ಕಳೆದ ಹತ್ತು ವರ್ಷಗಳಲ್ಲಿ ಜಿಲ್ಲೆಯಲ್ಲಿ 0.5 ಎಚ್‍ಐವಿ ಸೋಂಕು ಪ್ರಕರಣಗಳು ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ತಾಯಿಯಿಂದ ಮಗುವಿಗೆ ಎಚ್‍ಐವಿ ಸೋಂಕು ವರ್ಗವಾಗುವ ಪ್ರಮಾಣ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಹೆಚ್.ಐ.ವಿ ಸೋಂಕಿತರಿಗೆ ನೀಡಲು ಮತ್ತು ತಾರತಮ್ಯವಾಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು.
– ಡಾ. ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿಗಳು
ದಾವಣಗೆರೆ, ಫೆ. 5 – ಏಡ್ಸ್ ರೋಗಿಯನ್ನು ಅಪರಾಧಿ ದೃಷ್ಟಿಯಿಂದ ನೋಡದೇ ಸಮಾನವಾಗಿ ಕಾಣುವುದರಿಂದ ಆತ್ಮ ಸ್ಥೈರ್ಯ ಹೆಚ್ಚಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಏಡ್ಸ್ ಪ್ರತಿ ಬಂಧಕ ಮತ್ತು ನಿಯಂತ್ರಣ ಘಟಕ ಹಾಗೂ ವಿವಿಧ ಇಲಾಖೆಗಳಿಂದ ಇಂದು ಆಯೋಜಿಸಲಾಗಿದ್ದ ವಿವಿಧ ಇಲಾಖಾ ಮುಖ್ಯಸ್ಥರ ಸಮನ್ವಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹವಾಮಾನ ಬದಲಾವಣೆ ಕುರಿತು ಮಾತನಾಡಿದ ಅವರು, ಜಗಳೂರಿನಲ್ಲಿ ಬೆಂಕಿ ಅನಾಹುತಗಳು ತುಂಬಾ ಸಂಭವಿಸುತ್ತಿದ್ದು, ಇದಕ್ಕೆ ಎನ್‍ಜಿಟಿ ಗೈಡ್‍ಲೈನ್ಸ್ ಪ್ರಕಾರ ಅವರಿಗೆ ಮಾರ್ಗದರ್ಶನ ನೀಡಬೇಕು. ರಸ್ತೆಗಳಲ್ಲಿ ಹುಲ್ಲಿನ ಲಾರಿಯ ಮೇಲೆ ಬೆಂಕಿ ಅವಘಡ ಸಂಭವಿಸುತ್ತಿದೆ, ಇದನ್ನು ತಡೆಯಬೇಕು. ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಬೇಕು. ವಿವಿಧ ಇಲಾಖೆಗಳ ಜೊತೆಗೂಡಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆ ತಡೆಗಟ್ಟಲು ಶ್ರಮಿಸಬೇಕು ಎಂದರು.
ಡಾ. ಕೃತಿ ಹೆಚ್‍ಐವಿ ನಿಯಂತ್ರಣ ಕುರಿತು ಮಾಹಿತಿ ನೀಡಿ, ಹೆಚ್.ಐ.ವಿ ಆಪ್ತ ಸಮಾಲೋಚನೆ ನಡೆಸಿ ಎ.ಆರ್.ಟಿ ಔಷಧೋಪಚಾರವನ್ನು ಮಾಡಲಾಗುವುದು, ಡಾಟ್ಸ್ ಟಿ.ಬಿ. ಚಿಕಿತ್ಸೆ, ಸಿ.ಪಿ.ಟಿ ಔಷಧೋಪಾಚಾರ, ಸಮಯ ಸಾಧಕಗಳಿಗೆ, ಸೋಂಕುಗಳಿಗೆ ಚಿಕಿತ್ಸೆ, ನಿರೋಧ್, ಐ.ಇ.ಸಿ ಪೋಸ್ಟರ್ ಮತ್ತು ಕರ ಪತ್ರಗಳನ್ನು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸೋಂಕಿತ, ಬಾಧಿತ, ಐಸಿಪಿಎಸ್ ಶಿಕ್ಷಣ ಸೌಲಭ್ಯಗಳನ್ನು ನೀಡಲಾಗುವುದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ರೇಷನ್ ಕಾರ್ಡ್, ಅಂತ್ಯೋದಯ ಕಾರ್ಡ್‌ಗಳನ್ನು ನೀಡಲಾಗುವುದು.
ಸೋಂಕಿತರಿಗೆ ಪ್ರತಿ ದಿನ ಸಮಾಲೋಚನೆ ಮಾಡುವುದರ ಜೊತೆ ಔಷಧಿ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ತಾಯಿಯಿಂದ ಮಗುವಿಗೆ ಎಚ್‍ಐವಿ ಸೋಂಕು ವರ್ಗಾವಣೆಯಾಗದಂತೆ ತಡೆಯಲು ಪ್ರಮುಖ ಪಾತ್ರ ವಹಿಸುವ ನೆವರಿಪೈನ್ ಸೇರಿ ಕೆಲ ಔಷಧಿಗಳನ್ನು ನೀಡುತ್ತೇವೆ. ಶಿಶು ಜನಿಸಿದ ಬಳಿಕ ಅದರ ತೂಕದ ಅನುಸಾರ ಔಷಧಿ ನೀಡಿ, ನಿಗಾ ವಹಿಸುತ್ತೇವೆ. ನಂತರ ಹಂತ ಹಂತವಾಗಿ ಪರೀಕ್ಷೆಯನ್ನು ಮಾಡುತ್ತೇವೆ. ಐಸಿಟಿಸಿ ಕೇಂದ್ರಗಳಲ್ಲಿ ಎಚ್‍ಐವಿ ಸೋಂಕು ಪೀಡಿತರಿಗೆ ಸೂಕ್ತ ಮಾರ್ಗದರ್ಶನದ ಜೊತೆಗೆ ಔಷಧಿ ಕೊಡಲಾಗುತ್ತಿದೆ. ಯಾವುದೇ ಗೊಂದಲ, ಸಮಸ್ಯೆಗಳಿಗೆ ಆಸ್ಪದ ಮಾಡಿಕೊಡುತ್ತಿಲ್ಲ.
ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ, ಜಿಲ್ಲಾ ಸರ್ಜನ್ ಡಾ.ನಾಗೇಂದ್ರಪ್ಪ, ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಮುರುಳೀಧರ್, ಡಾ. ಗಂಗಾಧರ ಉಪಸ್ಥಿತರಿದ್ದರು.