ಹರಪನಹಳ್ಳಿ, ಮಾ. 15- ಪುರಸಭೆ ವ್ಯಾಪ್ತಿಗೆ ಬರುವ ದಿನವಹಿ ಸಂತೆ ಹರಾಜು ನಡೆದಿದ್ದು, ವಾರದ ಸಂತೆ ಹರಾಜು ಮುಂದೂಡಲಾಯಿತು.
ಪುರಸಭೆ ಕಚೇರಿಯಲ್ಲಿ ಬುಧವಾರ ಪುರಸಭೆ ಅಧ್ಯಕ್ಷ ಎಚ್.ಎಂ. ಅಶೋಕ ಇವರ ಅಧ್ಯಕ್ಷತೆಯಲ್ಲಿ ನಡೆದ ದಿನವಹಿ ಸಂತೆ ಮತ್ತು ವಾರದ ಸಂತೆಯ ಬಹಿರಂಗ ಹರಾಜು ಕರೆಯಲಾಗಿತ್ತು.
ದಿನವಹಿ ಸಂತೆ ಹರಾಜಿನಲ್ಲಿ 6 ಜನ ಬಿಡ್ಡುದಾರರು ಪಾಲ್ಗೊಂಡಿದ್ದು. ಅಂತಿಮವಾಗಿ ದಿನವಹಿ ಸಂತೆಯ ಹರಾಜನ್ನು ಜಿಎಸ್‍ಟಿ ಹೊರತುಪಡಿಸಿ ರು. 19 ಲಕ್ಷದ 11 ಸಾವಿರಕ್ಕೆ ದ್ಯಾಮಜ್ಜಿ ಆನಂದ ತಮ್ಮದಾಗಿಸಿಕೊಂಡರು.
ದಿನವಹಿ ಸಂತೆ ಹರಾಜು ಕಳೆದ ವರ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ಕೂಗುವಂತೆ ಪುರಸಭೆ ಷರತ್ತಿನನ್ವಯ ಬಹಿರಂಗ ಹರಾಜು ನಡೆದಿದ್ದು, ಜಿಎಸ್‍ಟಿ ಮೊತ್ತ 3,43,980 ರೂ. ಸೇರಿ ಒಟ್ಟು 22,54,4980 ರೂ.ಗೆ ಪಾವತಿಸಬೇಕೆಂದು ಮುಖ್ಯಾಧಿಕಾರಿ ಶಿವಕುಮಾರ ಎರಗುಡಿ ಹರಾಜು ಪಡೆದವರಿಗೆ ತಿಳಿಸಿದರು.
ನಂತರ ವಾರದ ಸಂತೆಯ ಹರಾಜು ಪ್ರಕ್ರಿಯೆಯಲ್ಲಿ 3 ಜನ ಬಿಡ್ಡುದಾರರು ಭಾಗವಹಿಸಿದ್ದು, ಕಳೆದ ಬಾರಿ ಬಹಿರಂಗ ಹರಾಜಿನಲ್ಲಿ 4,36,000ರು.ಗೆ ಪಡೆದಿದ್ದೇವೆ. ಆದರೆ ಸಂಗ್ರಹಣೆಯ ಮೊತ್ತ ಕಡಿಮೆಯಾಗಿದ್ದು, ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಬಿಡ್ಡುದಾರರು ಕಡಿಮೆ ದರಕ್ಕೆ ಹರಾಜು ಮಾಡುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಪುರಸಭೆ ಕಾಯ್ದೆ ಅನ್ವಯ ಕಳೆದ ಬಾರಿಗಿಂತ 5 ಸಾವಿರ ಹೆಚ್ಚಿನ ಮೊತ್ತಕ್ಕೆ ಹರಾಜು ಮಾಡಲಾಗುವುದು ಎಂದು ತಿಳಿಸಿದಾಗ ಇದಕ್ಕೆ ಒಪ್ಪದ ಬಿಡ್ಡುದಾರರು ಹರಾಜಿನಲ್ಲಿ ಕೂಗದ ಹಿನ್ನೆಲೆಯಲ್ಲಿ ವಾರದ ಸಂತೆಯ ಬಹಿರಂಗ ಹರಾಜು ಮುಂದೂಡಲಾಯಿತು.
ಪುರಸಭೆ ಉಪಾಧ್ಯಕ್ಷೆ ನಿಟ್ಟೂರು ಭೀಮವ್ವ, ಸದಸ್ಯರಾದ ಜೋಗಿನ್ನರ ಭರತೇಶ, ಕಿರಣ್ ಶಾನಬೋಗ್ ಹಾಗೂ ಸಿಬ್ಬಂದಿ ಇದ್ದರು.