ಗುಣಮಟ್ಟದ ಶಿಕ್ಷಣಕ್ಕೆ ಪೋಷಕರು, ಶಿಕ್ಷಕರ ನಡುವೆ ಸಾಮರಸ್ಯ ಅಗತ್ಯ

ಗುಣಮಟ್ಟದ ಶಿಕ್ಷಣಕ್ಕೆ ಪೋಷಕರು, ಶಿಕ್ಷಕರ ನಡುವೆ ಸಾಮರಸ್ಯ ಅಗತ್ಯ

ಹರಪನಹಳ್ಳಿ, ಮಾ. 8-  ಗುಣಮಟ್ಟದ ಶಿಕ್ಷಣ  ಹೆಚ್ಚಿಸಲು ಪೋಷಕರು ಮತ್ತು ಶಿಕ್ಷಕರ ನಡುವೆ ಸಾಮರಸ್ಯ ಅಗತ್ಯ ಎಂದು ಕನ್ನನಾಯಕನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಎ.ಸಿ.ಮಂಜಪ್ಪ ಹೇಳಿದರು.

ತಾಲ್ಲೂಕಿನ ಕನ್ನನಾಯಕನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಶಾಲಾ ವಾರ್ಷಿಕೋತ್ಸವ ಮತ್ತು ಬೀಳ್ಕೊಡುಗೆ ಸಮಾ ರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 ಸರ್ಕಾರ ವಸತಿಯುತ ಮಕ್ಕಳಿಗೆ ಅನೇಕ ಉಪಯೋಗಕಾರಿ ಸೌಲಭ್ಯಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು .

ಮಕ್ಕಳಲ್ಲಿರುವ ವಿವಿಧ ಪ್ರತಿಭೆಗಳನ್ನು ಹೊರ ತಂದು ಅವುಗಳಿಗೆ ಸರಿಯಾದ ಕಾಯಕಲ್ಪ ನೀಡಲು ನಾವು ಬದ್ಧರಾಗಿದ್ದು, ಅವುಗಳನ್ನು ಮಕ್ಕಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

2008ರಲ್ಲಿ ಸ್ಥಾಪನೆಯಾದ ಈ ವಸತಿ ಶಾಲೆಯು 2012ರಲ್ಲಿ ಸ್ವಂತ ಕಟ್ಟಡದೊಂದಿಗೆ ಕನ್ನನಾಯಕನಹಳ್ಳಿಗೆ ವರ್ಗಾವಣೆಗೊಂಡು ಆರಂಭವಾಯಿತು. ಪ್ರಸ್ತುತ ಶಾಲೆಯಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ಪ್ರತಿ ವರ್ಷವೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮವಾದ ಫಲಿತಾಂಶ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಪೋಷಕ, ಪತ್ರಕರ್ತ ಸುರೇಶ್ ಮಂಡಕ್ಕಿ ಮಾತನಾಡಿ, ಈ ವಸತಿ ಶಾಲೆಗಳು ಅನೇಕ ಬಡ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದ್ದು, ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇಂತಹ ವಸತಿ ಶಾಲೆಗಳು ಆಸರೆಯಾಗಿವೆ ಎಂದರು.