ಹರಪನಹಳ್ಳಿ : ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಎಂ. ಪಿ. ಲತಾ ಮಲ್ಲಿಕಾರ್ಜುನ
ಹರಪನಹಳ್ಳಿ, ಮಾ. 9 – ಜನ್ಮ ನೀಡುವ ಶಕ್ತಿಯನ್ನು ಪ್ರಕೃತಿ ಮಹಿಳೆಯರಿಗೆ ನೀಡಿದೆ. ಮಹಿಳೆಯರು ಯಾವುದೇ ಸಂದರ್ಭ ಹಾಗೂ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಶಕ್ತಿಯನ್ನು ಹೊಂದಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.
ಪಟ್ಟಣದ ಹಡಗಲಿ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಎಂ.ಪಿ.ರವೀಂದ್ರ ಪ್ರತಿಷ್ಟಾನದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಮಹಿಳೆಯರಿಗೆ ಅಭಿವೃದ್ದಿ ಕಲಿಸಲಾಗುತ್ತಿತ್ತು ಆದರೆ ಈಗ ಮಹಿಳೆಯರಿಂದ ಅಭಿವೃದ್ದಿ ಹೊಂದುತ್ತಿದೆ.ಮಹಿಳೆಯರು ತಮಗೆ ನೀಡಿರುವ ರಾಜಕೀಯ ಅಧಿಕಾರವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಸಾಮರ್ಥ್ಯ ಗಳಿಸಿ ಸಮಾಜದಲ್ಲಿ ಸಮಾನತೆ ಸಾಧಿಸಬೇಕು. ಹೆಣ್ಣು ಮನಸ್ಸು ಮಾಡಿದರೆ ಮನೆ ನಂದಗೋಕುಲ ಮಾಡುತ್ತಾಳೆ. ಅದೇ ಹೆಣ್ಣಿನ ಮನಸ್ಸು ನೋಯಿಸಿದರೆ, ಅರಮನೆಯೇ ನೋವಿನ ಗೋಕುಲ. ಆದ್ದರಿಂದ ಹೆಣ್ಣಿನ ಮನಸ್ಸನ್ನು ನೋಯಿಸಿಬೇಡಿ ಎಂದರು.
ಹೆಣ್ಣು ಭೋಗದ ವಸ್ತುವಲ್ಲ, ಅಡುಗೆಯ ಯಂತ್ರವಲ್ಲ. ಪುರುಷ ಮತ್ತು ಮಹಿಳೆಯರಿಗೆ ಸಮಾನತೆಯಿದ್ದರೆ ಮಾತ್ರ ಪ್ರಪಂಚದ ಉಳಿವು. ಹುಟ್ಟಿನಿಂದ ಸಾವಿನವರೆಗೂ ಇತರರ ಸೇವೆಯಲ್ಲಿಯೇ ಲೀನವಾಗುವ ಹೆಣ್ಣು ಪರಾವಲಂಬಿಯಲ್ಲ ಇತರರಿಗೆ ಆಶ್ರಯ ಹಾಗೂ ಆಸರೆಯ ಬೆಳಕು ಎನ್ನುವುದನ್ನು ಸಾಬೀತು ಮಾಡಿದರೂ ಸಮಾನತೆಗಾಗಿ ಮಹಿಳೆ ಇನ್ನೂ ಹೋರಾಟ ಮಾಡುವಂತಿರುವುದು ವಿಷಾದದ ಸಂಗತಿ ಪುರುಷ ಮತ್ತು ಮಹಿಳೆ ಸಮಾನವಾಗಿ ಎರಡು ಎತ್ತಿನ ಬಂಡಿಯಂತೆ ಸಾಗಬೇಕಿದೆ. ಇಂದು ಅನೇಕ ರಂಗದಲ್ಲಿ ಮಹಿಳೆ ಸಾಧನೆ ಮಾಡಿದ್ದಾರೆ ಅವರು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಮಹಿಳೆಯರು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಹೋರಾಟದ ಮೂಲಕ ಮುಂದೆ ಬರಬೇಕು ಎಂದರು.
ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುಮತಿ ಜಯಪ್ಪ ಮಾತನಾಡಿ, ಹೆಣ್ಣು ಕುಟುಂಬ ಮತ್ತು ದೇಶದ ಬೆಳಕು. ಅವರೊಂದು ವಚನ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರು. ಪುರುಷ ಮತ್ತು ಮಹಿಳೆಯರಿಗೆ ಸಮಾನತೆಯಿದ್ದರೆ ಮಾತ್ರ ಪ್ರಪಂಚದ ಉಳಿವು. ಸರ್ಕಾರದ ಯೋಜನೆಗಳನ್ನು ಮಹಿಳೆಯರ ಹೆಸರಿನಲ್ಲಿ ನೀಡಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಮಹಿಳೆಯರು ಇದನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುತ್ತಾರೆ ಎಂಬುದಾಗಿದೆ. ಮಹಿಳಾ ದಿನಾಚರಣೆ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿನ ಮಹಿಳೆಯರ ಸಾಧನೆಯನ್ನು ಸಂಭ್ರಮಿಸುವ ದಿನವಾಗಿದೆ ಎಂದರು.
ಟಿ.ಎ.ಪಿ.ಸಿ.ಎಂ.ಎಸ್ ಮಾಜಿ ಅಧ್ಯಕ್ಷ ಪುಷ್ಪ ದಿವಾಕರ್, ತಾಲ್ಲೂಕು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಂಚಿಕೇರಿ ಜಯಲಕ್ಷಿ, ಚಿಗಟೇರಿ ಬ್ಲಾಕ್ ಮಹಿಳಾ ಕಾಂಗ್ರೆಸ್
ಅಧ್ಯಕ್ಷೆ ಭಾಗ್ಯಮ್ಮ, ಕಣಿವಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷಿ ಚಂದ್ರಶೇಖರ್, ಹಲುವಾಗಲು ಗ್ರಾಮ
ಪಂಚಾಯಿತಿ ಮಾಜಿ ಅಧ್ಯಕ್ಷೆ ರತ್ನಮ್ಮ ಸೋಮಣ್ಣ ಎನ್.ಟಿ., ಪುರಸಭಾ ಮಾಜಿ ಸದಸ್ಯೆ ಕವಿತಾ ಸುರೇಶ,
ಉಮಾ ಶಂಕರ್, ಹಲವಾಗಲು ವನಜಾಕ್ಷಮ್ಮ, ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ್, ಚಿಗಟೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಹರಿಯಮ್ಮನಹಳ್ಳಿ ಶಿವರಾಜ, ಎಲ್. ಮಂಜಾನಾಯ್ಕ, ಉದಯಶಂಕರ್, ಮೈದೂರು ಓ ರಾಮಪ್ಪ ಸೇರಿದಂತೆ ಇತರರು ಇದ್ದರು.