ಸನ್ನಡತೆ, ಸದ್ಗುಣಗಳೇ ಬದುಕಿಗೆ ದಾರಿದೀಪ : ಹೆಬ್ಬಾಳು ಸ್ವಾಮೀಜಿ

ಸನ್ನಡತೆ, ಸದ್ಗುಣಗಳೇ ಬದುಕಿಗೆ ದಾರಿದೀಪ : ಹೆಬ್ಬಾಳು ಸ್ವಾಮೀಜಿ

ಹಳೇಪೇಟೆಯ ಶ್ರೀ ವೀರಭದ್ರೇಶ್ವರ ಸ್ವಾಮಿ ನೂತನ ರಥದ ಉದ್ಘಾಟನೆ

ದಾವಣಗೆರೆ, ಮಾ.17- ಮಕ್ಕಳಿಗೆ ಆಚಾರ, ವಿಚಾರ ಸಂಸ್ಕೃತಿಯ ಕುರಿತು ತಿಳಿಸಿದಾಗ ಮಾತ್ರ ಸಾಮಾಜಿಕ ಕಲ್ಯಾಣ ಸಾಧ್ಯ, ಇಲ್ಲದಿದ್ದರೆ ಅನಾಥಭಾವ ಮೂಡುತ್ತದೆ ಎಂದು ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಹೇಳಿದರು.

ಸ್ಥಳೀಯ ಹಳೆಪೇಟೆಯ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ಏರ್ಪಾಡಾಗಿದ್ದ ನೂತನ ರಥದ ಉದ್ಘಾಟನೆ ಹಾಗೂ ಹೋಮ ಮತ್ತು ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಸಂಸ್ಕಾರದ ಮೂಲಕ ಜ್ಞಾನ ಸಂಪಾದಿಸಲು ಮುಂದಾಗಬೇಕು. ಸನ್ನಡತೆ ಹಾಗೂ ಸದ್ಗುಣಗಳೇ ಬದುಕಿಗೆ ದಾರಿದೀಪವಾಗಿವೆ. ಶ್ರೀಮಂತ ವೈದ್ಯರು ಹಾಗೂ ಇಂಜಿನಿಯರ್‌ಗಳ ಮಕ್ಕಳು ಮಂಗಳೂರಿನಂತಹ ಪ್ರದೇಶದಲ್ಲಿ ಓದುತ್ತಿರು ವಾಗ ದುಶ್ಚಟಕ್ಕೆ ದಾಸರಾಗಿ ಬದುಕು ಹಾಳು ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿನಿಂದ ಉಚ್ಚಾಟನೆ ಆಗಿರುವ ಘಟನೆ ನಡೆದಿದ್ದು, ಈ ರೀತಿಯ ಘಟನೆ ಮರುಕಳಿಸಬಾರದೆಂದರೆ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು ಎಂದು ಮಾರ್ಗದರ್ಶನ ನೀಡಿದರು.

ಸನಾತನ ಧರ್ಮದ ಪರಂಪರೆಯಲ್ಲಿ ರಥ ನಿರ್ಮಿಸಿ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಭಕ್ತಿಯನ್ನು ಸಮರ್ಪಣೆ ಮಾಡಲಾಗುತ್ತದೆ. ಶರಣರು, ಸಂತರು ಮಹಾತ್ಮರ ಭಾವನೆಯಲ್ಲಿ ಮಾನವನ ಶರೀರವೇ ದೇವಸ್ಥಾನವಾಗಿದ್ದು, ಮಸ್ತಕವನ್ನ ಕಳಸಕ್ಕೆ ಹೋಲಿಸಿದ್ದಾರೆ. ಸನಾತನ ಪದ್ಧತಿ ಪ್ರಕಾರ ರಥವು ಪವಿತ್ರ ಸ್ಥಾನ ಪಡೆಯಲು ಜಂಗಮ ಮೂರ್ತಿ ಪ್ರತಿಷ್ಠಾಪಿಸಿ ಜೀವ ತುಂಬಲಾಗುತ್ತದೆ. ಹಾಗಾಗಿ, ಭಕ್ತಿ ಭಾವದಿಂದ ಪಾಲ್ಗೊಳ್ಳಬೇಕು. ಹೋಮಕ್ಕೆ ಕಾಯಿಯನ್ನು ಶಾಸ್ತ್ರ ಹಾಗೂ ಶಿಷ್ಟಾಚಾರಕ್ಕೆ ಒಂದು ಮಾತ್ರ ಸುಡಬೇಕು, ಪ್ರತಿಯೊಬ್ಬರು ಹೋಮಕ್ಕೆ ಕಾಯಿ ಸಮರ್ಪಿಸುವ ಅಗತ್ಯವಿಲ್ಲ. ಉಳಿದ ಕಾಯಿಗಳನ್ನು ಪ್ರಸಾದ ಮಾಡಿ ಹಂಚಬೇಕು ಎಂದು ಕಿವಿಮಾತು ಹೇಳಿದರು.

ನೂತನ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥಕ್ಕೆ ಅಂದಾಜು 17 ಲಕ್ಷ ವೆಚ್ಚವಾಗಿದ್ದು, ರಾಮನಗರದ ಕಲಾವಿದ ಸಂತೋಷ್‌ ಆಚಾರ್ ಕೆತ್ತನೆ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಕುದರಿ ವಿಶ್ವನಾಥ್, ಕುದರಿ ಕರಿಬಸಪ್ಪ, ಕೊಡಬಳೆ ಚನ್ನಬಸಪ್ಪ, ಕೊಂಡಜ್ಜಿ ಮೃತ್ಯುಂಜಯ, ಕೆ. ಮುರುಗೇಂದ್ರಪ್ಪ, ಹರಿಹರದ ಕರಿಬಸಪ್ಪ, ಕೆ.ಸಿ ಉಮೇಶ್, ಶಿವಣ್ಣ, ಚಂದ್ರಶೇಖರ್, ಬಕ್ಕೇಶ್, ನಿರಂಜನ್, ನಾಗರಾಜ್ ಮತ್ತಿತರರಿದ್ದರು.