತಿದ್ದು, ಹಸಿವು ತಣಿಸಲು ಕೃಷಿಗೆ ಮೋರೆ ಹೋಗಿದ್ದೇವೆ. ಮಾನವನ ತಿರುಗಾಟ ಆರಂಭವಾಗಿದ್ದೆ ಆಹಾರ ಹುಡುಕಾಟದಿಂದ, ವರ್ತಮಾನ ದಲ್ಲೂ ಆಹಾರಕ್ಕಾಗಿ ಪರದಾಡುತ್ತಿ ರುವುದು ದುರಾದೃಷ್ಟಕರವಾದ ಸಂಗತಿ.  

-ಡಾ.ಟಿ.ಎನ್ ದೇವರಾಜ್  

ದಾವಣಗೆರೆ, ಮಾ.15- ಸಿರಿಧಾನ್ಯದ ಕುರಿತು ಇಡೀ ವಿಶ್ವವೇ ಬೆರಗುಗಣ್ಣಿನಿಂದ ಮಾತಾಡುತ್ತಿದೆ. ಭಾರತದಲ್ಲಿ ಸುಲಭವಾಗಿ ಸಿರಿಧಾನ್ಯ ಬೆಳೆಯುತ್ತಿರುವು ದು ವರದಾನವಾಗಿದ್ದು, ಬೆಳೆದ ಧಾನ್ಯವನ್ನು ಸಂಸ್ಕರಣೆ ಮಾಡಿ ಮೌಲ್ಯವರ್ಧನೆ ಮಾಡಿಕೊಳ್ಳಬೇಕು ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರ (ಐಸಿಎಆರ್) ಮುಖ್ಯಸ್ಥ ಡಾ.ಟಿ.ಎನ್ ದೇವರಾಜ್ ಹೇಳಿದರು.

ಬುಧವಾರ ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರ (ಐಸಿಎಆರ್)ದ ಸಭಾಂಗಣದಲ್ಲಿ ಪ್ರಸಾರ ಭಾರತಿ ಮತ್ತು ಆಕಾಶವಾಣಿ ಚಿತ್ರದುರ್ಗ ಹಾಗೂ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರೇಡಿಯೋ ಕಿಸಾನ್ ದಿವಸ್ ಹಾಗೂ ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷಾಚರಣೆ- 2023 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ವಿಶ್ವಸಂಸ್ಥೆ ಘೋಷಣೆ ಮಾಡಿದೆ. ಸಿರಿಧಾನ್ಯ ಬೆಳೆಯುವಲ್ಲಿ ಭಾರತ ಮುಂಚೂಣಿಯಲ್ಲಿದೆ. ವರ್ಷಕ್ಕೆ 17 ಮಿಲಿಯನ್ ಟನ್ ಸಿರಿಧಾನ್ಯ ಬೆಳೆಯಲಾಗುತ್ತಿದೆ. ಏಷ್ಯಾದ ಸಿರಿಧಾನ್ಯದ ಒಟ್ಟು ಉತ್ಪಾದನೆಯಲ್ಲಿ ಶೇ.80 ರಷ್ಟನ್ನು ಭಾರತ ಉತ್ಪಾದನೆ ಮಾಡುತ್ತಿದ್ದು, ಇದರಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಆದರೆ, ಕರ್ನಾಟಕದಲ್ಲಿ ದಾವಣಗೆರೆ ಜಿಲ್ಲೆಯೂ ಮುಂಚೂಣಿಯಲ್ಲಿದೆ ಎಂದು ಹೇಳಲಾಗದಿದ್ದರೂ, ಅದನ್ನ ಬಿಟ್ಟು ಸಿರಿಧಾನ್ಯ ಕುರಿತು ಯೋಚನೆ ಮಾಡುವುದು ಸಮಂಜಸವಲ್ಲ ಎಂದರು.

