ತ್ಯಾಜ್ಯ ಸಂಗ್ರಹಣಾ ಕೇಂದ್ರ ನಿರ್ಮಾಣದಲ್ಲಿ ಅವ್ಯವಹಾರ

ತ್ಯಾಜ್ಯ ಸಂಗ್ರಹಣಾ ಕೇಂದ್ರ ನಿರ್ಮಾಣದಲ್ಲಿ ಅವ್ಯವಹಾರ

ದಿಶಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ತನಿಖೆಗೆ ಸಂಸದ  ಸಿದ್ದೇಶ್ವರ ಸೂಚನೆ

ದಾವಣಗೆರೆ ಮಾ. 15- ಜಿಲ್ಲೆಯಲ್ಲಿನ ತ್ಯಾಜ್ಯ ಸಂಗ್ರಹಣಾ ಕೇಂದ್ರ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆ ನಡೆಸುವಂತೆ ಸಂಸದ ಜಿ.ಎಂ. ಸಿದ್ದೇಶ್ವರ ಸೂಚಿಸಿದ್ದಾರೆ.

ಬುಧವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತನಿಖೆ ನಡೆಸುವಂತೆ ಜಿ.ಪಂ. ಸಿಇಒ ಅವರಿಗೆ ಸೂಚಿಸಿದ ಸಂಸದರು, ತನಿಖೆಯಲ್ಲಿ ಅವ್ಯವಹಾರ ಸಾಬೀತಾದರೆ ಅಧಿಕಾರಿಗಳಿಂದ ವ್ಯತ್ಯಾಸದ ಮೊತ್ತವನ್ನು ವಸೂಲಿ ಮಾಡಿ ಇಲ್ಲವಾದರೆ ತಕ್ಕ ಶಿಕ್ಷೆಯಾಗಲಿ ಎಂದು ಹೇಳಿದರು.

ಇದಕ್ಕೂ ಮುನ್ನ ದಿಶಾ ಸಮಿತಿ ಸದಸ್ಯ ರಂಗನಾಥ್, ಜಿಲ್ಲೆಯಲ್ಲಿ ನಿರ್ಮಾಣಗೊಂಡಿರುವ ತ್ಯಾಜ್ಯ ಸಂಗ್ರಹಣಾ ಕೇಂದ್ರದ ಎಸ್ಟಿಮೇಷನ್ ಪ್ಲಾನ್‌ಗೂ ಪ್ರಸ್ತುತ ನಿರ್ಮಾಣಗೊಂಡಿರುವ ಘಟಕಗಳಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ಆರೋಪಿಸಿದರು.

ಮಲೇಬೆನ್ನೂರು ಪುರಸಭೆಯ ಸಂತೆ ಮೈದಾನದಲ್ಲಿ ಖಾಲಿ ಇರುವ ಜಾಗದಲ್ಲಿ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರ ನಿರ್ಮಾಣದ ಅಂದಾಜು ಪಟ್ಟಿಯನ್ನು ತೋರಿಸುತ್ತಾ, ಹೆಚ್ಚು ಗುಣಮಟ್ಟದ ವಸ್ತುಗಳನ್ನು ತೋರಿಸಿ ಅಂದಾಜು ಮೊತ್ತ ಹೆಚ್ಚು ತೋರಿಸಿ, ನಂತರ ಕಡಿಮೆ ಗುಣಮಟ್ಟದ ವಸ್ತುಗಳಿಂದ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.

ಮತ್ತೋರ್ವ ಸದಸ್ಯ ಗಂಗಾಧರ್ ಜಿ.ವಿ. ದನಿ ಗೂಡಿಸಿ, ಅವ್ಯವಹಾರದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ `ಟ್ರಾನ್ಸ್‌ಫರ್ ಮಾಡಿಸುವುದಾದರೆ ಮಾಡಿಸಿ’ ಎಂದು ಹೇಳುತ್ತಾರೆ ಎಂದಾಗ ಅಧಿಕಾರಿಗಳ ಮೇಲೆ ಸಿದ್ದೇಶ್ವರ ಗರಂ ಆದರು.

