ಜಗಳೂರು : ಮಡಿವಾಳ ಮಾಚಿದೇವ ಜಯಂತ್ಯೋತ್ಸವದಲ್ಲಿ ಶ್ರೀ ಬಸವ ಮಾಚಿದೇವ ಸ್ವಾಮೀಜಿ
ಜಗಳೂರು, ಮಾ. 4- ಆಧುನಿಕ ತಂತ್ರಜ್ಞಾನದಿಂದ ಮೂಲ ಕಸುಬು ಕ್ರಮೇಣ ನಶಿಸುತ್ತಿದೆ ಎಂದು ಚಿತ್ರದುರ್ಗ ಮಡಿವಾಳ ಮಾಚಿದೇವ ಮಹಾಸಂಸ್ಥಾನ ಮಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಹೊರ ವಲಯದ ಬಳಿ ವಿನಾಯಕ ಲೇ ಔಟ್‌ನಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತ್ಯೋತ್ಸವ ಹಾಗೂ ಸಮುದಾಯ ಭವನ ಶಂಕುಸ್ಥಾಪನೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮಡಿವಾಳ ಸಮಾಜ ಸ್ವಾಭಿಮಾನಿಗಳಾಗಿ ಸಮಾಜದಲ್ಲಿ ಪ್ರಾಮಾಣಿಕ ಕಾಯಕ ಸೇವೆಗೈಯ್ಯುತ್ತಿದ್ದು, ತಂತ್ರಜ್ಞಾನ ಅಳವಡಿಕೆಗೆ ಮುಂದಾಗಬೇಕು. ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಭವಿಷ್ಯ ರೂಪಿಸಬೇಕು ಎಂದು ಸಲಹೆ ನೀಡಿದರು.
ಜಗಳೂರಿನಲ್ಲಿ ಸುಸಂಸ್ಕೃತ ರಾಜಕಾರಣಿ ಗಳು ತಳಸಮುದಾಯಗಳ ದಾರ್ಶನಿಕರ ಜಯಂತಿಗಳಲ್ಲಿ ಪಕ್ಷಾತೀತವಾಗಿ ಭಾಗವಹಿ ಸುವ ಔದಾರ್ಯತೆ ಮೈಗೂಡಿಸಿಕೊಂಡಿದ್ದು, ಸುಸಂಸ್ಕೃತ ರಾಜಕಾರಣಿಗಳ ಸ್ಪಂದನೆಯಿಂದ ನಮಗೆ ಮಡಿವಾಳ ಸಮಾಜದ ಶಾಸಕರಿಲ್ಲ ಎಂಬ ಭಾವನೆಯೇ ಬರುವುದಿಲ್ಲ ಎಂದು ಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಮಡಿವಾಳ ಸಮುದಾಯಕ್ಕೆ ನೀಡಿದ ಭರವಸೆಯಂತೆ ನಿವೇಶನ ಒದಗಿಸಿರುವೆ. ಹೆದ್ದಾರಿ ಪಕ್ಕದಲ್ಲಿನ ಸುಸಜ್ಜಿತ ಸಮುದಾಯ ಭವನ ಜಿಲ್ಲೆಗೆ ಮಾದರಿಯಾಗಲಿದೆ. 50 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಶೀಘ್ರ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಭರವಸೆ ನೀಡಿದರು.
ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜು ಎಂ. ತಲ್ಲೂರು ಮಾತ ನಾಡಿ, ರಾಜ್ಯದಲ್ಲಿ ಚಿಕ್ಕ ಸಮುದಾಯವನ್ನು ಗುರುತಿಸಿ ದೇವರಾಜ್ ಅರಸ್ ಅಭಿವೃದ್ಧಿ ನಿಗಮದಿಂದ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ ಪ್ರತ್ಯೇಕವಾಗಿದೆ. ಕಳೆದ ಮೂರು ತಿಂಗಳ ಹಿಂದೆ ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆಯ ನಂತರ ಶೈಕ್ಷಣಿಕ, ನೇರ ಸ್ವಯಂ ಉದ್ಯೋಗ, ಗಂಗಾಕಲ್ಯಾಣ ಯೋಜನೆಗಳಡಿ ಸಾಲ ಸೌಲಭ್ಯಗಳಿಗೆ ಅವಕಾಶವಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಸದುಪಯೋಗಪಡೆದುಕೊಳ್ಳಬೇಕು ಎಂದರು.
ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಮಾತನಾಡಿ, ಸ್ವಾಭಿಮಾನದಿಂದ ಕಾಯಕ ಮಾಡುತ್ತಿರುವ ಮಡಿವಾಳ ಸಮಾಜ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಭವಿಷ್ಯ ರೂಪಿಸಬೇಕು. ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಮಡಿವಾಳ ಸಮಾಜದಿಂದ ಶಾಸಕರು ಆಯ್ಕೆ ಯಾಗಿ ಬರಲಿ ಎಂದು ಶುಭ ಹಾರೈಸಿದರು.
ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮಾತನಾಡಿ,12 ನೇ ಶತಮಾನದಲ್ಲಿನ ಬಸವಣ್ಣನವರ ಅನುಭವ ಮಂಟಪದಲ್ಲಿ ಮಾಚಿದೇವರ ಕಾಯಕ ಯೋಗಿಯಾಗಿ ನಡೆಸಿದ ಸಾಮಾಜಿಕ ಕ್ರಾಂತಿ ಇಂದಿಗೂ ಅವಿಸ್ಮರಣೀಯ. ಮಡಿವಾಳ ಮಾಚಿದೇವರ ಆದರ್ಶಗಳು ಮಾದರಿಯಾಗಲಿ ಎಂದರು.
ಸಮಾರಂಭದಲ್ಲಿ ಕೆಪಿಸಿಸಿ ಎಸ್ಟಿ ಘಟಕದ ಕೆ.ಪಿ. ಪಾಲಯ್ಯ, ಗ್ರಾ.ಪಂ. ಅಧ್ಯಕ್ಷೆ ತಿಮ್ಮಕ್ಕ ರಾಮಪ್ಪ, ಪ.ಪಂ. ಸದಸ್ಯೆ ಮಂಜಮ್ಮ, ಮಡಿವಾಳ ಮಾಚಿದೇವ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಸಿ.ರೇವಣಸಿದ್ದಪ್ಪ, ಜಿಲ್ಲೆಯ ವಿವಿಧ ತಾಲ್ಲೂಕುಗಳ ಸಮಾಜದ ಅಧ್ಯಕ್ಷರಾದ ಎಂ.ಎನ್. ಬಸವರಾಜಪ್ಪ, ಮಹಾಂತೇಶ್, ರವಿ ದೊಡ್ಡೇರಿ, ಭೀಮಣ್ಣ, ರಮೇಶ್, ಶಿಕ್ಷಕ ನಾಗರಾಜ್, ಹರೀಶ್ ಮುಂತಾದವರು ಉಪಸ್ಥಿತರಿದ್ದರು.