ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಜಗಳೂರು, ಮಾ. 4- ಕೇಂದ್ರ ಸರ್ಕಾರ ದಿನಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿರುವುದನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಇಂದು ಪ್ರತಿಭಟನಾ ಮೆರವಣಿಗೆ ನಡೆಸಿ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಮಿನಿ ವಿಧಾನಸೌಧದ ಮುಂದೆ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಹೆಚ್.ಪಿ. ರಾಜೇಶ್, ಬಡವರ ಬಗ್ಗೆ ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಯಾವುದೇ ಕಾಳಜಿ ಇಲ್ಲ, ಜನವಿರೋಧಿ ಸರ್ಕಾರಗಳು ಎಂದು ಟೀಕಿಸಿದರು.

ಜನರ ದಿನಬಳಕೆಯ ಸಿಲಿಂಡರ್ ಬೆಲೆಯನ್ನು ಸತತವಾಗಿ ಏರಿಸಿದೆ. ಅಗತ್ಯ ವಸ್ತುಗಳ ದರಗಳು ಸಹ ಹೆಚ್ಚಳವಾಗಿವೆ. ಬಡಜನರ ಬದುಕು ದುಸ್ತರವಾಗಿದೆ. ಈ ಬಗ್ಗೆ ಯಾವುದೇ ಕಾಳಜಿ ಈ ಸರ್ಕಾರಕ್ಕೆ ಇಲ್ಲ ಎಂದರು. ರೈತ, ಬಡಜನರ ವಿರೋಧಿ ಸರ್ಕಾರದ ಬೆಲೆ ಏರಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇಂದು ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಿದೆ ಎಂದು ರಾಜೇಶ್ ತಿಳಿಸಿದರು.

ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ಕೇಂದ್ರ ಸರ್ಕಾರ ಅಗತ್ಯ ಬೆಲೆ ಹೆಚ್ಚಿಸುವ ಮೂಲಕ ಬಡಜನರ ಬವಣೆಯನ್ನು ಹೆಚ್ಚಿಸಿದೆ ಎಂದರು.

ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಭ್ರಷ್ಟಾಚಾರದ  ಹಿನ್ನೆಲೆಯಲ್ಲಿ ಲೋಕಾಯುಕ್ತರ ತನಿಖೆ ನಡೆಯುತ್ತಿರುವುದು ನೋಡಿದರೆ ಈ ಸರ್ಕಾರ  40 ಪರ್ಸೆಂಟ್ ಕಮೀಷನಲ್ಲಿ ಶೇ. 80 ಕಮೀಷನ್ ಪಡೆಯಲು ಮುಂದಾಗಿದೆ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹ್ಮದ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ತಾಲ್ಲೂಕು ಉಸ್ತುವಾರಿ ಕಲ್ಲೇಶ್‌ರಾಜ್ ಪಟೇಲ್, ಕಾಂಗ್ರೆಸ್ ಪದಾಧಿಕಾರಿಗಳಾದ ಸಿ. ತಿಪ್ಪೇಸ್ವಾಮಿ, ಬಸಾಪುರ ರವಿಚಂದ್ರ, ಪ.ಪಂ. ಸದಸ್ಯರಾದ ಶಕೀಲ್ ಅಹ್ಮದ್, ರವಿ ಕುಮಾರ್, ಅಹ್ಮದ್ ಅಲಿ ಭಾಗವಹಿಸಿದ್ದರು.