ಸರ್ಕಾರಿ ಸಂಬಳ ಪಡೆದು ನ್ಯಾಯಯುತವಾಗಿ ಕೆಲಸ ಮಾಡಬೇಕು ಎಂದು ಸಿದ್ದೇಶ್ವರ್ ಹೇಳಿದರು. ಶಾಸಕ ಪ್ರೊ.ಎನ್. ಲಿಂಗಣ್ಣ, ವರ್ಗಾವಣೆ ಆಗುವ ಇಚ್ಛೆ ಇದ್ದರೆ ಆಗಿಬಿಡಿ ಎಂದರು. ನೀವು ಮಾಡುವ ಕೆಲಸಗಳಿಂದ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಅಧಿಕಾರಿಗಳಿಗೆ ಸಿದ್ದೇಶ್ವರ್ ತರಾಟೆಗೆ ತೆಗೆದುಕೊಂಡರು.

ಪರಿಶೀಲನೆಗೆ ಹೋದಾಗ ಅಧಿಕಾರಿ ಮೊಬೈಲ್ ಸ್ವಿಚ್‌ ಆಫ್ : ಪರಿಶೀಲನೆಗೆ ದಿನ ಗೊತ್ತು ಪಡಿಸಿ, ಆ ದಿನ ನಾವು ಹೋದಾಗ ಅಧಿಕಾರಿ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ದಿಶಾ ಸಮಿತಿ ಸದಸ್ಯ ಜಿ.ವಿ. ಗಂಗಾಧರ್ ಆರೋಪಿಸಿದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಶೇ.98.16 ರಷ್ಟು ಸಾಧನೆ ಮಾಡಿರುವುದಾಗಿ ಅಧಿಕಾರಿಗಳು ಹೇಳಿದಾಗ, ಜಗಳೂರು ಹಾಗೂ ದಾವಣಗೆರೆ ತಾಲ್ಲೂಕಿನಲ್ಲಿ ಕಡಿಮೆ ಸಾಧನೆಯಾಗಿರುವ ಕುರಿತು ಸಂಸದರು ಕಾರಣ ಕೇಳಿದರು.

ಜಗಳೂರಿನಲ್ಲಿ  ಶೇ.59.84, ದಾವಣಗೆರೆ ತಾಲ್ಲೂಕಿನಲ್ಲಿ ಶೇ.74ರಷ್ಟು ಮಾನವ ದಿನಗಳ ಬಳಕೆಯಾಗಿದೆ. ಇದು ಕಡಿಮೆಯಾಗಿದ್ದು, ಎಲ್ಲಾ ತಾಲ್ಲೂಕುಗಳಲ್ಲೂ ಮಾನವ ದಿನ ಬಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು. ಜಗಳೂರಿನಲ್ಲಿ ಕಾರ್ಮಿಕರ ಬೇಡಿಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಾಧನೆ ಕಡಿಮೆಯಾಗಿದೆ. ಹೆಚ್ಚಿನ ಕಾಮಗಾರಿ ಕೆರೆಗೆ ಸಂಬಂಧಿಸಿದ್ದೇ ಆಗಿದ್ದು, ಈಗಾಗಲೇ ಕೆರೆಗಳು ತುಂಬಿದ್ದರಿಂದ ಕೆಲಸ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದರು.

ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ ಮಾತನಾಡಿ, `ನಮ್ಮ ಹೊಲ ನಮ್ಮ ದಾರಿ’ ಯೋಜನೆ ಬಗ್ಗೆ ಅನೇಕರಿಗೆ ತಿಳಿದೇ ಇಲ್ಲ ಎಂದು ಹೇಳಿದರು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಈಗಾಗಲೇ 14 ಕಾಮಗಾರಿಗಳು ಪೂರ್ಣಗೊಂಡಿದ್ದು, ಎರಡು ಕಾಮಗಾರಿಗಳು ಬಾಕಿ ಇವೆ ಎಂದಾಗ, ಈ ವಿಚಾರ ನನ್ನ ಗಮನಕ್ಕೆ ಏಕೆ ತಂದಿಲ್ಲ? ಎಂದು ಸಿದ್ದೇಶ್ವರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿ.ಪಂ. ಸಿಇಒ ಡಾ.ಎ. ಚನ್ನಪ್ಪ,  ಮಹಾನಗರ ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್ ಸೇರಿದಂತೆ ದಿಶಾ ಸಮಿತಿ ಸದಸ್ಯರು ಸಭೆಯಲ್ಲಿದ್ದರು.