ಹರಪನಹಳ್ಳಿ, ಮಾ.17- ಕಾಂಗ್ರೆಸ್ಸಿನವರು ಬಿಜೆಪಿ ಅಭಿವೃದ್ದಿಯನ್ನು ನೋಡಿ ಭಯ ಭೀತರಾಗಿ ಸುಖಾಸುಮ್ಮನೇ ನಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಐಸಿಯುನಲ್ಲಿದ್ದು, ದುರ್ಬಿನ್ ಹಾಕಿ ಹುಡುಕಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಇಂದು ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನ ಗಳಿಸುವ ಮೂಲಕ ಅಭೂತಪೂರ್ವ ಗೆಲುವು ಸಾಧಿಸಲಿದೆ. ಹರಪನಹಳ್ಳಿ ತಾಲ್ಲೂಕಿನಲ್ಲಿ ಶಾಸಕ ಕರುಣಾಕರ ರೆಡ್ಡಿಯವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಇಂದಿನ ವಿಜಯಸಂಕಲ್ಪ ಯಾತ್ರೆ ನೋಡಿದರೆ ಮತ್ತೊಮ್ಮೆ ಅಧಿಕ ಮತಗಳ ಮೂಲಕ ಬಿಜೆಪಿ ಗೆಲುವು ಸಾಧಿಸಲಿದ್ದು, 1ನೇ ಸ್ಥಾನದಲ್ಲಿ ಹರಪನಹಳ್ಳಿಯಾಗಲಿದೆ ಎಂದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸಿಎಂ ಆಗಲು ಹಗಲು ಕನಸು ಕಾಣುತ್ತಿದ್ದು, ಇವರಿಬ್ಬರನ್ನು ಸಿಎಂ ಆಗಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುವುದಿಲ್ಲ ಎಂದು ಹೇಳಿದರು.
ಸಿದ್ದು ಹಾಗೂ ಡಿಕೆಶಿಯವರನ್ನು ಖರ್ಗೆಯವರು ಸಿಎಂ ಆಗಲು ಯಾಕೆ ಬಿಡುವುದಿಲ್ಲ ? ಎಂದರೆ ಖರ್ಗೆಯವರು ಸೋಲಲು ಸಿದ್ದು ಕಾರಣ ಎಂದು ಅವರಿಗೆ ಗೊತ್ತಿದೆ ಎಂದ ಅವರು, ಕಾಂಗ್ರೆಸ್‍ನವರು ಪ್ಯಾಂಟ್, ಷರ್ಟ್ ಹೊಲಿಸಿ ಸಿಎಂ ಕುರ್ಚಿಗಾಗಿ ತಿರುಕನ ಕನಸು ಕಾಣುತ್ತಿದ್ದು, ಅವರಿಗೆ ಹುಚ್ಚು ಹಿಡಿದಿದೆ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನ ಭಾರತೀಯ ಜನತಾ ಪಕ್ಷ ಗೆಲ್ಲಲ್ಲಿದ್ದು, ಕರ್ನಾಟಕವನ್ನು ಕಲ್ಯಾಣ ಮಾಡುವ ಗುರಿಯನ್ನು ಮೋದಿ ಹಾಗೂ ಬೊಮ್ಮಾಯಿಯವರು ಹೊಂದಿದ್ದಾರೆ ಎಂದು ತಿಳಿಸಿದರು.
ಅಭಿವೃದ್ಧಿ ಒಂದೇ ಬಿಜೆಪಿಯ ಗುರಿಯಾಗಿದ್ದು, ಹರಪನಹಳ್ಳಿಯಲ್ಲಿ ಮತ್ತೊಮ್ಮೆ ಬಿಜೆಪಿಗೆ ಅವಕಾಶ ಮಾಡಿಕೊಟ್ಟರೆ ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುವುದಾಗಿ ಹೇಳಿದರು.
ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಕಾಂಗ್ರೆಸ್ ಪಕ್ಷದ ಬಸ್ ಎಲ್ಲಿ ಪಂಚರ್ ಆಗಿದೆಯೋ ಗೊತ್ತಿಲ್ಲ. ಆದರೆ, ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಕಾಂಗ್ರೆಸ್ಸಿನವರ ಬಾಯಲ್ಲಿ ಭೂತದ ಬಯಲ್ಲಿ ಭಗವದ್ಗೀತೆ ಬರುತ್ತಿದೆ ಎಂದು ಲೇವಡಿ ಮಾಡಿದರು.
