ಬೇಸಿಗೆ ತಿಂಗಳಲ್ಲಿ ಅಡಿಕೆ ಬೆಳೆಗೆ ನುಸಿ ಕೀಟದ ಬಾಧೆ

ಬೇಸಿಗೆ ತಿಂಗಳಲ್ಲಿ ಅಡಿಕೆ ಬೆಳೆಗೆ ನುಸಿ ಕೀಟದ ಬಾಧೆ

ಬೇತೂರಿನಲ್ಲಿ  ಪ್ರಧಾನ ರೈತ ತರಬೇತಿ ಕಾರ್ಯಕ್ರಮದಲ್ಲಿ  ವಿಜ್ಞಾನಿ ಬಸವನಗೌಡ ಎಚ್ಚರಿಕೆ 

ದಾವಣಗೆರೆ, ಫೆ.14- ಬರುವ ಬೇಸಿಗೆ ತಿಂಗಳಲ್ಲಿ ಉಷ್ಣಾಂಶದ ಹೆಚ್ಚಳದಿಂದ ಅಡಿಕೆ ಬೆಳೆಗೆ ನುಸಿ ಕೀಟದ ಬಾಧೆ ಹೆಚ್ಚಾಗುವ ಆತಂಕವಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ  ಎಂ.ಜಿ. ಬಸವನಗೌಡ  ತಿಳಿಸಿದರು.   ಬೇತೂರು ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ, ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ,  ಹಾಗೂ ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಚಿಕ್ಕನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಧಾನ ರೈತರ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ  ಅವರು ಮಾತನಾಡಿದರು.

ಬೇಸಿಗೆಯಲ್ಲಿ ತೋಟಗಳಲ್ಲಿ ಹಸಿರು ಹೊದಿಕೆ ಇರಬೇಕು.  ಹೊಲದಲ್ಲಿ  ಭೂಮಿ ಸ್ವಚ್ಚ ವಿದ್ದರೆ ತೋಟಗಳಲ್ಲಿ  ಆಂತರಿಕ ಉಷ್ಣಾಂಶ ಹೆಚ್ಚಾ ಗುವುದು. ಇದರಿಂದ ರಸ ಹೀರುವ ಕೀಟಗಳ ಬಾಧೆ ಹೆಚ್ಚಾಗುವುದು. ಇದರ ನಿಯಂತ್ರಣಕ್ಕೆ ಹೆಕ್ಸಿತೈಯೊಜಾಕ್ಸ್ 1.5 ಮಿಲೀ ಅಥವಾ ಪ್ರೊಪಾರ್‍ಗೈಟ್ 1.5 ಮಿಲೀ ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕೆಂದು ತಿಳಿಸಿದರು. 

ಮಣ್ಣಿನ ಗುಣಧರ್ಮಕ್ಕನುಸಾರವಾಗಿ ನೀರಿನ ನಿರ್ವಹಣೆಯನ್ನು ಮಾಡಬೇಕು. ಜೊತೆಗೆ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅನುಸರಿಸುವ ಮೂಲಕ ಇಳುವರಿಯ ಸುಸ್ಥಿರತೆಯನ್ನು ಪಡೆಯಬೇಕೆಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಶ್ರೀಧರ ಮೂರ್ತಿ ಮಾತನಾಡಿ, ರೈತ ಉತ್ಪಾದಕ ಕಂಪನಿಯಿಂದ ಸಾವಯವ ರಾಸಾಯನಿಕ ಮುಕ್ತ ಬೆಲ್ಲದ ಉತ್ಪಾದನೆ ಹಾಗೂ ಮಾರುಕಟ್ಟೆಗೆ ಉತ್ತಮ ಬೇಡಿಕೆಯಿದೆ.  ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದರು.  ಬೆಳೆಗಳಿಗೆ ಸಮಗ್ರ ಪೋಷಕಾಂಶ ನಿರ್ವಹಣೆ, ಜೈವಿಕ ಗೊಬ್ಬರಗಳ ಬಳಕೆ, ಹಸಿರೆಲೆ ಗೊಬ್ಬರಗಳ ಬಳಕೆ ಮಾಡಬೇಕು ಎಂದು ತಿಳಿಸಿದರು.

 ಕಂಪನಿಯ ಅಧ್ಯಕ್ಷ  ಉಮೇಶ್  ಮಾತನಾಡಿ, ಕಂಪನಿ  ವತಿಯಿಂದ ರೈತರಿಗೆ ಗುಣಮಟ್ಟದ ಬೀಜ ಮತ್ತು ರಸಗೊಬ್ಬರಗಳನ್ನು ಪೂರೈಸುತ್ತಿದ್ದು, ರೈತರು ಮಣ್ಣು ಪರೀಕ್ಷೆ ಮಾಡಿಸಿ ಪೋಷಕಾಂಶ ಗಳನ್ನು ನೀಡಬೇಕೆಂದು ಕರೆ ನೀಡಿದರು.

ಅಡಿಕೆ ಬೆಳೆಯ ರೋಗ ಮತ್ತು ಕೀಟಗಳ ಬಗ್ಗೆ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿ  ಡಾ. ಟಿ.ಜಿ.ಅವಿನಾಶ್ ಮಾಹಿತಿ ನೀಡಿದರು.   ನಿರ್ದೇಶಕ  ವಿಜಯಕುಮಾರ್, ಅಧಿಕಾರಿ  ಆಕಾಶ್, ರೈತ ರಾದ   ಶಂಕರ್, ಲಿಂಗರಾಜು,  ಬಸವರಾಜ,   ಸಿದ್ದನ ಗೌಡರು ಸೇರಿದಂತೆ ಇತರೆ ರೈತರು ಹಾಜರಿದ್ದರು.

error: Content is protected !!