ದಾವಣಗೆರೆ, ಮಾ.15 – ಮುಂಬರುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಕೆ ಹಾಗೂ ಮತದಾನ ಖಾತ್ರಿ ಯಂತ್ರ (ವಿ.ವಿ. ಪ್ಯಾಟ್) ಕಾರ್ಯವೈಖರಿ ಕುರಿತಂತೆ ಬುಧವಾರ ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಿಂದ ಮತದಾನ ಪ್ರಾತ್ಯಕ್ಷತೆ ಮೂಲಕ ಜಾಗೃತಿ ಮೂಡಿಸಲಾಯಿತು.
ಈ ವೇಳೆ ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಮಾತನಾಡಿ, ಮತದಾರರಿಗೆ ಯಾವುದೇ ಗೊಂದಲ ಉಂಟಾಗಬಾರದೆಂಬ ಉದ್ದೇಶದಿಂದ ಚುನಾವಣಾ ಆಯೋಗ ವಿದ್ಯುನ್ಮಾನ ಮತಯಂತ್ರ ಬಳಕೆ ಹಾಗೂ ಮತದಾನ ಖಾತ್ರಿ ಕುರಿತಂತೆ ಪ್ರಾತ್ಯಕ್ಷತೆ ಮೂಲಕ ಮತದಾರರಲ್ಲಿ ಚುನಾವಣಾ ಪ್ರಕ್ರಿಯೆಯ ಕುರಿತು ಅರಿವು ಮೂಡಿಸಲಾಗುತ್ತಿದೆ.
ಇವಿಎಂ ಯಂತ್ರದಲ್ಲಿ ಮತ ಚಲಾಯಿಸುವ ಹಾಗೂ ಖಾತ್ರಿ ಮಾಡಿಕೊಳ್ಳುವ ಬಗ್ಗೆ ಖುದ್ದು ಈ ಪ್ರಾತ್ಯಕ್ಷಿತೆಯಲ್ಲಿ ಪಾಲ್ಗೊಂಡು ಅಣಕು ಮತದಾನ ಮಾಡಿ ಮನವರಿಕೆ ಮಾಡಿಕೊಳ್ಳಬಹುದಾಗಿದ್ದು, ಯುವ ಮತದಾರರಿಗೆ ಹಾಗೂ ಮೊದಲ ಬಾರಿಗೆ ಮತದಾನ ಮಾಡುವಂತಹವರಿಗೂ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಗಾಳಿ ಸುದ್ದಿ ನಂಬಬೇಡಿ : ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಹಾಗೂ ಮತದಾನ ಖಾತ್ರಿ ಯಂತ್ರ (ವಿ.ವಿ. ಪ್ಯಾಟ್)ಬಗ್ಗೆ ನಾವು ಚಲಾಯಿಸಿದ ಮತ, ಬೇರೆಯವರಿಗೆ ಬೀಳಲಿದೆ ಎಂದು ಸಾರ್ವಜನಿಕ ವಲಯದಲ್ಲಿ ಹಬ್ಬಿಸುವ ಗಾಳಿ ಸುದ್ದಿಗಳಿಗೆ ಮಾನ್ಯತೆ ನೀಡಬಾರದು. ಭಾರತ ಚುನಾವಣಾ ಆಯೋಗ ಈ ಕುರಿತಂತೆ ಬಹಿರಂಗ ಸವಾಲು ಹಾಕಿ, ಸಾಬೀತು ಮಾಡಲು ಸ್ಥಳ ಮತ್ತು ಸಮಯಾವಕಾಶ ಕಲ್ಪಿಸಿತ್ತು. ಆದರೆ, ಯಾರೊಬ್ಬರು ಸಾಬೀತು ಮಾಡಲಿಲ್ಲ. ಆದ್ದರಿಂದ, ಗಾಳಿ ಸುದ್ದಿ ನಂಬದೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ತರಬೇತುದಾರ ವಿಭಾಗೀಯ ಅಧಿಕಾರಿ ಡಾ.ರಾಘವೇಂದ್ರ, ಕೋಶಾಧ್ಯಕ್ಷ ರಾಘವೇಂದ್ರ ನಾಯರಿ, ಸಂಘಟನಾ ಕಾರ್ಯದರ್ಶಿ ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್, ನಿರ್ದೇಶಕರಾದ ಸತ್ಯಭಾಮ, ಜ್ಯೋತಿ ಉಪಾಧ್ಯಾಯ, ರುದ್ರಕ್ಷಿಬಾಯಿ ಮತ್ತಿತರರಿದ್ದರು.