ಜಿಲ್ಲೆಯು ಸಿರಿಧಾನ್ಯ ಬೆಳೆಯಲು ಯೋಗ್ಯವಾದ ವಾತಾವರಣ ಹೊಂದಿದೆ, ಏಕೆಂದರೆ ಶೇ 70 ರಷ್ಟು ಒಣ ಭೂಮಿ ಹೊಂದಿದ್ದು, ಒಣ ಭೂಮಿಯಲ್ಲಿ ಸಿರಿಧಾನ್ಯ ಹೆಚ್ಚಾಗಿ ಬೆಳೆಯಬಹುದು. ಸಿರಿಧಾನ್ಯ ಬೆಳೆಯುವ ಹಳೆ ವೈಭೋಗವನ್ನು ಮತ್ತೆ ಮರುಕಳಿಸುವಂತೆ ಮಾಡಬೇಕಾದ ಅನಿವಾರ್ಯವಿದೆ. ಕೊರೊನೋತ್ತರ ಕಾಲದಲ್ಲಿ ಆರೋಗ್ಯಕ್ಕೆ ಒತ್ತು ನೀಡಬೇಕೆಂಬ ಅರಿವು ಮೂಡಿದೆ. ಪ್ರಪಂಚದ 131 ರಾಷ್ಟ್ರಗಳು ಸಿರಿಧಾನ್ಯ ಬೆಳೆಯುತ್ತಿದ್ದು, ಒಟ್ಟಾರೆ 800 ಕೋಟಿ ಜನರಲ್ಲಿ 60 ಕೋಟಿ ಜನ ಸಿರಿಧಾನ್ಯ ಬಳಸುತ್ತಿದ್ದಾರೆ. ಆರೋಗ್ಯ, ಆನಂದ, ನೆಮ್ಮದಿಗೆ ಸಿರಿಧಾನ್ಯ ಕಾರಣವಾಗಿದೆ ಎಂದರು.

ದಾವಣಗೆರೆ ಬೇಕರಿ ಮತ್ತು ಕ್ಲಿನಿಕ್‌ಗಳ ನಗರವಾಗಿದೆ. ನಗರದ ಪ್ರತಿ ಮನೆಯ ಡಯಾಬಿ ಟೀಸ್ ರೋಗಿಗಳಿದ್ದಾರೆ, ಈ ರೋಗಗಳಿಂದ ಮುಕ್ತಿ ಪಡೆಯಲು ಸಿರಿಧಾನ್ಯ ಮೂಲ ಮದ್ದಾಗಿದೆ. ಚುನಾವಣೆ ಹತ್ತಿರವಿದ್ದು, ಹೋಬಳಿಗೊಂದರಂತೆ ಸಿರಿಧಾನ್ಯ ಸಂಸ್ಕರಣಾ ಘಟಕ ಸ್ಥಾಪಿಸಬೇಕೆಂದು ರೈತರು ಒತ್ತಾಯಿಸಬೇಕೆಂದರು ಎಂದರು.

ಪ್ರಾಸ್ತಾವಿಕವಾಗಿ ಚಿತ್ರದುರ್ಗ ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಬಿ.ಸಿದ್ದಣ್ಣ ಮಾತನಾಡಿ, ರೈತರಿಗಾಗಿ ಆಕಾಶವಾಣಿಯಿಂದ ಕಿಸಾನ್ ದಿವಸ್ ಎಂಬ ಕಾರ್ಯಕ್ರಮ ರೂಪಿಸಲಾಗಿದೆ. ರೇಡಿಯೋ ಮತ್ತು ಕೃಷಿಗೆ ಅವಿನಾಭಾವ ಸಂಬಂಧವಿದೆ. ಆಕಾಶವಾಣಿ ಏಕಾಗ್ರತೆ ಹಾಗೂ ಭಾಷಾ ಜ್ಞಾನದ ಕಡೆಗೆ ಸೆಳೆಯುವುದಲ್ಲದೇ, ವಿವಿಧ ಬೆಳೆಗಳ ತಳಿ ಹಾಗೂ ರೋಗಗಳ ಕುರಿತು ಮಾಹಿತಿ ಒದಗಿಸುತ್ತದೆ ಎಂದರು.

ಜಿಲ್ಲಾ ಕೃಷಿ ಉಪ ನಿರ್ದೇಶಕ ತಿಪ್ಪೇಸ್ವಾಮಿ ಆರ್ ಮಾತನಾಡಿ, ಸಿರಿಧಾನ್ಯ ಬೆಳೆಯುವಂತ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೂ. 2000ಗಳನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಆರೋಗ್ಯ ಸಮಸ್ಯೆಗೆ ಸಿರಿಧಾನ್ಯವು ತನ್ನದೇ ಆದ ಪ್ರಾಮುಖ್ಯತೆ ನೀಡಿದೆ ಎಂದರು.

ಚಿತ್ರದುರ್ಗ ಆಕಾಶವಾಣಿ ಮುಖ್ಯಸ್ಥ ಎಂ.ರೇಣುಕಾ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಬಿ.ಆರ್.ಗಂಗಾಧರ್ ವರ್ಮ, ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ (ಬೇಸಾಯ ಶಾಸ್ತ್ರ) ಡಾ.ಬಿ.ಓ.ಮಲ್ಲಿಕಾರ್ಜುನ್, ಕತ್ತಲಗೆರೆ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ವಿಸ್ತರಣಾ ಮುಂದಾಳು ಡಾ.ಎ.ಎಂ.ಮಾರುತೇಶ್‌ ಸೇರಿದಂತೆ ರೈತರು ಭಾಗವಹಿಸಿದ್ದರು.