ಹಬ್ಬಾಚರಣೆಗಳಲ್ಲಿ ಭೋಗಕ್ಕಿಂತ ಭಕ್ತಿಗೆ ಪ್ರಾಧಾನ್ಯತೆ: ಹೆಚ್‌ಬಿಎಂ

ಹಬ್ಬಾಚರಣೆಗಳಲ್ಲಿ ಭೋಗಕ್ಕಿಂತ ಭಕ್ತಿಗೆ ಪ್ರಾಧಾನ್ಯತೆ: ಹೆಚ್‌ಬಿಎಂ

ದಾವಣಗೆರೆ, ಮಾ.15- ಭೋಗ ಪ್ರಧಾನವಾದ ಹಬ್ಬಗಳಿಗಿಂತ ಭಕ್ತಿ ಪ್ರಧಾನವಾದ ಆಚರಣೆಗಳಿಗೆ ಮಹತ್ವ ಕೊಡುವ ಪರಂಪರೆ ನಮ್ಮ ಭಾರತೀಯ ಸಂಸ್ಕೃತಿಯಾಗಿದ್ದು, ಮಹಾಶಿವರಾತ್ರಿಯೂ ಅಂತಹ ಒಂದು ಭಕ್ತಿ ಪ್ರಧಾನ ಆಚರಣೆಯಾಗಿದೆ ಎಂದು ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ ಅಭಿಪ್ರಾಯಪಟ್ಟರು.

ಅವರು ಡಿಸಿಎಂ ಟೌನ್‌ಶಿಪ್ ನಾಗರಿಕರ ಸಂಘದ ವತಿಯಿಂದ ಅಲ್ಲಿನ ಶ್ರೀ ರಾಜನಹಳ್ಳಿ ಹನುಮಂತಪ್ಪನವರ ಉದ್ಯಾನವನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ `ಭಕ್ತಿ ಸಿಂಚನ’ ಕಾರ್ಯಕ್ರಮದ ಪ್ರಧಾನ ಉಪನ್ಯಾಸ ನೀಡುತ್ತಾ ನಮ್ಮ ಹಬ್ಬಾಚರಣೆಗಳು ಪ್ರಾಚೀನವಾದ ವೇದಾಗಮಗಳಲ್ಲಿ ಉಲ್ಲೇಖವಾಗುತ್ತಾ ಸ್ವಾಧಾರವಾಗಿದ್ದು, ವೈಜ್ಞಾನಿಕ ದೃಷ್ಟಿಯಿಂದಲೂ ಸಮರ್ಥನೀಯವಾಗಿರುವುದು ಸೋಜಿಗ ವೆನಿಸುತ್ತದೆ. 

ಉಪವಾಸ ಎನ್ನುವಲ್ಲಿ ನಿರಶನ, ನಿರಾಹಾರಕ್ಕಿಂತ ಲೌಕಿಕದಿಂದ ಆಚೆಗಿನ ಪಾರಮಾರ್ಥಿಕದ ತತ್ವ ಚಿಂತನೆಯಲ್ಲಿ ತೊಡಗುವುದು ಜಾಗರಣೆ ಎಂಬುದು ಸಹ ನಿತ್ಯ ವಿಧಿಯಲ್ಲಿ ಮೈಮರೆಯುವಿಕೆ ಬಿಟ್ಟು ಸತ್ಯ ನಿಧಿಯ ಶೋಧನೆಗಾಗಿ ಜಾಗೃತವಾಗಿರುವುದು ಎಂಬರ್ಥ ಎಂಬುದನ್ನು ಸ್ವಾರಸ್ಯಕರ ಉದಾಹರಣೆಯೊಂದಿಗೆ ಮಂಜುನಾಥ್ ಸಾಕ್ಷೀಕರಿಸಿದರು.

