ಹರಪನಹಳ್ಳಿ ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ
ಹರಪನಹಳ್ಳಿ, ಮಾ.12- ಸ್ಮಾರ್ಟ್ ಪೋನ್ ಹಾವಳಿ ಹೆಚ್ಚಾಗಿದೆ. ಮೊಬೈಲ್ ಮನೋರಂಜನೆಯ ರಸಗವಳ ಉಣಬ ಡಿಸೋ ‘ಶೋಕಿವಾಲ’ ವಿದ್ಯಾರ್ಥಿಗಳಿಗೆ ಮಾರಕವಾಗಿದೆ. ಬೇಡವಾದುದ್ದೇ ಆಕರ್ಷಕ ವಾಗಿದೆ. ಬೇಕಾದ ವಿಷಯ, ಪಾಠಗಳು ಎಲ್ಲಾ ಸಿಗುತ್ತಿದ್ದರೂ ಅವುಗಳನ್ನು ಮಾತ್ರ ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕ ಬೆಳವಣಿಗೆಗೆ ಒತ್ತು ನೀಡಬೇಕು ಎಂದು ಕನ್ನಡ ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ ಹೇಳಿದರು.
ತಾಲ್ಲೂಕಿನ ಹಲವಾಗಲು ಬಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಾರ್ಷಿಕೊತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದು ಸಾಧಿಸುವುದಕ್ಕೆ ಸೂಕ್ತವಾದ ಕಾಲ. ಎಲ್ಲವನ್ನು ಗೆಲ್ಲಬಲ್ಲೆ ಎಂಬ ಹುಂಬತನದ ಮನಸ್ಸು, ಯೌವನ ಹಾದಿ ತಪ್ಪುವುದಕ್ಕೂ ಅವಕಾಶ ಕಲ್ಪಿಸುತ್ತದೆ. ಅರಿವಿನಿಂದ ಬದುಕಿದರೆ ಆದರ್ಶ ವ್ಯಕ್ತಿಗಳಾಗುವುದರಲ್ಲಿ ಅನುಮಾನವಿಲ್ಲ. ಹದಿಹರೆಯದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಸ್ವ ನಿಯಂತ್ರಣ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪೋಷಕರು ಮಕ್ಕಳಿಗೆ ಮನೆ ಕಟ್ಟಬೇಕು, ಆಸ್ತಿ ಮಾಡಬೇಕೆಂದು ಹಣ ಮಾಡುವ ಉದ್ದೇಶದಿಂದ ಮಕ್ಕಳ ಕಡೆ ಗಮನಹರಿಸದೆ ಮಕ್ಕಳ ಬೇಕು, ಬೇಡಗಳನ್ನು ಅರಿಯಬೇಕು. ಉತ್ತಮ ಸಂಸ್ಕೃತಿ, ಸಂಸ್ಕಾರ ಮತ್ತು ಶಿಕ್ಷಣ ನೀಡಬೇಕು. ಮಕ್ಕಳನ್ನು ಸ್ನೇಹಿತರಂತೆ ಕಾಣುತ್ತಾ ಅವರ ಸರಿ ತಪ್ಪ್ಪುಗಳನ್ನು ತಿದ್ದುತ್ತಾ ಜವಾಬ್ದಾರಿ ವ್ಯಕ್ತಿಗಳನ್ನಾಗಿಸಬೇಕು. ಪ್ರತಿ ಮಗುವಿನಲ್ಲಿ ಪ್ರತಿಭೆ, ಜಾಣ್ಮೆಯಿದೆ. ಅದನ್ನು ಅರಿತು ಮಕ್ಕಳು ಅರಳಲು ಅವಕಾಶ ಕೊಡಬೇಕು, ನಿರ್ಬಂಧಿಸಬಾರದು ಎಂದರು.
ಪ್ರಾಚಾರ್ಯರಾದ ಎಸ್.ಕೆ. ಹುಲ್ಯಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತ ನಾಡಿ, ನಮ್ಮ ವಸತಿ ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಶಿಸ್ತು ಮತ್ತು ಸ್ವಚ್ಛತೆಯನ್ನು ಕಲಿಸಿ ಕಲಿಕೆಗೆ ಪೂರಕ ವಾತಾವರಣವನ್ನು ನಿರ್ಮಿ ಸುತ್ತಿದ್ದೇವೆ. ಎಲ್ಲರ ಸಹಕಾರದಿಂದ ಇದೊಂದು ಉತ್ತಮ ವಸತಿ ಶಾಲೆಯಾಗಿದೆ ಎಂದರು.
ಪಾಲಕರಾದ ಹೇಮನಗೌಡ ರೆಡ್ಡಿ, ಮಾರುತಿ ಹರವಿ, ಮಾರುತಿ ಭಜಂತ್ರಿ, ಮತ್ತು ಮಂಜಣ್ಣ ಮಾತನಾಡಿದರು.
ಶಿಕ್ಷಕರಾದ ಚನ್ನೇಶ ಉತ್ತಂಗಿ, ಮುತ್ತಪ್ಪ ಅಕ್ಕೂರು, ಅಧಿಕಾರ ಸುಧಾ, ವೀಣಾ ಹೆಚ್. ರಮೇಶ ಎ, ಸಮತಾ ಹೆಚ್. ಸೇರಿದಂತೆ ಇತರರು ಇದ್ದರು.