ಜಗಳೂರು, ಮಾ.17- ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ನಾಳೆ ದಿನಾಂಕ 18ರ ಶನಿವಾರ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರ ದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾ ಡಿದ ಅವರು, ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ನಡೆಯುವ ಸಮಾರಂಭವನ್ನು ಅದ್ಧೂರಿಯಾಗಿ ಆಯೋಜಿಸಲಾಗುವುದು.
ಕರ್ನಾಟಕ ನೀರಾವರಿ ನಿಗಮದಿಂದ ದಶಕಗಳ ಕನಸಿನ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ರೂ. 1260 ಕೋಟಿ ರೂ. ವೆಚ್ಚದಲ್ಲಿ ತಾಲ್ಲೂಕಿನಲ್ಲಿ 45,000 ಎಕರೆ ಭೂಮಿ ನೀರಾವರಿಗೊಳ್ಳಲಿದೆ ಎಂದು ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ರೂ. 482 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ತಾಲ್ಲೂಕಿನ ಸಂತೆಮುದ್ದಾಪುರ ಸೇರಿದಂತೆ 164 ಗ್ರಾಮಗಳಿಗೆ ತುಂಗಭದ್ರಾ ನೀರು ಪೂರೈಕೆ ಯೋಜನೆ, ಲೊಕೋಪಯೋಗಿ ಇಲಾಖೆಯ ರಸ್ತೆ ಅಗಲೀಕರಣ ಇತರೆ ಕಾಮಗಾರಿಗಳಿಗೆ ವಿವಿಧ ರೂ. 15.75 ಕೋಟಿ ವೆಚ್ಚದ, ನಿರ್ಮಿತಿ ಕೇಂದ್ರದಿಂದ ವಿಧಾನಸಭಾ ಕ್ಷೇತ್ರ ವ್ಯಾಪಿಯ ವಿವಿಧ ಹಳ್ಳಿಗಳಲ್ಲಿ ರೂ. 4.50 ಕೋಟಿ ವೆಚ್ಚದಲ್ಲಿ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗಳ ಹಾಗೂ ಆರ್‌ಡಿಪಿಆರ್ ಇಲಾಖೆಯ ರೂ. 11.25 ಕೋಟಿ ವೆಚ್ಚದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪಟ್ಟಣದಲ್ಲಿ ರೂ. 2.60 ಕೋಟಿ ವೆಚ್ಚದ ವಾಲ್ಮೀಕಿ ಭವನ ಕಟ್ಟಡ ಹಾಗೂ ಆರ್‌ಡಿಪಿಆರ್ ಇಲಾಖೆಯಡಿ ಪೂರ್ಣಗೊಂಡ ವಿವಿಧ ಕಾಮಗಾರಿಗಳ ರೂ. 14.88 ಕೋಟಿ ವೆಚ್ಚದ ಮುಕ್ತಾಯ ಹಂತದ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್, ಜಿ.ಪಂ. ಮಾಜಿ ಸದಸ್ಯ ಸೊಕ್ಕೆ ನಾಗರಾಜ್, ಬಸವರಾಜ್, ಬಿಸ್ತುವಳ್ಳಿ ಬಾಬು, ಕಟ್ಟಿಗೆಹಳ್ಳಿ ಮಂಜಣ್ಣ, ಸೂರ್ಯಕಿರಣ್, ಧರ್ಮಾನಾಯ್ಕ, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.