18ಕ್ಕೆ ಭದ್ರಾ ಯೋಜನೆಗೆ ಗುದ್ದಲಿ ಪೂಜೆ ಬಿಜೆಪಿ ಎಸ್ಸಿ ಮೋರ್ಚಾ ಸಮಾವೇಶ

18ಕ್ಕೆ ಭದ್ರಾ ಯೋಜನೆಗೆ ಗುದ್ದಲಿ ಪೂಜೆ ಬಿಜೆಪಿ ಎಸ್ಸಿ ಮೋರ್ಚಾ ಸಮಾವೇಶ

ಜಗಳೂರು ಶಾಸಕ ಎಸ್.ವಿ. ರಾಮಚಂದ್ರ

ಜಗಳೂರು, ಮಾ.12- ಇದೇ ಮಾರ್ಚ್ 18ರಂದು ತಾಲ್ಲೂಕಿನ ಬಹು ನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ಜಿಲ್ಲಾ ಎಸ್‌ಸಿ ಮೋರ್ಚಾ ಸಮಾವೇಶ ನಡೆಯಲಿದೆ ಎಂದು ಶಾಸಕ ಎಸ್.ವಿ. ರಾಮಚಂದ್ರ ತಿಳಿಸಿದರು.

ಇಂದು ಪಟ್ಟಣದ ಬಯಲು ರಂಗ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಶಾಸಕರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು 1300 ಕೋಟಿ ವೆಚ್ಚದಲ್ಲಿ 45 ಸಾವಿರ ಎಕರೆ ಭೂಮಿಗೆ ನೀರಾವರಿ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸುವರು ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಸುಮಾರು 40 ವರ್ಷಗಳ ನೀರಾವರಿಯ ಕನಸು ನನಸಾಗಲಿದೆ. ಜಗಳೂರಿಗೆ ನೀರು ಹರಿಸುವ ಜಗಳೂರು ಶಾಖಾ ಕಾಲುವೆ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಕೇವಲ ಎರಡು ವರ್ಷದೊಳಗೆ ಪೂರೈಸಿ, ನೀರು ನಮ್ಮ ರೈತರ ಹೊಲಕ್ಕೆ ದೊರಕಲಿದೆ. ರೈತರ ಭಾಗ್ಯದ ಬಾಗಿಲು ತೆರೆಯಲಿದೆ ಅವರು ತಿಳಿಸಿದರು.

ಸಿರಿಗೆರೆ ಶ್ರೀಗಳ ಆಶೀರ್ವಾದ 57 ಏಳು ಕೆರೆಗಳ ತುಂಬಿಸುವ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು ವಾರದಲ್ಲಿ ಇನ್ನೂ ಎಂಟು ಕೆರೆಗಳಿಗೆ ನೀರು ತುಂಬಿಸಲಾಗುವುದು.

ಜಲಜೀವನ್ ಮಿಷನ್ ಯೋಜನೆ ಯಲ್ಲಿ 462 ಕೋಟಿ ರೂಪಾಯಿಗಳ 166 ಹಳ್ಳಿಗಳಿಗೆ ನೀರು ಪೂರೈಸುವ ಕಾಮಗಾರಿಗೂ ಸಹ ಕೇಂದ್ರ ಸಚಿವರು ಗುದ್ದಲಿ ಪೂಜೆ ನೆರವೇರಿಸುವರು ಎಂದು ಶಾಸಕರು ಮಾಹಿತಿ ನೀಡಿದರು.

ನಮ್ಮ ಅಧಿಕಾರವಧಿಯಲ್ಲಿ ನಮ್ಮ ಕ್ಷೇತ್ರಕ್ಕೆ ಬೃಹತ್ ಎರಡು ನೀರಾವರಿ ಯೋಜನೆಗಳು ಮತ್ತು ಕುಡಿಯುವ ನೀರಿನ ಯೋಜನೆಗೆ ನಮ್ಮ ಬಿಜೆಪಿ ಸರ್ಕಾರ ಅನುದಾನ ನೀಡಿದೆ. ಇದು ನಮ್ಮ ಬಿಜೆಪಿ ಸರ್ಕಾರದ ಕೊಡುಗೆಯಾಗಿದೆ ಎಂದು ರಾಮಚಂದ್ರ ಸಂತಸ ವ್ಯಕ್ತಪಡಿಸಿದರು.

ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್ ಮಾತನಾಡಿ, ಮಾರ್ಚ್ 18ರಂದು ನಡೆ ಯುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ, ಎಸ್ಸಿ ಮೋರ್ಚಾ ಜಿಲ್ಲಾ ಸಮಾವೇಶದಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಮಾರ್ಚ್ 17ರಂದು ವಿಜಯ ಸಂಕಲ್ಪ ಯಾತ್ರೆಯ ರಥ ಆಗಮಿಸಲಿದ್ದು, ಅಂದು ಪಟ್ಟಣದಲ್ಲಿ ನಡೆಯುವ ಬೃಹತ್ ಮೆರವಣಿಗೆ ನಡೆಯಲಿದೆ. ಅಂತಿಮವಾಗಿ ಈ ನಾಲ್ಕೂ ರಥಯಾತ್ರೆಗಳು ಮಾರ್ಚ್ 25ರಂದು ದಾವಣಗೆರೆಯಲ್ಲಿ ಸಮಾವೇಶಗೊಳ್ಳಲಿದ್ದು ಅಂದು ಪ್ರಧಾನ ಮಂತ್ರಿ ಮೋದೀಜಿ ಅವರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಕ್ಕೆ  ನೀಡಿರುವ ವಿವಿಧ ಸೌಲಭ್ಯಗಳು ಮತ್ತು ಯೋಜನೆಗಳ ಬಗ್ಗೆ ಜನರಿಗೆ ಮನೆ ಮನೆಗೆ ತೆರಳಿ ಕಾರ್ಯಕರ್ತರು ತಿಳಿಸಬೇಕು ಮತ್ತು ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವಂತೆ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಹನುಮಂತ್ ನಾಯಕ್ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷದ ವತಿಯಿಂದ ವಿವಿಧ ಮೋರ್ಚಾಗಳ ಸಮಾವೇಶವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಮಾರ್ಚ್ 18ರಂದು ಜಗಳೂರಿನಲ್ಲಿ ನಡೆಯುವ ಜಿಲ್ಲಾ ಮಟ್ಟದ ಬಿಜೆಪಿ ಎಸ್ಸಿ ಮೋರ್ಚಾ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಕ್ಷೇತ್ರದ ಬಿಜೆಪಿ ಉಸ್ತುವಾರಿ ಆರುಂಡಿ ನಾಗರಾಜ್ ಮಾತನಾಡಿ, ಕಾರ್ಯಕರ್ತರು ಪಕ್ಷದ ಸಾಧನೆಗಳು ಮತ್ತು ಪರಿಶಿಷ್ಟ ಜಾತಿಯವರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಮೂಲಕ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸುವಂತಾಗಬೇಕು ಎಂದು ತಿಳಿಸಿದರು.

ಶಾಸಕರು ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಮುಂಬರುವ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಂಗಾಧರ್, ಜಿಲ್ಲಾ ಉಪಾಧ್ಯಕ್ಷ ಡಿ.ವಿ. ನಾಗಪ್ಪ, ಪ್ರಧಾನ ಕಾರ್ಯದರ್ಶಿ ಎಚ್. ನಾಗರಾಜ್, ತಾಲ್ಲೂಕು  ಪ್ರಧಾನ ಕಾರ್ಯದರ್ಶಿ ಬಸವರಾಜ್ ಮುಖಂಡರಾದ ಶಿವಕುಮಾರಸ್ವಾಮಿ, ಸಿದ್ದೇಶ್, ಕೃಷ್ಣಮೂರ್ತಿ, ಮಂಜುನಾಥಯ್ಯ  ಮತ್ತಿತರರು ಇದ್ದರು.