ಹರಪನಹಳ್ಳಿಯಲ್ಲಿ ಸಾರಿಗೆ ಸಚಿವ ಬಿ. ಶ್ರೀರಾಮುಲು ವಿಶ್ವಾಸ
ಹರಪನಹಳ್ಳಿ, ಮಾ. 16- ಕಲ್ಯಾಣ ಕರ್ನಾಟಕದ 42 ಕ್ಷೇತ್ರಗಳ ಪೈಕಿ 30ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಪಟ್ಟಣದ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿದ ವೇಳೆ ಸಾರಿಗೆ ನಿರ್ದೇಶಕ ಆರುಂಡಿ ನಾಗರಾಜರವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 5000 ಕೋಟಿ ರೂ.ಗಳ ಅನುದಾನ ಕಲ್ಪಿಸಿದ್ದು, ಹಾಗಾಗಿ ಈ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದರು.
ಸಾರಿಗೆ ಇಲಾಖೆಯಲ್ಲಿ ಕಳೆದ 27 ವರ್ಷಗಳಿಂದ ನೌಕರರಿಗೆ ವೇತನ ಪರಿಷ್ಕರಣೆ ಮಾಡಿರುವುದಿಲ್ಲ, ನಮ್ಮ ಸರ್ಕಾರದ ಅವಧಿಯಲ್ಲಿ ಪ್ರಸ್ತುತ ಶೇ.15ರಷ್ಟು ವೇತನ ಹೆಚ್ಚಳ ಮಾಡುವ ಮೂಲಕ ನೌಕರರ ಹಿತ ಕಾಪಾಡಲಾಗಿದೆ ಎಂದು ಹೇಳಿದರು.
ರಾಜ್ಯದ ನಾಲ್ಕು ನಿಗಮಗಳಿಗೆ 5500 ಕೋಟಿ ರೂ.ಅನುದಾನ ನೀಡಿ ಸಾರಿಗೆ ಅಭಿವೃದ್ಧಿಗೆ ಒತ್ತು ನೀಡ ಲಾಗಿದೆ. 4500 ಬಸ್‍ಗಳನ್ನು ಖರೀದಿಸಲಾಗಿದೆ. ಸಾರಿಗೆ ಇಲಾ ಖೆಯ ಕರ್ತವ್ಯನಿರತ ಸಿಬ್ಬಂದಿಗಳು ಮೃತಪಟ್ಟರೆ ಅವರ ಕುಟುಂಬಗಳಿಗೆ ವಿಮೆ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ರಾಜ್ಯದಲ್ಲಿ 130 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದ್ದು, ಈ ಬಾರಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಾರಿಗೆ ನಿರ್ದೇಶಕ ಆರುಂಡಿ ನಾಗರಾಜ, ಜಿ.ಪಂ. ಮಾಜಿ ಸದಸ್ಯೆ ಸುವರ್ಣ ನಾಗರಾಜ ಸೇರಿದಂತೆ ಇತರರು ಇದ್ದರು.