ಮದ್ಯ ನಿಷೇಧ ಮಾಡುವ ಧೈರ್ಯ ತೋರಲಿ..!

ಮಾನ್ಯರೇ,

ಚುನಾವಣೆಗೆ ಇನ್ನೇನು  ಕೆಲವೇ ತಿಂಗಳುಗಳು ಬಾಕಿ ಇರುವಂತೆಯೇ, ಎಲ್ಲಾ ರಾಜಕೀಯ ಪಕ್ಷಗಳು ಕಾಲಿಗೆ  ಚಕ್ರ ಕಟ್ಟಿಕೊಂಡು, ಅಬ್ಬರದ ಪ್ರಚಾರ ನಡೆಸುತ್ತಿವೆ.  ಪೈಪೋಟಿಗೆ ಬಿದ್ದಂತೆ, ಪುಕ್ಕಟೆ ಯೋಜನೆಗಳನ್ನು ಘೋಷಿಸುತ್ತಿದ್ದಾರೆ. ಆದರೆ ಈ ಪುಕ್ಕಟೆ ಯೋಜನೆಗಳಿಂದ ರಾಜ್ಯ ದಿವಾಳಿ ಅಂಚಿನತ್ತ ಸಾಗುತ್ತದೆಯೇ ಹೊರತು, ಜನರು ಉದ್ಧಾರ ಆಗುವುದಿಲ್ಲ. 

ಗುಜರಾತ್, ಬಿಹಾರ ರಾಜ್ಯದಂತೆಯೇ ರಾಜ್ಯದಲ್ಲೂ ಮದ್ಯ ಮಾರಾಟ ನಿಷೇಧಿಸುವ ಕ್ರಮವನ್ನು ಈವರೆಗೂ ಯಾವ ಪಕ್ಷದವರು ಘೋಷಿಸದಿರುವುದು ನಿಜಕ್ಕೂ ದುರ್ದೈವ. ಇದರಿಂದಾಗಿ ಅಪಘಾತ, ಗಲಾಟೆ ಸೇರಿದಂತೆ ಅನೇಕ ರೀತಿಯ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ವಿಪರೀತ ಕುಡಿತದಿಂದಾಗಿ ಹದಿ ಹರೆಯದವರೇ ಹೆಚ್ಚಾಗಿ  ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪುತ್ತಿದ್ದಾರೆ. ಪರಿಣಾಮ ಅವರನ್ನೇ ನಂಬಿದಂತಹ ಕುಟುಂಬಗಳು ಬೀದಿಗೆ ಬಿದ್ದು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. 

 ಈ ಹಿಂದೆ ಸಾರಾಯಿ ನಿಷೇಧದಂತೆ, ಮದ್ಯ ಮಾರಾಟ  ನಿಷೇಧಿಸುವಂತಹ ಕಠಿಣ ಕ್ರಮವನ್ನು ತೆಗೆದುಕೊಳ್ಳಲಿ. ಆಗ ನೀವು ನಿಜವಾಗಿಯೂ  ಬಡವರ ಪರ ಇದ್ದೀರಿ ಎಂದು ಸಾಬೀತಾಗುತ್ತದೆ. ಜೊತೆಗೆ  ಸರ್ಕಾರದ  ಸಂಪನ್ಮೂಲ ಕ್ರೋಢೀಕರಣಕ್ಕೆ ಗುಜರಾತ್ ಮತ್ತು ಬಿಹಾರ್ ರಾಜ್ಯಗಳ   ಸ್ಥಿತಿಗತಿಗಳ ಬಗ್ಗೆ  ಅಧ್ಯಯನ ಮಾಡುವ  ಮೂಲಕ ಪರ್ಯಾಯ ಮಾರ್ಗ ಹುಡುಕಿಕೊಳ್ಳ ಬಹುದಾಗಿದೆ.


ಮುರುಗೇಶ ಡಿ,  ದಾವಣಗೆರೆ.