ಸರ್ಕಾರಿ ಬಿ.ಇಡಿ., ಕಾಲೇಜು ಮಂಜೂರಾತಿಗೆ ಒತ್ತಾಯ

ಸರ್ಕಾರಿ ಬಿ.ಇಡಿ., ಕಾಲೇಜು ಮಂಜೂರಾತಿಗೆ ಒತ್ತಾಯ

ದಾವಣಗೆರೆ, ಮಾ. 15- ನಗರಕ್ಕೆ ಸರ್ಕಾರಿ ಬಿ.ಇಡಿ. ಕಾಲೇಜು ಮಂಜೂರು ಮಾಡುವಂತೆ ಹೆಲ್ಪ್‌ಲೈನ್ ರೂರಲ್ ಡೆವಲಪ್‌ಮೆಂಟ್ ಸಂಸ್ಥೆಯ ಕಾರ್ಯದರ್ಶಿ ಹೆಲ್ಪ್‌ಲೈನ್ ಸುಭಾನ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ದಾವಣಗೆರೆ ಜಿಲ್ಲೆಯು ಕರ್ನಾಟಕದ ಹೃದಯ ಭಾಗವಾಗಿದ್ದು, ವಿದ್ಯಾಕಾಶಿ ಎಂದು ಪ್ರಖ್ಯಾತಿ ಪಡೆದಿದ್ದು, ಸರ್ಕಾರ ಮಾತ್ರ ಶಿಕ್ಷಣದ ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆರೋಪಿಸಿದ್ದಾರೆ.

ದಾವಣಗೆರೆ ವಿಶ್ವವಿದ್ಯಾನಿಲಯವಿದ್ದರೂ ಬೇಡಿಕೆಗೆ ಅನುಗುಣವಾಗಿ ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣ ಸೇರಿದಂತೆ ಹಲವಾರು ಕೋರ್ಸ್‌ಗಳು ದಾವಣಗೆರೆಯಲ್ಲಿ ಇಲ್ಲದಿರುವುದು ವಿಷಾದದ ಸಂಗತಿ ಎಂದಿದ್ದಾರೆ.

ದೂರದ ನಗರಗಳಿಗೆ ಹೋಗಿ ಶಿಕ್ಷಣ ಪಡೆಯುವಂತಾಗಿದೆ. ವಿಶೇಷ ಚೇತನ ವಿದ್ಯಾರ್ಥಿಗಳಿಗೆ ತುಂಬಾ ಅನಾನುಕೂಲವಾಗಿದ್ದು, ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿ ದಾವಣಗೆರೆಗೆ ಸರ್ಕಾರಿ ಬಿ.ಇಡಿ., ಕಾಲೇಜು ಮಂಜೂರು ಮಾಡುವಂತೆ ಸುಭಾನ್ ಆಗ್ರಹಿಸಿದ್ದಾರೆ.