ಮಾನ್ಯರೇ,
ಕಳೆದ ವಾರ ಅನ್ಯ ಕೆಲಸದ ನಿಮಿತ್ತ ದಾವಣಗೆರೆಯಿಂದ ಶಿವಮೊಗ್ಗಕ್ಕೆ ತೆರಳಬೇಕೆಂದು, ದಾವಣಗೆರೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಸ್ವಲ್ಪ ತಡವಾಗಿಯೇ ಹೋಗಿದ್ದ ಕಾರಣ ಬಸ್‌ನ ಹಿಂಬದಿಯಲ್ಲಿ ಸೀಟು ಸಿಕ್ಕಿತು. ಆಗ ಕಂಡಕ್ಟರ್, ಮುಂಬದಿಯಿಂದ ಟಿಕೆಟ್ ಹಣ ತೆಗೆದುಕೊಳ್ಳುತ್ತಲೇ ಪ್ರಯಾಣಿಕರಿಗೆ ಗೊಣಗುತ್ತಿದ್ದದು ಅಸ್ಪಷ್ಟವಾಗಿ ಕೇಳುತ್ತಿತ್ತು. ಕಂಡಕ್ಟರ್ ಹತ್ತಿರವಾಗುತ್ತಿದ್ದಂತೆ ಅವರು ಗೊಣಗುತ್ತಿದ್ದುದನ್ನು ಆಲಿಸಿದಾಗ, ಶಿವಮೊಗ್ಗಕ್ಕೆ ಒಂದು ಸೀಟಿಗೆ 500 ರೂ. ಕೊಟ್ಟರೆ ನಾನು ಮಿಕ್ಕ 399 ಚಿಲ್ಲರೆ ಎಲ್ಲಿಂದ ತರಲಿ, ಬರುವಾಗ ಚಿಲ್ಲರೆ ಇಟ್ಕೊಂಡು ಬರಬೇಕಪ್ಪ ಎನ್ನುತ್ತಿದ್ದರು. ಕಾರಣ ದಾವಣಗೆರೆಯಿಂದ ಶಿವಮೊಗ್ಗಕ್ಕೆ ಬಸ್ ಟಿಕೆಟ್ ದರ 101 ರೂ ಇದೆ. ಪ್ರತಿ ಪ್ರಯಾಣಿಕರು 500, 200, 150 ಹೀಗೆ ಕೊಟ್ಟು ಮೇಲಿನ ಒಂದು ರೂಪಾಯಿ ಚಿಲ್ಲರೆ ಕೊಡುತ್ತಿರಲಿಲ್ಲ, ಅಲ್ಲಿದ್ದ ಕಂಡಕ್ಟರ್ ಪರಿಸ್ಥಿತಿಯಂತೂ ಹೇಳತೀರದು. ಎಲ್ಲರಿಗೂ ಅವರು ಚಿಲ್ಲರೆ ಹಣ ಎಲ್ಲಿಂದ ತರುತ್ತಾರೆ. ಸ್ವಲ್ಪ ಯೋಚಿಸಿ. ಚಿಲ್ಲರೆ ಸಲುವಾಗಿ ಕೆಲವೊಮ್ಮೆ ಜಗಳವಾಗಿರುವ ಪ್ರಸಂಗಗಳೂ ಉಂಟು.
ನಾವು ಯಾವತ್ತೋ ಒಮ್ಮೆ ಈ ತರಹದ ಪ್ರಸಂಗಗಳನ್ನು ನೋಡಿದರೇ ಅಯ್ಯೋ ಪಾಪ ಎನಿಸುತ್ತದೆ. ಇನ್ನೂ ವರ್ಷಪೂರ್ತಿ ಪ್ರಯಾಣಿಕರೊಂದಿಗೆ ಚಿಲ್ಲರೆ ಸಲುವಾಗಿ ರೋಸಿ ಹೋಗುವ ಅವರ ಪರಿಸ್ಥಿತಿ ಹೇಗಾಗಿರಬೇಡ.
ಇದು ಕೇವಲ ಒಂದು ಉದಾಹರಣೆ ಆಷ್ಟೇ. ರಾಜ್ಯದ ಬಹುತೇಕ ಕಡೆಗಳಲ್ಲಿ ಇಂತಹ ಪ್ರಸಂಗಗಳು ಪ್ರತಿ ನಿತ್ಯ ನಡೆಯುತ್ತಲೇ ಇರುತ್ತವೆ. ಆದರೆ ಬೆಳಕಿಗೆ ಬರುವುದು ಮಾತ್ರ ವಿರಳ. ರಾಜ್ಯದ ಯಾವುದೇ ಸ್ಥಳಕ್ಕೆ ಟಿಕೆಟ್ ದರ ನಿಗದಿಪಡಿಸುವ ಮುನ್ನ ಸಾರಿಗೆ ಅಧಿಕಾರಿಗಳು, ಪ್ರಯಾ ಣಿಕರು ಮತ್ತು ಕಂಡಕ್ಟರ್ ನಡುವೆ ಚಿಲ್ಲರೆಗೆ ತೊಂದರೆಯಾಗದಂತೆ ದರ ನಿಗದಿಪಡಿಸಬೇಕಾಗಿದೆ. ಇಲ್ಲವೇ ಪರ್ಯಾಯವಾಗಿ
ಪ್ರತಿಯೊಂದು ಬಸ್ ನಲ್ಲೂ ಯುಪಿಐ ಮೂಲಕ ಪಾವತಿ ಮಾಡುವ ವ್ಯವಸ್ಥೆಯಾದರೂ ಮಾಡಬೇಕಾಗಿದೆ.
– ಮುರುಗೇಶ ಡಿ., ದಾವಣಗೆರೆ.