ಕಳಪೆ ಗ್ರಾವೆಲ್ ಬಳಕೆ: ಗ್ರಾಮಸ್ಥರಿಂದ ಎಚ್ಚರಿಕೆ

ಕಳಪೆ ಗ್ರಾವೆಲ್ ಬಳಕೆ: ಗ್ರಾಮಸ್ಥರಿಂದ ಎಚ್ಚರಿಕೆ

ಮಲೇಬೆನ್ನೂರು, ಮಾ. 14-  ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕಳಪೆ ಗ್ರಾವೆಲ್ ಹಾಕಿಸಿದ್ದನ್ನು ಖಂಡಿಸಿ ಗ್ರಾಮದ ನಾಲ್ಕನೇ ವಾರ್ಡಿನ  ಗ್ರಾಮಸ್ಥರು ಮಂಗಳವಾರ ಗ್ರಾ.ಪಂ ಪಿಡಿಓಗೆ ಮನವಿ ಸಲ್ಲಿಸಿ ವಾರದೊಳಗೆ ಮಣ್ಣನ್ನು ತೆಗೆಸದೇ ಇದ್ದರೆ ಆ ಮಣ್ಣನ್ನೇ ಗ್ರಾ ಪಂ ಕಚೇರಿ ಎದುರು ತಂದು ಹಾಕುವ ಎಚ್ಚರಿಕೆ ನೀಡಿದ ಘಟನೆ ಕುಂಬಳೂರಿನಲ್ಲಿ ನಡೆದಿದೆ. 

ಕಳೆದ ಒಂದೂವರೆ ತಿಂಗಳ ಹಿಂದೆ ಕುಂಬಳೂರಿನ ನಾಲ್ಕನೇ ವಾರ್ಡ್ ನಲ್ಲಿ  ಚಾನಲ್ ರಸ್ತೆಗೆ ಗ್ರಾವೆಲ್ ಎಂದು ಬೂದಿಯಂತಹ ಮಣ್ಣನ್ನು ರಾತ್ರೋ ರಾತ್ರಿ ಹಾಕಿಸಿದ್ದು, ಜನತೆ ಮತ್ತು ವಾಹನಗಳು ಓಡಾಡುವಂತಿಲ್ಲ, ಸಂಚರಿಸಿದರೆ ಧೂಳು ಮುಖವನ್ನು ಮೆತ್ತುತ್ತದೆ, ಚಾನಲ್ ನಿಂದ ಬಟ್ಟೆ ಸ್ವಚ್ಚಗೊಳಿಸಿ ಬರುವಾಗ ವಾಹನ ಬಂದರೆ ಮತ್ತೆ ಚಾನಲ್‍ಗೆ ತೆರಳಬೇಕಿದೆ. 

ಪ್ರತಿನಿತ್ಯವೂ ಒಂದೂವರೆ ಸಾವಿರ ಲೀ. ನೀರನ್ನು ರಸ್ತೆಗೆ ಹಾಕ ಬೇಕಾಗುತ್ತದೆ. ನಂತರ ಒಣಗಿದರೆ ಮತ್ತೆ ಧೂಳು ಹರಡುತ್ತದೆ. ಧೂಳು ಕಾರಣಕ್ಕಾಗಿ ಆ ಬೀದಿಯ ಮೂವರು ಮಹಿಳೆಯರು ಅಲರ್ಜಿ / ಅನಾ ರೋಗ್ಯದ ಕಾರಣಕ್ಕಾಗಿ ಒಂದು ತಿಂಗಳಿಂದ ಆಸ್ಪತ್ರೆಗೆ ಅಲೆದಾಡುತ್ತಿ ದ್ದಾರೆ ಎಂದು ಅಲ್ಲಿನ ನಿವಾಸಿಗಳು ಘಟನೆಯನ್ನು ವಿವರಿಸಿದರು. 

ನಾಗರಿಕರ ಆರೋಗ್ಯದ ಜತೆ ಆಟವಾಡಬೇಡಿ, ವಾರದೊಳಗೆ ರಸ್ತೆಗೆ ಹಾಕಿದ ಮಣ್ಣನ್ನು ತೆರವುಗೊಳಿಸದೇ ಇದ್ದಲ್ಲಿ ನಾವೇ ಆ ಮಣ್ಣನ್ನು ಪಂಚಾಯಿತಿ ಬಾಗಿಲಲ್ಲಿ ತಂದು ಹಾಕುತ್ತೇವೆ, ಅಲ್ಲಿಯವರೆಗೂ ಆ ರಸ್ತೆಯಲ್ಲಿ ವಾಹನಗಳು ಓಡಾಡದಂತೆ ರಸ್ತೆ ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿದ ಪಿಡಿಓ ಮೂರ್ತಿ ಮಾತನಾಡಿ, ರಸ್ತೆಗೆ ಗ್ರಾವೆಲ್ ಹಾಕಿರುವ ಕುರಿತು ಇಂಜಿನಿಯರ್ ಮೆಜರ್ಮೆಂಟ್ ಬುಕ್‍ನಲ್ಲಿ ಅಂದಾಜು ವೆಚ್ಚವನ್ನು ಸಹಿಯೊಂದಿಗೆ ಸಲ್ಲಿಸಿದಾಗ ಅಧ್ಯಕ್ಷರು ಮತ್ತು ನಾವು ಸೇರಿ 40 ಸಾವಿರ ರೂ  ಹಣ ಪಾವತಿ ಮಾಡಿದ್ದೇವೆ, ಈ ಬಗ್ಗೆ ಮತ್ತೊಮ್ಮೆ ಸದಸ್ಯರ ಜತೆ ಮಾತನಾಡುತ್ತೇನೆ ಎಂದರು.

ಗ್ರಾಮಸ್ಥರಾದ ಲಕ್ಷ್ಮಿಬಾಯಿ, ಪುಷ್ಪ, ಮಂಗಳ ಗೌರಿ, ಗೀತಾ, ಜ್ಯೋತಿ, ಕೆ.ಕುಬೇರಪ್ಪ, ಲಿಂಗ ರಾಜ್, ಬಿ.ಹನುಮಂತಪ್ಪ, ಪ್ರದೀಪ್, ಹನುಮೇಶಿ, ಸದಾನಂದ ಮತ್ತಿತರರು ಈ ವೇಳೆ ಹಾಜರಿದ್ದರು.