ರಾಹುಲ್ ಕಾಲಿಟ್ಟ ಕಡೆ ಕಾಂಗ್ರೆಸ್ ಉಳಿಯುವುದಿಲ್ಲ, ರಾಜ್ಯದಲ್ಲಿ ಡಿಕೆಶಿ, ಸಿದ್ದರಾಮಯ್ಯನವರು ಸಿಎಂ ಕುರ್ಚಿಗಾಗಿ ಪೈಪೋಟಿ ಮಾಡುತ್ತಿದ್ದಾರೆ. ಆದರೆ, ನಮ್ಮ ಪಕ್ಷದ ಬಸವರಾಜ ಬೊಮ್ಮಾಯಿ ಅವರು ಕುರ್ಚಿ ಗಟ್ಟಿ ಮಾಡಿಕೊಂಡಿದ್ದು, ಸಿಎಂ ಕುರ್ಚಿ ಖಾಲಿ ಇಲ್ಲ ಎಂದರು.
ಶಾಸಕ ಜಿ.ಕರುಣಾಕರ ರೆಡ್ಡಿ ಮಾತನಾಡಿ, ತುಂಗಭದ್ರಾ ನದಿ ನೀರನ್ನು ಕೆರೆಗಳಿಗೆ ತುಂಬಿಸುವ ಕೆಲಸವನ್ನು ಮಾಡಿದ್ದೇನೆ. ತಿಂಗಳ ಕೊನೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ದಿನಾಂಕ ಕಾಯುತ್ತಿದ್ದು, ಉದ್ಘಾಟನೆಯನ್ನು ಅದ್ಧೂರಿಯಾಗಿ ಕೆರೆಗೆ ನೀರು ತುಂಬಿಸಲು ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದರುಗಳಾದ ಜಿ.ಎಂ.ಸಿದ್ದೇಶ್ವರ, ವೈ.ದೇವೆಂದ್ರಪ್ಪ, ಪುರಸಭೆ ಅಧ್ಯಕ್ಷ ಹೆಚ್.ಎಂ.ಅಶೋಕ, ಉಪಾಧ್ಯಕ್ಷ ನಿಟ್ಟೂರು ಭೀಮವ್ವ, ರಾಜ್ಯ ಬಿಜೆಪಿ ಸಹಕಾರ ಪ್ರಕೋಷ್ಠಕ ಸಹ ಸಂಚಾಲಕ ಜಿ.ನಂಜನಗೌಡ, ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್, ತಾಲ್ಲೂಕು ವಿಜಯ ಸಂಕಲ್ಪಯಾತ್ರೆ ಸಂಚಾಲಕ ಪೂಜಾರ ಚಂದ್ರಶೇಖರ, ಸಿದ್ದೇಶ್ ಯಾದವ, ಎಂ.ಪಿ.ನಾಯ್ಕ, ಕೋಡಿಹಳ್ಳಿ ಭೀಮಪ್ಪ, ಪೂಜಪ್ಪ, ಪಿ.ಮಹಾಬಲೇಶ್ವರಗೌಡ, ಅರುಂಡಿ ನಾಗರಾಜ್, ಮುತ್ತಿಗಿ ವಾಗೀಶ್, ಬಾಗಳಿ ಕೊಟ್ರೇಶಪ್ಪ, ಲೋಕೇಶ್, ಕಣಿವಿಹಳ್ಳಿ ಮಂಜುನಾಥ್, ವಿಷ್ಣುರೆಡ್ಡಿ, ರಾಘವೇಂದ್ರಶೆಟ್ಟಿ, ಪ್ರಭಾವತಿ ಅಶೋಕ್, ಕೆಂಗಳ್ಳಿ ಪ್ರಕಾಶ್, ವಿನಾಯಕ ಭಜಂತ್ರಿ, ಮಂಜ್ಯಾನಾಯ್ಕ, ಬಿ.ವೈ.ವೆಂಕಟೇಶ್‍ನಾಯ್ಕ, ದಾದಾಪುರ ಶಿವಾನಂದ ಮಲ್ಲಿಕಾರ್ಜುನ ಮೈದೂರು, ಕಂಚಿಕೇರಿ ವೀರಣ್ಣ, ಶಂಕರಪ್ಪ, ತಲವಾಗಲು ನಂದೀಶ್, ಸುರೇಶ್, ಜೆ.ಓಂಕಾರಗೌಡ, ವಿಜಯಪ್ಪ, ರೇಖಾ ಸೇರಿದಂತೆ ಇತರರು ಇದ್ದರು.