`ವೃದ್ಧರಾಗಬಾರದು ನಾವು ಹಿರಿಯರಾಗಬೇಕು’ ಎಂಬ ಮಾತಿದೆ. ಈ ಮಾತು ಎಷ್ಟು ಸತ್ಯ ಅಲ್ವಾ ? ವೃದ್ಧಾಪ್ಯ ಅನೇಕ ಸಮಸ್ಯೆಗಳ ಸುಳಿಯಲ್ಲಿ ನಮ್ಮನ್ನು ಸಿಲುಕಿಸಿದರೆ, ಹಿರಿತನ ನಮ್ಮನ್ನು ಮಾದರಿ ವ್ಯಕ್ತಿಯನ್ನಾಗಿಸುತ್ತದೆ. ವ್ಯಕ್ತಿಯ ವ್ಯಕ್ತಿತ್ವ ಅನಾವರಣಗೊಳ್ಳುವುದೇ ಅವನ ಅನುಭವದಿಂದ. ಮೊನ್ನೆ ವಿಧಾನಸಭೆಯಲ್ಲಿ ಯಡಿಯೂರಪ್ಪ ಆಡಿದ ಮಾತುಗಳಿಗೆ ಇಡೀ ಸದನವೇ ಭಾವುಕವಾಗಿತ್ತು. ಅವರ ಆ ಮಾತುಗಳು ಮೋದಿಯ ಮೆಚ್ಚುಗೆಗೂ ಪಾತ್ರವಾಗಿದ್ದು, ಕಾರಣ ಮುಂದಿನ ಪೀಳಿಗೆ ಅಥವಾ ರಾಜಕಾರಣಿಗಳಿಗೆ ಒಂದು ಸ್ಪಷ್ಟ ಸಂದೇಶ ಆ ಮಾತುಗಳಲ್ಲಿ ಇತ್ತು.
ರಾಜಕೀಯದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡ ಯಡಿಯೂರಪ್ಪನವರು, ಇಂತಹ ಭಾಷಣವನ್ನು ಮಾಡುವಾಗ ಸಭೆ ಮೂಕವಿಸ್ಮಿತವಾಗಿ ಆಲಿಸುತ್ತಿತ್ತು. ತಾನು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವ ನಿರ್ಧಾರವನ್ನು ಘೋಷಿಸಿದಾಗ ಪ್ರತಿಪಕ್ಷಗಳ ಸದಸ್ಯರೇ ಮತ್ತೆ ಚುನಾವಣೆಗೆ ನಿಲ್ಲುವಂತೆ ಆಗ್ರಹಿಸಿದರು. ಎಂತಹ ಅದ್ಭುತ ಅಲ್ವಾ !! ನಮ್ಮವರು ನಮ್ಮನ್ನು ಹೊಗಳಿದ್ದರೆ ಅದು ಅಷ್ಟು ಮಹತ್ವ ವಾಗಲಾರದು. ಆದರೆ, ಇಲ್ಲಿ ನಡೆದಿದ್ದೇ ಬೇರೆ.
ಮಂಡ್ಯ ಜಿಲ್ಲೆಯಲ್ಲಿ ಹುಟ್ಟಿದ ಯಡಿಯೂರಪ್ಪ ಅವರು, ರಾಜಕೀಯವಾಗಿ ಆರಿಸಿಕೊಂಡಿದ್ದು ಮಾತ್ರ ಶಿಕಾರಿಪುರ. ಅಂದಿನಿಂದ ಇಂದಿನವರೆಗೆ ಅದೇ ಕ್ಷೇತ್ರದಲ್ಲಿ ತಮ್ಮ ರಾಜಕೀಯ ಜೀವನ ಕಳೆದಿದ್ದಾರೆ. ಬಿಜೆಪಿ ಅನ್ನೋ ಪದವೇ ಜನರಿಗೆ ಗೊತ್ತಿಲ್ಲದ ದಿನದಿಂದ ಇಡೀ ದೇಶದ ಮುಕ್ಕಾಲು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ತನಕ ಯಡಿಯೂರಪ್ಪನವರದ್ದು ಸುದೀರ್ಘ ಹಾದಿ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಹೆಮ್ಮೆ ಅವರದು. ರಾಜಕೀಯದಲ್ಲಿ ಅನೇಕ ವಿಷಮ ಪರಿಸ್ಥಿತಿಗಳನ್ನು ಎದುರಿಸಿರುವ ಅವರಿಗೆ ರಾಜಕೀಯ ಬಿಟ್ಟು ಬೇರೆ ಬದುಕಿಲ್ಲ. `ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತದೆ’ ಎಂಬ ಛಾಪು ಮೂಡಿಸಿದವರು. ಏಳು-ಬೀಳುಗಳ ಮಧ್ಯೆಯೂ ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಂಡು ಬಂದಿರುವ ನಾಯಕ ಇವರು.
ಈಚೆಗೆ ಅವರು ಆಡಿದ ಮಾತುಗಳಲ್ಲಿ ತುಂಬಾ ಮೌಲ್ಯಯುತ ಎನಿಸಿದ್ದು, ಅವರು ಸಿದ್ದರಾಮಯ್ಯ ಅವರಿಗೆ ಹೇಳಿದ ಕಿವಿಮಾತು ಬಾದಾಮಿಯಿಂದ ಸ್ಪರ್ಧಿಸಿ, ಗೆದ್ದಿರುವ ನೀವು ಆ ಜನತೆಯ ಋಣ ತೀರಿಸಿ ಮತ್ತೆ ಅಲ್ಲಿಯೇ ನಿಮ್ಮ ರಾಜಕೀಯ ಜೀವನವನ್ನು ಕಟ್ಟಿಕೊಳ್ಳಿ. ದಿನಕ್ಕೊಂದು ಪಕ್ಷ ವಾರಕ್ಕೊಂದು ಕ್ಷೇತ್ರ ಬದಲಿಸುವ ಇಂದಿನ ರಾಜಕಾರಣಿಗಳು, ತಮ್ಮ ಆತ್ಮಸಾಕ್ಷಿಯನ್ನು ಪರೀಕ್ಷಿಸಿಕೊಳ್ಳುವಂತಹ ಸಮಯ ಗೆದ್ದು ಪಕ್ಷಾಂತರ ಮಾಡುವ ಎಲ್ಲಾ ರಾಜಕಾರಣಿಗಳು ಇನ್ನು ಮುಂದಾದರೂ ತಮ್ಮನ್ನು ಗೆಲ್ಲಿಸಿದ ಜನತೆಯ ಪಾಲಿನ ಆಶಾದಾಯಕ ವ್ಯಕ್ತಿಗಳಾಗಿ ಅದೇ ಕ್ಷೇತ್ರಕ್ಕೆ ಕೆಲಸ ಮಾಡುವಂತೆ ಆಗಲೀ ಈ ರೀತಿಯ ಹಿರಿತನದ ಮಾರ್ಗದರ್ಶನ ರಾಜಕೀಯ ರಂಗದಲ್ಲಿ ಪದೇಪದೇ ಅಲ್ಲಿನ ಸದಸ್ಯರಿಗೆ ಸಿಗುವ ಮೂಲಕ ರಾಜಕೀಯದ ನೈತಿಕ ಮಟ್ಟ ಉತ್ತಮವಾಗಲೀ ಇನ್ನು ಸಿದ್ದರಾಮಯ್ಯ ನವರು ಈ ಮಾತನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬುದನ್ನು ಕಾದು ನೋಡೋಣ!!
– ಪದ್ಮಾ ರವಿ, ಬೆಂಗಳೂರು