ಮಕ್ಕಳಿಗೆ ಸಂಸ್ಕಾರ – ನಡವಳಿಕೆ ಕಲಿಸುವುದು ಆದ್ಯ ಕರ್ತವ್ಯವಾಗಲಿ

ಮಕ್ಕಳಿಗೆ ಸಂಸ್ಕಾರ – ನಡವಳಿಕೆ ಕಲಿಸುವುದು ಆದ್ಯ ಕರ್ತವ್ಯವಾಗಲಿ

ಮಕ್ಕಳಿಗೆ ಸಂಸ್ಕಾರ – ನಡವಳಿಕೆ ಕಲಿಸುವುದು ಆದ್ಯ ಕರ್ತವ್ಯವಾಗಲಿ

ದಾವಣಗೆರೆ, ಮಾ.17- ಮನುಷ್ಯ ವಾತಾವರಣದ ಬಲಿಪಶು, ಯಾವ ವಾತಾವರಣದಲ್ಲಿ ಬೆಳೆಯುತ್ತಾನೋ ಅದೇ ಗುಣಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾನೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಕರ್ನಾಟಕದ ಸಹಪ್ರಾಂತ ಕಾರ್ಯವಾಹ ಪಟ್ಟಾಭಿರಾಂ (ಶಿವಮೊಗ್ಗ) ಅಭಿಪ್ರಾಯ ಪಟ್ಟರು.

ಶುಕ್ರವಾರ ನಗರದ ಸೋಮೇಶ್ವರ ವಿದ್ಯಾಲಯದಲ್ಲಿ ಏರ್ಪಡಿಸಿದ್ದ, ಜನ್ಮಭೂಮಿ ಮತ್ತು ಜನ್ಮದಾತರಿಗೊಂದು ನಮನ ಕಾರ್ಯಕ್ರಮದ ಕುರಿತು ದಿಕ್ಸೂಚಿ ಮಾತುಗಳನ್ನಾಡಿದರು.

ಹುಟ್ಟುತ್ತ ಎಲ್ಲರೂ ಭಗವಂತನ ಗುಣ ಗಳನ್ನು ಹೊಂದಿರುತ್ತಾರೆ. ಆದರೆ, ಬೆಳೆಯುವ ವ್ಯವಸ್ಥೆಯ ಆಧಾರದ ಮೇಲೆ ಅದು ನಿರ್ಧಾರವಾಗುತ್ತದೆ. ಹಾಗಾಗಿ, ರಾಕ್ಷಸಿಯ ಬೀಜಗಳಿಂದ ಮಕ್ಕಳನ್ನು ದೂರವಿರಿಸುವುದು ಪೋಷಕರ ಜವಾಬ್ದಾರಿಯಾಗಬೇಕು. ಮಕ್ಕಳಿಗೆ ಸೌಕರ್ಯ ಒದಗಿಸುವುದಷ್ಟೇ ತಂದೆ, ತಾಯಿ ಕರ್ತವ್ಯ ಅಲ್ಲ, ನಡವಳಿಕೆ ಕಲಿಸುವುದು ಕೂಡ ಕರ್ತವ್ಯವಾಗಬೇಕು. ಕೇವಲ ಕಟ್ಟಡ ಹೊಂದಿದ್ದರೆ ಕುಟುಂಬವಲ್ಲ, ವ್ಯಕ್ತಿಗಳಿಂದ ತುಂಬಿದ್ದರೆ ಮಾತ್ರ ಅದು ಕುಟುಂಬ. ತುಂಬಿದ ಕುಟುಂಬದಲ್ಲಿ ಮಕ್ಕಳು ಬೆಳೆದರೆ ಸ್ನೇಹ-ಸಂಬಂಧದ ಮೌಲ್ಯ ಅರಿತುಕೊಳ್ಳುತ್ತಾರೆ ಎಂದರು.

