ಪ್ರಧಾನಿ ಸಮಾವೇಶದಿಂದ ವಿಜಯ ದುಂದುಭಿ

ಪ್ರಧಾನಿ ಸಮಾವೇಶದಿಂದ ವಿಜಯ ದುಂದುಭಿ

ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌

ದಾವಣಗೆರೆ, ಮಾ. 16 – ರಾಜ್ಯದ ನಾಲ್ಕು ದಿಕ್ಕುಗಳಿಂದ ಆರಂಭವಾಗಿರುವ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ, ದಾವಣಗೆರೆಯ ಮೋದಿ ಸಮಾವೇಶದಿಂದ ವಿಜಯೋತ್ಸವವಾಗಿ ಪರಿವರ್ತನೆಯಾಗಲಿದೆ. ಇಲ್ಲಿಂದ ವಿಜಯ ದುಂದುಭಿ ಮೊಳಗಲಿದೆ ಎಂದು ಬಿಜೆಪಿ ರಾಜ್ಯಾ ಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ನಗರದ ಜಿ.ಎಂ.ಐ.ಟಿ. ಪಕ್ಕದ 450 ಎಕರೆ ಪ್ರದೇಶದಲ್ಲಿ ಮಾ.25ರಂದು ಆಯೋಜಿಸಲಾಗಿ ರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಮಹಾಸಂಗಮ ಸಮಾವೇಶದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮೋದಿ ಸಮಾವೇಶದ ಮುನ್ನಾ ದಿನ ಮಾ. 24 ರಂದು ನಗರದಲ್ಲಿ ನಾಲ್ಕು ರಥಗಳು ಸೇರುವ ರೋಡ್ ಶೋ ನಡೆಯಲಿದೆ. ಸಮಾವೇಶದ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 1-2 ಕಿ.ಮೀ.ಗಳ ರೋಡ್ ಶೋನಲ್ಲಿ ಭಾಗಿಯಾಗಲಿದ್ದಾರೆ ಎಂದವರು ತಿಳಿಸಿದರು.

ನಾಲ್ಕು ದಿಕ್ಕುಗಳಲ್ಲಿ ಆರಂಭವಾಗಿರುವ ವಿಜಯ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಸ್ವಾಗತ ದೊರೆ ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ಗಳ ಭದ್ರಕೋಟೆ ಎನ್ನಲಾಗುವ ಮಂಡ್ಯದಲ್ಲೂ ಪ್ರಧಾನಿ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಜನ ಸೇರಿದ್ದಾರೆ ಎಂದು ಹೇಳಿದರು.

ದಾವಣಗೆರೆಯು ಬಿಜೆಪಿ ಶಕ್ತಿಶಾಲಿಯಾಗಿರುವ ಜಿಲ್ಲೆಯಾಗಿದೆ. ಇಲ್ಲಿ ಎಲ್ಲಕ್ಕಿಂತ ಹೆಚ್ಚಿನ 10 ಲಕ್ಷ ಜನ ಸೇರಲಿದ್ದಾರೆ. ಇದುವರೆಗೂ ಪ್ರಧಾನಿ ಸಮಾವೇಶ ಗಳಲ್ಲಿ 3-4 ಲಕ್ಷ ಜನ ಸೇರಿದ್ದಾರೆ. ಇದನ್ನು ಗೆಲುವು ಎನ್ನಬಹುದು. ದಾವಣಗೆರೆಯಲ್ಲಿ ಇದಕ್ಕೂ ಮುಂದೆ ಹೋಗುವಂತಹ ಸಮಾವೇಶ ನಡೆದು ಇತಿಹಾಸ ರಚನೆ ಯಾಗಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ಅವರ ಸಮಾವೇಶಕ್ಕೆ ಬಿಜೆಪಿ ಕಾರ್ಯ ಕರ್ತರಷ್ಟೇ ಅಲ್ಲ, ಮತದಾರರೂ ಉತ್ಸಾಹದಿಂದ ಬರುತ್ತಿ ದ್ದಾರೆ. ಮೋದಿ ಹಾಗೂ ಬಿಜೆಪಿಯ ಬಗ್ಗೆ ಜನರಲ್ಲಿ ವಿಶ್ವಾಸ ಹಾಗೂ ಭರವಸೆ ಇದೆ ಎಂದು ಕಟೀಲ್ ತಿಳಿಸಿದರು. ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಗೆ ಧ್ವನಿಯೇ ಕೇಳದಂತಾಗಿದೆ. ಮತ್ತೊಂದೆಡೆ ಜೆಡಿಎಸ್‌ನ ಪಂಚರತ್ನ ಯಾತ್ರೆ ಹಾಸನದಲ್ಲಿ ಬಾಕಿ ಆಗಿದೆ. ಅದರ ಇಂಜಿನ್ ಸೀಜ್ ಆಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 70 ಹಾಗೂ ಜೆಡಿಎಸ್ 20 ಸೀಟು ದಾಟುವುದಿಲ್ಲ ಎಂದವರು ಭವಿಷ್ಯ ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಷತ್ ಸದಸ್ಯ ಕೆ.ಎಸ್. ನವೀನ್, ದಾವಣಗೆರೆಯಿಂದ ಯಾವಾಗ ಯಾತ್ರೆ ಮಾಡಿದರೂ ಬಿಜೆಪಿ ಅಧಿ ಕಾರಕ್ಕೆ ಬಂದಿದೆ. ಈ ಬಾರಿ ಮಹಾಸಂಗಮ ಸಮಾ ವೇಶವನ್ನು ಯುಗಾದಿ ಹಬ್ಬದಂತೆ ಆಚರಿಸಲಾಗುವುದು ಎಂದರು.

