ಹರಪನಹಳ್ಳಿ, ಮಾ.13- ಯಾವುದೇ ವೃತ್ತಿ ಇರಲಿ ಅದು ಫ್ಯಾಷನ್ ಆಗಿರಬೇಕು. ಮಕ್ಕಳಿಗೆ ಆಸಕ್ತಿದಾಯಕವಾಗಿ ಉತ್ತಮ ಶಿಕ್ಷಣ ಕಲಿಸಬೇಕು ಎಂದು ವೃತ್ತ ನಿರೀಕ್ಷಕ ನಾಗರಾಜ ಕಮ್ಮಾರ ಹೇಳಿದರು.
ತಾಲ್ಲೂಕಿನ ಅನಂತನಹಳ್ಳಿ ಬಳಿ ಇರುವ ಸರ್ಕಾರಿ ಆದರ್ಶ ವಿದ್ಯಾಲಯ (ಆರ್ಎಂ ಎಸ್ಎ)ದಲ್ಲಿ ವಿಷಯವಾರು ಹಾಗೂ ಭಾಷಾ ಪ್ರಯೋಗಾಲಯಗಳ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಕಲಿಕೆಗೆ ಪಠ್ಯೇತರವಾಗಿ ಕ್ರಿಯಾತ್ಮಕ ಚುಟವಟಿಕೆಗಳು ಸಹಕಾರಿ ಯಾಗಲಿವೆ. ಇದಕ್ಕೆ ಆದರ್ಶ ಶಾಲೆಯ ಭಾಷಾವಾರು ಪ್ರಯೋಗಾಲಯ ಕೊಠಡಿ ಗಳು ಸಾಕ್ಷಿಯಾಗಿವೆ. ಇಂತಹ ಭಾಷಾ ವಾರು ಪ್ರಯೋಗಾಲಯ ಮಾಡುವುದು ಕಷ್ಟಕರವಾಗಿದ್ದು, ಜಿಲ್ಲೆಯಲ್ಲಿಯೇ ಇದೊಂದು ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಠ್ಯದ ಜೊತೆಗೆ ನೈತಿಕ ಶಿಕ್ಷಣವನ್ನು ಕಲಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇದಕ್ಕೆ ಪೋಷಕರ ಸಹಕಾರ ಅಗತ್ಯವಿದೆ. ಓದುವುದು, ಬರೆಯುವುದು, ಲೆಕ್ಕ ಬಿಡಿಸುವ ಕಲಿಕೆ ಬಹು ಮುಖ್ಯವಾಗಿದೆ ಎಂದ ಅವರು, ಗ್ರಾಮೀಣ ಭಾಗದಲ್ಲಿ ಇಂಗ್ಲಿಷ್ ಭಾಷೆ ಬರುವುದಿಲ್ಲ ಎನ್ನುವ ಕೀಳರಿಮೆ ಬಿಟ್ಟು ಕಲಿಯಲು ಪ್ರಯತ್ನಿಸಬೇಕು ಎಂದರು.
ಈ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಯಾರು ಹೆಚ್ಚು ಅಂಕ ಪಡೆಯುತ್ತಾರೋ ಅವರಿಗೆ ಆಶ್ಚರ್ಯಕರ ಕೊಡುಗೆ ನೀಡುವುದಾಗಿ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದೆ. ಈ ಬಾರಿ ಎಸ್‍ಎಸ್‍ಎಲ್‍ಸಿ ಉತ್ತಮ ಫಲಿತಾಂಶಕ್ಕೆ ಶಿಕ್ಷಕರ ಶ್ರಮ ಹಾಗೂ ಪೋಷಕರ ಸಹಕಾರ ಅಗತ್ಯವಿದೆ ಎಂದರು.
ಕನ್ನಡ, ಇಂಗ್ಲಿಷ್, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ಹಿಂದಿ ಭಾಷಾವಾರು ಪ್ರಯೋಗಾಲಯ ಕೊಠಡಿಗಳಲ್ಲಿ ಗೋಡೆ ಬರಹಗಳು ಆಕರ್ಷಣೀಯವಾಗಿದ್ದವು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಬಿಆರ್‍ಸಿ ಹೊನ್ನತ್ತೆಪ್ಪ, ಎಸ್‍ಡಿಎಂಸಿ ಅಧ್ಯಕ್ಷ ಶೀಲ್ಯಾನಾಯ್ಕ, ಪತ್ರಕರ್ತ ಪಿ.ಕರಿಬಸಪ್ಪ, ಮುಖ್ಯೋಪಾಧ್ಯಾಯ ಹೆಚ್.ಕೆ. ಚಂದ್ರಪ್ಪ, ಎಸ್‍ಡಿಎಂಸಿ ಸದಸ್ಯರಾದ ಕೆ.ಗೋಣೆಪ್ಪ, ಬಸವನಗೌಡ, ರಾಧಾ, ಶಿಕ್ಷಕರಾದ ದಾದಾ ಷಸಲಾಮ್, ರೇವಣಸಿದ್ದಪ್ಪ, ಪರ್ವಿನ್‌ಬಾನು, ಮಲ್ಲಮ್ಮ, ಪುಷ್ಪಾ, ಅನಿತಾ, ಕವಿತಾ, ಪ್ರಿಯಾಂಕ, ಸಂತೋಷ, ನಾಗರಾಜ, ಮೇಘನಾ, ನೂರ್ಜಾನ್, ಮಂಜುನಾಥ, ಹೇಮಂತರಾಜ, ಷಣ್ಮುಖ ಉಪಸ್ಥಿತರಿದ್ದರು.