ಸೃಷ್ಟಿ, ಸ್ಥಿತಿ, ಲಯಕಾರಕವಾದ ತ್ರಿಮೂರ್ತಿ ತತ್ವವು ನಮ್ಮ ನಿತ್ಯದ ದೈಹಿಕ ಮತ್ತು ಮಾನಸಿಕ ನಿರಂತರ ಪ್ರಕ್ರಿಯೆಗಳಲ್ಲಿ ಹೀಗಿದೆ ಎಂಬುದನ್ನು ಹೇಳುತ್ತಾ ಮನಸ್ಸಿನಲ್ಲಿ ಮೂಡುವ ಆಲೋಚನೆಗಳು ಸೃಷ್ಟಿ ಎಂಬುವುದಾದರೆ ಅಂತಹ ಆಲೋಚನೆಗಳಲ್ಲಿನ ಉತ್ತಮ ಅಂಶಗಳನ್ನು ಉಳಿಸಿಕೊಳ್ಳುವುದು ಸ್ಥಿತಿಯಾಗಿಯೂ, ಜೊತೆಗೆ ಬರುವ ಕೆಟ್ಟ ಆಲೋಚನೆಗಳನ್ನು ತೆಗೆದು ಹಾಕುವುದು ಲಯ ಪ್ರಕ್ರಿಯೆಯೂ ಆಗುತ್ತದೆ ಎಂದರು. ಇಂತಹ ಲಯ ಪ್ರಕ್ರಿಯೆಯು ಇಲ್ಲದಿದ್ದರೆ ನಮ್ಮ ಬದುಕು ಮೌಲ್ಯಯುತವಾಗುವುದಿಲ್ಲ. ಇದಕ್ಕಾಗಿ ಲಯಕಾರಕನಾದ ಶಿವ ಮಹಾದೇವನ ಅರ್ಥಾನು ಸಂಧಾನ ಶಿವರಾತ್ರಿ ಆಚರಣೆಯಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಮಾಜಿ ಮಹಾಪೌರ ಎಸ್.ಟಿ.ವೀರೇಶ್ ಮಾತನಾಡಿ, ಸಂಘಟನಾತ್ಮಕ ಪಾಲ್ಗೊಳ್ಳುವಿಕೆಯಿಂದ ಸವಲತ್ತುಗಳ ಪಡೆಯುವಿಕೆ ಸಾಧ್ಯ ಎಂದರು.

ಟೌನ್‌ಶಿಪ್‌ನ ನಾಗರಿಕರ ಸಂಘದ ಅಧ್ಯಕ್ಷ ಕೆ.ಹಾಲಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಕೆ.ಹೆಚ್.ಮಂಜುನಾಥ ರೆಡ್ಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗೌರವಾಧ್ಯಕ್ಷ ಟಿ. ಮೂಡಲಗಿರಿಯಪ್ಪ, ಉಪಾಧ್ಯಕ್ಷೆ ಶ್ರೀಮತಿ ಶಾರದಮ್ಮ ಶಿವನಪ್ಪ, ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಡಿ.ಹೆಚ್.ಚನ್ನಬಸಪ್ಪ ಮುಂತಾದವರು ಉಪಸ್ಥಿತರಿದ್ದರು. 

ಕೆ.ಹೆಚ್. ಬಸವರಾಜಪ್ಪ ನಿರೂಪಿಸಿದರು. ತನ್ಮಯಿ ಪ್ರಾರ್ಥಿಸಿದರು. ದ್ಯಾಮನ ಗೌಡರು ಸ್ವಾಗತಿಸಿದರು. 

ದಾನಿಗಳನ್ನು ಹಾಗೂ ನಾಗರಿಕರ ಸಂಘದ ಭೂತಪೂರ್ವ ಪದಾಧಿಕಾರಿಗಳನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಕಾರ್ಯಕ್ರಮದಲ್ಲಿ ನವೀನ್, ಗಣೇಶ್, ಶಿವನಪ್ಪ, ಕೊಟ್ರೇಶ್,  ಶಶಿಕಲಾ, ತಿರುಮಲೈ, ಗೋವಿಂದ ರೆಡ್ಡಿ, ನಾಗರಾಜ, ಶಾಂಬೂಜಿ, ಲಿಂಗರಾಜ್‌, ಅಕ್ಕಿ  ವೀರಭದ್ರಪ್ಪ,  ನಟರಾಜ್, ರಾದಿ, ಮಾರಣ್ಣ, ಮಲ್ಲಿಕಾರ್ಜುನ, ರಮೇಶ್, ಸುರೇಶ್, ಗುರುಮೂರ್ತಿ ಮುಂತಾದ ವರು ಭಾಗವಹಿಸಿದ್ದು, ವಿಜಯಕುಮಾರ್ ವಂದಿಸಿದರು.  

ಪೂಜಾ ವಿಧಿಯನ್ನು ಬಸವರಾಜ ನಿರ್ವಹಿಸಿದರು. ಗದಗ ಜಿಲ್ಲೆ ರೋಣದಿಂದ ಆಗಮಿಸಿದ್ದ ರಾಜಶೇಖರಯ್ಯ ಹಿರೇಮಠ ತಂಡದವರಿಂದ ಜಾನಪದ ವೈವಿಧ್ಯ ಕಾರ್ಯಕ್ರಮ ನೆರವೇರಿತು.