ವೇದಿಕೆ ಮೇಲೆ ಸಂಸದರಾದ ಜಿ.ಎಂ. ಸಿದ್ದೇಶ್ವರ, ದೇವೇಂದ್ರಪ್ಪ, ಶಾಸಕರಾದ ಎಸ್.ಎ. ರವೀಂದ್ರನಾಥ್, ಎಸ್.ವಿ. ರಾಮಚಂದ್ರ, ಪ್ರೊ. ಲಿಂಗಣ್ಣ, ಜಿ.ಹೆಚ್. ತಿಪ್ಪಾರೆಡ್ಡಿ, ಅರುಣ್ ಕುಮಾರ್ ಪೂಜಾರ್‌, ಸೋಮಶೇಖರ್ ರೆಡ್ಡಿ, ಸೋಮಲಿಂಗಪ್ಪ, ಪರಿಷತ್ ಸದಸ್ಯರಾದ ಹೇಮಲತ, ಆರ್. ಶಂಕರ್, ದೂಡಾ ಅಧ್ಯಕ್ಷ ಎ.ವೈ. ಪ್ರಕಾಶ್, ಮಾಜಿ ಶಾಸಕ ಬಿ.ಪಿ. ಹರೀಶ್,  ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಮಾಜಿ ಶಾಸಕ ಬಿ.ಪಿ. ಹರೀಶ್, ಮುಖಂಡರಾದ ದೇವರಮನಿ ಶಿವಕುಮಾರ್, ಕೇಶವಪ್ರಸಾದ್, ಸುಧಾ ಜಯ ರುದ್ರೇಶ್, ಬಸವರಾಜ ನಾಯ್ಕ, ಶಿವಲಿಂಗಪ್ಪ, ಬಿ.ಎಸ್. ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

ನಾಗ ದರ್ಶನ : ಭೂಮಿ ಪೂಜೆಯ ಕಾರ್ಯ ಕ್ರಮದ ಆರಂಭಕ್ಕೂ ಮುಂಚೆ, ವೇದಿಕೆಯ ಹಿಂದೆ ನಾಗರ ಹಾವೊಂದು ಕಾಣಿಸಿಕೊಂಡಿತು. ಹಾವಿನ ಹೆಡೆಗೆ ಪೆಟ್ಟಾಗಿತ್ತು. ಜನರು ಗುಂಪಾಗಿ ನೆರೆದಾಗ, ಹಾವು ನಿಧಾನವಾಗಿ ನಿರ್ಜನ ಪ್ರದೇಶದ ಕಡೆಗೆ ತೆರಳಿತು.