ಬಸವಣ್ಣ, ಶಂಕರಾಚಾರ್ಯರು ಬಾಲ್ಯದಲ್ಲಿಯೇ ವೇದ, ಉಪನಿಷತ್ತನ್ನು ಕಲಿತಿದ್ದರು. ಆದ್ದರಿಂದಲೇ, ತಾಯ್ನಾಡಿನ ಕುರಿತು ಅಪಾರ ಭಕ್ತಿ ಹೊಂದಿದ್ದರು. ಕೇವಲ ಜನ್ಮ ನೀಡಿದ ಮಾತ್ರಕ್ಕೆ ತಾಯಿಯಲ್ಲ, ಜೀವ ನದ ಪೋಷಣಾ ಸ್ಥಾನದಲ್ಲಿರುವ ಭೂಮಿ, ನದಿ, ಪಂಚಭೂತಗಳೆಲ್ಲವೂ ತಾಯಿ ಸ್ಥಾನ ಪಡೆದಿವೆ. ಹೆತ್ತ ತಾಯಿ ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲು ಎಂಬ ಸಂಸ್ಕಾರ ನೀಡಬೇಕು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿ ಸಿದ ಅಕ್ಕ ಮಹಾದೇವಿ ಮಹಿಳಾ ಸಮಾಜದ ಅಧ್ಯಕ್ಷರಾದ ಕಂಚಿಕೇರಿ ಸುಶೀಲಮ್ಮ ಮಾತನಾಡಿ, ಸಂಸ್ಕೃತಿ ಹಾಗೂ ಸಂಸ್ಕಾರಗಳೇ ದೇಶದ ಗೌರವ ಮತ್ತು ಘನತೆ ಹೆಚ್ಚಿಸುತ್ತವೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕೃತಿ, ಸಂಸ್ಕಾರ, ಸಂಬಂಧಗಳ ಬಗ್ಗೆ ಆಳವಾದ ಅರಿವು ಮೂಡಿಸಬೇಕು‌. ಆಗ ಸಮಾಜದಲ್ಲಿ ವೃದ್ಧಾಶ್ರಮಗಳ ಅಗತ್ಯವೇ ಇರುವುದಿಲ್ಲ ಎಂದು ಹೇಳಿದರು. ಗಿಡವಾಗಿ ಬಗ್ಗದ್ದು ಮರ ವಾಗಿ ಬಗ್ಗಿತೇ? ಎನ್ನುವ ಮಾತಿನಂತೆ ಮಕ್ಕ ಳಲ್ಲಿ ಅವರ ಪ್ರಾಥಮಿಕ ಶಿಕ್ಷಣ ಹಂತದಲ್ಲೇ ಸಂಸ್ಕಾರ ಬಿತ್ತುವ ಮೂಲಕ ನಾಡಿನ ಶ್ರೇಷ್ಠ ಪ್ರಜೆಗಳನ್ನಾಗಿಸಬೇಕೆಂದು ಕರೆ‌ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿ.ರುದ್ರಯ್ಯ ಮಾತನಾಡಿ, ಮಕ್ಕಳಿಗೆ ಮನೆ ಹಾಗೂ ಶಾಲೆಯಲ್ಲಿ ಏಕಕಾಲದಲ್ಲಿ ಸಂಸ್ಕಾರ ಕಲಿಸುವ ಕೆಲಸವಾಗಬೇಕು. ತಮ್ಮ ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಮಕ್ಕಳು ಅಳವಡಿಸಿಕೊಳ್ಳುವ ಸಂಸ್ಕಾರ ಮತ್ತು ಒಳ್ಳೆಯ ನಡವಳಿಕೆಗಳೇ ಅವರು ಕಾಲೇಜು ಜೀವನದಲ್ಲಿ ತಪ್ಪು ದಾರಿಗೆ ಜಾರದಂತೆ ರಕ್ಷಣೆ ನೀಡುತ್ತವೆ. ಗಳಿಸುವ ಮಾರ್ಕ್ಸ್‌ಗಿಂತ ಬದುಕಿನಲ್ಲಿ ಯಾವುದೇ ರಿಮಾರ್ಕ್ಸ್ ಬರ ದಂತೆ ಎಚ್ಚರ ವಹಿಸಬೇಕು. ಇಂತಹ ಸಮಾ ರಂಭ ಮಕ್ಕಳಿಗೆ ಸ್ಪೂರ್ತಿ ಹಾಗೂ ಪ್ರೇರಣ ದಾಯಕವಾಗುತ್ತದೆ ಎಂದು ಹೇಳಿದರು.

ಹೆತ್ತ ಮಾತಾಪಿತರನ್ನು, ಹೊತ್ತ ಧರಣಿಯನ್ನು, ಕಾಪಾಡುವ ಪ್ರಕೃತಿಯನ್ನು ದೇವರಂತೆ ಪೂಜಿಸುವ ಪವಿತ್ರ ಸಂಸ್ಕೃತಿಯ ದೇಶ ನಮ್ಮದು‌. ಅಂತಹ ಪವಿತ್ರ ಸಂಸ್ಕೃತಿಯುಳ್ಳ ನಮ್ಮ ಸಮಾಜ ಇಂದು ಸಂಕೀರ್ಣ ಅವಸ್ಥೆಯಲ್ಲಿದೆ. ಇವತ್ತಿನ ಯಾಂತ್ರಿಕ ಯುಗದಲ್ಲಿ ಮಕ್ಕಳಿಗೆ ಪೋಷಕರೊಂದಿಗೆ ಮತ್ತು ಕುಟುಂಬದ ಹಿರಿಯರೊಡನೆ ಭಾವನಾತ್ಮಕ ಸಂಬಂಧವನ್ನು ಬೆಸೆಯಲು, ಜೀವನ ಮೌಲ್ಯಗಳನ್ನು ಬಿತ್ತಲು ಈ ಜನ್ಮ ಭೂಮಿ ಮತ್ತು ಜನ್ಮದಾತರಿಗೊಂದು ನಮನ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆಂದು ಶ್ರೀ ಸೋಮೇಶ್ವರ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕೆ.ಎಂ.ಸುರೇಶ್ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು. 

ಈ ವೇಳೆ ಶಾಲೆಯ ವಿದ್ಯಾರ್ಥಿನಿ ಕು.ಅನು ಕೆ., ಮಾನ್ವಿತಾ ಎಂ.ಡಿ ಅನಿಸಿಕೆ ವ್ಯಕ್ತಪಡಿಸಿದರು. ಇತ್ತೀಚಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ 76 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಶಾಲೆಯ ವಿದ್ಯಾರ್ಥಿನಿ ಜಿ.ಎನ್. ಸುಕೃತಳನ್ನು ಸನ್ಮಾನಿಸಲಾಯಿತು.