ಸರ್ವರ ವಿಶ್ವಾಸ ಗಳಿಸಿ, ಪ್ರಗತಿಪರ ಕೆಲಸ ಮಾಡಿ

ಸರ್ವರ ವಿಶ್ವಾಸ ಗಳಿಸಿ, ಪ್ರಗತಿಪರ ಕೆಲಸ ಮಾಡಿ

ಪಾಲಿಕೆ ನೂತನ ಮೇಯರ್‌ ವಿನಾಯಕ ಅವರ ಅಭಿನಂದನಾ ಸಮಾರಂಭದಲ್ಲಿ ಗಣ್ಯರ ಕರೆ 

ದಾವಣಗೆರೆ, ಮಾ.14- ಸರ್ವ ಸಮುದಾಯದ ಜನರ ವಿಶ್ವಾಸ ಗಳಿಸುವ ಮುಖಾಂತರ ಅಧಿಕಾರವಧಿಯಲ್ಲಿ ಉತ್ತಮ ಪ್ರಗತಿಪರ ಕೆಲಸ ಮಾಡಲಿ ಎಂದು ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಿ.ವೀರಣ್ಣ ಶುಭ ಹಾರೈಸಿದರು.

ಮಂಗಳವಾರ ನಾಯಕ ವಿದ್ಯಾರ್ಥಿ ನಿಲಯ, ಜಿಲ್ಲಾ ವಾಲ್ಮೀಕಿ ನಾಯಕ ಸಮಾಜ ಇವರ ಜಂಟಿ ಆಶ್ರಯದಲ್ಲಿ ಮಹಾನಗರ ಪಾಲಿಕೆ ಮಹಾಪೌರ ಹೆಚ್.ಬಿ.ವಿನಾಯಕ ಅವರಿಗೆ ನಾಯಕ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆ.ಪಿ.ಎಸ್.ಸಿ ಮಾಜಿ ಸದಸ್ಯ ಜಿ.ಟಿ. ಚಂದ್ರಶೇಖರಪ್ಪ ಮಾತನಾಡಿ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಸಂವಿಧಾನದಲ್ಲಿ ಡಾ.ಅಂಬೇಡ್ಕರ್ ಮೀಸಲಾತಿ ಕಲ್ಪಿಸಿದ್ದರಿಂದ ಮೇಯರ್ ಆಗುವ ಅವಕಾಶ ದೊರಕಿದೆ. ಮಹಾಪೌರರ ಹುದ್ದೆ ದೊಡ್ಡ ಹುದ್ದೆಯಾಗಿದ್ದು, ವಿನಾಯಕ  ಅವರು ದೊರೆತ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸಲಿ ಎಂದು ಆಶಿಸಿದರು.

ಮುಖಂಡ ಸುಭಾಷ್‌ಚಂದ್ರ ಮಾತನಾಡಿ, ರಾಜಕೀಯ ಚದುರಂಗದಾಟದಲ್ಲಿ ಮಹಾಪೌರರ ಹುದ್ದೆ ಸಿಕ್ಕಿರುವುದು ಅದೃಷ್ಟ. ಹಿಂದಿನಿಂದಲೂ ಅನೇಕರು ಆ ಸ್ಥಾನ ಅಲಂಕರಿಸಿ ಇಳಿದಿದ್ದಾರೆ. ಆದರೆ, ಕೆಲವರು ಮಾತ್ರ ಅಚ್ಚಳಿಯದೇ ಉಳಿದಿದ್ದಾರೆ. ಹಾಲಿ ಮೇಯರ್ ಕೂಡ ಜನರ ಮನಸ್ಸಲ್ಲಿ ತಮ್ಮ ಹೆಸರು ಉಳಿಯುವ ಕೆಲಸ ಮಾಡಲಿ ಎಂದರು.

ಮಹಾಪೌರರಾದ ವಿನಾಯಕ ಪೈಲ್ವಾನ್‌ ಮಾತನಾಡಿ, ನನಗೆ ದೊರೆತ ಅವಕಾಶವನ್ನು ಬಳಸಿಕೊಂಡು ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಕೆ.ಹೆಚ್ ತಿಪ್ಪಣ್ಣ, ಸಮಾಜದ ತಾಲ್ಲೂಕು ಅಧ್ಯಕ್ಷ ಹದಡಿ ಹಾಲಪ್ಪ, ವಾಲ್ಮೀಕಿ ಯುವ ಘಟಕದ ಅಧ್ಯಕ್ಷ ಶಾಮನೂರು ಪ್ರವೀಣ್‌, ವಕೀಲರಾದ ಆಂಜನೇಯ ಗುರೂಜಿ, ವಕೀಲ ಗುಮ್ಮನೂರು ಮಲ್ಲಿಕಾರ್ಜುನ್‌, ಮಹಿಳಾ ಘಟಕದ ವಿಜಯಲಕ್ಷ್ಮಿ ಮತ್ತು ಇತರರು ಮಾತನಾಡಿದರು.

ಗುಮ್ಮನೂರು ಶಂಭುಲಿಂಗಪ್ಪ, ತುಪ್ಪದಹಳ್ಳಿ ಹನುಮಂತಪ್ಪ, ಪಾಲಿಕೆ ಮಾಜಿ ಸದಸ್ಯೆ ಲಕ್ಷ್ಮಿದೇವಿ ವೀರಣ್ಣ, ತಾಲ್ಲೂಕು ಕಾರ್ಯದರ್ಶಿ ಶ್ಯಾಗಲೆ ಮಂಜುನಾಥ, ನೌಕರರ ಸಂಘದ ಬಿ.ಶ್ರೀನಿವಾಸ ನಾಯಕ, ಕರಿಲಕ್ಕೇನಹಳ್ಳಿ ತಿಪ್ಪಣ್ಣ, ಹರಪನಹಳ್ಳಿ ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಉಚ್ಚೆಂಗೆಪ್ಪ, ಮುಖಂಡರಾದ ಟಿ.ಬಿ.ರಾಜು. ಮಂಡಕ್ಕಿ  ಸುರೇಶ, ಟಿ.ಚಂದ್ರಪ್ಪ ಮತ್ತಿತರರಿದ್ದರು.